Child Care: ಚಳಿಗಾಲದಲ್ಲಿ ನವಜಾತ ಶಿಶುವಿನ ಆರೈಕೆ ಹೇಗೆ, ಅಮ್ಮಂದಿರು ತಪ್ಪದೇ ಪಾಲಿಸಬೇಕಾದ 6 ನಿಯಮಗಳಿವು
ಚಳಿಗಾಲದಲ್ಲಿ ಆರೋಗ್ಯ ಕಾಳಜಿ ಬಹಳ ಮುಖ್ಯ. ಅದರಲ್ಲೂ ಹಸುಗೂಸುಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹಾಗಾದರೆ ಚಳಿಗಾಲದಲ್ಲಿ ಕಂದಮ್ಮಗಳ ರಕ್ಷಣೆಗೆ ಹೇಗೆ, ಅಮ್ಮಂದಿರಿಗಾಗಿ ಇಲ್ಲಿದೆ 6 ಟಿಪ್ಸ್
ಚಳಿಗಾಲ ಎಂದರೆ ಮನಸ್ಸಿಗೆ ಹಿತ ಎನ್ನಿಸಿದರೂ ಆರೋಗ್ಯದ ವಿಚಾರಕ್ಕೆ ಬಂದರೆ ಚಳಿಗಾಲ ಖಂಡಿತ ಒಳ್ಳೆಯದಲ್ಲ. ಇದು ನಮಗೆ ಇಲ್ಲದ ಆರೋಗ್ಯ ಸಮಸ್ಯೆಗಳು ಉಂಟಾಗಲು ಕಾರಣವಾಗುತ್ತದೆ. ಚಳಿಗಾಲದಲ್ಲಿ ಜ್ವರ, ಕೆಮ್ಮು, ನೆಗಡಿಯಂತಹ ಸಮಸ್ಯೆಗಳು ಕಾಡುವುದು ಸಹಜ. ಕೆಲವೊಮ್ಮೆ ರೋಗನಿರೋಧಕ ಶಕ್ತಿ ಪ್ರಬಲವಾಗಿದ್ದರೂ ಸಮಸ್ಯೆಗಳು ಕಾಡುತ್ತವೆ.
ವಯಸ್ಕರಿಗೆ ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆ ಕಾಡುವುದು ಖಂಡಿತ, ಅಂತಹದ್ದರಲ್ಲಿ ಮಕ್ಕಳನ್ನು ಕಾಡದೇ ಇರಲು ಸಾಧ್ಯವಿಲ್ಲ. ಅದರಲ್ಲೂ ನವಜಾತ ಶಿಶುಗಳ ವಿಚಾರದಲ್ಲಿ ತಾಯಂದಿರು ಸಾಕಷ್ಟು ಎಚ್ಚರ ವಹಿಸಬೇಕು. ಮೂರು ತಿಂಗಳ ಕಾಲದ ಚಳಿಗಾಲವು ನವಜಾತ ಶಿಶುಗಳಿಗೆ ಹೆಚ್ಚು ಸವಲಾಗಿರುತ್ತದೆ. ಈ ಕಂದಮ್ಮಗಳು ಬೇಗನೆ ಕಾಲೋಚಿತ ಜ್ವರ ಅಥವಾ ಸೋಂಕಿಗೆ ಒಳಗಾಗುತ್ತಾರೆ. ಇವರ ಚರ್ಮವು ತುಂಬಾ ಮೃದುವಾಗಿರುವ ಕಾರಣ ದದ್ದುಗಳ ಉಂಟಾಗುತ್ತದೆ. ಅಲ್ಲದೆ ಶೀತಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಎದುರಾಗುತ್ತದೆ. ಹಾಗಾಗಿ ಸಾಕಷ್ಟು ಎಚ್ಚರ ವಹಿಸುವುದು ಮುಖ್ಯವಾಗುತ್ತದೆ. ಅಮ್ಮಂದಿರು ಮಗುವಿನ ಈ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು.
