Health Tips: ದಂಗಲ್‌ ಸಿನಿಮಾ ನಟಿ ಸುಹಾನಿ ಭಟ್ನಾಗರ್‌ ಬಲಿ ಪಡೆದ ಡರ್ಮಟೊಮಿಯೊಸಿಟಿಸ್ ಕಾಯಿಲೆಯ ಲಕ್ಷಣಗಳೇನು, ಚಿಕಿತ್ಸೆ ಏನು?
ಕನ್ನಡ ಸುದ್ದಿ  /  ಜೀವನಶೈಲಿ  /  Health Tips: ದಂಗಲ್‌ ಸಿನಿಮಾ ನಟಿ ಸುಹಾನಿ ಭಟ್ನಾಗರ್‌ ಬಲಿ ಪಡೆದ ಡರ್ಮಟೊಮಿಯೊಸಿಟಿಸ್ ಕಾಯಿಲೆಯ ಲಕ್ಷಣಗಳೇನು, ಚಿಕಿತ್ಸೆ ಏನು?

Health Tips: ದಂಗಲ್‌ ಸಿನಿಮಾ ನಟಿ ಸುಹಾನಿ ಭಟ್ನಾಗರ್‌ ಬಲಿ ಪಡೆದ ಡರ್ಮಟೊಮಿಯೊಸಿಟಿಸ್ ಕಾಯಿಲೆಯ ಲಕ್ಷಣಗಳೇನು, ಚಿಕಿತ್ಸೆ ಏನು?

Health Tips: ಬಾಲಿವುಡ್‌ನ ದಂಗಲ್ ಸಿನಿಮಾದಲ್ಲಿ ಬಾಲ ಕಲಾವಿದೆಯಾಗಿ ನಟಿಸಿದ್ದ ಸುಹಾನಿ ಭಟ್ನಾಗರ್ ಇತ್ತೀಚೆಗೆ ವಿಚಿತ್ರ ಕಾಯಿಲೆಯೊಂದಕ್ಕೆ ಬಲಿಯಾಗಿದ್ದಾರೆ. 19ನೇ ವಯಸ್ಸಿಗೆ ಪ್ರಾಣ ಕಳೆದುಕೊಳ್ಳುವ ಸಮಸ್ಯೆ ಆಗಿದ್ದೇನು? ಏನಿದು ಕಾಯಿಲೆ..? ಇದರ ಲಕ್ಷಣಗಳೇನು..? ಇಲ್ಲಿದೆ ಮಾಹಿತಿ.

ದಂಗಲ್‌ ಸಿನಿಮಾ ನಟಿ ಸುಹಾನಿ ಭಟ್ನಾಗರ್‌ ಬಲಿ ಪಡೆದ ಡರ್ಮಟೊಮಿಯೊಸಿಟಿಸ್ ಕಾಯಿಲೆಯ ಲಕ್ಷಣಗಳೇನು (ಸಾಂದರ್ಭಿಕ ಚಿತ್ರ)
ದಂಗಲ್‌ ಸಿನಿಮಾ ನಟಿ ಸುಹಾನಿ ಭಟ್ನಾಗರ್‌ ಬಲಿ ಪಡೆದ ಡರ್ಮಟೊಮಿಯೊಸಿಟಿಸ್ ಕಾಯಿಲೆಯ ಲಕ್ಷಣಗಳೇನು (ಸಾಂದರ್ಭಿಕ ಚಿತ್ರ)

