ಏನಿದು ಎಸ್‌ಸಿಎಡಿ, ಮಹಿಳೆಯರನ್ನು ಹೆಚ್ಚು ಬಾಧಿಸುತ್ತಿರುವ ಅಪರೂಪದ ಹೃದಯಾಘಾತದ ಪ್ರಕಾರವಿದು, ಕಾರಣ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಏನಿದು ಎಸ್‌ಸಿಎಡಿ, ಮಹಿಳೆಯರನ್ನು ಹೆಚ್ಚು ಬಾಧಿಸುತ್ತಿರುವ ಅಪರೂಪದ ಹೃದಯಾಘಾತದ ಪ್ರಕಾರವಿದು, ಕಾರಣ ಹೀಗಿದೆ

ಏನಿದು ಎಸ್‌ಸಿಎಡಿ, ಮಹಿಳೆಯರನ್ನು ಹೆಚ್ಚು ಬಾಧಿಸುತ್ತಿರುವ ಅಪರೂಪದ ಹೃದಯಾಘಾತದ ಪ್ರಕಾರವಿದು, ಕಾರಣ ಹೀಗಿದೆ

ಹೃದಯಾಘಾತದಲ್ಲೂ ಹಲವು ವಿಧಗಳಿದ್ದು, ಎಸ್‌ಸಿಎಡಿ ಎನ್ನುವ ಅಪರೂಪದ ಹೃದಯಾಘಾತದ ಪ್ರಕಾರವು ಮಹಿಳೆಯರಲ್ಲಿ ಹೆಚ್ಚು ಕಾಣಿಸುತ್ತಿದೆ. ಇದು ಹಲವರ ಸಾವಿಗೆ ಕಾರಣವಾಗುತ್ತಿದೆ. ಇದಕ್ಕೆ ಕಾರಣ, ಇದರ ಪರಿಣಾಮಗಳೇನು ನೋಡಿ.

ಏನಿದು ಎಸ್‌ಸಿಎಡಿ
ಏನಿದು ಎಸ್‌ಸಿಎಡಿ (PC: Canva)

ಇತ್ತೀಚೆಗಷ್ಟೇ ಮಹಿಳೆಯೊಬ್ಬರು ಸ್ಟೇಜ್ ಮೇಲೆ ಡಾನ್ಸ್ ಮಾಡುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಪ್ರಕರಣದ ವಿಡಿಯೊ ಭಾರಿ ವೈರಲ್ ಆಗುತ್ತಿದೆ. ಯುವ, ಆರೋಗ್ಯವಂತ ಜನರು ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗುತ್ತಿದೆ. ಹೃದಯಾಘಾತದಲ್ಲೂ ಹಲವು ಪ್ರಕಾರಗಳಿದ್ದು, ಕೆಲವು ಪ್ರಕಾರಗಳು ಅರಿವಿಗೇ ಬಾರದಂತೆ ಸಾವಿನ ದವಡೆಗೆ ತಳ್ಳುತ್ತಿವೆ.

ಮಹಿಳೆಯರಲ್ಲಿ ಹೃದಯಾಘಾತ ಹೆಚ್ಚಲು ಕೆಲವು ನಿಗೂಢ ಅಂಶಗಳು ಕಾರಣವಾಗುತ್ತಿವೆ. ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ​​20 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ಶೇ 45ಕ್ಕಿಂತ ಹೆಚ್ಚು ಯುವತಿಯರು ಯಾವುದಾದರೂ ಒಂದು ರೀತಿಯ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಆಘಾತಕಾರಿ ಅಂಶವೊಂದನ್ನು ಬಹಿರಂಗ ಪಡಿಸಿದೆ.

