ರಕ್ತದೊತ್ತಡ ಕಡಿಮೆ ಆದ್ರೆ ಪ್ರಾಣಕ್ಕೆ ಸಂಚು ಎದುರಾಗುತ್ತಾ? ಲೋ ಬಿಪಿ ರೋಗಲಕ್ಷಣಗಳು, ಮುನ್ನೆಚ್ಚರಿಕೆ ಬಗ್ಗೆ ಇಲ್ಲಿದೆ ಮಾಹಿತಿ
ರಕ್ತದೊತ್ತಡ ಕಡಿಮೆ ಆದ್ರೆ ಪ್ರಾಣಕ್ಕೆ ಸಂಚು ಎದುರಾಗಬಹುದಾ? ಹೀಗೊಂದು ಪ್ರಶ್ನೆ ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿ ಸಾವಿನ ನಂತರ ಹಲವರನ್ನು ಕಾಡಿರಬಹುದು. ನಿಜಕ್ಕೂ ಲೋ ಬಿಪಿ ಅಷ್ಟೊಂದು ಅಪಾಯಕಾರಿಯೇ, ಇದರ ರೋಗಲಕ್ಷಣಗಳು, ಮುನ್ನೆಚ್ಚರಿಕೆ ಬಗ್ಗೆ ತಿಳಿಯಿರಿ.

ಇತ್ತೀಚೆಗೆ ಇಹಲೋಕ ತ್ಯಜಿಸಿದ ನಗುವಿನ ಸರದಾರ, ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿ ಸಾವು ಹಲವರನ್ನು ದಿಗ್ಭ್ರಮೆಗೊಳಿಸಿದೆ. ಆರೋಗ್ಯವಂತನಾಗಿಯೇ ಇದ್ದ ರಾಕೇಶ್ ಇದ್ದಕ್ಕಿದ್ದ ಹಾಗೆ ಸಾವನ್ನಪ್ಪುತ್ತಾರೆ. ಅವರಿಗೆ ಬಿಪಿ ಲೋ ಆಗಿತ್ತು, ನಂತರ ಹೃದಯಘಾತವಾಗಿತ್ತು ಎಂದು ಹೇಳಲಾಗುತ್ತಿದೆ. ಹಾಗಾದರೆ ಲೋ ಬಿಪಿ ಅಷ್ಟೊಂದು ಅಪಾಯಕಾರಿಯೇ, ರಕ್ತದೊತ್ತಡ ಕಡಿಮೆಯಾದ್ರೆ ಪ್ರಾಣಕ್ಕೂ ಸಂಚು ಬರುತ್ತಾ, ಏನಿದು ರಕ್ತದೊತ್ತಡ, ಇದರ ರೋಗಲಕ್ಷಣಗಳು, ಮುನ್ನೆಚ್ಚರಿಕೆ ಹೇಗೆ, ಇಲ್ಲಿದೆ ಮಾಹಿತಿ.
ಏನಿದು ಲೋ ಬ್ಲಡ್ ಪ್ರೆಶರ್ (ಲೋ ಬಿಪಿ)?
ಕಡಿಮೆ ರಕ್ತದೊತ್ತಡ ಅಥವಾ ಲೋ ಬ್ಲಡ್ ಪ್ರೆಶರ್ ಎಂದರೆ ಅಪಧಮನಿಯ ಗೋಡೆಗಳ ವಿರುದ್ಧ ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯ ಕಡಿಮೆ ಇರುವ ಸ್ಥಿತಿ. ಇದನ್ನು ಹೈಪೊಟೆನ್ಷನ್ ಎಂದೂ ಕೂಡ ಕರೆಯುತ್ತಾರೆ. ರಕ್ತದೊತ್ತಡವನ್ನು ಮಿಲಿಮೀಟರ್ ಪಾದರಸದಲ್ಲಿ (mm Hg) ಅಳೆಯಲಾಗುತ್ತದೆ. 90/60 mm Hg ಗಿಂತ ಕಡಿಮೆಯಿರುವ ಸ್ಥಿತಿಯನ್ನು ಕಡಿಮೆ ರಕ್ತದೊತ್ತಡ ಎಂದು ಪರಿಗಣಿಸಲಾಗುತ್ತದೆ. ರಕ್ತದೊತ್ತಡ ಕಡಿಮೆ ಆದರೆ ಯಾವುದೇ ನಿರ್ದಿಷ್ಟ ರೋಗಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಇದರಿಂದ ಆಗಾಗ ತಲೆಸುತ್ತುವುದು, ಮೂರ್ಛೆ ಹೋಗುವುದು ಇಂತಹ ಲಕ್ಷಣಗಳು ಕಾಣಿಸುವ ಸಾಧ್ಯತೆ ಇದೆ. ಕೆಲವೊಮ್ಮೆ ರಕ್ತದೊತ್ತಡ ಕಡಿಮೆಯಾಗುವುದರಿಂದ ಪ್ರಾಣಕ್ಕೆ ಸಂಚು ಬರುವ ಸಾಧ್ಯತೆಯೂ ಇದೆ.