Health Tips: ಮೆಟ್ಟಿಲು ಹತ್ತುವುದು ಹಾಗೂ ನಿಮ್ಮ ತಲೆಗೂದಲನ್ನು ನೀವೇ ಬಾಚಿಕೊಳ್ಳಲು ಹೆಣಗಾಡುವಂತಹ ಸ್ಥಿತಿ ಬಂದರೆ ನಿಮ್ಮ ಕತೆ ಏನಾಗಬಹುದು ಎಂದು ಎಂದಾದರೂ ಯೋಚಿಸಿದ್ದೀರೇ..? ಇದು ಮಾತ್ರವಲ್ಲ ನಿಮ್ಮ ಮುಖದ ತುಂಬೆಲ್ಲಾ ಕೆಂಪು ಬಣ್ಣದ ದದ್ದುಗಳು ಉಂಟಾಗಿ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಿಕೊಳ್ಳಲು ಹೆಣಗಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರೆ ನಿಮಗೆ ಡರ್ಮಟೊಮಿಯೊಸಿಟಿಸ್ ಇದೆ ಎಂದು ಅರ್ಥ. ಇದೊಂದು ಅಪರೂಪದ ಕಾಯಿಲೆಯಾಗಿದ್ದು ಇದರಿಂದ ಸ್ನಾಯು ದೌರ್ಬಲ್ಯ ಮತ್ತು ಚರ್ಮದ ಸಮಸ್ಯೆಗಳನ್ನು ತರುತ್ತದೆ.

ಇದನ್ನು ಇನ್ನಷ್ಟು ಸರಳೀಕೃತವಾಗಿ ಹೇಳಬೇಕು ಎಂದರೆ ಡರ್ಮಟೊಮಿಯೊಸಿಟಿಸ್ ಅತ್ಯಂತ ಅಪರೂಪದ ಸ್ಥಿತಿಯಾಗಿದ್ದು ನಿಮ್ಮ ರೋಗ ನಿರೋಧಕ ಶಕ್ತಿಯೇ ನಿಮ್ಮ ಚರ್ಮ ಹಾಗೂ ಸ್ನಾಯುಗಳ ಮೇಲೆ ದಾಳಿ ಮಾಡುತ್ತದೆ. ಇದರಿಂದ ಸ್ನಾಯುಗಳಲ್ಲಿ ಉರಿಯೂತ ಹಾಗೂ ದೌರ್ಬಲ್ಯ ಉಂಟಾಗುತ್ತದೆ. ಯಾರಿಗೆ ಬೇಕಿದ್ದರೂ ಈ ಕಾಯಿಲೆ ಬರಬಹುದು. ಆದರೆ 40 ರಿಂದ 60 ವರ್ಷ ಪ್ರಾಯದವರಿಗೆ ಹಾಗೂ 5 ರಿಂದ 15 ವರ್ಷದ ಮಕ್ಕಳಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುವುದು ಹೆಚ್ಚು.

ಈ ಕಾಯಿಲೆ ಬರಲು ನಿಖರವಾದ ಕಾರಣ ಏನು ಎಂಬುದಕ್ಕೆ ಇಂದಿಗೂ ಸೂಕ್ತವಾದ ಕಾರಣಗಳು ದೊರಕಿಲ್ಲ. ಈ ಕಾಯಿಲೆ ಬಂದಾಗ ನಮ್ಮ ದೇಹದಲ್ಲಿರುವ ಪ್ರತಿರಕ್ಷಣಾ ವ್ಯವಸ್ಥೆಯೇ ನಮ್ಮ ದೇಹದ ಮೇಲೆ ದಾಳಿ ಮಾಡಲು ಆರಂಭಿಸುತ್ತದೆ. ಮುಖ, ಕೈ ಬೆರಳುಗಳು, ಮೊಣಕೈ, ಮೊಣಕಾಲು ಹಾಗೂ ಸೂರ್ಯನ ಕಿರಣ ತಾಕುವ ಸ್ಥಳಗಳಲ್ಲಿ ದದ್ದುಗಳು ಉಂಟಾಗುತ್ತದೆ. ಕೆಂಪು ಅಥವಾ ನೇರಳೆ ಬಣ್ಣದ ಕಲೆಗಳು ಚರ್ಮದ ಮೇಲೆ ಕಾಣಿಸಿಕೊಳ್ಳುತ್ತದೆ.

