ವಿಶ್ವ ಅಧಿಕ ರಕ್ತದೊತ್ತಡ ದಿನ: ಹೈ ಬಿಪಿ ಎಂಬ ಸೈಲೆಂಟ್‌ ಕಿಲ್ಲರ್‌, ನಿಯಂತ್ರಣಕ್ಕೆ ಜೀವನಶೈಲಿಯಲ್ಲಿ ಇಂದೇ ಈ 7 ಬದಲಾವಣೆ ತನ್ನಿ
ಕನ್ನಡ ಸುದ್ದಿ  /  ಜೀವನಶೈಲಿ  /  ವಿಶ್ವ ಅಧಿಕ ರಕ್ತದೊತ್ತಡ ದಿನ: ಹೈ ಬಿಪಿ ಎಂಬ ಸೈಲೆಂಟ್‌ ಕಿಲ್ಲರ್‌, ನಿಯಂತ್ರಣಕ್ಕೆ ಜೀವನಶೈಲಿಯಲ್ಲಿ ಇಂದೇ ಈ 7 ಬದಲಾವಣೆ ತನ್ನಿ

ವಿಶ್ವ ಅಧಿಕ ರಕ್ತದೊತ್ತಡ ದಿನ: ಹೈ ಬಿಪಿ ಎಂಬ ಸೈಲೆಂಟ್‌ ಕಿಲ್ಲರ್‌, ನಿಯಂತ್ರಣಕ್ಕೆ ಜೀವನಶೈಲಿಯಲ್ಲಿ ಇಂದೇ ಈ 7 ಬದಲಾವಣೆ ತನ್ನಿ

ಅಧಿಕ ರಕ್ತದೊತ್ತಡ ಅಥವಾ ಹೈ ಬಿಪಿ ಸಮಸ್ಯೆ ಇತ್ತೀಚೆಗೆ ಹಲವರನ್ನು ಕಾಡುತ್ತಿದೆ. ಆದರೆ ಇದನ್ನು ನಿಯಂತ್ರಿಸುವುದು ಅಸಾಧ್ಯವೇನಲ್ಲ. ವಿಶ್ವ ಅಧಿಕ ರಕ್ತದೊತ್ತಡ ದಿನವಾದ ಇಂದು (ಮೇ 17) ಬಿಪಿ ನಿಯಂತ್ರಣಕ್ಕೆ ಬರಲು ಜೀವನಶೈಲಿಯಲ್ಲಿ ತರಬೇಕಾದ 7 ಬದಲಾವಣೆಗಳನ್ನು ಗಮನಿಸಿ.

ಹೈ ಬಿಪಿ ಎಂಬ ಸೈಲೆಂಟ್‌ ಕಿಲ್ಲರ್‌, ನಿಯಂತ್ರಣಕ್ಕೆ ಜೀವನಶೈಲಿಯಲ್ಲಿ ಈ 7 ಬದಲಾವಣೆ ತನ್ನಿ
ಹೈ ಬಿಪಿ ಎಂಬ ಸೈಲೆಂಟ್‌ ಕಿಲ್ಲರ್‌, ನಿಯಂತ್ರಣಕ್ಕೆ ಜೀವನಶೈಲಿಯಲ್ಲಿ ಈ 7 ಬದಲಾವಣೆ ತನ್ನಿ

ಹೈಪರ್‌ ಟೆನ್‌ಷನ್‌ ಅಥವಾ ಹೈ ಬಿಪಿಯನ್ನು ಸೈಲೆಂಟ್‌ ಕಿಲ್ಲರ್‌ ಎಂದು ಕರೆಯಲಾಗುತ್ತದೆ. ಇದು ಹೃದ್ರೋಗ ಸೇರಿದಂತೆ ಇತರ ದೀರ್ಘಕಾಲ ಕಾಡುವ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಸದ್ದಿಲ್ಲದೇ ದಾರಿ ಮಾಡಿಕೊಡುತ್ತದೆ. ಮನುಷ್ಯನ ದೀರ್ಘಕಾಲೀನ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ರಕ್ತದೊತ್ತಡವನ್ನು ನಿರ್ವಹಿಸುವುದು ಅತ್ಯಗತ್ಯ.

