Health Tips: ಒಳ್ಳೆ ನಿದ್ರೆ ಮಾಡಿದರೂ ಆಯಾಸದ ಭಾವ ಕಡಿಮೆಯಾಗುತ್ತಿಲ್ಲವೇ..? ಹಾಗಿದ್ರೆ ನೀವು ತಪ್ಪು ಮಾಡುತ್ತಿರುವುದು ಎಲ್ಲಿ?
Health Tips: ಕೆಲವೊಮ್ಮೆ ಒಳ್ಳೆ ನಿದ್ರೆ ಮಾಡಿದರೂ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಆಯಾಸದ ಭಾವನೆ ಕಾಡುತ್ತಿರುತ್ತದೆ. ಏಕೆ ಹೀಗಾಗುತ್ತದೆ..? ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನಾವೆಲ್ಲಿ ಎಡವುತ್ತಿದ್ದೇವೆ..? ಇಲ್ಲಿದೆ ಮಾಹಿತಿ.
Health Tips: ಆರೋಗ್ಯವಂತ ಮನುಷ್ಯನಿಗೆ ದಿನಕ್ಕೆ 8 ಗಂಟೆ ನಿದ್ರೆ ಬೇಕು ಎಂದು ಹೇಳುತ್ತಾರೆ. ಆದರೆ ಕೆಲವೊಮ್ಮೆ ಎಂಟು ಗಂಟೆಗಳ ಕಾಲ ನಿದ್ರೆ ಮಾಡಿದರೂ ಸಹ ನಮ್ಮ ಮನಸ್ಸು ಹಾಗೂ ದೇಹ ತಾಜಾತನದಿಂದ ಕೂಡಿರುವುದಿಲ್ಲ. ಹಾಗಾದರೆ ಇದಕ್ಕೆ ನಿದ್ರಾ ಕೊರತೆಯೇ ಕಾರಣ ಎಂದು ಹೇಳಲು ಸಾಧ್ಯವೇ..? ಆದರೆ ಹೆಚ್ಚಿನವರು ಬೆಳ್ಳಂ ಬೆಳಗ್ಗೆ ಮೂಡ್ ಸರಿಯಿಲ್ಲ ಎಂದ ಕೂಡಲೇ ನಿದ್ರೆ ಸರಿಯಾಗಿಲ್ಲ ಎಂದು ಒಂದೇ ಕಾರಣ ಹೇಳಿಬಿಡುತ್ತಾರೆ. ಆದರೆ ನೀವು ಈ ರೀತಿ ದಣಿವಾದವರಂತೆ ಇರುವುದರ ಹಿಂದೆ ಬೇರೆ ಇನ್ಯಾವುದೋ ಕಾರಣ ಕೂಡ ಇರಬಹುದು. ಈ ಬಗ್ಗೆ ನೀವು ನಿರ್ಲಕ್ಷ್ಯ ವಹಿಸಿರಬಹುದು.
ನಿದ್ರೆ ಮಾಡಿದರೂ ನೀವು ಆಯಾಸವಾಗುವ ಕಾರಣಗಳ ಸಾಧ್ಯತೆಗಳನ್ನು ಹೀಗೆ ವಿವರಿಸಬಹುದು.
ಇಡೀ ದಿನ ಮಂಚದ ಮೇಲೆಯೇ ಇರುವುದು : ಇದು ನಿಮಗೆ ತಮಾಷೆ ಎನಿಸಬಹುದು. ಆದರೆ ನೀವು ಇಡೀ ದಿನ ಮಂಚದ ಮೇಲೆ ಆರಾಮದಾಯಕವಾಗಿ ಕುಳಿತುಕೊಳ್ಳುವುದು ಕೂಡ ನಿಮ್ಮ ಮೂಡ್ ಸರಿಯಿರದೇ ಇರಲು ಒಂದು ಕಾರಣವಾಗಿದೆ. ಇಡೀ ದಿನ ಬೆಡ್ ಮೇಲೆ ಕುಳಿತುಕೊಂಡು ಮೊಬೈಲ್‌ನಲ್ಲಿ ಏನನ್ನೋ ನೋಡುತ್ತಾ ಕಾಲ ಕಳೆದರೆ ಇದರಿಂದ ದಣಿವಾದ ಭಾವನೆ ಉಂಟಾಗುತ್ತದೆ.
ದೈಹಿಕ ಚಟುವಟಿಕೆಯ ಕೊರತೆ : ಕೆಲವು ಬಾರಿ ನಾವು ಎಷ್ಟು ಸೋಂಬೇರಿಗಳಂತೆ ವರ್ತಿಸುತ್ತೇವೆ ಎಂದರೆ ನಮಗೆ ನೀರು ಕುಡಿಯಲು ಅಡುಗೆ ಮನೆಗೆ ತೆರಳುವುದೂ ಕೂಡ ಕಠಿಣ ಕೆಲಸದಂತೆ ಕಾಣುತ್ತಿರುತ್ತದೆ. ನಿಮ್ಮ ಈ ನಡವಳಿಕೆಯು ದೇಹಕ್ಕೆ ಅಗತ್ಯ ಚಟುವಟಿಕೆಗಳ ಕೊರತೆಗೆ ಕಾರಣವಾಗುತ್ತದೆ. ದೈಹಿಕ ಚಟುವಟಿಕೆಗಳ ಕೊರತೆಯಿಂದಾಗಿ ನಿಮಗೆ ಅಗತ್ಯವಿರುವ ಗುಣಮಟ್ಟದ ನಿದ್ರೆಯನ್ನು ನೀಡುವುದಿಲ್ಲ. ಇಡೀ ದಿನ ನಿಮಗೆ ಆಯಾಸವಾದಂತೆ ಕಾಣುತ್ತದೆ.
