ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಹಣ್ಣಾಗಿಸಿದ ಮಾವು ತಿಂದ್ರೆ ಏನಾಗುತ್ತೆ? ಆರೋಗ್ಯದ ಮೇಲಾಗುವ ಅಡ್ಡಪರಿಣಾಮಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಹಣ್ಣಾಗಿಸಿದ ಮಾವು ತಿಂದ್ರೆ ಏನಾಗುತ್ತೆ? ಆರೋಗ್ಯದ ಮೇಲಾಗುವ ಅಡ್ಡಪರಿಣಾಮಗಳಿವು

ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಹಣ್ಣಾಗಿಸಿದ ಮಾವು ತಿಂದ್ರೆ ಏನಾಗುತ್ತೆ? ಆರೋಗ್ಯದ ಮೇಲಾಗುವ ಅಡ್ಡಪರಿಣಾಮಗಳಿವು

ಮಾವಿನ ಸೀಸನ್‌ ಅಂತ ಸಿಕ್ಕಾಪಟ್ಟೆ ಮಾವಿನ ಹಣ್ಣು ತಿನ್ನುವ ಮುನ್ನ ಗಮನಿಸಿ. ಅತಿಯಾಗಿ ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಹಣ್ಣು ಮಾಡಿದ ಮಾವನ್ನು ತಿನ್ನುವುದರಿಂದ ನರ ವೈಜ್ಞಾನಿಕ ಸಮಸ್ಯೆ, ಉಸಿರಾಟದ ತೊಂದರೆ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳು ಎದುರಾಗುತ್ತವೆ.

ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಹಣ್ಣಾಗಿಸಿದ ಮಾವು ತಿಂದ್ರೆ ಏನಾಗುತ್ತೆ?
ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಹಣ್ಣಾಗಿಸಿದ ಮಾವು ತಿಂದ್ರೆ ಏನಾಗುತ್ತೆ?

ಬೇಸಿಗೆ ಕಾಲ ಎಂದರೆ ಎಲ್ಲೆಲ್ಲೂ ಮಾವಿನಹಣ್ಣಿನ ಘಮ ಹರಡಿರುತ್ತದೆ. ಮಾವು ಹಲವರಿಗೆ ಇಷ್ಟದ ಹಣ್ಣು. ಟೇಸ್ಟ್‌ನಲ್ಲಿ ಸಖತ್ ಆಗಿರುವ ಈ ಹಣ್ಣು ಫೈಬರ್, ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ಸೇರಿದಂತೆ ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.

ಆದರೆ ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಸಂಯುಕ್ತ ಕ್ಯಾಲ್ಸಿಯಂ ಕಾರ್ಬೈಡ್‌ ಬಳಸಿ ಮಾವಿನಕಾಯಿಯನ್ನು ಹಣ್ಣು ಮಾಡಲಾಗುತ್ತಿದೆ. ಆದರೆ ಈ ರೀತಿಯ ಹಣ್ಣು ಮಾಡಿದ ಮಾವನ್ನು ತಿನ್ನುವುದು ಆರೋಗ್ಯಕ್ಕೆ ಬಹಳ ಅಪಾಯಕಾರಿ. ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

ಭಾರತದ ಉನ್ನತ ಆಹಾರ ನಿಯಂತ್ರಕ ಮಂಡಳಿ ಫಾಸಿ ಇತ್ತೀಚೆಗೆ ವ್ಯಾಪಾರಿಗಳು ಮತ್ತು ಆಹಾರ ವ್ಯಾಪಾರ ನಿರ್ವಾಹಕರನ್ನು ಹಣ್ಣುಗಳನ್ನು ಮಾಗಿಸಲು ನಿಷೇಧಿತ ಉತ್ಪನ್ನ 'ಕ್ಯಾಲ್ಸಿಯಂ ಕಾರ್ಬೈಡ್' ಅನ್ನು ಬಳಸದಂತೆ ಒತ್ತಾಯಿಸಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಆಹಾರ ಸುರಕ್ಷತಾ ಇಲಾಖೆಗಳು ಜಾಗರೂಕರಾಗಿರಬೇಕು ಮತ್ತು ಅಂತಹ ಕಾನೂನುಬಾಹಿರ ಪದ್ಧತಿಗಳಲ್ಲಿ ತೊಡಗಿಸಿಕೊಳ್ಳುವವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಬೇಕೆಂದು ಸಂಸ್ಥೆ ಸೂಚಿಸಿದೆ.