ಅಧಿಕ ರಕ್ತದೊತ್ತಡದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಹೈ ಬಿಪಿ ಗಂಭೀರತೆಯನ್ನು ಅರ್ಥ ಮಾಡಿಸುವ ಸಲುವಾಗಿ ಪ್ರತಿ ವರ್ಷ ಮೇ 17ಕ್ಕೆ ವಿಶ್ವ ಅಧಿಕ ರಕ್ತದೊತ್ತಡ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ, ತಡೆಗಟ್ಟುವ ಮತ್ತು ನಿರ್ವಹಣೆಗೆ ಪರಿಣಾಮಕಾರಿ ತಂತ್ರಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಗುರುಗ್ರಾಮದ ಸಿಕೆ ಬಿರ್ಲಾ ಆಸ್ಪತ್ರೆಯ ಆಂತರಿಕ ಔಷಧ ಸಲಹೆಗಾರ ಡಾ. ತುಷಾರ್ ತಯಾಲ್, ಎಚ್‌ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ ʼಅಧಿಕ ರಕ್ತದೊತ್ತಡವನ್ನು ಸೈಲೆಂಟ್‌ ಕಿಲ್ಲರ್‌ ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ಸಾಮಾನ್ಯವಾಗಿ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ ಪರಿಸ್ಥಿತಿ ಮುಂದುವರಿದಂತೆ ಹೃದ್ರೋಗ, ಪಾರ್ಶ್ವವಾಯು ಮತ್ತು ಮೂತ್ರಪಿಂಡ ವೈಫಲ್ಯದಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ಹೇಳಿದ್ದಾರೆ.

ರಕ್ತದೊತ್ತಡ ನಿಯಂತ್ರಣಕ್ಕೆ ಜೀವನಶೈಲಿಯಲ್ಲಿ ತರಬೇಕಾದ ಬದಲಾವಣೆಗಳ ಬಗ್ಗೆ ಡಾ. ತುಷಾರ್ ನೀಡಿರುವ ಸಲಹೆ ಇಲ್ಲಿದೆ.

ಆರೋಗ್ಯಕರ ತೂಕ ಕಾಪಾಡಿಕೊಳ್ಳಿ

ಅತಿಯಾದ ತೂಕದಿಂದ ಹೃದಯದ ಮೇಲೆ ಒತ್ತಡ ಹೆಚ್ಚಬಹುದು ಹಾಗೂ ಇದು ರಕ್ತದೊತ್ತಡದ ಏರಿಕೆಗೂ ಕಾರಣವಾಗುತ್ತದೆ. ಬಾಡಿ ಮಾಸ್ ಇಂಡೆಕ್ಸ್ (BMI) ಅನ್ನು 18.5 ಮತ್ತು 24.9 ರ ನಡುವೆ ಇರಿಸಿಕೊಳ್ಳಲು ಪ್ರಯತ್ನಿಸಿ. ಸ್ವಲ್ಪ ತೂಕ ಕಡಿಮೆಯಾದರೂ ರಕ್ತದೊತ್ತಡ ಗಮನಾರ್ಹವಾಗಿ ಕಡಿಮೆಯಾಗುತ್ತದೆ.

ಸಮತೋಲಿತ ಡಯೆಟ್‌ ಅನುಸರಿಸಿ

DASH (ಅಧಿಕ ರಕ್ತದೊತ್ತಡವನ್ನು ನಿಲ್ಲಿಸಲು ಆಹಾರ ವಿಧಾನಗಳು) ಆಹಾರ ಕ್ರಮವನ್ನು ಅಳವಡಿಸಿಕೊಳ್ಳಿ. ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಕಡಿಮೆ ಕೊಬ್ಬಿನ ಪ್ರೋಟೀನ್ ಮತ್ತು ಕಡಿಮೆ ಕೊಬ್ಬಿನ ಡೈರಿ ಆಹಾರಗಳನ್ನು ಸೇವಿಸಿ. ಪ್ರತಿದಿನ 5 ಗ್ರಾಂ ಗಿಂತ ಕಡಿಮೆ ಉಪ್ಪನ್ನು ಬಳಸಿ. ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಸಂಸ್ಕರಿಸಿದ ಆಹಾರಗಳ ಸೇವನೆ ಕಡಿಮೆ ಮಾಡಿ.

ಪ್ರತಿದಿನ ವ್ಯಾಯಾಮ ಮಾಡಿ

ಹೆಚ್ಚಿನ ದಿನಗಳಲ್ಲಿ ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ಸಕ್ರಿಯರಾಗಿರಿ. ಚುರುಕಾದ ನಡಿಗೆ, ಸೈಕ್ಲಿಂಗ್, ಈಜು ಅಥವಾ ಯೋಗದಂತಹ ನಿಯಮಿತ ಚಟುವಟಿಕೆಗಳು ರಕ್ತದೊತ್ತಡವನ್ನು ಆರೋಗ್ಯಕರ ಮಟ್ಟದಲ್ಲಿ ಕಾಪಾಡಿಕೊಳ್ಳುತ್ತವೆ. ವ್ಯಾಯಾಮವು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ, ಇದು ಅಧಿಕ ರಕ್ತದೊತ್ತಡಕ್ಕೆ ಮತ್ತೊಂದು ಕಾರಣವಾಗಿದೆ.

