ಕನ್ನಡ ಸುದ್ದಿ  /  ಜೀವನಶೈಲಿ  /  Weight Management: ರಾತ್ರಿ ಪಾಳಿಯಲ್ಲಿ ದುಡಿಯುವವರಲ್ಲಿ ಹೆಚ್ಚುತ್ತಿದೆ ಬೊಜ್ಜಿನ ಸಮಸ್ಯೆ; ತೂಕ ನಿರ್ವಹಣೆಗೆ ಈ 7 ಸಿಂಪಲ್‌ ಟಿಪ್ಸ್‌ ಪಾಲಿಸಿ

Weight Management: ರಾತ್ರಿ ಪಾಳಿಯಲ್ಲಿ ದುಡಿಯುವವರಲ್ಲಿ ಹೆಚ್ಚುತ್ತಿದೆ ಬೊಜ್ಜಿನ ಸಮಸ್ಯೆ; ತೂಕ ನಿರ್ವಹಣೆಗೆ ಈ 7 ಸಿಂಪಲ್‌ ಟಿಪ್ಸ್‌ ಪಾಲಿಸಿ

ರಾತ್ರಿ ಪಾಳಿ ಅಥವಾ ನೈಟ್‌ ಶಿಫ್ಟ್‌ನಲ್ಲಿ ಕೆಲಸ ಮಾಡುವವರ ಬಾಡಿ ಕ್ಲಾಕ್‌ನಲ್ಲಿ ವ್ಯತ್ಯಯವಾಗುವುದು ಸಹಜ. ತೂಕ ಸೇರಿದಂತೆ ಇವರ ಪ್ರತಿಯೊಂದ ವಿಚಾರದಲ್ಲೂ ಅನಿಶ್ಚಿತತೆ ಇರುಬಹುದು. ಹಾಗಾದರೆ ರಾತ್ರಿ ಪಾಳಿಯಲ್ಲಿ ದುಡಿಯುವವರು ಸೂಕ ನಿರ್ವಹಣೆ ಮಾಡಲು ಏನು ಮಾಡಬೇಕು ಇಲ್ಲಿದೆ ಸಲಹೆ

ರಾತ್ರಿ ಪಾಳಿಯಲ್ಲಿ ದುಡಿಯುವವರ ತೂಕ ನಿರ್ವಹಣೆಗೆ ಇಲ್ಲಿದೆ 7 ಸಿಂಪಲ್‌ ಟಿಪ್ಸ್‌
ರಾತ್ರಿ ಪಾಳಿಯಲ್ಲಿ ದುಡಿಯುವವರ ತೂಕ ನಿರ್ವಹಣೆಗೆ ಇಲ್ಲಿದೆ 7 ಸಿಂಪಲ್‌ ಟಿಪ್ಸ್‌

ಇತ್ತೀಚಿನ ದಿನಗಳಲ್ಲಿ ಹಲವರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಕೆಲವರು ಅರ್ಧ ರಾತ್ರಿವರೆಗೆ ಕೆಲಸ ಮಾಡಿದರೆ, ಇನ್ನೂ ಕೆಲವರು ಹಗಲಿನಲ್ಲಿ ಮಲಗಿ ರಾತ್ರಿ ಇಡೀ ಕೆಲಸ ಮಾಡುತ್ತಾರೆ. ಆದರೆ ರಾತ್ರಿ ನಿದ್ದೆ ಬಿಟ್ಟು ಕೆಲಸ ಮಾಡುವುದರಿಂದ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತವೆ. ದೇಹದ ಗಡಿಯಾರವು ಇದಕ್ಕೆ ಹೊಂದಿಕೊಳ್ಳುವುದಿಲ್ಲ. ಇದರಿಂದ ಮುಖ್ಯವಾಗಿ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತದೆ. ನಿದ್ದಯಲ್ಲಿನ ಅನಿಶ್ಚಿತತೆ, ತಾಜಾ ಆಹಾರ ಸೇವಿಸದೇ ಇರುವುದು, ಮಧ್ಯರಾತ್ರಿಯ ಆಹಾರದ ಕಡುಬಯಕೆ ಸೇರಿದಂತೆ ಹಲವು ವಿಚಾರಗಳು ಆರೋಗ್ಯಕ ತೂಕ ನಿರ್ವಹಣೆಗೆ ತೊಂದರೆ ಮಾಡುತ್ತವೆ. ಆದರೆ ಇದಕ್ಕಾಗಿ ಕೆಲಸ ಬಿಡಬೇಕು ಎಂದೇನಿಲ್ಲ, ಜೀವನಕ್ರಮದಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳುವ ಮೂಲಕ ದೇಹ ನಿಯಂತ್ರಣದ ಜೊತೆಗೆ ಆರಾಮಾಗಿ ಕೆಲಸವನ್ನೂ ಮುಂದುವರಿಸಬಹುದು.