ಸ್ನಾನ
ಚಿಕ್ಕ ಮಕ್ಕಳಿಗೆ ಪ್ರತಿನಿತ್ಯ ಸ್ನಾನ ಮಾಡಿಸುವುದು ತುಂಬಾ ಮುಖ್ಯ. ಮಕ್ಕಳ ನೈರ್ಮಲ್ಯ ಕಾಪಾಡುವುದು ಅವಶ್ಯವಾಗುತ್ತದೆ. ಚಳಿಗಾಲದಲ್ಲಿ ಒಂದು ದಿನ ಬಿಟ್ಟು ಒಂದು ದಿನ ನಿಮ್ಮ ಮಗುವನ್ನು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಿ. ಉಳಿದ ದಿನ ಒದ್ದೆ ಟವಲ್‌ನಿಂದ ಮಗುವಿನ ಮೈ ಒರೆಸಿ. ಆದರೆ ಪ್ರತಿದಿನ ಬಟ್ಟೆ ಬದಲಿಸುವುದನ್ನು ಮರೆಯಬೇಡಿ. ಇದರಿಂದ ಕಾಯಿಲೆ ಬರದಂತೆ ತಡೆಯಬಹುದು ಮಾತ್ರವಲ್ಲ, ಚರ್ಮದಲ್ಲಿ ತೇವಾಂಶವನ್ನೂ ಉಳಿಸಬಹುದು.
ಇದನ್ನೂ ಓದಿ: ಚಳಿಗಾಲದಲ್ಲಿ ಪ್ರತಿದಿನ ಮೊಸರು ತಿನ್ನುವುದರಿಂದ ದೇಹದಲ್ಲಿ ಏನೆಲ್ಲಾ ಆಗುತ್ತೆ ನೋಡಿ
ಎಣ್ಣೆ ಹಚ್ಚುವುದು
ಚಳಿಗಾಳಿ ಹಾಗೂ ಒಣಹವೆಯ ಕಾರಣದಿಂದ ಮಕ್ಕಳ ಚರ್ಮದ ಮಾಯಿಶ್ಚರೈಶರ್ ಹಾರಿ ಹೋಗಿರುತ್ತದೆ. ಇದರಿಂದ ಚರ್ಮದಲ್ಲಿ ಬಿರುಕು ಮೂಡಬಹುದು, ಸಿಪ್ಪೆ ಏಳಬಹುದು. ಮಕ್ಕಳ ಚರ್ಮವನ್ನು ಮಾಯಿಶ್ಚರೈಸ್ ಮಾಡಲು ಚಳಿಗಾಲದಲ್ಲಿ ದಿನದಲ್ಲಿ ಎರಡು ಬಾರಿ ಮಸಾಜ್ ಮಾಡುವುದು ಮುಖ್ಯವಾಗುತ್ತದೆ. ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ಕಂದಮ್ಮನ ಚರ್ಮದ ಆಳಕ್ಕೆ ಎಣ್ಣೆಯಂಶ ಇಳಿದು ತ್ವಚೆ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಇದು ಮಗುವಿನ ಮೂಳೆಗಳ ಆರೋಗ್ಯಕ್ಕೂ ಉತ್ತಮ. ತೆಂಗಿನೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಹಚ್ಚಬಹುದು.
ಸೂರ್ಯನ ಬಿಸಿಲು ತಾಕಿಸಿ
ಸೂರ್ಯನ ಬಿಸಿಲಿನಲ್ಲಿ ವಿಟಮಿನ್ ಡಿ ಅಂಶ ಅಧಿಕವಾಗಿರುತ್ತದೆ. ಇದು ಮಗುವಿನ ಮೂಳೆಗಳ ಬೆಳವಣಿಗೆಗೆ ಹಾಗೂ ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಅವಶ್ಯ. ಬಟ್ಟೆ ಬದಲಿಸಿದ ನಂತರ ಅಥವಾ ಸ್ನಾನ ಮಾಡಿಸಿದ ನಂತರ ಒಂದಿಷ್ಟು ಹೊತ್ತು ಸೂರ್ಯನ ಶಾಖ ತಾಕುವಂತೆ ಮಾಡಿ. ಇದು ಕೀಟಾಟುಗಳ ನಾಶ ಮಾಡಿ ಮಗುವಿನ ದೇಹವನ್ನು ಬೆಚ್ಚಗಿರಿಸುತ್ತದೆ.
