ಬಿಸಿನೀರು vs ತಣ್ಣೀರು; ಚಳಿಗಾಲಕ್ಕೆ ಯಾವುದು ಬೆಸ್ಟ್‌? ಈ ಕಾರಣಗಳಿಂದ ಚಳಿಗೆ ಉಗುರು ಬೆಚ್ಚಗಿನ ನೀರು ಕುಡಿಯೋದೇ ಉತ್ತಮ
ಕನ್ನಡ ಸುದ್ದಿ  /  ಜೀವನಶೈಲಿ  /  ಬಿಸಿನೀರು Vs ತಣ್ಣೀರು; ಚಳಿಗಾಲಕ್ಕೆ ಯಾವುದು ಬೆಸ್ಟ್‌? ಈ ಕಾರಣಗಳಿಂದ ಚಳಿಗೆ ಉಗುರು ಬೆಚ್ಚಗಿನ ನೀರು ಕುಡಿಯೋದೇ ಉತ್ತಮ

ಬಿಸಿನೀರು vs ತಣ್ಣೀರು; ಚಳಿಗಾಲಕ್ಕೆ ಯಾವುದು ಬೆಸ್ಟ್‌? ಈ ಕಾರಣಗಳಿಂದ ಚಳಿಗೆ ಉಗುರು ಬೆಚ್ಚಗಿನ ನೀರು ಕುಡಿಯೋದೇ ಉತ್ತಮ

ಚಳಿಗಾಲದಲ್ಲಿ ತಣ್ಣೀರು ಕುಡಿಬೇಕಾ, ಬಿಸಿನೀರು ಕುಡಿಬೇಕಾ, ಶೀತ ವಾತಾವರಣದಲ್ಲಿ ಆರೋಗ್ಯಕ್ಕೆ ಯಾವ ನೀರು ಬೆಸ್ಟ್ ಎಂಬ ಗೊಂದಲ ಎಲ್ಲರಲ್ಲೂ ಇರುತ್ತದೆ. ಈ ಎರಡರಲ್ಲಿ ಯಾವುದು ಉತ್ತಮ ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. ಇದರೊಂದಿಗೆ ಚಳಿಗಾಲದಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.

ಚಳಿಗಾಲದಲ್ಲಿ ಯಾವ ನೀರು ಉತ್ತಮ
ಚಳಿಗಾಲದಲ್ಲಿ ಯಾವ ನೀರು ಉತ್ತಮ (PC: Canva)

ಚಳಿಗಾಲ ಶುರುವಾಗಿದೆ, ಚಳಿಯ ಪ್ರಭಾವ ಜೋರಾಗಿದೆ. ಮುಂದಿನ ದಿನಗಳಲ್ಲಿ ತಾಪಮಾನ ಇನ್ನಷ್ಟು ಕುಸಿಯಬಹುದು ಎನ್ನಲಾಗುತ್ತಿದೆ. ಈ ಸಮಯದಲ್ಲಿ ನಾವು ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸಬೇಕು. ಚಳಿಗಾಲ ಎಂದಾಕ್ಷಣ ನಾವು ನೀರು ಕುಡಿಯುವುದು ಕಡಿಮೆ ಮಾಡುತ್ತೇವೆ. ಆದರೆ ಚಳಿಗಾಲದಲ್ಲಿ ನೀರು ಕುಡಿದಿಲ್ಲ ಅಂದ್ರೆ ಚರ್ಮ ಒಣಗುವುದು ಸೇರಿ ಹಲವು ಸಮಸ್ಯೆಗಳು ಎದುರಾಗಬಹುದು.

