Colorectal Cancer: ಏನಿದು ಕೊಲೊರೆಕ್ಟಲ್ ಕ್ಯಾನ್ಸರ್? ಯುವಕರನ್ನೂ ಕಾಡುವ ಈ ಕಾಯಿಲೆ ಬಗ್ಗೆ ತಿಳಿಯಿರಿ
ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿರುವ ಕ್ಯಾನ್ಸರ್ ಕಾಯಿಲೆಯ ಪೈಕಿ ಕೊಲೊರೆಕ್ಟಲ್ ಕ್ಯಾನ್ಸರ್ ಕೂಡ ಒಂದು. ಈ ಕ್ಯಾನ್ಸರ್ ಹೇಗೆ ಸಂಭವಿಸುತ್ತದೆ..? ಇದರ ಲಕ್ಷಣಗಳೇನು.?. ಇದೆಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ..
ಕೊಲೊರೆಕ್ಟಲ್ ಅಥವಾ ಕೊಲೊನ್ ಕ್ಯಾನ್ಸರ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾದ ಕ್ಯಾನ್ಸರ್ ಕಾಯಿಲೆಯಾಗಿದೆ. ಇದು ದೊಡ್ಡ ಕರಳು ಅಥವಾ ಗುದನಾಳಗಳಲ್ಲಿ ಕಂಡು ಬರುವ ಕ್ಯಾನ್ಸರ್ ಆಗಿದೆ. ಇದು ಸಾಮಾನ್ಯವಾಗಿ ವೃದ್ಧರಲ್ಲಿ ಕಾಣಿಸಿಕೊಳ್ಳುತ್ತದೆಯಾದರೂ ಸಹ ಈಗೀಗ ಕೊಲೊರೆಕ್ಟಲ್ ಕ್ಯಾನ್ಸರ್ನಿಂದ ಬಳಲುತ್ತಿರುವ ಕಿರಿಯ ರೋಗಿಗಳನ್ನೂ ನಾವು ಆಸ್ಪತ್ರೆಗಳಲ್ಲಿ ಕಾಣಬಹುದಾಗಿದೆ.
ಈ ಕ್ಯಾನ್ಸರ್ ಅಷ್ಟು ಸುಲಭವಾಗಿ ತನ್ನ ರೋಗ ಲಕ್ಷಣಗಳನ್ನು ತೋರಿಸುವುದಿಲ್ಲ. ಸಾಮಾನ್ಯವಾಗಿ ಕರುಳಿನಲ್ಲಿ ಪಾಲಿಪ್ಸ್ ಎನ್ನುವ ಸಣ್ಣ ಕೋಶಗಳ ರಚನೆಯಿಂದ ಈ ಕ್ಯಾನ್ಸರ್ ಆರಂಭಗೊಳ್ಳುತ್ತದೆ. ಕಾಲಾಂತರದಲ್ಲಿ ಇದು ಕೊಲೊನ್ ಕ್ಯಾನ್ಸರ್ ಆಗಿ ಬದಲಾಗುತ್ತದೆ. ಸಾಕಷ್ಟು ಪರೀಕ್ಷೆಗಳನ್ನು ನಡೆಸಿದ ಬಳಿಕವೇ ವೈದ್ಯರಿಗೆ ಈ ಕ್ಯಾನ್ಸರ್ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.
ಈ ಕ್ಯಾನ್ಸರ್ಗಳು ಆನುವಂಶಿಕ ಕೂಡ ಹೌದು. ಕೊಲೊರೆಕ್ಟಲ್ ಕ್ಯಾನ್ಸರ್ನಿಂದ ಬಳಲುತ್ತಿರುವವರಿಗೆ ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ, ಕಿಮೋಥೆರಪಿ ಹಾಗೂ ಇಮ್ಯುನೋಥೆರಪಿಯಂತಹ ಚಿಕಿತ್ಸೆಗಳನ್ನು ವೈದ್ಯರು ನೀಡುತ್ತಾರೆ. ರೊಬೊಟಿಕ್ ಅಥವಾ ಲ್ಯಾಪರೊಸ್ಕೋಪಿಕ್ ಮೂಲಕ ಕೊಲೊರೆಕ್ಟಲ್ ಕ್ಯಾನ್ಸರ್ಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುತ್ತಾರೆ.
