Ureteral Stones: ಚಳಿಗಾಲದಲ್ಲಿ ಹೆಚ್ಚು ಕಾಡಬಹುದು ಮೂತ್ರನಾಳದ ಕಲ್ಲಿನ ಸಮಸ್ಯೆ; ಕಾರಣ, ಪರಿಣಾಮ, ಮುನ್ನೆಚ್ಚರಿಕೆ ಬಗ್ಗೆ ಇಲ್ಲಿದೆ ಮಾಹಿತಿ
ಮೂತ್ರನಾಳದಲ್ಲಿ ಕಲ್ಲು ಉಂಟಾಗುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ, ಅದರಲ್ಲೂ ಚಳಿಗಾಲದಲ್ಲಿ ಈ ತೊಂದರೆ ಹೆಚ್ಚು ಕಾಣಿಸುತ್ತದೆ. ಇದಕ್ಕೆ ಚಿಕಿತ್ಸೆ ನೀಡದೇ ಹಾಗೆ ಬಿಟ್ಟರೆ ಮೂತ್ರಪಿಂಡದ ಹಾನಿಗೆ ಕಾರಣವಾಗಬಹುದು. ಮೂತ್ರನಾಳದ ಕಲ್ಲು ಎಂದರೇನು, ಇದು ಉಂಟಾಗಲು ಕಾರಣವೇನು, ಪರಿಹಾರ ಹಾಗೂ ಮುನ್ನೆಚ್ಚರಿಕೆ ಏನು ಎಂಬ ಬಗ್ಗೆ ವೈದ್ಯರ ಸಲಹೆ ಇಲ್ಲಿದೆ.

ಮೂತ್ರನಾಳದ ಕಲ್ಲುಗಳು ಮೂತ್ರಪಿಂಡ(ಕಿಡ್ನಿ) ಗಳಲ್ಲಿ ಬೆಳೆದು ನಂತರ ಮೂತ್ರನಾಳಕ್ಕೆ ಚಲಿಸುವ ಗಟ್ಟಿಯಾದ ಖನಿಜ ದ್ರವ್ಯರಾಶಿಗಳಾಗಿವೆ. ಇದರಿಂದ ಅತಿಯಾದ ನೋವು ಕಾಣಿಸುತ್ತದೆ. ಇದು ಮುಂದುವರಿದರೆ ಮೂತ್ರಪಿಂಡಕ್ಕೂ ಹಾನಿ ಖಚಿತ. ಇತ್ತೀಚಿನ ದಿನಗಳಲ್ಲಿ ಕಿಡ್ನಿಸ್ಟೋನ್ ಅಥವಾ ಮೂತ್ರನಾಳ, ಮೂತ್ರಕೋಶದಲ್ಲಿ ಕಲ್ಲು ಉಂಟಾಗುವ ಸಮಸ್ಯೆಯನ್ನು ಹಲವರು ಎದುರಿಸುತ್ತಿದ್ದಾರೆ. ಚಳಿಗಾಲದಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು.
‘ಮೂತ್ರನಾಳದ ಕಲ್ಲುಗಳು ಸಾಮಾನ್ಯವಾಗಿ ತೀವ್ರವಾದ ನೋವನ್ನು ಉಂಟುಮಾಡುವ ಕಾರಣದಿಂದಾಗಿ ಆಗಾಗ್ಗೆ ಆಸ್ಪತ್ರೆಗೆ ಭೇಟಿ ನೀಡಬೇಕಾಗುತ್ತದೆ. ಸಾಮಾನ್ಯವಾಗಿ, ಮೂತ್ರನಾಳದ ಕಲ್ಲುಗಳು ಮೂತ್ರನಾಳದಲ್ಲಿ ರೂಪುಗೊಳ್ಳುವುದಿಲ್ಲ, ಅವು ಮೊದಲು ಮೂತ್ರಪಿಂಡದಲ್ಲಿ ರೂಪುಗೊಳ್ಳುತ್ತವೆ ಮತ್ತು ನಂತರ ಮೂತ್ರನಾಳಕ್ಕೆ ಸಾಗಿಸಲ್ಪಡುತ್ತವೆ. ಎಲ್ಲಾ ಮೂತ್ರಪಿಂಡದ ಕಲ್ಲುಗಳು ಮೂತ್ರನಾಳಕ್ಕೆ ಜಾರುವುದಿಲ್ಲ‘ ಎಂದು ಎಚ್‌ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳುತ್ತಾರೆ ಸಿಕಂದರಾಬಾದ್‌ನ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ನೆಫ್ರಾಲಜಿ ಮತ್ತು ಮೂತ್ರಶಾಸ್ತ್ರ ಆಸ್ಪತ್ರೆಯ ಮೂತ್ರಶಾಸ್ತ್ರಜ್ಞ ಡಾ. ರಾಘವೇಂದ್ರ ಕುಲಕರ್ಣಿ.
