ಏನಿದು ಬ್ರೋಕನ್ ಹಾರ್ಟ್ ಸಿಂಡ್ರೋಮ್, ಹೃದಯಾಘಾತದಂತೆ ಗಂಭೀರವಾಗಿರುವ ಈ ಸಮಸ್ಯೆಯ ಲಕ್ಷಣಗಳು, ಕಾರಣಗಳ ಬಗ್ಗೆ ತಿಳಿಯಿರಿ
ಅನಾರೋಗ್ಯಕರ ಜೀವನಶೈಲಿ ಹಾಗೂ ಕಳಪೆ ಆಹಾರಕ್ರಮದ ಕಾರಣದಿಂದಾಗಿ ಇತ್ತೀಚೆಗೆ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿವೆ. ಹೃದಯಾಘಾತಗಳ ಸಂಖ್ಯೆಯೂ ಏರಿಕೆಯಾಗುತ್ತಿರುವ ಈ ಹೊತ್ತಿನಲ್ಲಿ ಇದಕ್ಕೆ ಹೋಲಿಕೆ ಇರುವ ಬ್ರೋಕನ್ ಹಾರ್ಟ್ ಸಿಂಡ್ರೋಮ್ ಬಗ್ಗೆಯೂ ತಿಳಿದುಕೊಳ್ಳೋಣ. ಏನಿದು ಬ್ರೋಕನ್ ಹಾರ್ಟ್ ಸಿಂಡ್ರೋಮ್, ಇದರ ಲಕ್ಷಣಗಳೇನು ಎಂಬ ವಿವರ ಇಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿವೆ. ಯುವಕರು ಕೂಡ ಹೆಚ್ಚಾಗಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಹೃದ್ರೋಗಗಳು ಹೆಚ್ಚಲು ಕಳಪೆ ಜೀವನಶೈಲಿ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಯು ಪ್ರಮುಖ ಕಾರಣವಾಗಿದೆ. ಈ ಹೊತ್ತಿನಲ್ಲಿ ಹೃದಯಾಘಾತಕ್ಕೆ ಹೋಲಿಕೆ ಇರುವ ಬ್ರೋಕನ್ ಹಾರ್ಟ್ ಸಿಂಡ್ರೋಮ್ ಬಗ್ಗೆಯೂ ನಾವು ತಿಳಿದುಕೊಳ್ಳಬೇಕಿದೆ.
ಟಕೋಟ್ಸುಬೊ ಕಾರ್ಡಿಯೊಮಯೋಪತಿ ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯುವ ಈ ಸಿಂಡ್ರೋಮ್ ತಾತ್ಕಾಲಿಕ ಹೃದಯದ ಸ್ಥಿತಿಯಾಗಿದೆ. ಇದು ಹೆಚ್ಚಾಗಿ ತೀವ್ರ ಭಾವನಾತ್ಮಕ ಅಥವಾ ದೈಹಿಕ ಒತ್ತಡದಿಂದ ಪ್ರಚೋದಿಸಲ್ಪಡುತ್ತದೆ. ಇದು ಹೃದಯಾಘಾತದ ಲಕ್ಷಣಗಳನ್ನು ಅನುಸರಿಸುತ್ತದೆಯಾದರೂ ಅದರ ಕಾರಣಗಳು ಹಾಗೂ ಪರಿಣಾಮಗಳು ಭಿನ್ನವಾಗಿರುತ್ತವೆ. ಇದು ಭಾವನಾತ್ಮಕ ಯೋಗಕ್ಷೇಮ ಮತ್ತು ಹೃದಯರಕ್ತನಾಳದ ಆರೋಗ್ಯದ ನಡುವಿನ ಸಂಕೀರ್ಣ ಸಂಪರ್ಕವನ್ನು ಎತ್ತಿ ತೋರಿಸುತ್ತದೆ. ಈ ಸಿಂಡ್ರೋಮ್ ಬಗ್ಗೆ ತಿಳಿದುಕೊಂಡಿರುವುದು ಮುಖ್ಯವಾಗುತ್ತದೆ.
ಏನಿದು ಬ್ರೋಕನ್ ಹಾರ್ಟ್ ಸಿಂಡ್ರೋಮ್
ಹೃದಯದ ಮುಖ್ಯ ಪಂಪಿಂಗ್ ಚೇಂಬರ್ (ಅಂದರೆ ರಕ್ತವನ್ನು ಪಂಪ್ ಮಾಡುವ ಬ್ಲಾಕ್ ಎಂದು ಹೇಳಬಹುದು) ಎಡ ಕುಹರದ ಗಾತ್ರ ದೊಡ್ಡದಾಗಿ ಅದು ದುರ್ಬಲಗೊಂಡಾಗ ಪಂಪ್ ಮಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಅಂತಹ ಸಂದರ್ಭದಲ್ಲಿ ಬ್ರೋಕನ್ ಹಾರ್ಟ್ ಸಿಂಡ್ರೋಮ್ ಸಂಭವಿಸುತ್ತದೆ. ‘ಟಕೋಟ್ಸುಬೊ‘ ಎಂಬುದು ಜಪಾನ್ ಮೂಲದ ಪದವಾಗಿದ್ದು ಇದರ ಅರ್ಥ ಆಕ್ಟೋಪಸ್ ಬಲೆ ಎಂದು. ಏಕೆಂದರೆ ಬ್ರೋಕನ್ ಹಾರ್ಟ್ ಸಿಂಡ್ರೋಮ್ ಸ್ಥಿತಿಯಲ್ಲಿ ಹೃದಯವು ಇದೇ ರೀತಿಯ ಆಕಾರವನ್ನು ಪಡೆಯುತ್ತದೆ.