ಮಾವಿನ ಹಣ್ಣುಗಳನ್ನು ಹಣ್ಣಾಗಿಸಲು ಸಾಮಾನ್ಯವಾಗಿ ಬಳಸುವ ಕ್ಯಾಲ್ಸಿಯಂ ಕಾರ್ಬೈಡ್, ಅಸಿಟಿಲೀನ್ ಎಂಬ ಅನಿಲವನ್ನು ಬಿಡುಗಡೆ ಮಾಡುತ್ತದೆ. ಇದು ಆರ್ಸೆನಿಕ್ ಮತ್ತು ರಂಜಕದ ಹಾನಿಕಾರಕ ಕುರುಹುಗಳನ್ನು ಹೊಂದಿರುತ್ತದೆ. 'ಮಸಾಲಾ' ಎಂದೂ ಕರೆಯಲ್ಪಡುವ ಈ ವಸ್ತುಗಳು ತಲೆತಿರುಗುವಿಕೆ, ಆಗಾಗ್ಗೆ ಬಾಯಾರಿಕೆ, ಕಿರಿಕಿರಿ, ದೌರ್ಬಲ್ಯ, ನುಂಗಲು ತೊಂದರೆ, ವಾಂತಿ ಮತ್ತು ಚರ್ಮದ ಹುಣ್ಣುಗಳು ಮುಂತಾದ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಫಾಸಿ ಹೇಳಿದೆ.

ಕ್ಯಾಲ್ಸಿಯಂ ಕಾರ್ಬೈಡ್ ಎಂದರೇನು ಮತ್ತು ಅದು ಮಾವಿನಕಾಯಿಯನ್ನು ಹೇಗೆ ಹಣ್ಣಾಗಿಸುತ್ತದೆ?

ಕ್ಯಾಲ್ಸಿಯಂ ಕಾರ್ಬೈಡ್ ಎಂಬುದು ಮಾವು ಮತ್ತು ಇತರ ಹಣ್ಣುಗಳಿಗೆ ಕೃತಕವಾಗಿ ಮಾಗಿಸಲು ಬಳಸುವ ರಾಸಾಯನಿಕ ಸಂಯುಕ್ತ. ಇದು ಕಾಯಿ ಬೇಗ ಹಣ್ಣಾಗುವಂತೆ ಮಾಡುತ್ತದೆ. ಆದರೆ ಈ ಅಂಶ ಹಣ್ಣಿನಲ್ಲಿ ಉಳಿದುಕೊಳ್ಳುವುದರಿಂದ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆ ಕಾರಣಕ್ಕೆ ಹಲವು ದೇಶಗಳಲ್ಲಿ ಇದರ ಬಳಕೆಯನ್ನು ನಿಷೇಧ ಮಾಡಲಾಗಿದೆ. ಕ್ಯಾಲ್ಸಿಯಂ ಕಾರ್ಬೈಡ್ ತೇವಾಂಶದ ಸಂಪರ್ಕಕ್ಕೆ ಬಂದಾಗ, ಅದು ಅಸಿಟಿಲೀನ್ ಅನಿಲವನ್ನು ಉತ್ಪಾದಿಸುತ್ತದೆ. ಇದು ಸುಡುವ ಗುಣವನ್ನು ಹೊಂದಿದೆ. ಮಾವಿನಹಣ್ಣು ಅಥವಾ ಕ್ಯಾಲ್ಸಿಯಂ ಕಾರ್ಬೈಡ್‌ನೊಂದಿಗೆ ಮಾಗಿದ ಇತರ ಹಣ್ಣುಗಳನ್ನು ಸೇವಿಸುವುದರಿಂದ ಮಾನವನ ಆರೋಗ್ಯದ ಮೇಲೆ ಹಲವಾರು ಹಾನಿಕಾರಕ ಪರಿಣಾಮಗಳು ಉಂಟಾಗಬಹುದುʼ ಎಂದು ಯಥಾರ್ಥ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯೆ ಸುಹಾನಿ ಸೇಠ್ ಅಗರ್ವಾಲ್ ಹೇಳುತ್ತಾರೆ.