ಹಾಗಾದರೆ ಮೂತ್ರನಾಳದಲ್ಲಿ ಕಲ್ಲು ಉಂಟಾಗಲು ಕಾರಣವೇನು, ಇದರ ರೋಗಲಕ್ಷಣಗಳೇನು, ಚಿಕಿತ್ಸೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳೇನು ಎಂಬ ಮಾಹಿತಿ ಇಲ್ಲಿದೆ.
ಮೂತ್ರನಾಳದ ಕಲ್ಲುಗಳಿಗೆ ಕಾರಣವೇನು?
ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುವ ಕಾರಣವೇ ಮೂತ್ರನಾಳದಲ್ಲಿ ಕಲ್ಲು ಉಂಟಾಗಲು ಕೂಡ ಕಾರಣ. ಮೂತ್ರದ ಪ್ರಮಾಣ ಕಡಿಮೆಯಾಗುವುದು, ಶೇಖರಣೆಯನ್ನು ಉತ್ತೇಜಿಸುವ ಪ್ರೊ-ಲಿಥೋಜೆನಿಕ್ ವಸ್ತುಗಳ ಪ್ರಮಾಣ ಹೆಚ್ಚುವುದು, ನೈಸರ್ಗಿಕ ವಿಸರ್ಜನೆಯನ್ನು ಉತ್ತೇಜಿಸುವ ರಕ್ಷಣಾತ್ಮಕ ವಸ್ತುಗಳ ಮಟ್ಟ ಕಡಿಮೆಯಾಗುವುದು. ಈ ಎಲ್ಲದರ ಜೊತೆ ಮೂತ್ರನಾಳ ಹಾಗೂ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗಲು ಪ್ರಮುಖ ಕಾರಣ ನೀರು ಕಡಿಮೆ ಕುಡಿಯುವುದು. ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದೇ ಇದ್ದಾಗ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುತ್ತದೆ. ಇದು ಮೂತ್ರನಾಳದಲ್ಲಿ ಕಲ್ಲು ಉಂಟಾಗಲು ಕೂಡ ಕಾರಣವಾಗುತ್ತದೆ.
ಮೂತ್ರನಾಳದ ಕಲ್ಲಿನ ರೋಗಲಕ್ಷಣಗಳು
ಮೂತ್ರನಾಳದ ಕಲ್ಲುಗಳನ್ನು ಅವು ಉಂಟುಮಾಡುವ ನೋವಿನ ಮಾದರಿಯಿಂದ ಅರ್ಥಮಾಡಿಕೊಳ್ಳಬಹುದು ಮತ್ತು ರೋಗನಿರ್ಣಯ ಮಾಡಬಹುದು. ನೋವು ಸಾಮಾನ್ಯವಾಗಿ ಬೆನ್ನೆಲುಬಿನ ಒಂದು ಬದಿಯಲ್ಲಿ ಹಿಂಭಾಗದಲ್ಲಿ ಕಾಣಿಸುತ್ತದೆ. ಈ ನೋವು ಹೊಟ್ಟೆಯ ಮುಂಭಾಗಕ್ಕೆ ಹರಡುತ್ತದೆ, ಕೆಲವೊಮ್ಮೆ ತೊಡೆಸಂದಿಯವರೆಗೆ ಹರಡಬುಹುದು. ಈ ನೋವಿನ ಜೊತೆ ವಾಂತಿ, ವಾಕರಿಕೆ ಬರಬಹುದು. ಪರಿಣಾಮವಾಗಿ ಮೂತ್ರನಾಳದ ಅಡಚಣೆ ಹಾಗೂ ಮೂತ್ರನಾಳದ ಸೋಂಕು ಕೂಡ ಉಂಟಾಗಬಹುದು ಎಂದು ಹೇಳುತ್ತಾರೆ ಡಾ. ರಾಘವೇಂದ್ರ ಕುಲಕರ್ಣಿ.
