ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಹೆಪಟೈಟಿಸ್ ಬಿ–ಸಿ ಸೋಂಕು, ಈ ವಿಚಾರಗಳಲ್ಲಿ ಮುನ್ನೆಚ್ಚರಿಕೆ ಮರಿಬೇಡಿ
ಹೆಪಟೈಟಿಸ್ ಬಿ ಮತ್ತು ಸಿ ಸೋಂಕು ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಬಹುದು. ಇವು ರಕ್ತದ ಮೂಲಕ ಸುಲಭವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹೆಪಟೈಟಿಸ್ ತಡೆಯಲು ಈ ಕೆಲವು ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಬೇಕು.

ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ ಗಂಭೀರ ವೈರಸ್ ಸೋಂಕುಗಳಾಗಿದ್ದು, ಅವು ಮುಖ್ಯವಾಗಿ ಯಕೃತ್ (ಲಿವರ್) ಅನ್ನು ಹಾನಿಗೊಳಿಸುತ್ತವೆ. ಸರಿಯಾದ ಸಮಯೋಚಿತ ಚಿಕಿತ್ಸೆ ನೀಡದಿದ್ದರೆ ಇವು ದೀರ್ಘಕಾಲೀನ ಅನಾರೋಗ್ಯ, ಯಕೃತ್ ವಿಫಲತೆ ಅಥವಾ ಕ್ಯಾನ್ಸರ್ಗೂ ಕಾರಣವಾಗಬಹುದು.
ಈ ವೈರಸ್ಗಳು ಜಗತ್ತಿನಾದ್ಯಾಂತ ಕಾಣಿಸಿಕೊಂಡಿವೆ ಮತ್ತು ಹಲವಾರು ದೇಶಗಳಲ್ಲಿ, ವಿಶೇಷವಾಗಿ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಇವು ಸಾಮಾನ್ಯವಾಗಿವೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಅಂದಾಜಿನ ಪ್ರಕಾರ, ಸುಮಾರು 29 ಕೋಟಿಗೂ ಅಧಿಕ ಜನರು ದೀರ್ಘಕಾಲೀನ ಹೆಪಟೈಟಿಸ್ ಬಿ ಸೋಂಕಿನೊಂದಿಗೆ ಬದುಕುತ್ತಿದ್ದಾರೆ ಮತ್ತು ಪ್ರತಿ ವರ್ಷ ಹೊಸದಾಗಿ ಸುಮಾರು 15 ಲಕ್ಷ ಜನರಿಗೆ ಸೋಂಕು ತಗಲುತ್ತಿದೆ. ಹೆಪಟೈಟಿಸ್ ಸಿ ಕಾರಣದಿಂದ ಪ್ರತಿ ವರ್ಷ ಸುಮಾರು 2.9 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ.
ಈ ವೈರಸ್ಗಳು ಸೋಂಕಿತ ರಕ್ತ ಅಥವಾ ದೇಹದ ದ್ರವಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. ಆದ್ದರಿಂದ, ಈ ವೈರಸ್ಗಳ ಹರಡುವಿಕೆಯನ್ನು ತಡೆಯಲು ಸ್ವಚ್ಛತೆ ಪಾಲನೆ ಮತ್ತು ಸೋಂಕಿತ ಸಾಧನಗಳ ಸಂಪರ್ಕ ತಪ್ಪಿಸುವುದು ಬಹಳ ಅಗತ್ಯ.
ಸೋಂಕು ಹರಡಲು ಮೂಲ ಕಾರಣವಿದು
ಹೆಪಟೈಟಿಸ್ ಸೋಂಕು ಹರಡಲು ಪ್ರಮುಖ ಕಾರಣ ಸ್ವಚ್ಛತೆ ಇಲ್ಲದೇ ಇರುವುದು. ಅದರಲ್ಲೂ ಮುಖ್ಯವಾಗಿ ಸಲೂನ್ ಹಾಗೂ ಕ್ಷೌರಿಕರು ಬಳಸುವ ಸಾಧನಗಳಿಂದ ಒಬ್ಬರಿಂದ ಒಬ್ಬರಿಗೆ ಹೆಪಟೈಟಿಸ್ ಸೋಂಕು ಸುಲಭವಾಗಿ ಹರಡುತ್ತಿದೆ. ಕತ್ತರಿ, ನೇಲ್ ಕ್ಲಿಪ್ಪರ್, ಕ್ಷೌರದ ಸಾಮಗ್ರಿಗಳಲ್ಲಿ ಸರಿಯಾಗಿ ಸ್ವಚ್ಛ ಮಾಡದೇ ಅಥವಾ ಹೊಸತನ್ನು ಬಳಸದೇ ಇರುವುದು ರಕ್ತ ಅಥವಾ ದೇಹ ದ್ರವ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹೆಪಟೈಟಿಸ್ ಸೋಂಕು ಹರಡಲು ಕಾರಣವಾಗುತ್ತದೆ.
