Adult Bed Wetting: ಮಕ್ಕಳಿಗೆ ಮಾತ್ರವಲ್ಲ, ವಯಸ್ಸಾದವರನ್ನೂ ಕಾಡುತ್ತೆ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವ ಸಮಸ್ಯೆ; ಕಾರಣಗಳೇನು?
ಕನ್ನಡ ಸುದ್ದಿ  /  ಜೀವನಶೈಲಿ  /  Adult Bed Wetting: ಮಕ್ಕಳಿಗೆ ಮಾತ್ರವಲ್ಲ, ವಯಸ್ಸಾದವರನ್ನೂ ಕಾಡುತ್ತೆ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವ ಸಮಸ್ಯೆ; ಕಾರಣಗಳೇನು?

Adult Bed Wetting: ಮಕ್ಕಳಿಗೆ ಮಾತ್ರವಲ್ಲ, ವಯಸ್ಸಾದವರನ್ನೂ ಕಾಡುತ್ತೆ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವ ಸಮಸ್ಯೆ; ಕಾರಣಗಳೇನು?

Health Tips: ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುವ ಸಮಸ್ಯೆ ವಯಸ್ಸಾದವರಲ್ಲೂ ಕಂಡು ಬರುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಎನ್ಯೂರೆಸಿಸ್ ಎಂದು ಕರೆಯುತ್ತಾರೆ. ಮೂತ್ರಕೋಶದ ಸಮಸ್ಯೆಗಳು, ಮಾನಸಿಕ ಅನಾರೋಗ್ಯ, ಹಾರ್ಮೋನ್‌ ಅಸಮತೋಲನ ಸೇರಿದಂತೆ ಈ ಸಮಸ್ಯೆಗೆ ನಾನಾ ಕಾರಣಗಳಿವೆ.

ಹಿರಿಯರಲ್ಲಿ ಮೂತ್ರ ವಿಸರ್ಜನೆ ಸಮಸ್ಯೆಗೆ ಕಾರಣ, ಪರಿಹಾರಗಳು
ಹಿರಿಯರಲ್ಲಿ ಮೂತ್ರ ವಿಸರ್ಜನೆ ಸಮಸ್ಯೆಗೆ ಕಾರಣ, ಪರಿಹಾರಗಳು (PC: Freepic)

Adult Bed Wetting: ರಾತ್ರಿ ಸಮಯದಲ್ಲಿ ಮಕ್ಕಳು ಹಾಸಿಗೆಯಲ್ಲೇ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯ. ಎಷ್ಟೋ ಸಂದರ್ಭಗಳಲ್ಲಿ 8-10 ವಯಸ್ಸಿನ ಮಕ್ಕಳಲ್ಲಿ ಕೂಡಾ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಇದು ಮಕ್ಕಳಲ್ಲಿ ಮಾತ್ರವಲ್ಲ ವಯಸ್ಸಾದವರಲ್ಲಿ ಕೂಡಾ ಕಂಡು ಬರುತ್ತದೆ.

ಮಕ್ಕಳು ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುವುದು ಸಹಜ. ಆದರೆ ಇದು ವಯಸ್ಸಾದವರಲ್ಲಿ ಕೂಡಾ ಕಂಡು ಬಂದರೆ ಅವರಿಗೆ ಅನಾರೋಗ್ಯ ಕಾಡುತ್ತಿದೆ ಎಂದೇ ಅರ್ಥ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಎನ್ಯೂರೆಸಿಸ್ ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯು 100 ಜನರಲ್ಲಿ 1 ಜನರನ್ನು ಬಾಧಿಸುತ್ತದೆ. ಈ ಸಮಸ್ಯೆ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ರಾತ್ರಿಯಲ್ಲಿ ಸಂಭವಿಸುವ ಈ ಸಮಸ್ಯೆಯನ್ನು ನೈಟ್‌ ಎನ್ಯೂರೆಸಿಸ್ ಎಂದು ಕರೆಯಲಾಗುತ್ತದೆ. ಆದರೆ ಇದು ಬೆಳಗಿನ ಸಮಯದಲ್ಲಿ ಹೆಚ್ಚಾಗಿ ಕಂಡುಬರುವುದಿಲ್ಲ.

ಇನ್ನಿತರ ಆರೋಗ್ಯ ಸಮಸ್ಯೆಗಳು ಕಾರಣ

ವಯಸ್ಸಾದವರಲ್ಲಿ ಕೆಲವು ಕಾಯಿಲೆಗಳಿಂದಾಗಿ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಸಮಸ್ಯೆ ಉಂಟಾಗುತ್ತದೆ. ಮೂತ್ರನಾಳದ ಸೋಂಕುಗಳು, ಮೂತ್ರಪಿಂಡದ ಕಲ್ಲುಗಳು, ಮೂತ್ರಕೋಶ ಅಥವಾ ಪ್ರಾಸ್ಟೇಟ್ ಗಡ್ಡೆಗಳು, ಮಧುಮೇಹ, ನರ ವೈಜ್ಞಾನಿಕ ಕಾಯಿಲೆಗಳು, ಬೆನ್ನುಹುರಿಯ ಗಾಯ ಅಥವಾ ಮೂತ್ರನಾಳದಲ್ಲಿನ ರಚನಾತ್ಮಕ ಅಸಹಜತೆಗಳು ಈ ಸಮಸ್ಯೆಯನ್ನು ಉಂಟುಮಾಡಬಹುದು. ಕೆಲವು ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ವಯಸ್ಕರಲ್ಲಿ ಈ ರೀತಿ ಬೆಡ್‌ ಮೇಲೆ ಮೂತ್ರ ವಿಸರ್ಜನೆ ಮಾಡುವ ಸಮಸ್ಯೆ ಕಾಡುತ್ತಿರುತ್ತದೆ.

