ಕನ್ನಡ ಸುದ್ದಿ  /  ಜೀವನಶೈಲಿ  /  ಬೆರಳುಗಳಿಂದಲೇ ತಿಳಿಯಬಹುದು ಹೃದಯದ ಆರೋಗ್ಯ ಸಮಸ್ಯೆ; ಹೃದ್ರೋಗದ ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡದಿರಿ

ಬೆರಳುಗಳಿಂದಲೇ ತಿಳಿಯಬಹುದು ಹೃದಯದ ಆರೋಗ್ಯ ಸಮಸ್ಯೆ; ಹೃದ್ರೋಗದ ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡದಿರಿ

Heart Disease: ಹೃದಯದ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಯಬೇಕು ಎಂದರೆ ಬೆರಳುಗಳನ್ನು ಪರೀಕ್ಷೆ ಮಾಡಬೇಕು. ಬೆರಳುಗಳ ತುದಿ ಊದುಕೊಂಡು, ಉಗುರುಗಳು ಒಳಮುಖವಾಗಿ ಅಥವಾ ಕೆಳಕ್ಕೆ ಬಾಗಿದ್ದರೆ ಅದು ಹೃದ್ರೋಗವನ್ನು ಆರಂಭದಲ್ಲೇ ಗುರುತಿಸಬಹುದಾದ ಲಕ್ಷಣಗಳಲ್ಲೊಂದಾಗಿದೆ. ಹೃದಯದ ಕಾಯಿಲೆಗಳನ್ನು ಆರಂಭದಲ್ಲೇ ಸೂಚಿಸುವ ಫಿಂಗರ್‌ ಕ್ಲಬ್ಬಿಂಗ್‌ ಸ್ಥಿತಿಯ ಬಗ್ಗೆ ಇಲ್ಲಿದೆ ಓದಿ.

 ಹೃದಯದ ಕಾಯಿಲೆ ಸೂಚಿಸುವ ಬೆರಳುಗಳು; ಫಿಂಗರ್‌ ಕ್ಲಬ್ಬಿಂಗ್‌ನಿಂದ ತಿಳಿದುಕೊಳ್ಳಿ ನಿಮ್ಮ ಆರೋಗ್ಯ
ಹೃದಯದ ಕಾಯಿಲೆ ಸೂಚಿಸುವ ಬೆರಳುಗಳು; ಫಿಂಗರ್‌ ಕ್ಲಬ್ಬಿಂಗ್‌ನಿಂದ ತಿಳಿದುಕೊಳ್ಳಿ ನಿಮ್ಮ ಆರೋಗ್ಯ (HT File Photo)

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಜನರು ಹೃದ್ರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಬದಲಾಗುತ್ತಿರುವ ಜೀವನಶೈಲಿ, ಒತ್ತಡ, ಆತಂಕ ಈ ಎಲ್ಲವೂ ಹೃದಯದ ಸಂಬಂಧಿ ಕಾಯಿಲೆಗಳು ಹೆಚ್ಚಲು ಪ್ರಮುಖ ಕಾರಣಗಳಾಗಿವೆ. ಸಾಮಾನ್ಯವಾಗಿ ಉಸಿರಾಟದ ತೊಂದರೆ, ಎದೆ ನೋವು ಹೃದ್ರೋಗವನ್ನು ಗುರುತಿಸುವ ಸಾಮಾನ್ಯ ಲಕ್ಷಣಗಳಾಗಿವೆ. ಆದರೆ ಆರಂಭದಲ್ಲಿಯೇ ದೇಹದಲ್ಲಾಗುವ ಕೆಲವು ಬದಲಾವಣೆಗಳನ್ನು ಗುರುತಿಸುವುದರ ಮೂಲಕವು ಹೃದ್ರೋಗವನ್ನು ಗುರುತಿಸಬಹುದಾಗಿದೆ. ತಜ್ಞರ ಪ್ರಕಾರ ಹೃದಯದ ರಕ್ತನಾಳದ ಮತ್ತು ರಕ್ತಪರಿಚಲನೆಯ ಕಾಯಿಲೆಗಳು ನಮ್ಮ ದೇಹದಲ್ಲಿ ಕೆಲವು ಬದಲಾವಣೆಗಳನ್ನು ತರುತ್ತವೆ. ಅವುಗಳು ಬರೀ ಹೃದ್ರೋಗವನ್ನಷ್ಟೇ ಎಚ್ಚರಿಸುವ ಸಂಕೇತವಾಗಿರದೇ ಶ್ವಾಸಕೋಶದ ಕಾಯಿಲೆ ಮತ್ತು ಕ್ಯಾನ್ಸರ್‌ ಸಂಕೇತವೂ ಆಗಿರಬಹುದು. ಫಿಂಗರ್‌ ಕ್ಲಬ್ಬಿಂಗ್‌ ಸಂಕೇತವು ಹೃದ್ರೋಗದ ಆರಂಭಿಕ ಲಕ್ಷಣಗಳನ್ನು ಗುರುತಿಸುವ ಚಿಹ್ನೆಯಾಗಿದೆ. ದೇಹದ ಈ ಭಾಗದಲ್ಲಾಗುವ ಬದಲಾವಣೆಗಳಿಂದ ಸುಲಭವಾಗಿ ಹೃದ್ರೋಗವನ್ನು ಗುರುತಿಸಬಹುದು. ಫಿಂಗರ್‌ ಕ್ಲಬ್ಬಿಂಗ್‌ ಪರೀಕ್ಷಿಸುವುದು ಹೇಗೆ ಅದರ ಮಾಹಿತಿ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಫಿಂಗರ್‌ ಕ್ಲಬ್ಬಿಂಗ್‌ ಎಂದರೇನು?