ಈ ರೀತಿಯ ಯಾವುದೇ ವೈಯಕ್ತಿಕ ಬಳಕೆಯ ಸಾಧನಗಳನ್ನು ಮನೆ ಅಥವಾ ಸೆಲೂನ್ಗಳಲ್ಲಿ ಹಂಚಿಕೊಳ್ಳುವುದು ಹೆಪಟೈಟಿಸ್ ಬಿ ಮತ್ತು ಸಿ ಹರಡುವ ಅಪಾಯವನ್ನು ಬಹಳಷ್ಟು ಹೆಚ್ಚಿಸುತ್ತದೆ. ಈ ವೈರಸ್ಗಳು ಇಂತಹ ಸಾಧನಗಳ ಮೇಲೆ ಹಲವು ದಿನಗಳವರೆಗೆ ಜೀವಂತವಾಗಿ ಇರುತ್ತವೆ. ಆ ಕಾರಣಕ್ಕೆ ಶುದ್ಧತೆಯ ನಿಯಮಗಳನ್ನು ಪಾಲಿಸದಿದ್ದರೆ ಒಬ್ಬರಿಂದೊಬ್ಬರಿಗೆ ಸುಲಭವಾಗಿ ಹರಡಬಹುದು.
ಸ್ವಚ್ಛತೆ ಕಾಪಾಡಿಕೊಳ್ಳುವುದು ಸೋಂಕು ತಡೆಯಲು ಇರುವ ಶಕ್ತಿಯುತ ವಿಧಾನವಾಗಿದೆ. ವ್ಯಕ್ತಿಗಳು ತಾವು ಬಳಸುವ ರೇಜರ್, ಬ್ಲೇಡ್, ಟೂತ್ಬ್ರಷ್ ಅಥವಾ ಇಂತಹ ಯಾವುದೇ ಸಾಧನೆಗಳನ್ನು ದೇಹದ ರಕ್ತಸಂಪರ್ಕಕ್ಕೆ ತರುವ ಮೊದಲು ನೀಟಾಗಿ ಸ್ವಚ್ಛ ಮಾಡಿರಬೇಕು. ಇಂತಹ ವಸ್ತುಗಳನ್ನು ಸಾಧ್ಯವಾದಷ್ಟು ಇತರರೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸಬೇಕು. ಮುಖ್ಯವಾಗಿ ಸಲೂನ್ಗಳಲ್ಲಿ ಇಂತಹ ಕ್ರಮಗಳನ್ನು ಕಟ್ಟುನಿಟ್ಟಾಗಿ ಬಳಸಬೇಕು. ಬ್ಲೇಡ್, ರೇಜರ್ನಂತಹ ಸಾಧನಗಳನ್ನು ಒಬ್ಬರಿಗೆ ಬಳಸಿದ ಮೇಲೆ ಇನ್ನೊಬ್ಬರಿಗೆ ಬಳಸಬಾರದು, ಬಳಸಿದರೂ ಸೂಕ್ತ ರೀತಿಯಲ್ಲಿ ಸ್ವಚ್ಛ ಮಾಡಿರಬೇಕು.
ಬಳಸಿದ ಉತ್ಪನ್ನಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ಅದನ್ನು ಬೇರೆಯವರ ಸಂಪರ್ಕಕ್ಕೆ ಬಾರದ ಸ್ಥಳದಲ್ಲಿ ಅಥವಾ ಡಬ್ಬಿಯಲ್ಲಿ ಹಾಕಿ ಮುಚ್ಚಿಡಬೇಕು. ಪ್ರಮುಖವಾಗಿ ಸಾರ್ವಜನಿಕ ಜಾಗೃತಿ ಅಭಿಯಾನಗಳು ಈ ವಿಚಾರವನ್ನು ಒತ್ತಿಹೇಳಬೇಕು, ವಿಶೇಷವಾಗಿ ಜನಸಾಂದ್ರತೆ ಅಧಿಕವಾಗಿರುವ ಹಾಗೂ ಮಾಹಿತಿ ಕೊರತೆ ಇರುವ ಸ್ಥಳಗಳಲ್ಲಿ ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು.
ಹೆಪಟೈಟಿಸ್ ಸೋಂಕಿಗೆ ಲಸಿಕೆ
ಹೆಪಟೈಟಿಸ್ ಬಿಗೆ ಲಭ್ಯವಿರುವ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದೆ. ಆದರೆ ಹೆಪಟೈಟಿಸ್ ಸಿ ಗೆ ಪ್ರಸ್ತುತ ಯಾವುದೇ ಲಸಿಕೆ ಲಭ್ಯವಿಲ್ಲ, ಆದ್ದರಿಂದ ಸ್ವಚ್ಛತೆ ಮತ್ತು ಸುರಕ್ಷಿತ ಅಭ್ಯಾಸಗಳ ಮೂಲಕ ತಡೆಯುವುದು ಇನ್ನಷ್ಟು ಅಗತ್ಯವಿರುತ್ತದೆ. ಸಾರ್ವಜನಿಕ ಆರೋಗ್ಯ ಶಿಕ್ಷಣ ಜನರಿಗೆ ಹಂಚಿಕೊಳ್ಳುವ ಅಪಾಯಗಳ ಬಗ್ಗೆ ಹಾಗೂ ಶುದ್ಧ ಸಾಧನಗಳ ಬಳಕೆಯ ಮಹತ್ವವನ್ನು ತಿಳಿಸಿ, ಈ ವೈರಸ್ಗಳ ಹರಡುವಿಕೆಯನ್ನು ಕಡಿಮೆ ಮಾಡಲು ಪ್ರಮುಖ ಪಾತ್ರವಹಿಸುತ್ತದೆ.
