ತೂಕ ಇಳಿಕೆಯಿಂದ ತಲೆಗೂದಲಿನ ಆರೋಗ್ಯದವರೆಗೆ; ಸಿಹಿ ಕುಂಬಳಕಾಯಿ ಬೀಜ ತಿನ್ನುವುದರ ಪ್ರಯೋಜನಗಳಿವು
ಸಿಹಿ ಕುಂಬಳಕಾಯಿಯಿಂದ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸುತ್ತೇವೆ. ಆದರೆ, ಅದರೊಳಗಿನ ಬೀಜ ತೆಗೆದು ಎಸೆಯುತ್ತೇವೆ. ಬೇಡವೆಂದು ಎಸೆಯುವ ಸಿಹಿ ಕುಂಬಳಕಾಯಿ ಬೀಜ ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ಈ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ.

ಸಿಹಿ ಕುಂಬಳಕಾಯಿಯಿಂದ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸುತ್ತೇವೆ. ಸಿಹಿ ಕುಂಬಳಕಾಯಿಯನ್ನು ಅನ್ನ, ಸೂಪ್, ಕರಿ ಮತ್ತು ಸಿಹಿತಿಂಡಿಗಳೊಂದಿಗೆ ತಿನ್ನುತ್ತೇವೆ. ಅದರೊಳಗಿನ ಬೀಜ ತೆಗೆದು ಎಸೆಯುತ್ತೇವೆ. ಆದರೆ, ಬೇಡವೆಂದು ಎಸೆಯುವ ಸಿಹಿ ಕುಂಬಳಕಾಯಿ ಬೀಜಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಕುಂಬಳಕಾಯಿ ಬೀಜಗಳು ಫೈಬರ್, ವಿಟಮಿನ್ ಎ, ಬಿ, ಸಿ ಮತ್ತು ಇ, ಜೊತೆಗೆ ಕಬ್ಬಿಣ, ಕ್ಯಾಲ್ಸಿಯಂ, ಸತು, ಫೋಲೇಟ್, ಕೊಬ್ಬಿನಾಮ್ಲಗಳು, ರಂಜಕ, ಪೊಟ್ಯಾಸಿಯಮ್, ಸತು, ಅಮೈನೋ ಆಮ್ಲಗಳು ಮತ್ತು ಫೀನಾಲಿಕ್ ಸಂಯುಕ್ತಗಳಿಂದ ಸಮೃದ್ಧವಾಗಿವೆ.
ಕುಂಬಳಕಾಯಿ ಬೀಜಗಳು ಉತ್ಕರ್ಷಣ ನಿರೋಧಕ, ಉರಿಯೂತ ನಿವಾರಕ, ಆಂಟಿಮೈಕ್ರೊಬಿಯಲ್, ಸಂಧಿವಾತ ನಿವಾರಕ ಮತ್ತು ಮಧುಮೇಹ ನಿವಾರಕ ಗುಣಗಳನ್ನು ಹೊಂದಿವೆ. ಕುಂಬಳಕಾಯಿ ಬೀಜಗಳನ್ನು ನಿಯತವಾಗಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಏನೆಲ್ಲಾ ಪ್ರಯೋಜನಗಳಿವೆ ಎಂಬ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.
ಸಿಹಿ ಕುಂಬಳಕಾಯಿ ಬೀಜ ತಿನ್ನುವುದರ ಆರೋಗ್ಯ ಪ್ರಯೋಜನಗಳು
ತೂಕ ಇಳಿಕೆ: ಸಿಹಿ ಕುಂಬಳಕಾಯಿ ಬೀಜಗಳಲ್ಲಿ ನಾರಿನಂಶ ಅಧಿಕವಾಗಿರುತ್ತದೆ. ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿರುವವರು ಸಿಹಿ ಕುಂಬಳಕಾಯಿ ಬೀಜಗಳನ್ನು ತಿನ್ನುವುದರಿಂದ ಪ್ರಯೋಜನ ಪಡೆಯಬಹುದು. ಪ್ರತಿದಿನ ಸ್ವಲ್ಪ ಸಿಹಿ ಕುಂಬಳಕಾಯಿ ಬೀಜಗಳನ್ನು ತಿನ್ನುವುದರಿಂದ ನಿಮಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದು ಆಹಾರದ ಹಂಬಲವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಹೆಚ್ಚು ತಿನ್ನುವುದಿಲ್ಲ. ಪರಿಣಾಮವಾಗಿ, ತೂಕ ನಿಯಂತ್ರಣದಲ್ಲಿರುತ್ತದೆ. ಕುಂಬಳಕಾಯಿ ಬೀಜಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಲ್ಲಿರುವ ಸತುವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಕುಂಬಳಕಾಯಿ ತಿನ್ನುವುದರ ಪ್ರಯೋಜನಗಳು
ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ: ಸಿಹಿ ಕುಂಬಳಕಾಯಿ ಬೀಜಗಳಲ್ಲಿರುವ ಕ್ಯಾರೊಟಿನಾಯ್ಡ್‌ಗಳು ಮತ್ತು ವಿಟಮಿನ್ ಇ ನಂತಹ ಉತ್ಕರ್ಷಣ ನಿರೋಧಕಗಳು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತವೆ. ಕುಂಬಳಕಾಯಿ ಬೀಜಗಳನ್ನು ನಿಯತವಾಗಿ ಸೇವಿಸುವುದರಿಂದ ಗ್ಯಾಸ್ಟ್ರಿಕ್, ಪ್ರಾಸ್ಟೇಟ್, ಸ್ತನ, ಶ್ವಾಸಕೋಶ ಮತ್ತು ಕರುಳಿನ ಕ್ಯಾನ್ಸರ್‌ಗಳಿಂದ ರಕ್ಷಿಸುತ್ತದೆ. ಕುಂಬಳಕಾಯಿ ಬೀಜಗಳನ್ನು ನಿಯತವಾಗಿ ಸೇವಿಸುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಅಪಾಯ ಕಡಿಮೆ. ಮುಟ್ಟು ನಿಂತ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಕುಂಬಳಕಾಯಿ ಬೀಜಗಳು ಸಹಾಯ ಮಾಡುತ್ತವೆ ಎಂದು ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ.
ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ: ಸಿಹಿ ಕುಂಬಳಕಾಯಿ ಬೀಜಗಳಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿದೆ. ಮೆಗ್ನೀಸಿಯಮ್ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಕುಂಬಳಕಾಯಿ ಬೀಜಗಳು ಹೃದಯದ ಆರೋಗ್ಯವನ್ನು ರಕ್ಷಿಸುತ್ತವೆ ಮತ್ತು ಒತ್ತಡವನ್ನು ತಡೆಯುತ್ತದೆ.
ಸ್ನಾಯುಗಳ ಆರೋಗ್ಯಕ್ಕೆ ಒಳ್ಳೆಯದು: ಸಿಹಿ ಕುಂಬಳಕಾಯಿ ಬೀಜಗಳು ಸ್ನಾಯುಗಳ ಆರೋಗ್ಯವನ್ನು ರಕ್ಷಿಸುತ್ತವೆ. ಕುಂಬಳಕಾಯಿ ಬೀಜಗಳು ಪನಾಗಾಮಿಕ್ ಆಮ್ಲವನ್ನು ಹೊಂದಿರುತ್ತವೆ. ಇದು ಜೀವಕೋಶದಲ್ಲಿನ ಜೀವಕೋಶ ಉಸಿರಾಟ ಸರಿಯಾಗಿ ನಡೆಯುವುದನ್ನು ಖಚಿತಪಡಿಸುತ್ತದೆ.
ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಸಹಕಾರಿ: ಸಿಹಿ ಕುಂಬಳಕಾಯಿ ಬೀಜಗಳು ಮಧುಮೇಹಿಗಳಿಗೆ ಪ್ರಯೋಜನಕಾರಿ. ಸಿಹಿ ಕುಂಬಳಕಾಯಿ ಬೀಜಗಳು ಮಧುಮೇಹ ವಿರೋಧಿ ಗುಣಗಳನ್ನು ಹೊಂದಿವೆ. ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತವೆ. ಕುಂಬಳಕಾಯಿ ಬೀಜಗಳು ಟ್ರೈಗೊನೆಲಿನ್, ನಿಕೋಟಿನಿಕ್ ಆಮ್ಲ ಮತ್ತು ಡಿ-ಕೈರೊ-ಇನೋಸಿಟಾಲ್ ಸಂಯುಕ್ತಗಳಲ್ಲಿ ಸಮೃದ್ಧವಾಗಿವೆ. ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತವೆ.
ತಲೆಕೂದಲಿನ ಆರೋಗ್ಯ: ಪ್ರತಿದಿನ ಒಂದು ಚಮಚ ಸಿಹಿ ಕುಂಬಳಕಾಯಿ ಬೀಜಗಳನ್ನು ಸೇವಿಸುವುದರಿಂದ ಕೂದಲು ಬಲಗೊಳ್ಳುತ್ತದೆ. ಕುಂಬಳಕಾಯಿ ಬೀಜಗಳಲ್ಲಿರುವ ಸೆಲೆನಿಯಮ್, ಮೆಗ್ನೀಸಿಯಮ್, ಕಬ್ಬಿಣ, ಕ್ಯಾಲ್ಸಿಯಂ, ತಾಮ್ರ ಮತ್ತು ವಿಟಮಿನ್ ಎ, ಬಿ ಮತ್ತು ಸಿ ಕೂದಲು ಕಿರುಚೀಲಗಳನ್ನು ಆರೋಗ್ಯಕರವಾಗಿಡುತ್ತವೆ. ಇವುಗಳನ್ನು ತಿನ್ನುವುದರಿಂದ ತಲೆಹೊಟ್ಟು ಸಮಸ್ಯೆ ಬರುವುದಿಲ್ಲ.
ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.
ಇದನ್ನೂ ಓದಿ: ಪ್ರತಿದಿನ ಕುಂಬಳಕಾಯಿ ಬೀಜ ತಿನ್ನುವುದರ ಪ್ರಯೋಜನಗಳು
