ಚಳಿಗಾಲದಲ್ಲಿ ಕೋಲ್ಡ್ ಆಗೋದು ಸಹಜ ಅಂತ ನಿರ್ಲಕ್ಷ್ಯ ಮಾಡಬೇಡಿ, ಈ 5 ಲಕ್ಷಣಗಳು ಕ್ಯಾನ್ಸರ್ ಸಂಕೇತವೂ ಆಗಿರಬಹುದು ಎಚ್ಚರ
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ಕೋಲ್ಡ್ ಆಗೋದು ಸಹಜ ಅಂತ ನಿರ್ಲಕ್ಷ್ಯ ಮಾಡಬೇಡಿ, ಈ 5 ಲಕ್ಷಣಗಳು ಕ್ಯಾನ್ಸರ್ ಸಂಕೇತವೂ ಆಗಿರಬಹುದು ಎಚ್ಚರ

ಚಳಿಗಾಲದಲ್ಲಿ ಕೋಲ್ಡ್ ಆಗೋದು ಸಹಜ ಅಂತ ನಿರ್ಲಕ್ಷ್ಯ ಮಾಡಬೇಡಿ, ಈ 5 ಲಕ್ಷಣಗಳು ಕ್ಯಾನ್ಸರ್ ಸಂಕೇತವೂ ಆಗಿರಬಹುದು ಎಚ್ಚರ

ಚಳಿಗಾಲದಲ್ಲಿ ಕೋಲ್ಡ್‌ ಆಗೋದು ಸಹಜ, ಬಹುತೇಕ ಎಲ್ಲರಿಗೂ ಈ ಸಮಯದಲ್ಲಿ ಶೀತ, ನೆಗಡಿ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಆದರೆ ನಿರಂತರ ಶೀತದಂತಹ ರೋಗಲಕ್ಷಣಗಳು ಕ್ಯಾನ್ಸರ್ ಸೂಚಕವೂ ಆಗಿರಬಹುದು. ದೀರ್ಘಕಾಲದ ಕೆಮ್ಮು, ಅತಿಯಾದ ತೂಕ ನಷ್ಟ, ತೀವ್ರ ಆಯಾಸ ಮುಂತಾದ ರೋಗಲಕ್ಷಣಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡದಿರಿ.

ಕ್ಯಾನ್ಸರ್ ಸೂಚಿಸುವ ಶೀತದ ಲಕ್ಷಣಗಳು
ಕ್ಯಾನ್ಸರ್ ಸೂಚಿಸುವ ಶೀತದ ಲಕ್ಷಣಗಳು

ಋತುಮಾನ ಬದಲಾದ ಕೂಡಲೇ ಆರೋಗ್ಯದಲ್ಲೂ ವ್ಯತ್ಯಯವಾಗುವುದು ಸಹಜ. ಅದರಲ್ಲೂ ಪ್ರತಿ ಋತು ಬದಲಾವಣೆಯಲ್ಲೂ ಶೀತ, ನೆಗಡಿ, ಜ್ವರ ಬರುವುದು ಸಹಜ. ಇದು ಹೆಚ್ಚಾಗಿ ವೈರಲ್ ಅಥವಾ ಬ್ಯಾಕ್ಟೀರಿಯಾದ ಸೋಂಕಿನಿಂದ ಉಂಟಾಗುತ್ತದೆ. ಆದರೆ ಎಲ್ಲ ಬಾರಿಯೂ ಶೀತದಂತಹ ಲಕ್ಷಣವಾಗಿರುವುದಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ಇದು ಕ್ಯಾನ್ಸರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಯ ಸೂಚಕವೂ ಆಗಿರಬಹುದು. ಇದು ಆರಂಭದಲ್ಲಿ ಶೀತದ ಲಕ್ಷಣವಾಗಿದ್ದರೂ ಕಾಲಾನಂತರದಲ್ಲಿ ಮುಂದುವರಿಯಬಹುದು ಅಥವಾ ಪರಿಸ್ಥಿತಿ ಹದಗೆಡಬಹುದು. ಕ್ಯಾನ್ಸರ್ ಸೂಚಿಸುವ ಶೀತದ ಈ 5 ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡದಿರಿ.