ಈಗಿರುವ ಪ್ರಶ್ನೆ ಚಳಿಗಾಲದಲ್ಲಿ ಬಿಸಿನೀರು ಕುಡಿಬೇಕಾ, ಇಲ್ಲ ತಣ್ಣೀರು ಕುಡಿಬೇಕಾ ಎನ್ನುವುದು. ಯಾಕೆಂದರೆ ತಾಪಮಾನ ಕುಸಿದಿದ್ದಾಗ ತಣ್ಣೀರು ಕುಡಿದರೆ ಆರೋಗ್ಯ ಕೆಡುವ ಸಾಧ್ಯತೆ ಹೆಚ್ಚು ಎಂದು ಜನ ಅಂದುಕೊಂಡಿರುತ್ತಾರೆ. ಹಾಗಾದರೆ ಚಳಿಗಾಲದಲ್ಲಿ ತಣ್ಣೀರು ಕುಡಿಬಾರದಾ, ಬಿಸಿನೀರು ಕುಡಿಬೇಕಾ ಅಂದ್ರೆ ಕೆಲವು ತಜ್ಞರು ನಮ್ಮ ನಮ್ಮ ದೇಹಸ್ಥಿತಿಗೆ ಅನುಗುಣವಾಗಿ ಎರಡೂ ನೀರು ಕುಡಿಯಬಹುದು ಎನ್ನುತ್ತಾರೆ. ಯಾವ ನೀರು ಕುಡಿಯಬೇಕು ಎನ್ನುವುದು ನಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿರುತ್ತದೆ. ಆದರೆ ಈ ಎರಡಕ್ಕಿಂತಲೂ ಬೆಸ್ಟ್ ಎಂದರೆ ಉಗುರು ಬೆಚ್ಚಗಿನ ನೀರು. ಚಳಿಗಾಲದಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ.

ಚಳಿಗಾಲದಲ್ಲಿ ಬಿಸಿ ನೀರಿನ ಪ್ರಯೋಜನ

ಹಿತವಾದ ಅನುಭವ: ಚಳಿಗಾಲದಲ್ಲಿ ಬಿಸಿನೀರು ಕುಡಿಯುವುದರಿಂದ ಬೆಚ್ಚಗಿನ ಹಾಗೂ ಹಿತವಾದ ಅನುಭವ ಸಿಗುತ್ತದೆ. ಇದು ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಕೂಡ ಸಹಕಾರಿ.

ಜೀರ್ಣಕ್ರಿಯೆ: ಚಳಿಗಾಲದಲ್ಲಿ ಜೀರ್ಣಕ್ರಿಯೆ ಸಮಸ್ಯೆ ಕಾಡುವುದು ಹೆಚ್ಚು. ಆ ಕಾರಣಕ್ಕೆ ಚಳಿಗಾಲದಲ್ಲಿ ಬಿಸಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದರಿಂದ ಹೊಟ್ಟೆಯುಬ್ಬರದಂತಹ ಲಕ್ಷಣಗಳು ನಿವಾರಣೆಯಾಗುತ್ತವೆ.

ಹೈಡ್ರೇಷನ್‌: ಕೆಲವರು ಚಳಿ ಹೆಚ್ಚಿದ್ದಾಗ ತಣ್ಣೀರು ಕುಡಿಯಲು ಹಿಂಜರಿಯುತ್ತಾರೆ. ಇದರಿಂದ ಡೀಹೈಡ್ರೇಷನ್ ಸಮಸ್ಯೆ ಕಾಡಬಹುದು. ಅಂಥವರು ಬಿಸಿನೀರು ಕುಡಿಯುವುದರಿಂದ ಡೀಹೈಡ್ರೇಷನ್ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.

ಚಳಿಗಾಲದಲ್ಲಿ ತಣ್ಣೀರಿನ ಪ್ರಯೋಜನ

ರಿಫ್ರೆಶ್ ಫೀಲ್‌: ತಣ್ಣೀರು ಕುಡಿಯುವುದರಿಂದ ರಿಫ್ರೆಶ್ ಸಿಗುತ್ತದೆ. ಇದರಲ್ಲೂ ನೀವು ವಾಕಿಂಗ್‌, ಜಾಗಿಂಗ್‌, ಜಿಮ್‌ನಂತಹ ದೈಹಿಕ ಚಟುವಟಿಕೆಯಲ್ಲಿ ತೊಡಗುವವರಾದರೆ ನಿಮಗೆ ತಣ್ಣೀರು ಉತ್ತಮ.

ಚಯಾಪಚಯ: ಅಧ್ಯಯನ ಪ್ರಕಾರ ತಣ್ಣೀರು ಕುಡಿಯುವುದರಿಂದ ಚಯಾಪಚಯ ವೃದ್ಧಿಯಾಗುತ್ತದೆ. ಆ ಕಾರಣಕ್ಕೆ ತಣ್ಣೀರು ಉತ್ತಮ.

ಚಳಿಗಾಲದಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯುವುದರ ಪ್ರಯೋಜನ

  • ಉಗುರು ಬೆಚ್ಚಗಿನ ನೀರನ್ನು ಕುಡಿಯಲು ಒಂದು ರೀತಿಯ ಆರಾಮ ಭಾವನೆ ಇರುತ್ತದೆ. ಇದು ಥಂಡಿಯೂ ಇಲ್ಲದ ಬಿಸಿಯೂ ಅಲ್ಲದ ನೀರು. ಇದು ಚರ್ಮದ ಆರೋಗ್ಯ ಹಾಗೂ ಜೀರ್ಣಕ್ರಿಯೆಗೂ ಉತ್ತಮ.
  • ಉಗುರು ಬೆಚ್ಚಗಿನ ನೀರು ಆಹಾರ ವಿಭಜನೆ ಮತ್ತು ಪೋಷಕಾಂಶಗಳನ್ನು ಸರಿಯಾದ ರೀತಿಯಲ್ಲಿ ಹೀರಿಕೊಳ್ಳಲು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಮಲಬದ್ಧತೆಯನ್ನು ತಡೆಯಲು ಕೂಡ ಸಹಕಾರಿ
  • ಚಳಿಗಾಲದಲ್ಲಿ ಗಂಟಲಿನ ಸಮಸ್ಯೆ ಸಾಮಾನ್ಯ. ಪದೇ ಪದೇ ಗಂಟಲಿನ ಕಿರಿಕಿರಿ ಕಾಡಬಹುದು. ಈ ಎಲ್ಲಾ ಸಮಸ್ಯೆಗಳಿಗೆ ಉಗುರು ಬೆಚ್ಚಗಿನ ನೀರು ಕುಡಿಯುವುದು ಪರಿಹಾರ. ಜೊತೆಗೆ ಇದು ಸಾಮಾನ್ಯ ಶೀತದ ಲಕ್ಷಣಗಳನ್ನೂ ನಿವಾರಿಸುತ್ತದೆ.
  • ಬೆಚ್ಚಗಿನ ನೀರು ಕುಡಿಯುವುದರಿಂದ ರಕ್ತಪರಿಚಲನೆ ಸುಧಾರಿಸುತ್ತದೆ. ಇದು ದೇಹದ ಸಾಮಾನ್ಯ ಉಷ್ಣತೆಯನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಫ್ರಾಸ್ಟೇಟ್ ಅಪಾಯವನ್ನೂ ಕಡಿಮೆ ಮಾಡುತ್ತದೆ.
  • ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಮೂಗು ಕಟ್ಟುವ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದು. ಇದು ಆರಾಮವಾಗಿ ಉಸಿರಾಡಲು ನೆರವಾಗುತ್ತದೆ.
  • ಉಗುರು ಬೆಚ್ಚಗಿನ ನೀರು ಸ್ನಾಯು ಸೆಳೆತದ ಸಮಸ್ಯೆಗೂ ಪರಿಹಾರ ನೀಡುತ್ತದೆ
  • ಉಗುರು ಬೆಚ್ಚಗಿನ ನೀರು ದೇಹದಿಂದ ವಿಷಾಂಶವನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಇದು ಪ್ರಮುಖ ಅಂಗಾಂಗಗಳ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಇದರಿಂದ ಪ್ರಮುಖ ಅಂಗ ಕಾರ್ಯನಿರ್ವಹಣೆ ಸುಧಾರಿಸುತ್ತದೆ.
  • ಚಳಿಗಾಲದಲ್ಲಿ ಮೂಳೆ ನೋವು, ಕೀಲುನೋವಿ ಸಮಸ್ಯೆ ಹೆಚ್ಚಿರುವ ಕಾರಣ ಉಗುರು ಬೆಚ್ಚಗಿನ ನೀರು ಕುಡಿಯುವ ಅಭ್ಯಾಸ ಮಾಡಬೇಕು. ಇದರಿಂದ ಬಿಗಿತ, ಸೆಳೆತ ಕಡಿಮೆಯಾಗುತ್ತದೆ.

    (ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ
    ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

    ಇದನ್ನೂ ಓದಿ: ಚಳಿಗಾಲದಲ್ಲಿ ಎಷ್ಟು ನೀರು ಕುಡಿಯಬೇಕು, ನೀರು ಕಡಿಮೆ ಕುಡಿದ್ರೆ ಏನೆಲ್ಲಾ ಸಮಸ್ಯೆ ಎದುರಾಗುತ್ತೆ; ಇಲ್ಲಿದೆ ಮಾಹಿತಿ

Whats_app_banner