ಸ್ನಾಯು ದೌರ್ಬಲ್ಯ : ಈ ಕಾಯಿಲೆಯನ್ನು ಹೊಂದಿರುವ ವ್ಯಕ್ತಿಯು ಅತಿಯಾದ ಸ್ನಾಯು ದೌರ್ಬಲ್ಯವನ್ನು ಅನುಭವಿಸುತ್ತಾರೆ. ಭುಜ , ತೋಳು, ಸೊಂಟ ಹಾಗೂ ತೊಡೆಯ ಭಾಗವು ಅತಿಯಾಗಿ ನೋಯುತ್ತಿರುತ್ತದೆ. ಇದರಿಂದಾಗಿ ನಿಮಗೆ ಮೆಟ್ಟಿಲು ಹತ್ತುವುದು, ಯಾವುದಾದರೂ ವಸ್ತುಗಳನ್ನು ಎತ್ತುವುದು ಅಥವಾ ನೀವು ಕುಳಿತಲ್ಲಿಂದ ಮೇಲೆ ಏಳುವುದು ಇಂತಹ ದೈನಂದಿನ ಸಾಮಾನ್ಯ ಚಟುವಟಿಕೆಗಳನ್ನು ಮಾಡುವುದೂ ಕೂಡ ನಿಮಗೆ ಕಷ್ಟ ಎನಿಸಲಿದೆ.

ಕೀಲುಗಳಲ್ಲಿ ನೋವು : ಈ ಕಾಯಿಲೆಗೆ ಒಳಗಾದವರಲ್ಲಿ ಬಹುತೇಕರಿಗೆ ಕೀಲುಗಳಲ್ಲಿ ನೋವು, ಊದಿಕೊಳ್ಳುವಂತಹ ಅನುಭವವಾಗುತ್ತದೆ. ಮೇಲ್ನೋಟಕ್ಕೆ ಇದು ಸಂಧಿವಾತದ ಲಕ್ಷಣಗಳಂತೆ ಕಾಣಿಸುತ್ತದೆ.

ಆಹಾರ ನುಂಗಲು ಆಗದಂತ ಪರಿಸ್ಥಿತಿ : ಇನ್ನು ಡರ್ಮಟೊಮಿಯೊಸಿಟಿಸ್‌ನ ಕೊನೆಯ ಹಂತದಲ್ಲಿ ಕಾಯಿಲೆಗೆ ಒಳಗಾದ ವ್ಯಕ್ತಿಗೆ ಆಹಾರ ನುಂಗಲು ಆಗದಂತಹ ಸ್ಥಿತಿ ಬರುತ್ತದೆ. ದ್ರವ ರೂಪದ ಆಹಾರಗಳನ್ನು ತೆಗೆದುಕೊಳ್ಳುವುದು ಸಹ ಕಷ್ಟಕರ ಎನಿಸಲಿದೆ.