ಇವುಗಳಿಂದ ಬಚಾವಾಗಲು ನೀವು ಮಾಡಬಹುದಾದ ಒಂದೇ ಕೆಲಸವೆಂದರೆ ದೇಹಕ್ಕೆ ಅಗತ್ಯವಾದ ಚಟುವಟಿಕೆಗಳನ್ನು ನೀಡುವುದಾಗಿದೆ. ಯಾವ ವ್ಯಕ್ತಿಯು ದೈಹಿಕವಾಗಿ ಹೆಚ್ಚು ಸಕ್ರಿಯನಾಗಿ ಇರುವುದಿಲ್ಲವೋ ಆತ ಹೆಚ್ಚು ತೂಕವನ್ನು ಸಹ ಹೊಂದಬಹುದಾಗಿದೆ. ಸ್ನಾಯುಗಳಲ್ಲಿ ಚಟುವಟಿಕೆ ಕಡಿಮೆಯಾಗುತ್ತದೆ. ದೇಹದ ಜೀರ್ಣಕ್ರಿಯೆ ಕೂಡ ಸುಧಾರಿಸುವುದಿಲ್ಲ. ಹೀಗಾಗಿ ದೇಹವು ಇನ್ನಷ್ಟು ವಿಶ್ರಾಂತಿಯನ್ನೇ ಬಯಸುತ್ತದೆ. ಸರಿಯಾಗಿ ನಿದ್ರೆ ಮಾಡಿದರೂ ಕೂಡ ಆಯಾಸದ ಭಾವನೆಯೇ ಇರುತ್ತದೆ .
ಜಾರ್ಜಿಯಾ ವಿಶ್ವವಿದ್ಯಾಲಯದಲ್ಲಿ ನಡೆಸಲಾದ ಅಧ್ಯಯನವೊಂದರಲ್ಲಿ ತಿಳಿದು ಬಂದ ಮಾಹಿತಿಯ ಪ್ರಕಾರ ಕೇವಲ 10 ನಿಮಿಷಗಳ ವ್ಯಾಯಾಮವು ಸಾಕಷ್ಟು ಜನರಲ್ಲಿ ಗಮನಾರ್ಹ ಶಕ್ತಿಯನ್ನು ಒದಗಿಸಿದೆ ಎಂದು ತಿಳಿದು ಬಂದಿದೆ.
ಆತಂಕ : ನಿಮ್ಮ ಜೀವನದಲ್ಲಿ ನಡೆದ ಕೆಲವು ಘಟನೆಗಳು ನಿಮ್ಮನ್ನು ಆತಂಕಕ್ಕೆ ಈಡು ಮಾಡಬಹುದು. ಯಾವಾಗ ನಿಮ್ಮ ದೇಹ ಅತಂಕದಲ್ಲಿ ಇರುತ್ತದೆಯೋ ಆಗ ನಿಮ್ಮ ದೇಹವು ಅಡ್ರಿನಾಲಿನ್ ಬಿಡುಗಡೆ ಮಾಡುತ್ತದೆ. ಇದರಿಂದ ಮೆದುಳಿಗೆ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಆಗ ಮೆದುಳು ಹೆಚ್ಚು ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಇದರಿಂದ ನೀವು ಆಯಾಸದ ಭಾವನೆ ಅನುಭವಿಸಲಿದ್ದೀರಿ. ಒತ್ತಡ, ಆತಂಕ, ಮನೋವೈದ್ಯಕೀಯ ಅಥವಾ ಮಾನಸಿಕ ಸಮಸ್ಯೆಗಳು ಇವೆಲ್ಲವೂ ದೇಹದ ಆಯಾಸದ ಮೇಲೆ ಪರಿಣಾಮ ಬೀರುತ್ತದೆ. ಕಚೇರಿಯಲ್ಲಿ ಒತ್ತಡದ ಕೆಲಸ ಮಾಡುವವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆಯಾಸವನ್ನು ಅನುಭವಿಸುತ್ತಾರೆ.
ಯಾರು ಸಾರ್ವಜನಿಕವಾಗಿ ಹೆಚ್ಚು ಬೆರೆಯುತ್ತಾರೋ ಅವರು ಆತಂಕ, ಒತ್ತಡ ಹಾಗೂ ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಂದ ದೂರವಿರುತ್ತಾರೆ ಎಂದು ಸ್ವತಃ ವೈದ್ಯರೇ ಮಾಹಿತಿ ನೀಡಿದ್ದಾರೆ. ನೀವು ಯಾರ ಜೊತೆಯಾದರೂ ಚೆನ್ನಾಗಿ ಬೆರೆತರೆ ಆಗ ನಿಮ್ಮ ದೇಹದಲ್ಲಿ ಒತ್ತಡಕ್ಕೆ ಕಾರಣವಾಗುವಂತಹ ಹಾರ್ಮೋನ್‌ಗಳ ಬಿಡುಗಡೆ ಕಡಿಮೆಯಾಗುತ್ತದೆ ಎನ್ನಲಾಗಿದೆ.
