ತೂಕ ಇಳಿಕೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಳದವರೆಗೆ; ಚಳಿಗಾಲದಲ್ಲಿ ಕಾಲು ಸೂಪ್ ಕುಡಿಯುವ ಪ್ರಯೋಜನಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  ತೂಕ ಇಳಿಕೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಳದವರೆಗೆ; ಚಳಿಗಾಲದಲ್ಲಿ ಕಾಲು ಸೂಪ್ ಕುಡಿಯುವ ಪ್ರಯೋಜನಗಳಿವು

ತೂಕ ಇಳಿಕೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಳದವರೆಗೆ; ಚಳಿಗಾಲದಲ್ಲಿ ಕಾಲು ಸೂಪ್ ಕುಡಿಯುವ ಪ್ರಯೋಜನಗಳಿವು

ಚಳಿಗಾಲದಲ್ಲಿ ಕಾಲು ಸೂಪ್ ಸೇವನೆಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಖನಿಜಗಳು ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿರುವ ಕಾಲು ಸೂಪ್, ದೇಹದಲ್ಲಿ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ತೂಕ ಇಳಿಕೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಳದವರೆಗೆ ಇದರ ಪ್ರಯೋಜನ ಹಲವು. ಇಲ್ಲಿದೆ ಈ ಬಗ್ಗೆ ಇನ್ನಷ್ಟು ಮಾಹಿತಿ.

ಚಳಿಗಾಲದಲ್ಲಿ ಕಾಲು ಸೂಪ್ ಸೇವನೆಯ ಪ್ರಯೋಜನಗಳಿವು
ಚಳಿಗಾಲದಲ್ಲಿ ಕಾಲು ಸೂಪ್ ಸೇವನೆಯ ಪ್ರಯೋಜನಗಳಿವು (PC: Slurrp)

ಚಳಿಗಾಲದಲ್ಲಿ ಮಸಾಲೆಯುಕ್ತ ಮತ್ತು ಬಿಸಿ ಬಿಸಿಯಾದ ಏನನ್ನಾದರೂ ತಿನ್ನಲು ಮನಸ್ಸು ಹಾತೊರೆಯುತ್ತದೆ. ಈ ಕಡುಬಯಕೆಯನ್ನು ಪೂರೈಸಲು, ಜನರು ಹೆಚ್ಚಾಗಿ ಜಂಕ್ ಫುಡ್‍ನತ್ತ ಮೊರೆ ಹೋಗುತ್ತಾರೆ. ಚಳಿಗಾಲದಲ್ಲಿ ಕಾಲು ಸೂಪ್ ಮಾಡಿ ಸೇವಿಸುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ. ಖನಿಜಗಳು ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿರುವ ಕಾಲು ಸೂಪ್ ದೇಹದಲ್ಲಿ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಶೀತ ಮತ್ತು ಬೊಜ್ಜನ್ನು ದೂರವಿರಿಸಲು ಸಹಾಯ ಮಾಡುತ್ತದೆ. ಕಾಲು ಸೂಪ್ ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕಾಲು ಸೂಪ್ ಕುಡಿಯುವ 5 ಪ್ರಯೋಜನಗಳು ಇಲ್ಲಿವೆ

ತೂಕ ಇಳಿಕೆಗೆ ಸಹಕಾರಿ: ಈ ಸೂಪ್‍ನಲ್ಲಿ ಕ್ಯಾಲೊರಿ ಪ್ರಮಾಣವು ತುಂಬಾ ಕಡಿಮೆ ಮತ್ತು ಜೆಲಟಿನ್ ಇರುವುದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ, ಕಾಲು ಸೂಪ್ ಅನ್ನು ನಿಯತವಾಗಿ ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಬಹುದು.

ಉರಿಯೂತ ನಿವಾರಕ: ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸೂಪ್ ಕುಡಿಯುವುದರಿಂದ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಬಹುದು. ಮೂಳೆಯಲ್ಲಿರುವ ಅಮೈನೋ ಆಮ್ಲಗಳು ಉರಿಯೂತವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಬಹುದು. ಇದಲ್ಲದೆ, ಇದರಲ್ಲಿರುವ ಎಲ್-ಗ್ಲುಟಮೈನ್ ಕರುಳಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಶೀತ, ಕೆಮ್ಮಿಗೆ ಪರಿಣಾಮಕಾರಿ: ಸೂಪ್ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇದು ಕೆಮ್ಮು, ಶೀತದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶುಂಠಿ, ಕಾಳುಮೆಣಸುಗಳನ್ನು ಹಾಕಿ ಸೂಪ್ ಮಾಡುವುದರಿಂದ ಗಂಟಲು ನೋವನ್ನು ಸಹ ಶಮನಗೊಳಿಸಲು ಸಹಕಾರಿಯಾಗಿದೆ.

ಚರ್ಮ ಹೊಳೆಯಲು ಸಹಕಾರಿ: ಈ ಸೂಪ್ ಸೇವಿಸುವುದರಿಂದ ಚರ್ಮ ಹೊಳೆಯಲು ಸಹಕಾರಿಯಾಗಿದೆ. ಸೂಪ್‍ನಲ್ಲಿರುವ ಕಾಲಜನ್ ಮತ್ತು ಯಲುರೊನಿಕ್ ಆಮ್ಲವು ಚರ್ಮದ ಸುಕ್ಕುಗಳ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಕಾಲಿನ ಮಾಂಸ ಮತ್ತು ಸಾರುಗಳಲ್ಲಿ ಅಮೈನೋ ಆಮ್ಲಗಳು, ಜೀವಸತ್ವಗಳು ಮತ್ತು ಖನಿಜಗಳಂತಹ ಪೋಷಕಾಂಶಗಳಿದ್ದು, ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಇದು ಸಾಮಾನ್ಯ ಶೀತ ಅಥವಾ ಜ್ವರದಂತಹ ಸೋಂಕುಗಳ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸೂಪ್‍ಗೆ, ಕಾಳುಮೆಣಸು, ಶುಂಠಿ, ಬೆಳ್ಳುಳ್ಳಿ, ಅರಿಶಿನ ಸೇರಿದಂತೆ ಇತರೆ ಮಸಾಲೆ ಪದಾರ್ಥಗಳನ್ನು ಸೇರಿಸಲಾಗುತ್ತದೆ. ಇದರಿಂದ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

Whats_app_banner