ಟ್ರೆಂಡಿಂಗ್​ ಸುದ್ದಿ

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಾಗ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡುವ ಕೆಲವು ಅಮೂಲ್ಯವಾದ ಸಲಹೆಗಳು ಇಲ್ಲಿವೆ.

ನಿದ್ದೆಗೆ ಪ್ರಾಮುಖ್ಯ ನೀಡಿ

ತೂಕ ನಿರ್ವಹಣೆಗೆ ಗುಣಮಟ್ಟದ ನಿದ್ದೆ ಬಹಳ ಅವಶ್ಯ. ನಿಮ್ಮ ವಾರದ ರಜೆ ದಿನ ಸೇರಿದಂತೆ ಪ್ರತಿನಿತ್ಯ ಒಂದೇ ಸಮಯಕ್ಕೆ ಅಗತ್ಯ ಇರುವಷ್ಟು ನಿದ್ದೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಪದೇ ಪದೇ ಎಚ್ಚರಗೊಳಿಸುವ ಸಂಗತಿಗಳಿದ್ದರೆ ಅವುಗಳಿಂದ ದೂರವಿರಿ.

ನಿಮ್ಮ ಊಟವನ್ನು ಪ್ಲಾನ್‌ ಮಾಡಿ

ವೆಂಡಿಂಗ್‌ ಮೆಷಿನ್‌ ಕಿಂಡಿಯಿಂದ ಅಥವಾ ಫಾಸ್ಟ್‌ಫುಡ್‌ ತಿನ್ನುವ ಬದಲು ನಿಮ್ಮ ಊಟ ಹಾಗೂ ಸ್ಯಾಕ್ಸ್‌ ಬಗ್ಗೆ ಪ್ಲಾನ್‌ ಮಾಡಿ. ಲೀನ್‌ ಪ್ರೊಟೀನ್‌, ದವಸ ಧಾನ್ಯಗಳು, ಸಾಕಷ್ಟು ಹಣ್ಣು ಹಾಗೂ ತರಕಾರಿ ಇರುವಂತೆ ನಿಮ್ಮ ಪ್ಲಾನ್‌ ಮಾಡಿ ನಿಮ್ಮ ಊಟ ಹಾಗೂ ಸ್ನ್ಯಾಕ್ಸ್‌ ಅನ್ನು ನೀವೇ ತಯಾರಿಸಿಕೊಳ್ಳಿ. ಇದರಿಂದ ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಬಹುದು. ಅಲ್ಲದೆ ಅವಶ್ಯ ಕ್ಯಾಲೊರಿ ಅಂಶ ಕೂಡ ಲಭಿಸುತ್ತದೆ.

ಸಾಕಷ್ಟು ನೀರು ಕುಡಿಯಿರಿ

ಕೆಲವೊಮ್ಮೆ ಡಿಹೈಡ್ರೇಷನ್‌ ಕೂಡ ನಿಮ್ಮ ಹಸಿವಿಗೆ ಕಾರಣವಾಗಬಹುದು. ನಿಮ್ಮ ಕೆಲಸದ ಅವಧಿಯಲ್ಲಿ ಸಾಕಷ್ಟು ನೀರು ಕುಡಿಯಿರಿ, ಇದರಿಂದ ಹಸಿವಾಗುವುದನ್ನು ತಪ್ಪಿಸಬಹುದು. ಸಕ್ಕರೆ ಅಂಶ ಹೆಚ್ಚಿರುವ ಪಾನೀಯಗಳನ್ನು ತ್ಯಜಿಸಿ. ಇದು ನಿಮ್ಮ ಶಕ್ತಿಯನ್ನು ಕುಗ್ಗಿಸಬಹುದು.

ಸ್ನ್ಯಾಕ್ಸ್‌ ಆಯ್ಕೆ ಹೀಗಿರಲಿ

ನಿಮಗೆ ನಿಮ್ಮ ಕೆಲಸದ ಅವಧಿಯಲ್ಲಿ ಸ್ನ್ಯಾಕ್ಸ್‌ ತಿನ್ನಲೇಬೇಕು ಅನ್ನಿಸಿದರೆ ಆರೋಗ್ಯಕ್ಕೆ ಉತ್ತಮ ಎನ್ನಿಸುವ ಸ್ನ್ಯಾಕ್ಸ್‌ ಆಯ್ಕೆ ಮಾಡಿ. ಒಣಹಣ್ಣುಗಳು, ಯೋಗರ್ಟ್‌, ಒಂದು ಕಪ್‌ ತರಕಾರಿ ಅಥವಾ ಹಣ್ಣು ಇದು ನಿಮ್ಮ ಆಯ್ಕೆಯಾಗಿರಲಿ. ಇದು ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ ಜೊತೆಗೆ ಕ್ಯಾಲೊರಿ ಅಂಶ ಹೆಚ್ಚಿರುವ ಆಹಾರಗಳ ಸೇವನೆಗೆ ಕಡಿವಾಣ ಹಾಕುತ್ತದೆ.