ನಿರ್ಜಲೀಕರಣ ಹಾಗೂ ಇತರ ಗಂಭೀರ ಆರೋಗ್ಯ ಸಮಸ್ಯೆಗಳು ರಕ್ತದೊತ್ತಡ ಕಡಿಮೆಯಾಗಲು ಕಾರಣವಾಗಬಹುದು. ಅಗತ್ಯವಿದ್ದರೆ ಚಿಕಿತ್ಸೆ ನೀಡಲು ಸಾಧ್ಯವಾಗುವಂತೆ ಕಡಿಮೆ ರಕ್ತದೊತ್ತಡಕ್ಕೆ ಕಾರಣವೇನು ಎಂಬುದನ್ನು ಕಂಡುಹಿಡಿಯುವುದು ಮುಖ್ಯ.
ಲೋ ಬಿಪಿಯ ಸಾಮಾನ್ಯ ರೋಗಲಕ್ಷಣಗಳು
ರಕ್ತದೊತ್ತಡ ಕಡಿಮೆಯಾದಾಗ ಸಾಮಾನ್ಯವಾಗಿ ಇಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು.
* ದೃಷ್ಟಿ ಮಂಜಾಗುವುದು ಅಥವಾ ಮಸುಕಾಗುವುದು
* ತಲೆ ತಿರುಗುವುದು
* ಮೂರ್ಛೆ ಹೋಗುವುದು
* ಆಯಾಸ
* ಕೆಲಸಗಳ ಮೇಲೆ ಗಮನ ಹರಿಸಲು ಕಷ್ಟವಾಗುವುದು
* ಹೊಟ್ಟೆ ನೋವು
ಕೆಲವರಿಗೆ ರಕ್ತದೊತ್ತಡ ಕಡಿಮೆಯಾದಾಗ ಕೆಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ರಕ್ತದೊತ್ತಡ ಹಠಾತ್ತನೆ ಕಡಿಮೆಯಾದರೆ ಅಥವಾ ಮೇಲೆ ತಿಳಿಸಿದ ರೋಗಲಕ್ಷಣಗಳೊಂದಿಗೆ ಲೋ ಬಿಪಿ ಎದುರಾದಾಗ ಈ ಸಮಸ್ಯೆಗಳು ಕಾಣಿಸಬಹುದು.
ರಕ್ತದೊತ್ತಡವು ಇದ್ದಕ್ಕಿದ್ದ ಹಾಗೆ ಕಡಿಮೆಯಾಗುವುದು ಅಪಾಯಕಾರಿ. ಕೇವಲ 20 mm Hg ಯ ಬದಲಾವಣೆಯು ನಿಮಗೆ ತಲೆತಿರುಗುವಿಕೆ ಅಥವಾ ಮೂರ್ಛೆ ಹೋಗುವಂತೆ ಮಾಡಬಹುದು. ಉದಾಹರಣೆಗೆ, ಸಿಸ್ಟೊಲಿಕ್ ಒತ್ತಡವು 110 mm Hg ಯಿಂದ 90 mm Hg ಗೆ ಇಳಿದ ನಂತರ ಆ ಲಕ್ಷಣಗಳು ಸಂಭವಿಸಬಹುದು. ಗಂಭೀರ ರಕ್ತಸ್ರಾವ, ಗಂಭೀರ ಸೋಂಕುಗಳು ಅಥವಾ ಅಲರ್ಜಿಯ ಪ್ರತಿಕ್ರಿಯೆಗಳಂತಹ ಕಾರಣಗಳಿಗಾಗಿ ಇವು ಸಂಭವಿಸಬಹುದು.
ತೀವ್ರ ಕಡಿಮೆ ರಕ್ತದೊತ್ತಡವು ಗಂಭೀರ ಸ್ಥಿತಿಗೆ ಕಾರಣವಾಗಬಹುದು. ಅಂತಹ ಸಮಯದಲ್ಲಿ ಈ ರೋಗಲಕ್ಷಣಗಳು ಕಾಣಿಸಬಹುದು.
* ವಯಸ್ಸಾದವರಲ್ಲಿ ಗೊಂದಲಗಳು ಎದುರಾಗುವುದು
* ಚರ್ಮದಲ್ಲಿ ಶೀತ ಲಕ್ಷಣ ಕಂಡುಬರುವುದು
* ಚರ್ಮದ ಬಣ್ಣದಲ್ಲಿ ಬದಲಾವಣೆ ಇದನ್ನು ಪಲ್ಲರ್ ಎಂದು ಕರೆಯಲಾಗುತ್ತದೆ.
