Winter Health: ಚಳಿಗಾಲದಲ್ಲಿ ಎಳ್ಳು, ಬೆಲ್ಲ ತಿನ್ನೋದ್ರಿಂದ ಒಂದಲ್ಲ ಎರಡಲ್ಲ ಆರೋಗ್ಯಕ್ಕಿದೆ ನೂರಾರು ಪ್ರಯೋಜನ
ಚಳಿಗಾಲದ ಅಂತ್ಯ ಸಮೀಪಿಸಿದರೂ ಚಳಿ ಕಡಿಮೆ ಆಗಿಲ್ಲ. ಈ ಸಮಯದಲ್ಲಿ ದೇಹ ಬೆಚ್ಚಗಿರಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಅಂದ್ರೆ ಆಹಾರವೂ ಮುಖ್ಯವಾಗುತ್ತದೆ. ಹಾಗಾಗಿ ಎಳ್ಳು ಹಾಗೂ ಬೆಲ್ಲ ಎರಡನ್ನೂ ನಿಮ್ಮ ಡಯೆಟ್ ಕ್ರಮದಲ್ಲಿ ಸೇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.
ಚಳಿಗಾಲದಲ್ಲಿ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಶೀತ ವಾತವರಣದ ಕಾರಣದಿಂದ ದೇಹದಲ್ಲಿ ರೋಗನಿರೋಧ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಕೆಮ್ಮ, ನೆಗಡಿ, ಜ್ವರ ಸೇರಿದಂತೆ ಇನ್ನಿತರ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಅಲ್ಲದೆ ಚಯಾಪಚಯ ಶಕ್ತಿ ಕುಂಠಿತವಾಗುವ ಕಾರಣಕ್ಕೆ ಜೀರ್ಣಕ್ರಿಯೆಗೆ ಸಂಬಂಧಿತ ಸಮಸ್ಯೆಗಳೂ ಎದುರಾಗುತ್ತವೆ. ಅದಕ್ಕಾಗಿ ದೇಹವನ್ನು ಬೆಚ್ಚಗಿರಿಸಿಕೊಳ್ಳುವುದು ಮುಖ್ಯವಾಗುತ್ತದೆ. ದೇಹ ಬೆಚ್ಚರಿಗಿಸಿಕೊಳ್ಳುವುದು ಎಂದರೆ ದಪ್ಪನೆಯ ಬಟ್ಟೆ ಧರಿಸುವುದು ಎಂದಲ್ಲ, ನಾವು ಸೇವಿಸುವ ಆಹಾರ ಕೂಡ ಮುಖ್ಯವಾಗುತ್ತದೆ.
ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳಿಂದ ದೂರ ಇರಬೇಕು ಅಂದ್ರೆ ಎಳ್ಳು ಹಾಗೂ ಬೆಲ್ಲವನ್ನು ನಮ್ಮ ಆಹಾರಪಟ್ಟಿಯಲ್ಲಿ ಸೇರಿಸಿಕೊಳ್ಳಬೇಕು. ಹಾಗಾದ್ರೆ ಚಳಿಗಾಲದಲ್ಲಿ ಎಳ್ಳು ಬೆಲ್ಲ ತಿನ್ನೋದ್ರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.
ಚೈತನ್ಯ ಹೆಚ್ಚಿಸುತ್ತದೆ
ಬೆಲ್ಲವು ಕಾರ್ಬೊಹೈಡ್ರೇಟ್ ಕೇಂದ್ರಿತ ಮೂಲವಾಗಿದೆ. ಇದು ದೇಹಕ್ಕೆ ತ್ವರಿತವಾಗಿ ಚೈತನ್ಯ ಒದಗಿಸುವಂತೆ ಮಾಡುತ್ತದೆ. ಎಳ್ಳಿನಲ್ಲಿ ಆರೋಗ್ಯಕರ ಕೊಬ್ಬಿನಾಂಶ ಹಾಗೂ ಪ್ರೊಟೀನ್ ಸಮೃದ್ಧವಾಗಿದ್ದು, ಇದು ಶಕ್ತಿಯ ಮಟ್ಟ ಸುಸ್ಥಿರವಾಗಿರಲು ನೆರವಾಗುತ್ತದೆ.
ದೇಹವನ್ನು ಬೆಚ್ಚಗಿರಿಸುತ್ತದೆ
ಎಳ್ಳು ಹಾಗೂ ಬೆಲ್ಲ ಎರಡಲ್ಲೂ ದೇಹವನ್ನು ಬೆಚ್ಚಗಿರಿಸುವ ಶಕ್ತಿ ಇದೆ. ಆ ಕಾರಣಕ್ಕೆ ಚಳಿಗಾಲದಲ್ಲಿ ಎಳ್ಳು ಬೆಲ್ಲವನ್ನು ತಿನ್ನುವುದರಿಂದ ದೇಹ ಬೆಚ್ಚಗಿದ್ದು, ಎದುರಾಗುವ ಸಮಸ್ಯೆಗಳು ದೂರಾಗುತ್ತವೆ.
