Kawasaki Disease: ಏನಿದು ಕವಾಸಕಿ ಕಾಯಿಲೆ, ಪುಟ್ಟ ಮಕ್ಕಳಲ್ಲಿ ಅಪರೂಪಕ್ಕೆ ಕಾಣಿಸುವ ಈ ರೋಗದ ಲಕ್ಷಣಗಳು, ಪರಿಣಾಮವೇನು? ಇಲ್ಲಿದೆ ಉತ್ತರ
ಹಿಂದಿ ಬಿಗ್‌ಬಾಸ್ ಸೀಸನ್ 17ರ ವಿಜೇತ ಮುನ್ನಾವರ್ ಫಾರೂಕಿ ತಮ್ಮ ಮಗನಿಗೆ ಅಪರೂಪದ ಕವಾಸಕಿ ಎಂಬ ಕಾಯಿಲೆ ಇತ್ತು ಎಂಬ ವಿಚಾರ ಬಹಿರಂಗ ಪಡಿಸಿದ್ದರು. ಅದರ ನಂತರ ಏನಿದು ಕವಾಸಕಿ ಕಾಯಿಲೆ ಎಂಬುದು ಎಲ್ಲರನ್ನೂ ಕಾಡಲು ಶುರುವಾಗಿದೆ. ಹಾಗಾದರೆ ಕವಾಸಕಿ ಕಾಯಿಲೆ ಎಂದರೇನು, ಇದರ ಲಕ್ಷಣಗಳೇನು, ಇದರ ಪರಿಣಾಮವೇನು? ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
![ಕವಾಸಕಿ ಕಾಯಿಲೆ (ಸಾಂಕೇತಿಕ ಚಿತ್ರ) ಕವಾಸಕಿ ಕಾಯಿಲೆ (ಸಾಂಕೇತಿಕ ಚಿತ್ರ)](https://images.hindustantimes.com/kannada/img/2024/12/11/550x309/Kawasaki_1733910744803_1733910749120.png)
ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಬರುವ ಕಾಯಿಲೆಗಳೂ ವಿಚಿತ್ರ, ಅದರ ಹೆಸರುಗಳೂ ವಿಚಿತ್ರ. ಒಮ್ಮೊಮ್ಮೆ ನಾವೆಂದೂ ಕೇಳಿರದ ಕಾಯಿಲೆಗಳು ನಮ್ಮಲ್ಲಿ ಭಯ ಹುಟ್ಟಿಸುತ್ತವೆ. ಕೆಲವೊಮ್ಮೆ ಹೀಗೂ ಒಂದು ಕಾಯಿಲೆ ಇದ್ಯಾ ಅನ್ನಿಸದೇ ಇರುವುದಿಲ್ಲ. ಇದೀಗ ಕೆಲವು ದಿನಗಳಿಂದ ಕವಾಸಕಿ ಕಾಯಿಲೆ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಾಗಿದೆ. ಏನಿದು ಕವಾಸಕಿ ಕಾಯಿಲೆ ಎಂದು ಜನರು ಹುಡುಕಾಟ ನಡೆಸುತ್ತಿದ್ದಾರೆ.
ಹಿಂದಿ ಬಿಗ್‌ಬಾಸ್ ಸೀಸನ್ 17ರ ವಿಜೇತ, ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನ್ನಾವರ್ ಫಾರೂಕಿ ತಮ್ಮ ಮಗನಿಗೆ ಒಂದೂವರೆ ವರ್ಷ ಇದ್ದಾಗ ಅಪರೂಪ ಮಾರಣಾಂತಿಕ ಕವಾಸಕಿ ಕಾಯಿಲೆ ಎದುರಾಗಿತ್ತು ಎಂಬ ವಿಚಾರವನ್ನು ಮಾಧ್ಯಮಗಳ ಮುಂದೆ ಬಹಿರಂಗ ಪಡಿಸಿದ್ದರು. ಅಲ್ಲದೇ ಈ ಅಪರೂಪದ ಕಾಯಿಲೆಯು ಗುಣ ಪಡಿಸಲು ಹಣಕ್ಕಾಗಿ ಪರದಾಡಿದ್ದಾಗಿಯೂ ಅವರು ತಿಳಿಸಿದ್ದರು. ಪ್ರಾಣಕ್ಕೆ ಕುತ್ತು ತರುವ ಈ ಕವಾಸಕಿ ಕಾಯಿಲೆ ಎಂದರೇನು, ಇದರ ಲಕ್ಷಣಗಳೇನು, ಇದರ ಪರಿಣಾಮಗಳೇನು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಏನಿದು ಕವಾಸಕಿ ಕಾಯಿಲೆ?