ಎಸ್‌ಸಿಎಡಿ (SCAD) ಅಥವಾ ಸ್ವಯಂಪ್ರೇರಿತ ಪರಿಧಮನಿಯ ಛೇದನ ಎಂದೂ ಕರೆಯಲ್ಪಡುವ ಮಾರಣಾಂತಿಕ ಸ್ಥಿತಿಯು ಪರಿಧಮನಿಯ ಗೋಡೆಯಲ್ಲಿ ಬೇರ್ಪಡುವಿಕೆ ಅಥವಾ ಛಿದ್ರವಾದಾಗ ಸಂಭವಿಸುತ್ತದೆ, ಇದು ಪರಿಧಮನಿಯ ಗೋಡೆಯ ಯಾವುದೇ ಮೂರು ಪದರಗಳಲ್ಲಿ ಸಂಭವಿಸಬಹುದು. ಎಸ್‌ಸಿಎಡಿ ತೀವ್ರವಾದ ಪರಿಧಮನಿಯ ಸಿಂಡ್ರೋಮ್‌ನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ, ಇದು ತೀವ್ರ ಎದೆ ನೋವು ಅಥವಾ ಆಂಜಿನಾಗೆ ಕಾರಣವಾಗುತ್ತದೆ, ಅಲ್ಲದೇ ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.

ಮಹಿಳೆಯರಲ್ಲಿ ಎಸ್‌ಸಿಎಡಿ ಏಕೆ ಸಂಭವಿಸುತ್ತದೆ

ವೈದ್ಯರ ಪ್ರಕಾರ ಎಸ್‌ಸಿಎಡಿ ಹೆಚ್ಚಾಗಿ ಆರೋಗ್ಯವಂತ ಮತ್ತು ಯುವ ಮಹಿಳೆಯರಲ್ಲಿ ಹೃದಯ ಕಾಯಿಲೆಯ ಅಪಾಯವಿಲ್ಲದವರಲ್ಲಿ ಕಂಡುಬರುತ್ತದೆ. ಆದರೆ ಇದು ಎಲ್ಲಾ ವಯಸ್ಸಿನ ಪುರುಷರಲ್ಲೂ ಕಾಣಿಸಬಹುದು. ಹಿಂದೆಲ್ಲಾ ಇದು ಪುರುಷರಲ್ಲಿ ಹೆಚ್ಚು ಕಾಣಿಸುತ್ತಿತ್ತು. ಇದೀಗ ಮಹಿಳೆಯರೂ ಇದಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಎಸ್‌ಸಿಎಡಿ ಏಕೆ ಸಂಭವಿಸುತ್ತದೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದರೂ ಈ ಕಾರಣದಿಂದಾಗಿ ಸಣ್ಣ ವಯಸ್ಸಿನವರೂ, ದೈಹಿಕವಾಗಿ ಸಕ್ರಿಯರಾಗಿರುವವರೂ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ.

ವೈದ್ಯರ ಪ್ರಕಾರ ಇತ್ತೀಚೆಗೆ ತಾಯಿಯಾದ ಮಹಿಳೆಯರಲ್ಲಿ ಎಸ್‌ಸಿಎಡಿ ಕಾಣಿಸುತ್ತಿದೆ. ಮುಟ್ಟಿನ ಸಮಯದಲ್ಲಿ ಹಾಗೂ ಋತುಬಂಧದ ಸಮಯದಲ್ಲಿ ಎಸ್‌ಸಿಎಡಿ ಕಾಣಿಸುವ ಸಾಧ್ಯತೆ ಹೆಚ್ಚು. ಆದ್ದರಿಂದ, ಈ ಎಲ್ಲಾ ಅಪಾಯಕಾರಿ ಅಂಶಗಳು ಸ್ತ್ರೀ ಹಾರ್ಮೋನುಗಳಲ್ಲಿನ ಏರಿಳಿತಗಳು ಪ್ರಮುಖ ಪಾತ್ರ ವಹಿಸಬಹುದು ಎಂದು ಸೂಚಿಸುತ್ತಿವೆ.