ವಾಸಿಯಾಗದ ನಿರಂತರ ಕೆಮ್ಮು

ದೀರ್ಘಕಾಲದ ಅದರಲ್ಲೂ ವಿಶೇಷವಾಗಿ ಮೂರು ವಾರಕ್ಕಿಂತ ಹೆಚ್ಚು ನಿರಂತರ ಕೆಮ್ಮು ಇದ್ದರೆ ಅದನ್ನು ನಿರ್ಲಕ್ಷ್ಯ ಮಾಡದಿರಿ. ಅಮೆರಿಕನ್ ಕ್ಯಾನ್ಸರ್ ಸೊಸೈಟಿ (ACS) ಪ್ರಕಾರ ದೀರ್ಘಕಾಲದ ಕೆಮ್ಮು, ಕೆಮ್ಮುವಾಗ ರಕ್ತ ಬರುವುದು ಹಾಗೂ ಧ್ವನಿಯಲ್ಲಿನ ವ್ಯತ್ಯಾಸ ಶ್ವಾಸಕೋಶದ ಅಥವಾ ಗಂಟಲು ಕ್ಯಾನ್ಸರ್‌ನ ಸೂಚಕವಾಗಿರಬಹುದು. ಆರಂಭಿಕ ಹಂತದ ಶ್ವಾಸಕೋಶದ ಕ್ಯಾನ್ಸರ್ ಹೊಂದಿರುವ ಶೇ 57ರಷ್ಟು ಮಂದಿ ಮೊದಲ ರೋಗಲಕ್ಷಣವಾಗಿ ನಿರಂತರ ಕೆಮ್ಮನ್ನು ಹೊಂದಿರುತ್ತಾರೆ ಎಂದು ಅಧ್ಯಯನಗಳು ಸೂಚಿಸಿವೆ. ವೈದ್ಯರನ್ನು ಸಂಪರ್ಕಿಸಿ ನಿರಂತರ ಕೆಮ್ಮು ಪರಿಹಾರ ಆಗಿಲ್ಲ ಎಂದರೆ ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದಿರಿ.

ಅತಿಯಾದ ತೂಕ ನಷ್ಟ

ತೂಕ ಇಳಿಸಿಕೊಳ್ಳುವುದು ನಿಮಗೆ ಇಷ್ಟವಾದರೂ ಕೆಲವೊಮ್ಮೆ ಇದ್ದಕ್ಕಿದ್ದಂತೆ ಅತಿಯಾಗಿ ತೂಕ ಇಳಿಯುವುದು ಕೂಡ ಎಚ್ಚರಿಕೆಯ ಸಂಕೇತವಾಗಿರಬಹುದು. ಬ್ರಿಟಿಷ್ ಜರ್ನಲ್ ಆಫ್ ಜನರಲ್ ಪ್ರಾಕ್ಟೀಸ್‌ನಲ್ಲಿ ಪ್ರಕಟವಾದ ಅಧ್ಯಯನವು ಇದ್ದಕ್ಕಿದ್ದಂತೆ ತೂಕ ಇಳಿಯುವುದು ಹೊಟ್ಟೆ, ಮೇದೋಜ್ಜೀರಕ ಗ್ರಂಥಿ, ಅನ್ನನಾಳ ಮತ್ತು ಶ್ವಾಸಕೋಶದಂತಹ ಕೆಲವು ಕ್ಯಾನ್ಸರ್‌ಗಳ ಸಂಕೇತವಾಗಿರಬಹುದು ಎಂದು ಬಹಿರಂಗಪಡಿಸಿದೆ. ದೇಹವು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವಾಗ, ಅದು ಹೆಚ್ಚು ಕ್ಯಾಲೊರಿ ಬರ್ನ್ ಮಾಡುತ್ತದೆ. ಇದರಿಂದ ನಮ್ಮ ಆಹಾರದ ಅಭ್ಯಾಸದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದರೂ ತ್ವರಿತ ತೂಕ ನಷ್ಟಕ್ಕೆ ಕಾರಣವಾಗಬಹುದು.