ರೋಗ ನಿರ್ಣಯ

ಒಬ್ಬ ವ್ಯಕ್ತಿಗೆ ಡರ್ಮಟೊಮಿಯೊಸಿಟಿಸ್ ಎಂಬ ಕಾಯಿಲೆ ಬಂದಿದೆ ಎಂಬುದನ್ನು ಪತ್ತೆ ಮಾಡುವುದು ಕಷ್ಟಕರ ಕೆಲಸವಾಗಿದೆ. ಇದರ ಲಕ್ಷಣಗಳು ಇತರೆ ಕಾಯಿಲೆಗಳ ಲಕ್ಷಣದಂತೆ ತೋರುವುದರಿಂದ ನಿಖರವಾಗಿ ಡರ್ಮಟೊಮಿಯೊಸಿಟಿಸ್ ಬಂದಿದೆ ಎಂದು ನಿರ್ಧರಿಸುವುದು ಕಷ್ಟದ ಕೆಲಸವಾಗಿದೆ. ವಿವಿಧ ರೀತಿಯ ದೈಹಿಕ ಪರೀಕ್ಷೆಗಳು ಹಾಗೂ ರಕ್ತ ಪರೀಕ್ಷೆಯನ್ನು ನಡೆಸಿ ಈ ಕಾಯಿಲೆಯನ್ನು ಪತ್ತೆ ಮಾಡಲಾಗುತ್ತದೆ. ಸಾಮಾನ್ಯವಾಗಿ ವೈದ್ಯರು ಸಿಟಿ ಸ್ಕ್ಯಾನ್ ಅಥವಾ ಎಂಆರ್‌ಐನಂತಹ ಪರೀಕ್ಷೆಗಳು ಮತ್ತ ಚರ್ಮದಲ್ಲಾದ ಬದಲಾವಣೆಗಳನ್ನು ಪತ್ತೆ ಮಾಡಲು ಚರ್ಮದ ಬಯಾಪ್ಸಿ ಮಾಡಿಸುತ್ತಾರೆ.

ಚಿಕಿತ್ಸೆ ಏನು?

ಸಂಧಿವಾತ ತಜ್ಞರು ಹೇಳುವ ಪ್ರಕಾರ ಇದೊಂದು ಅತ್ಯಂತ ಅಪರೂಪದ ಕಾಯಿಲೆಯಾಗಿದ್ದು ನಮ್ಮ ದೇಹದ ಆರೋಗ್ಯವನ್ನು ಕಾಪಾಡಬೇಕಿದ್ದ ರಕ್ಷಣಾ ವ್ಯವಸ್ಥೆಯೇ ನಮ್ಮ ದೇಹದ ಮೇಲೆ ತಿರುಗಿ ಬೀಳುವ ಒಂದು ವಿಚಿತ್ರ ಪ್ರಕ್ರಿಯೆಯಾಗಿದೆ. ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯೇ ತಪ್ಪಾಗಿ ನಮ್ಮ ಸ್ನಾಯುಗಳು ಹಾಗೂ ಚರ್ಮದ ಮೇಲೆ ದಾಳಿ ಮಾಡಿಬಿಡುತ್ತದೆ. ಇದರಿಂದ ಸ್ನಾಯು ದೌರ್ಬಲ್ಯ ಹಾಗೂ ಚರ್ಮದ ದದ್ದುಗಳು ಕಾಣಿಸಿಕೊಳ್ಳುತ್ತದೆ. ವಿವಿಧ ಪರೀಕ್ಷೆಗಳ ಮೂಲಕ ಕಾಯಿಲೆಯನ್ನು ಪತ್ತೆ ಮಾಡಬಹುದಾಗಿದೆ. ಪ್ರತಿರಕ್ಷಣಾ ವ್ಯವಸ್ಥೆಯ ದಾಳಿಯನ್ನು ನಿಯಂತ್ರಿಸಲು ಚಿಕಿತ್ಸೆಯಲ್ಲಿ ಸ್ಡಿರಾಯ್ಡ್‌ಗಳ ಬಳಕೆ ಮಾಡಲಾಗುತ್ತದೆ. ರೋಗಿಗಳು ಚಿಕಿತ್ಸೆಯ ಮೂಲಕ ಸಾಮಾನ್ಯವಾಗಿ ಗುಣಮುಖರಾಗುತ್ತಾರೆ. ಆದರೆ ಈ ಔಷಧಿಗಳನ್ನು ತೆಗೆದುಕೊಳ್ಳುವಾಗ ಇತರೆ ಯಾವುದೇ ಸೋಂಕುಗಳಿಗೆ ದೇಹವು ಒಳಗಾಗದಂತೆ ಎಚ್ಚರ ವಹಿಸುವುದು ತುಂಬಾ ಮುಖ್ಯ.

Whats_app_banner