ಫಿಂಗರ್‌ ಕ್ಲಬ್ಬಿಂಗ್‌ ಎಂದರೆ ಬೆರಳುಗಳ ತುದಿ ಊದಿಕೊಂಡಿದ್ದು ಮತ್ತು ಉಗುರುಗಳು ಒಳಮುಖವಾಗಿ ಅಥವಾ ಕೆಳಕ್ಕೆ ಬಾಗಿರುವ ಸ್ಥಿತಿಯಾಗಿದೆ. ಈ ಫಿಂಗರ್‌ ಕ್ಲಬ್ಬಿಂಗ್‌ ಲಕ್ಷಣವು ಹೃದ್ರೋಗ, ಶ್ವಾಸಕೋಶದ ಕಾಯಿಲೆ ಮತ್ತು ಶ್ವಾಸಕೋಶದ ಕ್ಯಾನ್ಸರ್‌ನ ಎಚ್ಚರಿಕೆಯ ಸಂಕೇತವಾಗಿದೆ. ಬೆರಳುಗಳನ್ನು ಮುಟ್ಟಿದಾಗ ಅವು ಗಟ್ಟಿಯಾಗಿವೆಯೇ ಅಥವಾ ಇಲ್ಲವೇ ಎಂಬುದೂ ಕೂಡ ಸರಳ ಪರೀಕ್ಷೆಯ ವಿಧಾನವಾಗಿದೆ.

ಇದನ್ನೂ ಓದಿ: Heart attack after 60: 60ರ ನಂತರದ ಹಠಾತ್‌ ಹೃದಯಾಘಾತಕ್ಕೆ ಕಾರಣಗಳೇನು? ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಮಾರ್ಗಗಳಾವುವು?

ಫಿಂಗರ್‌ ಕ್ಲಬ್ಬಿಂಗ್ ಪರಿಶೀಲಿಸಲು ಈ ಹಂತ ಪಾಲಿಸಿ

ಫಿಂಗರ್‌ ಕ್ಲಬ್ಬಿಂಗ್‌ ಅನ್ನು ಈ ಕೆಳಗಿನ ಹಂತ ಪಾಲಿಸಿ ಪರೀಕ್ಷಿಸಬಹುದು.

* ಉಗುರುಗಳು ಅಭಿಮುಖವಾಗಿರುವಂತೆ ಎರಡೂ ಕೈಗಳ ಉಗುರುಗಳನ್ನು ಒಟ್ಟಿಗೆ ಜೋಡಿಸಿ.

* ಹಾಗೆ ಜೋಡಿಸಿದಾಗ, ಉಗುರುಗಳ ಕೆಳಭಾಗದಲ್ಲಿ ವಜ್ರಾಕೃತಿಯ (ಡೈಮಂಡ್‌ ಶೇಪ್‌) ಅಂತರ ಕಂಡುಬರಬೇಕು.