ಕೊಲೊರೆಕ್ಟಕಲ್ ಕ್ಯಾನ್ಸರ್ನ ಲಕ್ಷಣಗಳು :
ಕೊಲೊನ್ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಕರುಳಿನಲ್ಲಿ ಕ್ಯಾನ್ಸರ್ ಗಡ್ಡೆಗಳು ಒಂದು ನಿರ್ದಿಷ್ಟ ಗಾತ್ರಕ್ಕೆ ಬೆಳೆದ ಬಳಿಕವೇ ರೋಗದ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಅತಿಸಾರ, ಮಲಬದ್ಧತೆ ಹಾಗೂ ಗುದನಾಳದಲ್ಲಿ ರಕ್ತಸ್ರಾವ, ಮಲ ವಿಸರ್ಜನೆ ಸಂದರ್ಭದಲ್ಲಿ ರಕ್ತ ಬರುವುದು, ಕಿಬ್ಬೊಟ್ಟೆಯಲ್ಲಿ ಸೆಳೆತ, ಈ ರೀತಿಯ ವಿವಿಧ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.
ವಿಪರೀತವಾಗಿ ತೂಕ ನಷ್ಟ ಉಂಟಾಗುವುದು ಕೂಡ ಇದೇ ಕಾಯಿಲೆಯ ಲಕ್ಷಣಗವಾಗಿದೆ. ವಿಪರೀತವಾದ ಆಯಾಸವುಂಟಾಗಿ ಮಲದಲ್ಲಿ ರಕ್ತ ಕಾಣಿಸಿಕೊಳ್ಳಲು ಆರಂಭಿಸಿದರೆ ರೋಗಿಯೂ ಕೂಡಲೇ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವ ಮೂಲಕ ಕೊಲೊರೆಕ್ಟಲ್ ಕ್ಯಾನ್ಸರ್ನಿಂದ ಪಾರಾಗಬಹುದು ಎಂದು ವೈದ್ಯರು ಹೇಳಿದ್ದಾರೆ .
ಕೊಲೊರೆಕ್ಟಲ್ ಕ್ಯಾನ್ಸರ್ ಇದೆ ಎಂಬುದು ದೃಢವಾದ ಬಳಿಕ ಕೂಡಲೇ ರೋಗಿಗೆ ಪರಿಣಾಮಕಾರಿಯಾದ ಚಿಕಿತ್ಸೆ ನೀಡುವುದು ತುಂಬಾನೇ ಮುಖ್ಯ. ನೀವು ಎಷ್ಟು ಬೇಗ ಈ ಕ್ಯಾನ್ಸರ್ನ ಗುಣಲಕ್ಷಣಗಳನ್ನು ಪತ್ತೆ ಮಾಡುತ್ತೀರೋ ಅದರ ಆಧಾರದ ಮೇಲೆ ರೋಗಿಯ ಬದುಕುಳಿಯುವ ಸಾಧ್ಯತೆಯನ್ನು ನಿರ್ಧರಿಸಬಹುದಾಗಿದೆ. ಹೀಗಾಗಿ ಅತಿಯಾದ ತೂಕ ನಷ್ಟ ಹಾಗೂ ಮಲದಲ್ಲಿ ರಕ್ತದ ವಿಸರ್ಜನೆಯನ್ನು ಎಂದಿಗೂ ಕಡೆಗಣಿಸುವಂತಿಲ್ಲ. ಆರಂಭಿಕ ಹಂತದಲ್ಲಿಯೇ ರೋಗಿಗೆ ಸೂಕ್ತವಾದ ಚಿಕಿತ್ಸೆ ಸಿಕ್ಕಲ್ಲಿ ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆಯೇ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.