ಕಾಫಿ ಕುಡಿಯುವಾಗ ಈ ಶಿಸ್ತು ಪಾಲಿಸಿದ್ರೆ ಹೃದಯಾಘಾತ ದೂರ; ತಜ್ಞರ ಸಂಶೋಧನೆ ವರದಿಯಲ್ಲಿ ಸಿಹಿಸುದ್ದಿ
ಕಾಫಿ ಎಂದರೆ ಇಷ್ಟಪಡುವವರು ಬಹಳಷ್ಟು ಮಂದಿ ಇದ್ದಾರೆ. ಇದು ಕಾಫಿ ಕುಡಿಯುವವರಿಗೆ ಸಿಹಿ ಸುದ್ದಿಯಿದು. ನಿಗದಿತ ಪ್ರಮಾಣದಲ್ಲಿ ಕಾಫಿಯನ್ನು ಸೂಕ್ತ ಸಮಯಕ್ಕೆ ಸೇವಿಸಿದರೆ,ಅದರಿಂದ ಹೃದಯಾಘಾತವನ್ನು ತಡೆಗಟ್ಟಬಹುದು ಎನ್ನುತ್ತದೆ ತಜ್ಞರ ಹೊಸ ಸಂಶೋಧನೆ. ಕಾಫಿ ಕುಡಿಯುವುದರಿಂದ ಉಂಟಾಗುವ ಪ್ರಯೋಜನಗಳೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ದೇಶದಲ್ಲಿ ಚಹಾ ಹೊರತುಪಡಿಸಿದರೆ, ಅತಿ ಹೆಚ್ಚು ಜನರು ಇಷ್ಟಪಟ್ಟು ಕುಡಿಯುವ ಪೇಯ ಎಂದರೆ ಅದು ಕಾಫಿ. ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ, ರಾತ್ರಿ ಎಂದು ಹಲವರು ಎಷ್ಟು ಕೊಟ್ಟರೂ ಕಾಫಿ ಕುಡಿಯುತ್ತಾರೆ. ಚಹಾದಲ್ಲಿ ಇರುವಂತೆಯೇ, ಕಾಫಿಯಲ್ಲಿಯೂ ಹಲವು ವಿಧಗಳಿವೆ. ಕೆಲವರ ದಿನ ಬೆಳಗ್ಗೆ ಕಾಫಿಯಿಂದಲೇ ಆರಂಭವಾಗಿ, ರಾತ್ರಿ ಮಲಗುವಾಗಲೂ ಕಾಫಿ ಕುಡಿದು ಮಲಗುವವರು ಇದ್ದಾರೆ. ಕೆಲವರಿಗೆ ಮಧ್ಯಾಹ್ನ ಊಟವಾದ ತಕ್ಷಣ ಕಾಫಿ ಸೇವಿಸುವ ಅಭ್ಯಾಸವಿರುತ್ತದೆ.
ಕಾಫಿಯಲ್ಲಿ ಹೆಚ್ಚಿನ ಆ್ಯಂಟಿಆಕ್ಸಿಡೆಂಟ್ ಇರುವುದರಿಂದ ದೇಹಕ್ಕೆ, ಆರೋಗ್ಯಕ್ಕೆ ಪೂರಕ. ಆದರೆ ಕಾಫಿಯಲ್ಲಿ ಕೆಫಿನ್ ಕೂಡ ಇರುವುದರಿಂದ, ಅತಿಯಾದ ಸೇವನೆ ಒಳ್ಳೆಯದಲ್ಲ. ಅದಕ್ಕಾಗಿ ನಿಗದಿತ ಪ್ರಮಾಣದಲ್ಲಿ ಕಾಫಿಯನ್ನು ಸೂಕ್ತ ಸಮಯಕ್ಕೆ ಸೇವಿಸಿದರೆ, ಅದರಿಂದ ಹೃದಯಾಘಾತವನ್ನು ತಡೆಗಟ್ಟಬಹುದು ಎಂದು ತಜ್ಞರ ಹೊಸ ಸಂಶೋಧನೆಯೊಂದು ಹೇಳಿದೆ.
ಯಾವ ಸಮಯದಲ್ಲಿ ಕಾಫಿ ಕುಡಿದರೆ ಉತ್ತಮ?
ಯುರೋಪಿಯನ್ ಹಾರ್ಟ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿ ಪ್ರಕಾರ, ಬೆಳಗ್ಗಿನ ಸಮಯದಲ್ಲಿ ಕಾಫಿ ಕುಡಿಯುವುದು ಆರೋಗ್ಯಕ್ಕೆ ಮತ್ತು ದೇಹಕ್ಕೆ ಉತ್ತಮ, ಅದರಿಂದ ಹೃದಯಾಘಾತದ ಸಾಧ್ಯತೆಗಳನ್ನು ತಡೆಗಟ್ಟಬಹುದು ಎಂದು ಹೇಳಿದೆ. ತಜ್ಞರ ಪ್ರಕಾರ, ಬೆಳಗಿನ ವೇಳೆ ಕಾಫಿ ಕುಡಿಯುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಶೇ. 31ರಷ್ಟು ಕಡಿಮೆ ಎನ್ನಲಾಗಿದೆ. ಅಲ್ಲದೆ, ಬೆಳಗ್ಗೆ ಕಾಫಿ ಕುಡಿಯುವ ಜನರಲ್ಲಿ ಇತರ ಕಾರಣಗಳಿಂದ ಸಾವು ಉಂಟಾಗುವ ಸಾಧ್ಯತೆ ಕೂಡ ಶೇ. 16ರಷ್ಟು ಕಡಿಮೆ ಎಂದು ವರದಿ ಹೇಳಿದೆ.