* ಫಿಂಗರ್‌ ಕ್ಲಬ್ಬಿಂಗ್‌ ಸ್ಥಿತಿಯಲ್ಲಿ ಆ ರೀತಿ ಕಂಡುಬರುವುದಿಲ್ಲ.

* ಈ ಪರೀಕ್ಷೆಗೆ ಸ್ಕಾಮ್ರೋತ್‌ ಪರೀಕ್ಷೆ ಎಂದು ಕರೆಯಲಾಗುತ್ತದೆ.

ಹೃದಯದ ಕಾಯಿಲೆಗೆ ಇದು ಹೇಗೆ ಸಂಬಂಧಿಸಿದೆ?

ಸಾಮಾನ್ಯವಾಗಿ ಫಿಂಗರ್‌ ಕ್ಲಬ್ಬಿಂಗ್‌ನಲ್ಲಿ ರಕ್ತದಲ್ಲಿ ಆಮ್ಲಜನಕದ ಮಟ್ಟವು ಕಡಿಮೆಯಾಗುವುದರಿಂದ ಉಂಟಾಗುತ್ತದೆ. ಹೃದಯವು ರಕ್ತವನ್ನು ಸರಿಯಾಗಿ ಪಂಪ್‌ ಮಾಡಲು ವಿಫಲವಾದಾಗ ಇದು ಸಂಭವಿಸಬಹುದು. ಇದು ಶ್ವಾಸಕೋಶದ ಕಾಯಿಲೆಗಳ ಸೂಚನೆಯೂ ಆಗಿರಬಹುದು.

ಹೃದ್ರೋಗದ ಲಕ್ಷಣಗಳೇನು?

ಫಿಂಗರ್‌ ಕ್ಲಬ್ಬಿಂಗ್‌ ಹೊರತುಪಡಿಸಿ, ಹೃದ್ರೋಗಗಳು ಈ ಕೆಳಗಿನ ಲಕ್ಷಣಗಳನ್ನು ಹೊಂದಿವೆ.

* ಎದೆನೋವು

* ಉಸಿರಾಟದ ತೊಂದರೆ

* ವಾಕರಿಕೆ

* ಮೂರ್ಛೆ ಬರುವುದು

* ದೇಹದಲ್ಲಿ ನೋವು ಕಾಣಿಸುವುದು

ಹೃದ್ರೋಗಕ್ಕೆ ಕಾರಣಗಳೇನು?

ಹೃದ್ರೋಗ ಬರಲು ಈ ಕೆಳಗಿನ ಅನಾರೋಗ್ಯಕರ ಅಭ್ಯಾಸಗಳು ಪ್ರಮುಖ ಕಾರಣ ಎಂದು ಹೇಳಲಾಗುತ್ತದೆ.

* ಅತಿಯಾಗಿ ಕೊಬ್ಬಿನ ಆಹಾರಗಳನ್ನು ಸೇವಿಸುವುದು

* ಧೂಮಪಾನ ಮಾಡುವುದು

* ಮದ್ಯಪಾನ ಮಾಡುವುದು

ಯಾರು ಹೃದ್ರೋಗದ ಕಡೆ ಹೆಚ್ಚು ಗಮನ ಕೊಡಬೇಕು?

* ಮಧುಮೇಹದಿಂದ ಬಳಲುತ್ತಿರುವವರು

* ಅಧಿಕ ಕೊಲೆಸ್ಟ್ರಾಲ್‌ ಇರುವವರು

* ಅಧಿಕ ರಕ್ತದೊತ್ತಡ ಹೊಂದಿರುವವರಲ್ಲಿ ಹೃದ್ರೋಗದ ಅಪಾಯ ಹೆಚ್ಚು.

ಹೃದ್ರೋಗದ ಆರಂಭಿಕ ಚಿಹ್ನೆಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡದಿರಿ. ಇದರಿಂದ ಭವಿಷ್ಯದಲ್ಲಿ ಅಪಾಯ ಎದುರಾಗುವುದು ಖಂಡಿತ. ಯಾವುದೇ ಆರೋಗ್ಯ ಸಮಸ್ಯೆಯನ್ನು ಆರಂಭದಲ್ಲೇ ಗುರುತಿಸಿ ಪರಿಹಾರ ಕಂಡುಕೊಳ್ಳುವುದು ಉತ್ತಮ.