ಇದನ್ನೂ ಓದಿ: Sunbathing: ನೀವು ಎಂದಾದ್ರೂ ಸೂರ್ಯಸ್ನಾನ ಮಾಡಿದ್ರಾ? ಚಳಿಗಾಲದಲ್ಲಿ ಸನ್‌ಬಾತ್‌ನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ
ಪ್ರೊಟೀನ್ ಸಮೃದ್ಧ
ಎಳ್ಳಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣಾಂಶ, ಮಗ್ನೇಶಿಯಂ, ಫಾಸ್ಪರಸ್ ಹಾಗೂ ಜಿಂಕ್‌ನಂತಹ ಪ್ರೊಟೀನ್ ಅಂಶಗಳಿಂದ ಸಮೃದ್ಧವಾಗಿದೆ. ಬೆಲ್ಲವು ಕಬ್ಬಿನಿಂದ ತಯಾರಾಗುವ ಕಾರಣ ಇದರಲ್ಲಿ ಕಬ್ಬಿಣಾಂಶ, ಮಗ್ನೇಶಿಯಂ ಅಂಶ, ಪೊಟ್ಯಾಶಿಯಂ ಹಾಗೂ ವಿಟಮಿನ್ ಅಂಶಗಳು ಸಮೃದ್ಧವಾಗಿದೆ.
ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ
ಬೆಲ್ಲವು ಜೀರ್ಣಶಕ್ತಿ ಹೆಚ್ಚಿಸುವ ಗುಣಗಳಿಂದ ಪ್ರಸಿದ್ಧಿ ಪಡೆದಿದೆ. ಇದು ಮಲಬದ್ಧತೆಯನ್ನು ತಡೆಯುತ್ತದೆ. ಎಳ್ಳಿನಲ್ಲಿ ನಾರಿನಾಂಶ ಸಮೃದ್ಧವಾಗಿದ್ದು, ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
ಕೀಲುಗಳ ಆರೋಗ್ಯ
ಚಳಿಗಾಳದಲ್ಲಿ ಚಳಿ ಹೆಚ್ಚಾದಾಗ ಕೀಲುನೋವು ಸಮಸ್ಯೆ ಕೂಡ ಹೆಚ್ಚುತ್ತದೆ, ಅಂತಹ ಸಂದರ್ಭದಲ್ಲಿ ಎಳ್ಳು, ಬೆಲ್ಲ ಸೇವಿಸುವುದು ಉತ್ತಮ.
ಕಬ್ಬಿಣಾಂಶ ಹೀರಿಕೊಳ್ಳುವುದು
ಬೆಲ್ಲದಲ್ಲಿ ವಿಟಮಿನ್ ಸಿ ಹಾಗೂ ಎಳ್ಳಿನಲ್ಲಿ ಕಬ್ಬಿಣಾಂಣವಿದ್ದು, ಇದು ದೇಹದೊಳಗೆ ಸೇರುವ ಕಾರಣ ಇದು ಕಬ್ಬಿಣಾಂಶ ಕೊರತೆಯನ್ನು ನೀಗಿಸುತ್ತದೆ.
ಆಂಟಿಆಕ್ಸಿಡೆಂಟ್ ಅಂಶ
ಎಳ್ಳಿನಲ್ಲಿ ಆಂಟಿಆಕ್ಸಿಡೆಂಟ್ ಅಂಶ ಸಮೃದ್ಧವಾಗಿದೆ. ಇದು ದೇಹದ ಅಂಗಾಂಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ. ಬೆಲ್ಲದಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶ ಒಟ್ಟಾರೆ ಆರೋಗ್ಯಕ್ಕೆ ಬಹಳ ಮುಖ್ಯ.
ಇದನ್ನೂ ಓದಿ: ಚಳಿಗಾಲದಲ್ಲಿ ಪ್ರತಿದಿನ ಮೊಸರು ತಿನ್ನುವುದರಿಂದ ದೇಹದಲ್ಲಿ ಏನೆಲ್ಲಾ ಆಗುತ್ತೆ ನೋಡಿ
ರಕ್ತದಲ್ಲಿನ ಸಕ್ಕರೆ ಮಟ್ಟದ ನಿಯಂತ್ರಣ
ಸಕ್ಕರೆಗೆ ಹೋಲಿಸಿದರೆ ಬೆಲ್ಲದಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಪ್ರಮಾಣ ಕಡಿಮೆ ಇರುವುದರಿಂದ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಕೆಯಾಗುವುದನ್ನು ತಡೆಯುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಬಯಸುವವರು ಬೆಲ್ಲ ಸೇವಿಸುವುದು ಉತ್ತಮ.