ಮಿತಿಗಿಂತ ಜಾಸ್ತಿ ಕುಡಿಯುವುದು ಒಳ್ಳೆಯದಲ್ಲ
ಕಾಫಿ ಕುಡಿದರೆ ಹಲವು ಆರೋಗ್ಯ ಪ್ರಯೋಜಗಳು ಇವೆಯೇನೋ ಸರಿ, ಆದರೆ ದಿನಪೂರ್ತಿ ಕಾಫಿ ಕುಡಿದರೆ ಆರೋಗ್ಯ ಕೆಡಬಹುದು, ಅದರಿಂದ ಅಡ್ಡ ಪರಿಣಾಮಗಳು ಉಂಟಾಗಬಹುದು. ತಜ್ಞರು ಹೇಳಿರುವ ಪ್ರಕಾರ, ಪ್ರತಿ ದಿನ ಬೆಳಗ್ಗೆ ನಿಗದಿತ ಸಮಯದಲ್ಲಿ, ನಿಗದಿತ ಮಿತಿಯಲ್ಲಿ ಮಾತ್ರ ಬಿಸಿ ಕಾಫಿ ಕುಡಿಯಬೇಕು. ಹೃದಯಾಘಾತ ಸಾಧ್ಯತೆ ಕಡಿಮೆ ಎಂದು ಮಿತಿಗಿಂತ ಹೆಚ್ಚು ಸೇವಿಸಿದರೆ, ಅಮೃತವೂ ವಿಷವಾಗಬಹುದು ಎಂಬಂತೆ, ಸಮಸ್ಯೆಯಾಗಬಹುದು.
ಕಾಫಿಯಿಂದ ಇದೆ ಹಲವು ಪ್ರಯೋಜನ
ಬೆಳಗ್ಗೆ ಬಿಸಿ ಬಿಸಿ ಕಾಫಿ ಕುಡಿಯುವುದರಿಂದ ಅದರಲ್ಲಿನ ಕೆಫೀನ್ ಅಂಶ ನಮ್ಮ ದೇಹಕ್ಕೆ ಸೇರಿ, ಮೆದುಳಿಗೆ ಚುರುಕು ಮುಟ್ಟಿಸುತ್ತದೆ. ಅದರಿಂದ, ದೇಹದ ಅಂಗಾಂಶಗಳೆಲ್ಲವೂ ದಿನಪೂರ್ತಿ ಉಲ್ಲಾಸದಿಂದ ಇರಲು ಸಾಧ್ಯವಾಗುತ್ತದೆ. ಬೆಳಗ್ಗಿನ ಕಾಫಿಯಿಂದ ಮನಸ್ಸು ಕೂಡ ತಾಜಾ ಆಗುವುದರಿಂದ, ಆ ದಿನವನ್ನು ಉತ್ತಮ ರೀತಿಯಲ್ಲಿ ಕಳೆಯಲು ಸಹಾಯವಾಗುತ್ತದೆ. ತಜ್ಞ ವೈದ್ಯ ಡಾ. ಲುಕಿ ಪ್ರಕಾರ, ಬೆಳಗ್ಗೆ ಹೊರತುಪಡಿಸಿ, ಇತರ ಸಮಯದಲ್ಲಿ ಕಾಫಿ ಕುಡಿದರೆ, ಅದರಿಂದ ಅಂತಹ ಪ್ರಯೋಜನವೇನೂ ದೊರೆಯದಿರಬಹುದು. ಇದರಿಂದ ಹಾರ್ಮೋನ್ ಮಟ್ಟದಲ್ಲಿ ಏರುಪೇರಾಗಬಹುದು, ರಕ್ತದೊತ್ತಡ ಕೂಡ ಹೆಚ್ಚಾಗಬಹುದು. ಅದರಿಂದ ಹೃದಯದ ಆರೋಗ್ಯಕ್ಕೆ ಸಮಸ್ಯೆಯಾಗಬಹುದು. ಹೀಗಾಗಿ ಬೆಳಗ್ಗೆ ಮಾತ್ರ ನಿಗದಿತ ಮಿತಿಯಲ್ಲಿ ಕಾಫಿ ಕುಡಿಯಬೇಕು ಎಂದು ಅವರು ಹೇಳಿದ್ದಾರೆ.