* ತ್ವರಿತ ಉಸಿರಾಟ
* ಪಲ್ಸ್‌ನಲ್ಲಿ ವ್ಯತ್ಯಯ
ರಕ್ತದೊತ್ತಡ ಕಡಿಮೆಯಾಗಲು ಕಾರಣಗಳು?
* ದೀರ್ಘಕಾಲದ ಮಲಗಿದಲ್ಲೇ ಇರುವುದು
* ದೀರ್ಘಕಾಲದ ನಿಂತುಕೊಂಡೇ ಇರುವುದು ಅಥವಾ ನಿಂತು ಕೆಲಸ ಮಾಡುವುದು
* ಖಿನ್ನತೆ
* ಪಾರ್ಕಿನ್ಸನ್ ಕಾಯಿಲೆ
* ಗರ್ಭಧಾರಣೆ
* ನಿರ್ಜಲೀಕರಣ
* ಮೂತ್ರವರ್ಧಕಗಳು, ಅಧಿಕ ರಕ್ತದೊತ್ತಡಕ್ಕೆ ನೀಡುವ ಇತರ ಔಷಧಿಗಳು, ಬೀಟಾ ಬ್ಲಾಕರ್‌ಗಳಂತಹ ಹೃದ್ರೋಗ ಸಂಬಂಧಿತ ಔಷಧಿಗಳು, ಪಾರ್ಕಿನ್ಸನ್ ಕಾಯಿಲೆಗೆ ಔಷಧಗಳು, ಟ್ರೈಸೈಕ್ಲಿಕ್ ಖಿನ್ನತೆ-ಶಮನಕಾರಿಗಳು, ನಿಮಿರುವಿಕೆಯ ಅಪಸಾಮಾನ್ಯ ಔಷಧಿಗಳು, ಮಾದಕ ವಸ್ತುಗಳ ಸೇವನೆ ಇಂತಹ ಔಷಧಿಗಳ ಸೇವನೆಯು ರಕ್ತದೊತ್ತಡ ಕಡಿಮೆಯಾಗಲು ಮೂಲವಾಗಬಹುದು.
* ಹೃದಯ ಸಮಸ್ಯೆಗಳು: ಕಡಿಮೆ ರಕ್ತದೊತ್ತಡಕ್ಕೆ ಕಾರಣವಾಗುವ ಹೃದಯ ಪರಿಸ್ಥಿತಿಗಳು, ಅಸಹಜ ರೀತಿಯ ಕಡಿಮೆ ಹೃದಯ ಬಡಿತ (ಬ್ರಾಡಿಕಾರ್ಡಿಯಾ), ಹೃದಯ ಕವಾಟದ ಸಮಸ್ಯೆಗಳು, ಹೃದಯಾಘಾತ, ಹೃದಯ ವೈಫಲ್ಯ
* ಸಕ್ರಿಯವಲ್ಲದ ಥೈರಾಯ್ಡ್, ಅಡಿಸನ್ ಕಾಯಿಲೆ, ರಕ್ತದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆಯಾಗುವುದು, ಮಧುಮೇಹ ಇವು ಕೂಡ ರಕ್ತದೊತ್ತಡ ಕಡಿಮೆಯಾಗಲು ಕಾರಣವಾಗಬಹುದು.
* ಪೌಷ್ಠಿಕಾಂಶದ ಕೊರತೆಗಳು: ಅಗತ್ಯ ವಿಟಮಿನ್‌ಗಳಾದ ಬಿ-12 ಮತ್ತು ಫೋಲಿಕ್ ಆಮ್ಲದ ಕೊರತೆಯು ರಕ್ತಹೀನತೆಗೆ ಕಾರಣವಾಗಬಹುದು. ಇದು ಕಡಿಮೆ ರಕ್ತದೊತ್ತಡಕ್ಕೆ ಕಾರಣವಾಗಬಹುದು.
ಜೀವಕ್ಕೆ ಅಪಾಯಕಾರಿ ಸನ್ನಿವೇಶಗಳು
ಸೆಪ್ಟಿಕ್ ಆಘಾತ: ಸೋಂಕಿನಿಂದ ಬ್ಯಾಕ್ಟೀರಿಯಾಗಳು ರಕ್ತಪ್ರವಾಹಕ್ಕೆ ಪ್ರವೇಶಿಸಿದಾಗ ಇದು ಸಂಭವಿಸಬಹುದು. ನಂತರ ಬ್ಯಾಕ್ಟೀರಿಯಾಗಳು ರಕ್ತನಾಳಗಳ ಮೇಲೆ ಪರಿಣಾಮ ಬೀರುವ ವಿಷವನ್ನು ಉತ್ಪಾದಿಸುತ್ತವೆ. ಇದು ಅಪಾಯಕಾರಿಯಾಗಿ ಕಡಿಮೆ ರಕ್ತದೊತ್ತಡಕ್ಕೆ ಕಾರಣವಾಗಬಹುದು.