ಕ್ಯಾಲ್ಸಿಯಂ ಕಾರ್ಬೈಡ್‌ನ ಆರೋಗ್ಯದ ಮೇಲೆ ದುಷ್ಪರಿಣಾಮಗಳು

ಅಧ್ಯಯನಗಳ ಪ್ರಕಾರ, ಕ್ಯಾಲ್ಸಿಯಂ ಕಾರ್ಬೈಡ್ ದೀರ್ಘಕಾಲದ ಹೈಪೋಕ್ಸಿಯಾವನ್ನು ಉಂಟುಮಾಡುವ ಮೂಲಕ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ತಲೆನೋವು, ತಲೆತಿರುಗುವಿಕೆ, ಅತಿಯಾದ ನಿದ್ರೆ, ಸ್ಮರಣಶಕ್ತಿ ನಷ್ಟ, ಸೆರೆಬ್ರಲ್ ಎಡಿಮಾ, ಕಾಲುಗಳು ಮತ್ತು ಕೈಗಳಲ್ಲಿ ಮರಗಟ್ಟುವಿಕೆ, ಸಾಮಾನ್ಯ ದೌರ್ಬಲ್ಯ, ಶೀತ ಮತ್ತು ಒದ್ದೆಯಾದ ಚರ್ಮ, ಕಡಿಮೆ ರಕ್ತದೊತ್ತಡ ಮತ್ತು ಸೆಳೆತದಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಅಗತ್ಯಕ್ಕಿಂತ ಹೆಚ್ಚು ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಹಣ್ಣಾಗಿಸಿದ ಮಾವನ್ನು ತಿನ್ನುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಕ್ಯಾಲ್ಸಿಯಂ ಕಾರ್ಬೈಡ್ ಅಸಿಟಲೀನ್ ಅನಿಲವನ್ನು ಬಿಡುಗಡೆ ಮಾಡುವ ಕಾರಣ ಕಾಯಿ ಇರುವುದು ಬೇಗ ಹಣ್ಣಾಗುತ್ತದೆ. ಆದರೆ ಇದು ಹಾನಿಕಾರಕ ಕಲ್ಮಶಗಳನ್ನು ಸಹ ಹೊಂದಿರುತ್ತದೆ. ಇದರ ಸೇವನೆಯು ತಲೆನೋವು, ತಲೆತಿರುಗುವಿಕೆ, ಮನಸ್ಥಿತಿ ಅಡಚಣೆಗಳು ಮತ್ತು ತೀವ್ರತರವಾದ ಸಂದರ್ಭಗಳಲ್ಲಿ, ಆರ್ಸೆನಿಕ್ ಮತ್ತು ರಂಜಕದ ಅವಶೇಷಗಳಿಂದ ನರವೈಜ್ಞಾನಿಕ ಹಾನಿಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆರೋಗ್ಯವನ್ನು ಕಾಪಾಡಿಕೊಳ್ಳಲು, ಏಕರೂಪದ ಹಳದಿ ಬಣ್ಣ ಹೊಂದಿರುವ ಮತ್ತು ಬಲಿಯದ ಪರಿಮಳವನ್ನು ಹೊಂದಿರುವ ಮಾವಿನಹಣ್ಣುಗಳ ಖರೀದಿಯನ್ನು ತಪ್ಪಿಸಿ. ಬದಲಾಗಿ, ನೈಸರ್ಗಿಕವಾಗಿ ಮಾಗಿದ ಹಣ್ಣುಗಳನ್ನು (ಸಾವಯವ ಮಾವು) ಆರಿಸಿಕೊಳ್ಳಿ. ಸಂದೇಹವಿದ್ದರೆ, ರಾಸಾಯನಿಕ ಉಳಿಕೆಗಳನ್ನು ಕಡಿಮೆ ಮಾಡಲು ತಿನ್ನುವ ಮೊದಲು ಮಾವಿನಹಣ್ಣನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿಡಿ. ಪ್ರತಿ ಬಾರಿ ಮಾವಿನ ಹಣ್ಣುಗಳನ್ನು ತಿನ್ನುವ ಮುನ್ನ ಚೆನ್ನಾಗಿ ತೊಳೆಯಿರಿʼ ಎಂದು ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯ ಕ್ಲಿನಿಕಲ್ ನ್ಯೂಟ್ರಿಷನ್‌ನ ಉಸ್ತುವಾರಿ ಡಾ. ಸುಪರ್ಣ ಮುಖರ್ಜಿ ಹೇಳುತ್ತಾರೆ.

ಕ್ಯಾಲ್ಸಿಯಂ ಕಾರ್ಬೈಡ್‌ನಿಂದಾಗುವ ಸಮಸ್ಯೆಗಳು

ಜಠರಗರುಳಿನ ಸಮಸ್ಯೆಗಳು: ಆರ್ಸೆನಿಕ್ ಮತ್ತು ಫಾಸ್ಫರಸ್ ಹೈಡ್ರೈಡ್‌ ಅಂಶವು ಮಾವಿನ ಹಣ್ಣಿನ ಮೇಲೆ ಉಳಿದು ಹೋದರೆ ಅದು ಜಠರಗರುಳಿನ ಪ್ರದೇಶವನ್ನು ಕೆರಳಿಸಬಹುದು. ಇದು ಹೊಟ್ಟೆ ನೋವು, ವಾಕರಿಕೆ, ವಾಂತಿ ಮತ್ತು ಅತಿಸಾರಕ್ಕೆ ಕಾರಣವಾಗಬಹುದು.