ಮದ್ಯಪಾನವನ್ನು ಮಿತಿಗೊಳಿಸಿ, ಧೂಮಪಾನ ನಿಲ್ಲಿಸಿ

ಅತಿಯಾದ ಮದ್ಯಪಾನವು ರಕ್ತದೊತ್ತಡ ಏರಿಕೆಯಾಗಲು ಕಾರಣವಾಗುತ್ತದೆ. ಜೊತೆಗೆ ಇದು ಹೃದಯಕ್ಕೆ ಹಾನಿಯಾಗುವಂತೆ ಮಾಡುತ್ತದೆ. ಧೂಮಪಾನವು ಅಪಧಮನಿಗಳನ್ನು ಮುಚ್ಚಿಹಾಕುತ್ತದೆ ಮತ್ತು ಹೃದಯದ ಮೇಲೆ ಹೆಚ್ಚಿನ ಒತ್ತಡ ಹೇರುವಂತೆ ಮಾಡುತ್ತದೆ. ಧೂಮಪಾನ ನಿಲ್ಲಿಸುವುದರಿಂದ ಹೃದಯರಕ್ತನಾಳದ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.

ಒತ್ತಡ ನಿಯಂತ್ರಿಸಿ

ದೀರ್ಘಕಾಲದ ಒತ್ತಡವು ರಕ್ತದೊತ್ತಡ ಏರಿಕೆಯಾಗಲು ಪ್ರಮುಖ ಕಾರಣವಾಗಬಹುದು. ಆಳವಾದ ಉಸಿರಾಟ, ಧ್ಯಾನ ಮತ್ತು ಮನಸ್ಸನ್ನು ಆಹ್ಲಾದವಾಗಿರಿಸಿಕೊಳ್ಳುವ ವಿಶ್ರಾಂತಿ ಕೌಶಲಗಳನ್ನು ಅಭ್ಯಾಸ ಮಾಡಿ. ಸಾಕಷ್ಟು ನಿದ್ದೆ ಮಾಡಿ, ಕೆಲಸ ಮತ್ತು ವೈಯಕ್ತಿಕ ಜೀವನ ನಿರ್ವಹಣೆ ಮೇಲೆ ಗಮನ ಹರಿಸಿ.

ಆಗಾಗ ರಕ್ತದೊತ್ತಡವನ್ನು ಪರೀಕ್ಷಿಸಿ

ನಿಮ್ಮ ಮನೆಯಲ್ಲಿ ಯಾರಿಗಾದರೂ ರಕ್ತದೊತ್ತಡ ಸಮಸ್ಯೆ ಇದ್ದರೆ ನೀವು ರಕ್ತದೊತ್ತಡ ಪರೀಕ್ಷೆ ಮಾಡಿಸಿ. ಮನೆಯಲ್ಲಿ ಬಿಪಿ ಚೆಕ್‌ ಮಾಡಿಕೊಳ್ಳಿ ಅಥವಾ ತಜ್ಞರ ಬಳಿ ಆಗಾಗ ತಪಾಸಣೆ ಮಾಡಿಸಿ. ಯಶಸ್ವಿ ನಿರ್ವಹಣೆಗೆ ಆರಂಭಿಕ ಪತ್ತೆಹಚ್ಚುವಿಕೆ ನಿರ್ಣಾಯಕವಾಗಿದೆ.

ಔಷಧಿಗಳನ್ನು ಮರೆಯದೇ ಸೇವಿಸಿ

ಜೀವನಶೈಲಿಯಲ್ಲಿ ಮಾರ್ಪಾಡು ಸಾಕಾಗದಿದ್ದರೆ, ಔಷಧಿಗಳು ಬೇಕಾಗಬಹುದು. ನಿಮ್ಮ ವೈದ್ಯರ ಸಲಹೆಯನ್ನು ಪಡೆಯಿರಿ ಮತ್ತು ಸಲಹೆ ನೀಡದೆ ಔಷಧಿಗಳನ್ನು ಎಂದಿಗೂ ನಿಲ್ಲಿಸಬೇಡಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.