ಪದೇ ಪದೇ ಜ್ವರ ಬರುವುದು

ಪದೇ ಪದೇ ಜ್ವರ ಬರುವುದು, ಶೀತ ಆಗುವುದು ಯಾವಾಗಲೂ ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯ ಕಾರಣದಿಂದಲೇ ಆಗಿರುವುದಿಲ್ಲ. ಅಮೆರಿಕನ್ ಸೊಸೈಟಿ ಆಫ್ ಹೆಮಟಾಲಜಿಯ ಪ್ರಕಾರ ಪುನರಾವರ್ತಿತ ಸೋಂಕು ಅಥವಾ ಜ್ವರ ರಕ್ತ-ರೂಪಿಸುವ ಅಂಗಾಂಶಗಳ ಕ್ಯಾನ್ಸರ್ ಲ್ಯುಕೇಮಿಯಾವನ್ನು ಸೂಚಿಸಬಹುದು. ಲ್ಯುಕೇಮಿಯಾವು ಕ್ರಿಯಾಶೀಲವಾಗಿ ಬಿಳಿ ರಕ್ತ ಕಣಗಳನ್ನು ಉತ್ಪಾದಿಸುವ ದೇಹದ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಇದು ಪದೇ ಪದೇ ಅನಾರೋಗ್ಯಕ್ಕೆ ಕಾರಣವಾಗಬಹುದು. ಸ್ಪಷ್ಟ ಕಾರಣವಿಲ್ಲದೆ ಪುನರಾವರ್ತಿತ ಜ್ವರ ಅಥವಾ ಸೋಂಕುಗಳನ್ನು ಗಮನಿಸಿದರೆ ನಿರ್ಲಕ್ಷ್ಯ ಮಾಡದಿರಿ ಕೂಡಲೇ ವೈದ್ಯರ ಬಳಿ ತೋರಿಸಿ.

ನಿರಂತರ ಆಯಾಸ

ಶೀತ, ಜ್ವರ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ನಂತರ ಆಯಾಸವಾಗುವುದು ಸಹಜ.ಕ್ಯಾನ್ಸರ್ ಸಂಬಂಧಿತ ಆಯಾಸವು ಸಾಮಾನ್ಯವಾಗಿ ತೀವ್ರವಾಗಿರುತ್ತದೆ ಹಾಗೂ ವಿಶ್ರಾಂತಿ ತೆಗೆದುಕೊಳ್ಳುವುದರಿಂದ ಇದು ಸುಧಾರಿಸುವುದಿಲ್ಲ. ಲ್ಯುಕೇಮಿಯಾ, ಲಿಂಫೋಮಾ ಮತ್ತು ಕೊಲೊರೆಕ್ಟಲ್‌ನಂತಹ ಕ್ಯಾನ್ಸರ್‌ಗಳು ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆ ಮತ್ತು ಚಯಾಪಚಯ ಕ್ರಿಯೆಯಲ್ಲಿನ ಬದಲಾವಣೆಗಳಿಂದಾಗಿ ಆಯಾಸವನ್ನು ಉಂಟುಮಾಡಬಹುದು ಎಂದು ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ ವಿವರಿಸುತ್ತದೆ. ಸಾಕಷ್ಟು ನಿದ್ದೆಯ ನಂತರವೂ ಆಯಾಸ, ಸುಸ್ತು ಕಾಡುತ್ತಿದ್ದರೆ ಈ ವಿಚಾರದಲ್ಲಿ ನೀವು ಎಚ್ಚರ ತಪ್ಪುವಂತಿಲ್ಲ.

ದೀರ್ಘಕಾಲದ ಗಂಟಲು ನೋವು, ನುಂಗಲು ತೊಂದರೆ

ವಾರಗಟ್ಟಲೆ ಗಂಟಲು ನೋವು ಬರುವುದು, ನಂಗಲು ಕಷ್ಟವಾಗುವುದು ಗಂಟಲು ಅಥವಾ ಅನ್ನನಾಳದ ಕ್ಯಾನ್ಸರ್‌ನ ಸಂಕೇತವಾಗಿರಬಹುದು. ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಕ್ಯಾನ್ಸರ್‌ನಲ್ಲಿನ ಅಧ್ಯಯನವು ಈ ಕ್ಯಾನ್ಸರ್‌ಗಳ ಆರಂಭಿಕ ಲಕ್ಷಣಗಳಲ್ಲಿ ನಿರಂತರ ಗಂಟಲು ಕೂಡ ಒಂದು ಎಂದಿದೆ. ಆಹಾರ ನುಂಗುವಾಗ ನೋವಾಗುವುದು, ನುಂಗುವಾಗ ಗಂಟಲಿನಲ್ಲಿ ಅಂಟಿಕೊಂಡ ಅನುಭವ, ಗಂಟಲಿನಲ್ಲಿ ಒರಟುತನ ಭಾವನೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ.