ಮಾನಸಿಕ ಸಮಸ್ಯೆಗಳೂ ಕಾರಣ

ಒತ್ತಡ, ಆತಂಕ, ಖಿನ್ನತೆ ಅಥವಾ ಇತರ ಮಾನಸಿಕ ಮತ್ತು ಭಾವನಾತ್ಮಕ ಸಮಸ್ಯೆಗಳಂತಹ ಮಾನಸಿಕ ಅಂಶಗಳೂ, ವಯಸ್ಸಾದವರು ಮೂತ್ರ ವಿಸರ್ಜನೆ ಮಾಡಲು ಕಾರಣವಾಗಿರಬಹುದು. ಈ ಅಂಶಗಳು ಮೆದುಳು ಮತ್ತು ಮೂತ್ರಾಶಯದ ಮಧ್ಯೆ ನಡುವಿನ ಸಂಪರ್ಕವನ್ನು ಕಡಿತಗೊಳಿಸುತ್ತದೆ. ಇದರಿಂದ ವ್ಯಕ್ತಿಯು ರಾತ್ರಿಯಲ್ಲಿ ಹಾಸಿಗೆಯ ಮೇಲೆ ಅರಿವಿಲ್ಲದೆ ಮೂತ್ರ ವಿಸರ್ಜಿಸುತ್ತಾನೆ.

ಹಾರ್ಮೋನ್ ಅಸಮತೋಲನ

ಹಾರ್ಮೋನ್ ಅಸಮತೋಲನಗಳು, ವಿಶೇಷವಾಗಿ ಆಂಟಿಡಿಯುರೆಟಿಕ್ ಹಾರ್ಮೋನ್ (ADH) ನಿದ್ರೆಯ ಸಮಯದಲ್ಲಿ ಮೂತ್ರವನ್ನು ಉತ್ಪಾದಿಸುವ ವ್ಯಕ್ತಿಯ ಸಾಮರ್ಥ್ಯವನ್ನು ಅಡ್ಡಿಪಡಿಸುತ್ತದೆ. ಇದೂ ಕೂಡಾ ಅರಿವಿಲ್ಲದೆ ರಾತ್ರಿ ಹಾಸಿಗೆಯ ಮೇಲೆ ಮೂತ್ರ ವಿಸರ್ಜನೆ ಮಾಡಲು ಒಂದು ಕಾರಣವಾಗಿದೆ.

ಸಮಸ್ಯೆಗೆ ಪರಿಹಾರವೇನು?

ಪರೀಕ್ಷೆಗಳನ್ನು ಮಾಡಬೇಕು

ದೇಹದಲ್ಲಿನ ಯಾವುದೇ ಸಮಸ್ಯೆಗಳನ್ನು ಪತ್ತೆಹಚ್ಚಲು ಮಹಿಳೆಯರಿಗೆ ಪೆಲ್ವಿಕ್‌, ಪುರುಷರಿಗೆ ಡಿಜಿಟಲ್‌ ರೆಕ್ಟಲ್‌ ಪರೀಕ್ಷೆ ಮಾಡಬಹುದು. ಈ ಎರಡೂ ಪರೀಕ್ಷೆಗಳು ಮೂತ್ರನಾಳದ ಸೋಂಕುಗಳು, ಹಾರ್ಮೋನ್ ಮಟ್ಟಗಳು ಮತ್ತು ಯಾವುದೇ ಕಾಯಿಲೆಯನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಅಲ್ಲದೆ ಮೂತ್ರದ ನಿಯಂತ್ರಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು

ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವ ಮೂಲಕ ಹಾಸಿಗೆಯಲ್ಲಿ ಮೂತ್ರ ಮಾಡುವ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬಹುದು. ಮಧ್ಯಾಹ್ನ ನಿದ್ರೆ ಮಾಡುವುದನ್ನು ಕಡಿಮೆ ಮಾಡಬೇಕು. ಕೆಫೀನ್ ಮತ್ತು ಆಲ್ಕೋಹಾಲ್ ಸೇವನೆ ಕಡಿಮೆ ಮಾಡಿ ಕ್ರಮೇಣ ಎಲ್ಲವನ್ನೂ ತ್ಯಜಿಸಬೇಕು. ಉತ್ತಮ ಆಹಾರವನ್ನು ಸೇವಿಸಬೇಕು. ಅತಿಯಾದ ಮದ್ಯಪಾನದಿಂದಲೂ ಈ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಈ ಅಭ್ಯಾಸಗಳನ್ನು ಕಡಿಮೆ ಮಾಡಿದರೆ ರಾತ್ರಿ ಮೂತ್ರ ವಿಸರ್ಜನೆ ಮಾಡುವ ಸಮಸ್ಯೆ ಕಡಿಮೆ ಆಗುತ್ತದೆ.

ನಿಮ್ಮ ಜೀವನಶೈಲಿಯನ್ನು ಬದಲಿಸಿದ ನಂತರವೂ ನಿಮಗೆ ಅದೇ ಸಮಸ್ಯೆ ಕಾಡುತ್ತಿದ್ದರೆ ನೀವು ತಪ್ಪದೆ ವೈದ್ಯರನ್ನು ಸಂಪರ್ಕಿಸಬೇಕು. ವಯಸ್ಸಾದವರು ಹಾಸಿಗೆಯಲ್ಲಿ ಮೂತ್ರ ಮಾಡುವುದು ಮುಂದುವರಿದರೆ ಇನ್ನೂ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

Whats_app_banner