ಕವಾಸಕಿ ಎನ್ನುವುದು ಒಂದು ಅಪರೂಪದ ಕಾಯಿಲೆಯಾಗಿದ್ದು, ಇದು ಊದಿಕೊಳ್ಳುವ ಹಾಗೂ ಮೈ ತುಂಬಾ ರಕ್ತದ ಗುಳ್ಳೆಗಳು ಏಳುವ ಸ್ಥಿತಿಯಾಗಿದೆ. ಇದು 5 ವರ್ಷದ ಒಳಗಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ನಿಖರವಾದ ಕಾರಣ ತಿಳಿದಿಲ್ಲವಾದರೂ, ಇದು ಸೋಂಕಿನಿಂದ ಪ್ರಚೋದಿಸಲ್ಪಟ್ಟ ಅಸಹಜ ಪ್ರತಿರಕ್ಷಣಾ ಪ್ರತಿಕ್ರಿಯೆಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಇದೊಂದು ಗಂಭೀರ ಸಮಸ್ಯೆಯಾಗಿದ್ದು ಚಿಕಿತ್ಸೆ ನೀಡದೆ ಬಿಟ್ಟರೆ, ಹೃದಯ ರಕ್ತನಾಳದ ತೊಡಕುಗಳಿಗೆ ಕಾರಣವಾಗಬಹುದು, ಕೆಲವೊಮ್ಮೆ ಇದು ಪ್ರಾಣಕ್ಕೂ ಅಪಾಯವಾಗಬಹುದು. ದೀರ್ಘಾವಧಿಯ ಹಾನಿಯನ್ನು ತಡೆಗಟ್ಟಲು ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆಯು ನಿರ್ಣಾಯಕವಾಗಿದೆ.
ಕವಾಸಕಿ ರೋಗದ ಲಕ್ಷಣಗಳು
ಕವಾಸಕಿ ರೋಗವು ಸಾಮಾನ್ಯವಾಗಿ ಹಂತ ಹಂತವಾಗಿ ಗಮನಕ್ಕೆ ಬರುತ್ತದೆ. ರೋಗಲಕ್ಷಣಗಳು ದಿನಗಳು ಅಥವಾ ವಾರಗಳಲ್ಲಿ ಬೆಳವಣಿಗೆಯಾಗುತ್ತವೆ. ಇದರ ರೋಗಲಕ್ಷಣಗಳು ಹೀಗಿವೆ.
- ದೀರ್ಘಕಾಲದ ಜ್ವರ: ಐದು ದಿನಗಳಿಗಿಂತ ಹೆಚ್ಚು ಕಾಲ ಅಧಿಕ ಜ್ವರ ಇರುತ್ತದೆ. ಈ ಜ್ವರವು ವಿಶಿಷ್ಟವಾಗಿದ್ದು ಔಷಧಿಗಳಿಗೆ ಪ್ರತಿಕ್ರಿಯಿಸುವುದಿಲ್ಲ.
- ಚರ್ಮದ ದದ್ದುಗಳು: ತೋಳುಗಳು ಅಥವಾ ಕಾಲುಗಳ ಮೇಲೆ ಕಾಣಿಸಿಕೊಳ್ಳುವ ಕೆಂಪು ದದ್ದುಗಳು.
- ಕಣ್ಣು ಕೆಂಪಾಗುವುದು: ಕಣ್ಣುಗಳು ರಕ್ತದಂತೆ ಕೆಂಪಾಗುವುದು.
- ಊದಿಕೊಂಡ ಕೈಗಳು ಮತ್ತು ಪಾದಗಳು: ಆಗಾಗ ಕೈ, ಪಾದದ ಚರ್ಮ ಕೆಂಪಾಗುವುದು. ನಂತರ ಬೆರಳ ತುದಿ ಹಾಗೂ ಕಾಲ್ಬೆರಳುಗಳ ಸುತ್ತಲೂ ಚರ್ಮ ಸುಲಿದಂತಾಗುವುದು.
- ತುಟಿ ಕೆಂಪಾಗಿ ಒಡೆದಂತಾಗುವುದು, ನಾಲಿಗೆ ಬಣ್ಣ ಬದಲಾಗುವುದು, ನಾಲಿಗೆಯು ಸ್ಟ್ರಾಬೆರ್ರಿ ಬಣ್ಣಕ್ಕೆ ತಿರುಗುವುದು
- ಊದಿಕೊಂಡ ದುಗ್ಧರಸ ಗ್ರಂಥಿಗಳು: ವಿಸ್ತರಿಸಿದ ದುಗ್ಧರಸ ಗ್ರಂಥಿಗಳು, ವಿಶೇಷವಾಗಿ ಕುತ್ತಿಗೆ ಭಾಗದಲ್ಲಿ ಗ್ರಂಥಿಗಳು ಊದಿಕೊಳ್ಳುತ್ತವೆ.