ಈ ವಿಚಾರ ತಿಳಿದಿರಲಿ

ಪ್ರತಿಯೊಂದು ದೀರ್ಘಕಾಲದ ರೋಗಲಕ್ಷಣವು ಕ್ಯಾನ್ಸರ್‌ನ ಸಂಕೇತವಲ್ಲ. ಅಮೆರಿಕನ್ ಕ್ಯಾನ್ಸರ್ ಸೊಸೈಟಿ ಪ್ರಕಾರ ಶೀತಕ್ಕೆ ಸಂಬಂಧಿಸಿದ ಯಾವುದೇ ರೋಗಲಕ್ಷಣವು ಮೂರು ವಾರಗಳಿಗಿಂತ ಹೆಚ್ಚು ಕಾಲ ಉಳಿಯುತ್ತದೆ. ಆದರೆ ಈ ಸಮಸ್ಯೆಗಳು ಕಾಲಾನಂತರದಲ್ಲಿ ಹದಗೆಟ್ಟರೆ ವೈದ್ಯರಿಂದ ಸೂಕ್ತ ಪರೀಕ್ಷೆ ಮಾಡಿಸಬೇಕು. ಇದರಿಂದ ಸಮಸ್ಯೆಗೆ ಕಾರಣ ಏನು ಎಂಬುದನ್ನು ಕಂಡುಕೊಳ್ಳಬಹುದು.

ಕ್ಯಾನ್ಸರ್‌ನ ಅಪಾಯ ಕಡಿಮೆ ಮಾಡುವುದು ಹೇಗೆ

ಕ್ಯಾನ್ಸರ್ ಕೆಲವೊಮ್ಮೆ ರೋಗಲಕ್ಷಣಗಳನ್ನು ತೋರಿಸದೇ ಇರಬಹುದು. ಕೆಲವು ಸಾಮಾನ್ಯ ಲಕ್ಷಣಗಳು ಕ್ಯಾನ್ಸರ್ ಸೂಚಕವಾಗಿರಬಹುದು. ಎಲ್ಲಾ ವಿಧದ ಕ್ಯಾನ್ಸರ್‌ ಅನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ ಜೀವನಶೈಲಿಯಲ್ಲಿ ಕೆಲವು ಮಾರ್ಪಾಟು ಮಾಡಿಕೊಳ್ಳುವುದರಿಂದ ನ್ಯಾನ್ಸರ್ ಬಾರದಂತೆ ತಡೆಯಲು ಸಾಧ್ಯವಿದೆ.

  • ಧೂಮಪಾನ ತ್ಯಜಿಸಿ: ತಂಬಾಕು ಸೇವನೆಯು ಶ್ವಾಸಕೋಶ ಮತ್ತು ಗಂಟಲಿನ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದೆ.
  • ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ: ಸ್ಥೂಲಕಾಯವು ಅನ್ನನಾಳ ಮತ್ತು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಸೇರಿದಂತೆ ಹಲವಾರು ಕ್ಯಾನ್ಸರ್‌ಗಳಿಗೆ ಸಂಬಂಧಿಸಿದೆ.
  • ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸಿ: ಅತಿಯಾದ ಮದ್ಯಪಾನವು ಗಂಟಲು ಮತ್ತು ಯಕೃತ್ತಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
  • ನಿಯಮಿತ ತಪಾಸಣೆ ಮಾಡಿಸಿ: ಮ್ಯಾಮೊಗ್ರಾಮ್‌ಗಳು ಅಥವಾ ಕೊಲೊನೋಸ್ಕೋಪಿಗಳಂತಹ ಸ್ಕ್ರೀನಿಂಗ್‌ನಿಂದ ಚಿಕಿತ್ಸೆ ನೀಡಬಹುದಾದಾಗ ಕ್ಯಾನ್ಸರ್‌ಗಳನ್ನು ಮೊದಲೇ ಪತ್ತೆ ಮಾಡಬಹುದು.

(ಗಮನಿಸಿ: ಈ ಮಾಹಿತಿಯು ಅಂತರ್ಜಾಲದಲ್ಲಿ ದೊರೆತ ಹಾಗೂ ಸಾಮಾನ್ಯಜ್ಞಾನವನ್ನು ಆಧರಿಸಿದ್ದು. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ. ಕ್ಯಾನ್ಸರ್‌ ಮಾರಂಣಾತಿಕ ರೋಗವಾಗಿರುವ ಕಾರಣ ಯಾವುದೇ ಆರಂಭಿಕ ಹಂತದ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡದಿರಿ.)

Whats_app_banner