ಕೆಫಿನ್‌ ಅಂಶವುಳ್ಳ ಆಹಾರ, ಪಾನೀಯ ಬೇಡ

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಾಗ ಎಚ್ಚರವಾಗಿರಬೇಕು ಎಂಬ ಕಾರಣಕ್ಕೆ ಕೆಫಿನ್‌ ಅಂಶ ಇರುವ ಪಾನೀಯಗಳ ಸೇವನೆ ಸಹಜ. ಆದರೆ ಅತಿಯಾಗಿ ಕೆಫಿನ್‌ ಅಂಶವುಳ್ಳ ಆಹಾರಗಳ ಸೇವನೆಯು ನಿದ್ದೆಗೆ ತೊಂದರೆ ಮಾಡುತ್ತದೆ. ಮಾತ್ರವಲ್ಲ ಇದು ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ. ಸಾಧ್ಯವಾದಷ್ಟು ಕೆಲಸ ಮಾಡುವ ವೇಳೆ ಬಿಟ್ಟು ಬೇರೆ ಸಮಯದಲ್ಲಿ ಕೆಫಿನ್‌ ಅಂಶ ಇರುವ ಪಾನೀಯಗಳ ಸೇವನೆಯನ್ನು ತಪ್ಪಿಸಿ.

ದೈಹಿಕ ಚಟುವಟಿಕೆಯನ್ನು ತಪ್ಪಿಸದಿರಿ

ನಿಮ್ಮ ದೈನಂದಿನ ದಿನಚರಿಯಲ್ಲಿ ದೈಹಿಕ ಚಟುವಟಿಕೆಗೆ ಆದ್ಯತೆ ನೀಡಿ. ವಿರಾಮ ವೇಳೆ ಚಿಕ್ಕ ವಾಕಿಂಗ್‌, ಸ್ಟ್ರೆಂಚಿಂಗ್‌ ವ್ಯಾಯಾಮಗಳನ್ನು ಮಾಡುವುದು ಕ್ರಿಯಾಶೀಲರಾಗಿ ಇರಲು ಸಹಾಯ ಮಾಡುತ್ತದೆ ಮತ್ತು ಕ್ಯಾಲೊರಿ ಅಂಶ ಕಡಿಮೆಯಾಗಲು ಸಹಾಯ ಮಾಡುತ್ತದೆ. ನಿಮ್ಮ ಸಮಯಕ್ಕೆ ಹೊಂದುವ ಜಿಮ್‌ ಇದ್ದರೆ ಜಿಮ್‌ಗೆ ಸೇರಿಕೊಳ್ಳಿ.

ಒತ್ತಡ ನಿರ್ವಹಣೆ

ರಾತ್ರಿ ಪಾಳಿಯಲ್ಲಿ ಒತ್ತಡ ಹೆಚ್ಚಿರಬಹುದು. ಇದು ತಿನ್ನುವ ಚಟವನ್ನು ಹೆಚ್ಚಿಸಬಹುದು. ಹಾಗಾಗಿ ಒತ್ತಡ ನಿರ್ವಹಣೆಯ ತಂತ್ರಗಳನ್ನು ಪಾಲಿಸಿ. ಧ್ಯಾನ, ದೀರ್ಘ ಉಸಿರಾಟ ಅಥವಾ ಯೋಗ ಇವುಗಳನ್ನು ಅಭ್ಯಾಸ ಮಾಡುವ ಮೂಲಕ ಒತ್ತಡ ನಿರ್ವಹಣೆ ಮಾಡಿ.

ರಾತ್ರಿ ಪಾಳಿಯಲ್ಲಿ ದುಡಿಯುವವರು ಈ ಮೇಲಿನಂತೆ ಆರೋಗ್ಯ ಜೀವನಶೈಲಿಯನ್ನು ಪಾಲಿಸುವ ಮೂಲಕ ಆರೋಗ್ಯ ತೂಕ ನಿರ್ವಹಣೆ ಸಾಧ್ಯ. ಅಲ್ಲದೆ ಈ ಕ್ರಮಗಳನ್ನು ಪಾಲಿಸಯವುದರಿಂದ ಇತರ ದೈಹಿಕ ಆರೋಗ್ಯ ಸಮಸ್ಯೆಗಳಿಂದಲೂ ದೂರ ಇರಬಹುದು.