ಇದನ್ನೂ ಓದಿ: Asthma: ಚಳಿಗಾಲದಲ್ಲಿ ಮಕ್ಕಳನ್ನು ಕಾಡುವ ಅಸ್ತಮಾದಿಂದ ರಕ್ಷಿಸಲು ಇಲ್ಲಿದೆ ಸುಲಭ ಪರಿಹಾರ
ಬಟ್ಟೆ ಸುತ್ತಿಡಿ
ನವಜಾತ ಶಿಶುಗಳನ್ನು ಸಂಪೂರ್ಣವಾಗಿ ಬಟ್ಟೆಯಿಂದ ಸುತ್ತಿ ಇಡುವುದು ಮುಖ್ಯವಾಗುತ್ತದೆ. ಇದು ಚಳಿಗಾಲದಲ್ಲಂತೂ ಬಹಳ ಮುಖ್ಯ. ದಪ್ಪನೆಯ ಅಂಗಿ ಪ್ಯಾಂಟ್ ಹಾಕಿಸಬೇಕು. ಉದ್ದ ತೋಳಿನ ಅಂಗಿ ಹಾಕಿಸುವುದು ಮುಖ್ಯವಾಗುತ್ತದೆ. ನಂತರ ಜಾಕೆಟ್ ತೊಡಿಸಿ. ಜೊತೆಗೆ ಕಿವಿ ಮುಚ್ಚುವಂತೆ ತಲೆಗೆ ಟೋಪಿ ಹಾಕಿ. ಇದರಿಂದ ಮಗುವಿನ ಅಡಿಯಿಂದ ಮುಡಿವರೆಗೆ ಬೆಚ್ಚಗಿರುತ್ತದೆ.
ದಪ್ಪನೆಯ ಬ್ಲಾಂಕೆಟ್ ಬೇಡ
ಚಳಿಗಾಲದಲ್ಲಿ ಚಳಿ ಎಂಬ ಕಾರಣಕ್ಕೆ ಮಗುವಿಗೆ ದಪ್ಪನೆಯ ಬ್ಲಾಂಕೆಟ್ ಹೊದೆಸುವುದು ಸರಿಯಲ್ಲ. ಇದು ಮಗುವಿನ ದೇಹವನ್ನು ಬೆಚ್ಚಗಾಗಿಸಬಹುದು. ಆದರೆ ಇದು ಮಗುವಿಗೆ ಕಿರಿಕಿರಿ ಉಂಟು ಮಾಡುತ್ತದೆ. ಇದರಿಂದ ಮಗುವಿಗೆ ಕೈ ಕಾಲು ಆಡಿಸಲು ತೊಂದರೆ ಉಂಟಾಗಬಹುದು. ಆ ಕಾರಣಕ್ಕೆ ಹದ ದಪ್ಪ ಇರುವ ಬ್ಲಾಂಕೆಟ್ ಹೊದಿಸಬೇಕು.
ವ್ಯಾಕ್ಸಿನ್
ಚಳಿಗಾಲದಲ್ಲಿ ನವಜಾತ ಶಿಶುವಿನ ಆರೋಗ್ಯ ಕಾಪಾಡಲು ಪಾಲಿಸಬೇಕಾದ ಅವಶ್ಯ ಕ್ರಮ ಎಂದರೆ ವ್ಯಾಕ್ಸಿನ್ ಹಾಕಿಸುವುದು. ವ್ಯಾಕ್ಸಿನ್ ಹಾಕಿಸುವ ದಿನಾಂಕವನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ. ಇದರಿಂದ ಹಲವು ಸಮಸ್ಯೆಗಳಿಂದ ಮಕ್ಕಳನ್ನು ರಕ್ಷಿಸಬಹುದು.