- ಕಿರಿಕಿರಿ ಮತ್ತು ಆಯಾಸ: ಬಾಧಿತ ಮಕ್ಕಳು ಅಸಾಧಾರಣವಾಗಿ ಕಿರಿಕಿರಿ ಅನುಭವಿಸುತ್ತವೆ ಮತ್ತು ಆ ಮಕ್ಕಳಿಗೆ ಹೆಚ್ಚು ಸುಸ್ತಾಗುತ್ತದೆ.
ಈ ಕವಾಸಕಿ ಕಾಯಿಲೆಯು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲವಾದರೂ ಇದು ಮಾರಣಾಂತಿಕ ಕಾಯಿಲೆಯಾಗಿದೆ. ಈ ಮೇಲಿನ ಲಕ್ಷಣಗಳು ಮಗುವಿನಲ್ಲಿ ಕಾಣಿಸಿದರೆ ಕೂಡಲೇ ವೈದ್ಯರ ಬಳಿಗೆ ತೋರಿಸಿ ಚಿಕಿತ್ಸೆ ಕೊಡಿಸಿ. ಈ ಕಾಯಿಲೆಯು ಹೆಣ್ಣುಮಕ್ಕಳಿಗಿಂತ ಗಂಡುಮಕ್ಕಳನ್ನು ಹೆಚ್ಚು ಬಾಧಿಸುತ್ತದೆ ಎಂಬುದು ವಿಶೇಷ.
ಕವಾಸಕಿ ರೋಗ ಏಕೆ ಬರುತ್ತದೆ?
ಈ ರೋಗ ಏಕೆ ಸಂಭವಿಸುತ್ತದೆ ಎಂದು ಹೇಳುವುದು ತುಂಬಾ ಕಷ್ಟ. ಹೆಚ್ಚಾಗಿ ಈ ಕವಾಸಕಿ ರೋಗವು ಚಳಿಗಾಲದಲ್ಲಿ ಕಂಡುಬರುತ್ತದೆ. ಬದಲಾಗುತ್ತಿರುವ ಹವಾಮಾನ, ಸೋಂಕುಗಳು, ಪರಿಸರದಲ್ಲಿನ ಬದಲಾವಣೆಗಳು ಮತ್ತು ಆನುವಂಶಿಕ ಸಮಸ್ಯೆಗಳು ಕವಾಸಕಿ ಕಾಯಿಲೆಗೆ ಕಾರಣವಾಗಬಹುದು. ಸಂಶೋಧಕರು ಇನ್ನೂ ನಿಖರವಾದ ಕಾರಣವನ್ನು ನಿರ್ಧರಿಸಲು ಸಾಧ್ಯವಾಗಿಲ್ಲ. ಆ ವಿಷಯದ ಬಗ್ಗೆ ಸಂಶೋಧನೆ ನಡೆಯುತ್ತಿದೆ.
ಕವಾಸಕಿ ಕಾಯಿಲೆಗೆ ಚಿಕಿತ್ಸೆ ಇದೆಯೇ?
ನಾಲ್ಕರಿಂದ ಆರು ವಾರಗಳ ಅಂತರದಲ್ಲಿ ಕವಾಸಕಿ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆ ವಾರಗಳ ನಂತರ, ಸಮಸ್ಯೆ ಉಲ್ಬಣಗೊಳ್ಳುತ್ತದೆ. ಆದ್ದರಿಂದ ಅವರಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಬೇಕು. ಬೇಗ ಚಿಕಿತ್ಸೆ ನೀಡಿದರೆ ರಕ್ತನಾಳಗಳು ಆರೋಗ್ಯಕರವಾಗಿರುತ್ತವೆ ಮತ್ತು ಹಾನಿಯಾಗದಂತೆ ವೈದ್ಯರು ಕಾಳಜಿ ವಹಿಸುತ್ತಾರೆ. ದೇಹದ ಎಲ್ಲಾ ಅಂಗಗಳಿಗೆ ರಕ್ತದ ಹರಿವು ಸುಧಾರಿಸುತ್ತದೆ. ಅಲ್ಲದೆ ಮಕ್ಕಳಲ್ಲಿ ರಕ್ತ ಹೆಪ್ಪುಗಟ್ಟದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಇಂತಹ ಚಿಕಿತ್ಸೆಗಳ ಮೂಲಕವೇ ಮಕ್ಕಳು ಗುಣಮುಖರಾಗುತ್ತಾರೆ. ಒಂದರಿಂದ ಎರಡು ಮೂರು ತಿಂಗಳವರೆಗೆ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
![Whats_app_banner Whats_app_banner](https://kannada.hindustantimes.com/static-content/1y/wBanner.png)