ಇದನ್ನೂ ಓದಿ: ಮೂತ್ರನಾಳದ ಸೋಂಕು ತಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್
ಮೂತ್ರನಾಳದ ಕಲ್ಲುಗಳು: ಚಿಕಿತ್ಸೆ
ಮೂತ್ರನಾಳದ ಕಲ್ಲುಗಳು ಹೊರಗೆ ಹೋಗದಿದ್ದರೆ ಮತ್ತು ಜ್ವರ ಅಥವಾ ಮೂತ್ರಪಿಂಡದ ಹಾನಿಯೊಂದಿಗೆ ಸಂಬಂಧ ಹೊಂದಿದ್ದರೆ, ತಕ್ಷಣದ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಈಗ ಶಸ್ತ್ರಚಿಕಿತ್ಸೆಯ ಚಿಕಿತ್ಸೆಯನ್ನು ಎಂಡೋಸ್ಕೋಪಿಕ್ ಮೂಲಕ ಮತ್ತು ಲೇಸರ್ ತಂತ್ರಜ್ಞಾನದ ಸಹಾಯದಿಂದ ನಡೆಸಲಾಗುತ್ತದೆ. ಬಹಳ ವಿರಳವಾಗಿ, ಮೂತ್ರನಾಳದಲ್ಲಿನ ದೊಡ್ಡ ಕಲ್ಲುಗಳಿಗೆ ಪರ್ಕ್ಯುಟೇನಿಯಸ್ ನೆಫ್ರೊಲಿಥೊಟಮಿ ಅಥವಾ ಲ್ಯಾಪರೊಸ್ಕೋಪಿ ಮೂಲಕ ಚಿಕಿತ್ಸೆ ನೀಡುವ ಅವಶ್ಯಕತೆ ಬರಬಹುದು ಎಂದು ಡಾ. ಕುಲಕರ್ಣಿ ಹೇಳುತ್ತಾರೆ.
ಮೂತ್ರನಾಳದ ಕಲ್ಲುಗಳನ್ನು ತಡೆಗಟ್ಟುವುದು ಹೇಗೆ
ಮೂತ್ರಪಿಂಡದ ಕಲ್ಲು ಹಾಗೂ ಮೂತ್ರನಾಳದ ಕಲ್ಲು ಸಾಮಾನ್ಯವಾಗಿ ಒಂದೇ ರೀತಿ ಇದ್ದು, ತಡೆಗಟ್ಟುವ ಮಾರ್ಗ ಕೂಡ ಸಾಮಾನ್ಯವಾಗಿ ಒಂದೇ ರೀತಿ ಇರುತ್ತದೆ. ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟಲು ಅಥವಾ ಮೂತ್ರನಾಳದ ಕಲ್ಲುಗಳನ್ನು ಹೊರಹಾಕಲು ಸಹಾಯ ಮಾಡುವ ಕೆಲವು ಜೀವನಶೈಲಿಯ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇದರಲ್ಲಿ ಪ್ರಮುಖವಾದುದು ಹೆಚ್ಚು ನೀರು ಕುಡಿಯುವುದು, ಒಂದು ದಿನಕ್ಕೆ ಕನಿಷ್ಠ 8 ಗ್ಲಾಸ್ ನೀರು ಕುಡಿಯುವುದು ಅತಿ ಅವಶ್ಯ. ಮೂತ್ರನಾಳದಲ್ಲಿನ ಕಲ್ಲು ಯಾಂತ್ರಿಕ ಮೂತ್ರವರ್ಧಕ ಪರಿಣಾಮದೊಂದಿಗೆ ಹೊರಹೋಗುವ ಸಾಧ್ಯತೆಯಿದೆ. ಅಲ್ಲದೇ ಮೂತ್ರವನ್ನು ಜಾಸ್ತಿ ಹೊತ್ತು ತಡೆದುಕೊಂಡು ಇರಬಾರದು.
ಮೂತ್ರನಾಳದ ಕಲ್ಲಿನಿಂದ ಅಪಾಯ ಜಾಸ್ತಿ. ಈ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕು. ಮೂತ್ರನಾಳದಲ್ಲಿನ ಎಲ್ಲಾ ಕಲ್ಲುಗಳು ಸ್ವಯಂಪ್ರೇರಿತವಾಗಿ ಹೊರಬರುವುದಿಲ್ಲ. ಕಲ್ಲಿನ ಗಾತ್ರ ಸಣ್ಣದಿದ್ದರೆ ಯಾವುದೇ ಸಮಸ್ಯೆ ಕಾಣಿಸದೇ ಕಲ್ಲು ಹೊರ ಬರುತ್ತದೆ. ಇದರಿಂದ ಜ್ವರ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸುವುದಿಲ್ಲ. ಆದರೆ ಕಲ್ಲಿನ ಗಾತ್ರ ಹೆಚ್ಚಾದಂತೆ ಸಮಸ್ಯೆಗಳೂ ಹೆಚ್ಚಾಗುತ್ತವೆ‘ ಹಾಗಾಗಿ ಆರಂಭದಲ್ಲೇ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