ನರವೈಜ್ಞಾನಿಕ ಪರಿಣಾಮಗಳು: ಆರ್ಸೆನಿಕ್‌ಗೆ ಒಡ್ಡಿಕೊಳ್ಳುವುದು, ಕಡಿಮೆ ಮಟ್ಟದಲ್ಲಿದ್ದರೂ ಸಹ ತಲೆನೋವು, ತಲೆತಿರುಗುವಿಕೆಗೆ ಕಾರಣವಾಗಬಹುದು ಮತ್ತು ತೀವ್ರತರವಾದ ಸಂದರ್ಭಗಳಲ್ಲಿ, ನರವೈಜ್ಞಾನಿಕ ಅಸ್ವಸ್ಥತೆಗಳು ಮತ್ತು ದುರ್ಬಲ ಅರಿವಿನ ಕಾರ್ಯಕ್ಕೆ ಕಾರಣವಾಗಬಹುದು.

ಉಸಿರಾಟದ ಸಮಸ್ಯೆಗಳು: ಹಣ್ಣಾಗುವ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ಅಸಿಟಲೀನ್ ಅನಿಲವನ್ನು ಉಸಿರಾಡುವುದರಿಂದ ಉಸಿರಾಟದ ಕಿರಿಕಿರಿ, ಕೆಮ್ಮು ಮತ್ತು ಉಸಿರಾಟದ ತೊಂದರೆ ಉಂಟಾಗುತ್ತದೆ.

ಚರ್ಮದ ಕಿರಿಕಿರಿ: ಹಣ್ಣಿನ ಮೇಲ್ಮೈಯಲ್ಲಿರುವ ಕ್ಯಾಲ್ಸಿಯಂ ಕಾರ್ಬೈಡ್ ಅವಶೇಷಗಳೊಂದಿಗೆ ನೇರ ಸಂಪರ್ಕವು ಕೆಲವು ವ್ಯಕ್ತಿಗಳಲ್ಲಿ ಚರ್ಮದ ಕಿರಿಕಿರಿ, ದದ್ದುಗಳು ಮತ್ತು ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು.

ಈ ಅಪಾಯಗಳನ್ನು ಕಡಿಮೆ ಮಾಡಲು, ಸಾವಯವವಾಗಿ ಮಾಗಿದ ಹಣ್ಣುಗಳನ್ನು ಆಯ್ಕೆ ಮಾಡುವುದು ಉತ್ತಮ ಹಾಗೂ ಒಂದು ವೇಳೆ ನೀವು ಖರೀದಿಸಿ ತಂದ ಮಾವಿನಹಣ್ಣಿಗೆ ಕ್ಯಾಲ್ಸಿಯಂ ಕಾರ್ಬೈಡ್‌ ಬಳಸಲಾಗಿದೆ ಎನ್ನಿಸಿದರೆ ಸಂಪೂರ್ಣವಾಗಿ ತೊಳೆದು ಸಿಪ್ಪೆ ತೆಗೆದು ತಿನ್ನುವುದು ಸೂಕ್ತ ಎಂದು ತಜ್ಞರು ಸಲಹೆ ನೀಡುತ್ತಾರೆ.

ಕ್ಯಾಲ್ಸಿಯಂ ಕಾರ್ಬೈಡ್ ಹಣ್ಣುಗಳ ಮೇಲೆ ಉಳಿದು ಹೋಗುವುದರಿಂದಾಗುವ ಹಾನಿಕಾರಕ ಪರಿಣಾಮಗಳು ಸಾಂದ್ರತೆ ಮತ್ತು ಒಡ್ಡುವಿಕೆಯ ಅವಧಿಯನ್ನು ಅವಲಂಬಿಸಿ ಬದಲಾಗಬಹುದು. ಆದಾಗ್ಯೂ, ಸಂಭಾವ್ಯ ಆರೋಗ್ಯ ಅಪಾಯಗಳ ಕಾರಣದಿಂದಾಗಿ ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಹಣ್ಣಾದ ಹಣ್ಣುಗಳನ್ನು ಸೇವಿಸುವುದನ್ನು ತಪ್ಪಿಸಲು ಸೂಚಿಸಲಾಗುತ್ತದೆ. ಸಾವಯವವಾಗಿ ಬೆಳೆದ ಮತ್ತು ನೈಸರ್ಗಿಕವಾಗಿ ಮಾಗಿದ ಹಣ್ಣುಗಳನ್ನು ಸೇವಿಸುವುದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸುರಕ್ಷಿತ ಆಯ್ಕೆಯಾಗಿದೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.