ಹೆಪಟೈಟಿಸ್ ಬಿ ಮತ್ತು ಸಿ ಹರಡುವಿಕೆಯನ್ನು ಸ್ವಚ್ಚತೆ ಕಾಯ್ದುಕೊಳ್ಳುವಿಕೆ ಮತ್ತು ಉಳಿದ ಉತ್ಪನ್ನಗಳನ್ನು ಸರಿಯಾದ ನಿಷ್ಕ್ರೀಯಗೊಳಿಸುವುದರ ಮೂಲಕ ತಡೆಗಟ್ಟಬಹುದು. ಸರಳವಾದ ಆದರೆ ಪರಿಣಾಮಕಾರಿ ಈ ಕ್ರಮಗಳು ವ್ಯಕ್ತಿಗಳನ್ನೂ, ಸಮುದಾಯವನ್ನೂ ತಡೆಯಬಹುದಾದ ಈ ಗಂಭೀರ ರೋಗಗಳಿಂದ ರಕ್ಷಿಸಬಹುದು.
ಹೀಗಿರಲಿ ಮುನ್ನೆಚ್ಚರಿಕೆ
ವೈಯಕ್ತಿಕ ಉಪಕರಣಗಳ ಬಳಕೆ: ಶೇವಿಂಗ್ ರೇಜರ್, ಕತ್ತರಿ ಅಥವಾ ಬ್ಲೇಡ್ನಂತಹ ಯಾವುದೇ ಉಪಕರಣಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ.
ಸಲೂನ್, ಕ್ಷೌರದ ಅಂಗಡಿಗಳಲ್ಲಿ ಎಚ್ಚರಿಕೆ: ಶೇವಿಂಗ್ ಅಥವಾ ಸಲೂನ್ಗಳಲ್ಲಿ ಬಳಸುವ ಸಾಧನಗಳನ್ನು ಗಮನಿಸಿ. ಅವರು ಬಳಸಿದ್ದನ್ನೇ ಮತ್ತೆ ಬಳಸುತ್ತಿದ್ದರೆ ಅವರಿಗೆ ಈ ಬಗ್ಗೆ ಎಚ್ಚರಿಸಿ.
ಸ್ಟೆರಿಲೈಸೇಶನ್ ಅಗತ್ಯ: ದಂತಚಿಕಿತ್ಸಕರಿಂದ ಹಿಡಿದು, ಉಗುರು ವಿನ್ಯಾಸ ಮಾಡುವ ಸಲೂನ್ವರೆಗೆ ಎಲ್ಲಾ ಉಪಕರಣಗಳನ್ನು ಸರಿಯಾಗಿ ಸೆರಿಲೈಸ್ ಮಾಡುವುದು ಅವಶ್ಯಕ.
ಸಾಮಾನ್ಯ ಅರಿವು: ಹೆಪಟೈಟಿಸ್ ಬಿ ಮತ್ತು ಸಿ ಸೋಂಕಿನ ಬಗ್ಗೆ ಜನರಿಗೆ ಸೂಕ್ತ ಜಾಗೃತಿ ಮೂಡಿಸುವ ಮೂಲಕ ಎಚ್ಚರಿಕೆಯಿಂದಿರುವಂತೆ ಪ್ರೇರೇಪಿಸಬೇಕು.
ಲಸಿಕೆ ಪಡೆಯುವುದು: ಹೆಪಟೈಟಿಸ್ ಬಿಗೆ ಲಭ್ಯವಿರುವ ಲಸಿಕೆಯನ್ನು ತೆಗೆದುಕೊಳ್ಳುವುದು ಅತ್ಯಂತ ಪರಿಣಾಮಕಾರಿಯಾದ ತಡೆಗಟ್ಟುವ ಕ್ರಮವಾಗಿದೆ.
(ಲೇಖನ: ಡಾ ಕಿರಣ್ ಬಿ, ಗ್ಯಾಸ್ಟ್ರೋಎಂಟರಾಲಜಿಸ್ಟ್ ಕನ್ಸಲ್ಟೆಂಟ್, ಮಣಿಪಾಲ್ ಆಸ್ಪತ್ರೆ ವರ್ತೂರು, ಬೆಂಗಳೂರು)
ವಿಭಾಗ