ಬ್ರೋಕನ್ ಹಾರ್ಟ್ ಸಿಂಡ್ರೋಮ್ ಲಕ್ಷಣಗಳು
ಬ್ರೋಕನ್ ಹಾರ್ಟ್ ಸಿಂಡ್ರೋಮ್‌ನ ರೋಗಲಕ್ಷಣಗಳು ಹೃದಯಾಘಾತದ ಲಕ್ಷಣಗಳನ್ನೇ ಹೋಲುತ್ತವೆ. ಈ ಕೆಳಗಿನ ಲಕ್ಷಣಗಳನ್ನು ನಾವು ಗಮನಿಸಬಹುದು:
- ಎದೆನೋವು
- ಉಸಿರಾಟಕ್ಕೆ ತೊಂದರೆ
- ಹೃದಯ ಬಡಿತದಲ್ಲಿ ಏರಿಳಿತ
- ಮೈ ಅತಿಯಾಗಿ ಬೆವರುವುದು
- ವಾಕರಿಕೆ
ಈ ಲಕ್ಷಣಗಳು ಇದ್ದಕ್ಕಿದ್ದಂತೆ ಉದ್ಭವಿಸಬಹುದು ಮತ್ತು ಪ್ರೀತಿಪಾತ್ರರ ನಮ್ಮಿಂದ ದೂರಾಗುವುದು, ವಿಚ್ಛೇದನದ ಸುದ್ದಿ ಅಥವಾ ಲಾಟರಿ ಗೆದ್ದಂತಹ ಅಚ್ಚರಿಯ ಸಕಾರಾತ್ಮಕ ಘಟನೆಯಂತಹ ಮಹತ್ವದ ಭಾವನಾತ್ಮಕ ಘಟನೆಯ ನಂತರ ಬ್ರೋಕನ್ ಹಾರ್ಟ್ ಸಿಂಡ್ರೋಮ್ ಸಂಭವಿಸಬಹುದು.
ಬ್ರೋಕನ್ ಹಾರ್ಟ್ ಸಿಂಡ್ರೋಮ್‌ಗೆ ಕಾರಣಗಳು
ಈ ಸಮಸ್ಯೆ ನಿಖರವಾದ ಕಾರಣಗಳ ಏನು ಎಂಬುದು ಇನ್ನೂ ಗಮನಕ್ಕೆ ಬಂದಿಲ್ಲ. ಆದರೆ ಇದು ಅಡ್ರಿನಾಲಿನ್‌ನಂತಹ ಒತ್ತಡದ ಹಾರ್ಮೋನುಗಳ ಉಲ್ಬಣಕ್ಕೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಇದು ಹೃದಯವನ್ನು ತಾತ್ಕಾಲಿಕವಾಗಿ ಸ್ತಬ್ಧಗೊಳಿಸುತ್ತದೆ. ಇಂತಹ ಸಮಯದಲ್ಲಿ ಇದು ಉಂಟಾಗಬಹುದು.
- ಅತಿಯಾದ ದುಃಖ, ಆತ್ಮೀಯರನ್ನು ಕಳೆದುಕೊಂಡಾಗ
- ತೀವ್ರ ಭಯ
- ಅತಿಯಾದ ಅಥವಾ ತಾರಕ್ಕೇರಿದ ಕೋಪ
- ಜೀವನದಲ್ಲಾಗುವ ಪ್ರಮುಖ ಬದಲಾವಣೆಗಳು
ಗಂಭೀರ ಅನಾರೋಗ್ಯ, ಶಸ್ತ್ರಚಿಕಿತ್ಸೆ ಅಥವಾ ಆಘಾತಕಾರಿ ಘಟನೆಯಂತಹ ದೈಹಿಕ ಒತ್ತಡಗಳು ಕೂಡ ಈ ಸಿಂಡ್ರೋಮ್ ಅನ್ನು ಪ್ರಚೋದಿಸಬಹುದು.
ವೈದ್ಯಕೀಯ ಇತಿಹಾಸ, ದೈಹಿಕ ಪರೀಕ್ಷೆ ಮತ್ತು ಹೃದಯಾಘಾತ ಹೌದೋ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಲೆಕ್ಟ್ರೋಕಾರ್ಡಿಯೋಗ್ರಾಮ್‌ಗಳು (ECGಗಳು), ಎಕೋಕಾರ್ಡಿಯೋಗ್ರಾಮ್‌ಗಳು ಮತ್ತು ರಕ್ತ ಪರೀಕ್ಷೆಗಳಂತಹ ಪರೀಕ್ಷೆಗಳ ಮೂಲಕ ಬ್ರೋಕನ್ ಹಾರ್ಟ್ ಸಿಂಡ್ರೋಮ್ ಅನ್ನು ಕಂಡುಹಿಡಿಯಬಹುದಾಗಿದೆ.
ಬ್ರೋಕನ್ ಹಾರ್ಟ್ ಸಿಂಡ್ರೋಮ್‌ಗೆ ಭಾವನಾತ್ಮಕ ಮತ್ತು ದೈಹಿಕ ಆರೋಗ್ಯದ ಪರಸ್ಪರ ಸಂಬಂಧವನ್ನು ಹೊಂದಿದೆ. ಭಾವನಾತ್ಮಕ ಮತ್ತು ದೈಹಿಕ ಯೋಗಕ್ಷೇಮ ಎರಡಕ್ಕೂ ಆದ್ಯತೆ ನೀಡುವ ಮೂಲಕ, ನಾವು ಆರೋಗ್ಯಕರ ಜೀವನ ವಿಧಾನವನ್ನು ಬೆಳೆಸಿಕೊಳ್ಳುವುದರಿಂದ ಇದರಿಂದ ದೂರ ಇರಬಹುದು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

ವಿಭಾಗ