ಅಲರ್ಜಿಯ ಪ್ರತಿಕ್ರಿಯೆ: ಅನಾಫಿಲ್ಯಾಕ್ಟಿಕ್ ಆಘಾತವು ಅಲರ್ಜಿಯ ಪ್ರತಿಕ್ರಿಯೆಯಾಗಿದ್ದು ಅದು ಸಾವಿಗೆ ಕಾರಣವಾಗಬಹುದು. ಪೆನ್ಸಿಲಿನ್‌ನಂತಹ ಔಷಧಿಗಳಿಗೆ ಹೆಚ್ಚು ಸೂಕ್ಷ್ಮವಾಗಿರುವ ಜನರಲ್ಲಿ ಇದು ಸಂಭವಿಸಬಹುದು. ಕೆಲವು ಆಹಾರಗಳನ್ನು ಸೇವಿಸಿದ ನಂತರ ಅಥವಾ ಜೇನುನೊಣ ಅಥವಾ ಕಣಜದಿಂದ ಚುಚ್ಚಿದ ನಂತರವೂ ಇದು ಸಂಭವಿಸಬಹುದು.
ರಕ್ತದ ಪ್ರಮಾಣದಲ್ಲಿನ ಇಳಿಕೆ: ಪ್ರಮುಖ ಆಘಾತ ಅಥವಾ ತೀವ್ರ ಆಂತರಿಕ ರಕ್ತಸ್ರಾವದಿಂದ ರಕ್ತದ ಗಮನಾರ್ಹ ನಷ್ಟವು ರಕ್ತದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದು ರಕ್ತದೊತ್ತಡದಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಬಹುದು.
ರಕ್ತದೊತ್ತಡ ಕಡಿಮೆಯಾದಾಗ ರೋಗಲಕ್ಷಣಗಳು ಕಾಣಿಸಿಕೊಳ್ಳದೇ ಇರುವ ಕಾರಣ ಇದನ್ನು ಗುರುತಿಸುವುದು ಕಷ್ಟವಾಗುತ್ತದೆ. ಆದರೆ ಮೇಲೆ ತಿಳಿಸಿದ ಯಾವುದೇ ರೋಗಲಕ್ಷಣಗಳನ್ನು ನೀವು ಎದುರಿಸುತ್ತಿದ್ದರೆ ತಕ್ಷಣ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸುವುದು ಉತ್ತಮ. ಆಗಾಗ ಬಿಪಿ ಚೆಕ್ ಮಾಡಿಸುತ್ತಿರುವುದರಿಂದ ರಕ್ತದೊತ್ತಡದ ಪ್ರಮಾಣವನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ.
ಯಾವಾಗ ವೈದ್ಯರನ್ನು ನೋಡಬೇಕು
ಸಾಮಾನ್ಯವಾಗಿ ಕಡಿಮೆ ರಕ್ತದೊತ್ತಡದ ಲಕ್ಷಣಗಳು ಕಾಣಿಸಿಕೊಳ್ಳದೇ ಇರುವ ಕಾರಣ ಇದನ್ನು ಗುರುತಿಸುವುದು ಕಷ್ಟವಾಗುತ್ತದೆ. ಸಾಮಾನ್ಯವಾಗಿ ಆರೋಗ್ಯ ತಜ್ಞರು ಕೂಡ ರೋಗಲಕ್ಷಣಗಳಿದ್ದಾಗ ಮಾತ್ರ ರಕ್ತದೊತ್ತಡ ಕಡಿಮೆಯಾಗಿದೆ ಎಂದು ಪರಿಗಣಿಸುತ್ತಾರೆ. ಆಗಾಗ ತಲೆ ತಿರುಗುವುದು, ವಿಶೇಷವಾಗಿ ಬಿಸಿಲಿಗೆ ಹೋದಾಗ ತಲೆಸುತ್ತುವುದು ಇಂತಹ ಲಕ್ಷಣಗಳು ಕಾಣಿಸಿಕೊಂಡಾಗ ವೈದ್ಯರನ್ನು ಸಂಪರ್ಕಿಸಿ ಕಾರಣ ತಿಳಿಯುವುದು ಉತ್ತಮ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
ವಿಭಾಗ