ಎಸ್‌ಸಿಎಡಿ ಘಟನೆಗಳಲ್ಲಿ ಪುರುಷರು ಶೇ 10 ಕ್ಕಿಂತ ಕಡಿಮೆ ಇದ್ದಾರೆ. ಇದರಿಂದಾಗಿ 45 ರಿಂದ 53 ವರ್ಷ ವಯಸ್ಸಿನವರು ಹೆಚ್ಚು ಬಲಿಯಾಗುತ್ತಿದ್ದಾರೆ. ಇದಕ್ಕಿಂತ ಕಿರಿಯ ವಯಸ್ಸಿನವರಲ್ಲೂ ಈ ಸಮಸ್ಯೆ ಕಾಣಿಸುತ್ತಿದೆ.

ಎಸ್‌ಸಿಎಡಿಯ ರೋಗಲಕ್ಷಣಗಳು

ಇದು ಕೂಡ ರಕ್ತ ಹರಿವಿನಲ್ಲಿ ಉಂಟಾಗುವ ತೊಂದರೆಗಳಿಂದ ಸಂಭವಿಸುತ್ತದೆ. ಇದರಿಂದ ಈ ಕೆಲವು ರೋಗಲಕ್ಷಣಗಳು ಸಂಭವಿಸಬಹುದು.

ಎಸ್‌ಸಿಎಡಿ ರೋಗನಿರ್ಣಯ ಮಾಡುವುದು ಹೇಗೆ?

ವೈದ್ಯರು ಹೇಳುವಂತೆ SCAD ರೋಗನಿರ್ಣಯ ಮಾಡುವುದು ತುಂಬಾ ಕಷ್ಟಕರವಾಗಿರುತ್ತದೆ ಆದರೆ ನಿಮಗೆ ಎದೆ ನೋವು ಅಥವಾ ಹೃದಯಾಘಾತದ ಇತರ ಚಿಹ್ನೆಗಳು ಇದ್ದರೆ, ತಜ್ಞರು ಕೆಲವು ಪರೀಕ್ಷೆಗಳನ್ನು ಮಾಡುತ್ತಾರೆ, ಆ ಮೂಲಕ ಈ ಸಮಸ್ಯೆಯನ್ನು ಗುರುತಿಸಬಹುದಾಗಿದೆ.

ಹೃದಯದ ಕಾಯಿಲೆಗಳ ಅಪಾಯ ತಡೆಗಟ್ಟಲು ಕೆಲವು ಟಿಪ್ಸ್

  • ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಹೃದಯದ ಆರೋಗ್ಯಕ್ಕೆ ಸೂಕ್ತ ಎನ್ನಿಸುವ ಆಹಾರಗಳನ್ನು ಸೇವಿಸುವುದು
  • ಸೋಡಿಯಂ ಅನ್ನು ಕಡಿಮೆ ಮಾಡಿ ಮತ್ತು ರಕ್ತದೊತ್ತಡ ಮಟ್ಟವನ್ನು ನಿರ್ವಹಿಸುವುದು
  • ಮದ್ಯಪಾನ ಮಾಡುವುದನ್ನು ನಿಲ್ಲಿಸಿ
  • ಅನಾರೋಗ್ಯಕರ ಕೊಬ್ಬಿನಾಂಶ ಇರುವ ಆಹಾರವನ್ನು ಕಡಿಮೆ ಸೇವಿಸುವುದು
  • ಮಧುಮೇಹ ನಿಯಂತ್ರಣ
  • ಧೂಮಪಾನವನ್ನು ತ್ಯಜಿಸುವುದು
  • ವ್ಯಾಯಾಮ ಮಾಡಿ ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು

    (ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

    ಇದನ್ನೂ ಓದಿ: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದ್ರೆ ಕಣ್ಣು, ಮುಖದಲ್ಲಿ ಗೋಚರಿಸಬಹುದು ಈ ಕೆಲವು ಲಕ್ಷಣ, ಕಡೆಗಣಿಸಿದ್ರೆ ಹೃದಯಕ್ಕೆ ಅಪಾಯ ತಿಳಿದಿರಲಿ

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.