ಅರಿಝೋನಾ ಸ್ಟೇಟ್ ಯುನಿವರ್ಸಿಟಿಯಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ ಯಾವ ವ್ಯಕ್ತಿಯು ಸಾಮಾಜಿಕ ಜೀವನದಲ್ಲಿ ತನ್ನನ್ನು ತಾನು ಹೆಚ್ಚು ತೊಡಗಿಸಿಕೊಳ್ಳುತ್ತಾನೋ ಆತನ ದೇಹದಲ್ಲಿ ಕಾರ್ಟಿಸೋಲ್‌ಗಳ ಮಟ್ಟ ಕಡಿಮೆಯಾಗಿರುತ್ತದೆ ಎಂದು ತಿಳಿದು ಬಂದಿದೆ. ಅಲ್ಲದೇ ಇಂಥವರು ಉತ್ತಮ ನಿದ್ರೆಯನ್ನು ಹೊಂದಿದ್ದರು ಎಂದೂ ಈ ಅಧ್ಯಯನ ತಿಳಿಸಿದೆ.
ಹೀಗಾ್ಗಿ ಆದಷ್ಟು ಸಾಮಾಜಿಕವಾಗಿ ಬೆರೆಯಿರಿ. ಸ್ನೇಹಿತರನ್ನು ಭೇಟಿ ಮಾಡಿ, ಜೋರಾಗಿ ನಗಿ, ಹೆಚ್ಚೆಚ್ಚು ಮಾತನಾಡಿ. ಜನರೊಂದಿಗೆ ಸಮಯ ಕಳೆಯುವುದನ್ನು ರೂಢಿಸಿಕೊಳ್ಳಿ. ಈ ರೀತಿ ಮಾಡುವುದರಿಂದ ನೀವು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಲಿದ್ದೀರಿ.
ಕಡಿಮೆ ವಿಟಮಿನ್ ಮಟ್ಟ : ನಾವು ಸೇವಿಸುವ ಆಹಾರ ಕೂಡ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ತಾಯಿ ನಿಮಗೆ ಒಳ್ಳೆಯ ಆಹಾರ ಸೇವಿಸುವಂತೆ ಒತ್ತಾಯಿಸಿದರೆ ಇನ್ಮೇಲೆ ಎಂದಿಗೂ ಬೇಡ ಎನ್ನಬೇಡಿ. ಬಿ 12 ಅಂಶಯುಕ್ತ ಆಹಾರವು ದೇಹದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಕೆಂಪು ಮಾಂಸಗಳು. ಮೀನುಗಳು ಕಬ್ಬಿಣಾಂಶ ಹಾಗೂ ವಿಟಮಿನ್ ಬಿಯ ಸಾಮಾನ್ಯ ಮೂಲಗಳಾಗಿವೆ.
ಮಾಂಸಾಹಾರಿಗಳಿಗೆ ದೇಹಕ್ಕೆ ವಿಟಮಿನ್ ಬಿ 12 ಅಂಶವನ್ನು ಒದಗಿಸುವುದು ಕಷ್ಟದ ಕೆಲಸವಲ್ಲ. ಕೋಳಿ. ಮೊಟ್ಟೆ ಹಾಗೂ ಮೀನುಗಳಲ್ಲಿ ಅಗಾಧ ಪ್ರಮಾಣದಲ್ಲಿ ಬಿ 12 ಅಂಶ ಸಿಗುತ್ತದೆ. ಸಸ್ಯಾಹಾರಿಗಳು ಹಾಲು, ಚೀಸ್ ಹಾಗೂ ಮೊಸರು ಸೇವಿಸುವ ಮೂಲಕ ವಿಟಮಿನ್ ಬಿ 12 ನ್ನು ಪಡೆದುಕೊಳ್ಳಬಹುದಾಗಿದೆ. ನಿಮ್ಮ ದೇಹಕ್ಕೆ ಏನು ಬೇಕು ಎಂಬುದನ್ನು ಅರಿತುಕೊಳ್ಳುವುದು ಕಷ್ಟದ ಕೆಲಸವೇನಲ್ಲ. ನೀವು ಸೇವಿಸುತ್ತಿರುವ ಆಹಾರ ಆರೋಗ್ಯಕರವಾಗಿದೆ ಎಂದರೆ ನೀವು ಸರಿಯಾಗಿ ಪೋಷಕಾಂಶಗಳನ್ನು ಪಡೆದುಕೊಳ್ಳುತ್ತಿದ್ದೀರಿ ಎಂದು ಅರ್ಥೈಸಿಕೊಳ್ಳಬಹುದು .
ವಿಭಾಗ