Mpox Virus: ಏನಿದು ಎಂಪಾಕ್ಸ್ ವೈರಸ್‌, ಇದು ಹರಡಲು ಕಾರಣವೇನು, ರೋಗಲಕ್ಷಣಗಳು, ಮುನ್ನೆಚ್ಚರಿಕೆ ಹೇಗೆ ಎಂಬ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Mpox Virus: ಏನಿದು ಎಂಪಾಕ್ಸ್ ವೈರಸ್‌, ಇದು ಹರಡಲು ಕಾರಣವೇನು, ರೋಗಲಕ್ಷಣಗಳು, ಮುನ್ನೆಚ್ಚರಿಕೆ ಹೇಗೆ ಎಂಬ ಮಾಹಿತಿ ಇಲ್ಲಿದೆ

Mpox Virus: ಏನಿದು ಎಂಪಾಕ್ಸ್ ವೈರಸ್‌, ಇದು ಹರಡಲು ಕಾರಣವೇನು, ರೋಗಲಕ್ಷಣಗಳು, ಮುನ್ನೆಚ್ಚರಿಕೆ ಹೇಗೆ ಎಂಬ ಮಾಹಿತಿ ಇಲ್ಲಿದೆ

Mpox Virus: ಕರ್ನಾಟಕದಲ್ಲಿ ಮೊದಲ ಎಂಪಾಕ್ಸ್ ಸೋಂಕಿನ ಪ್ರಕರಣ ಪತ್ತೆಯಾಗಿದೆ. ದುಬೈನಿಂದ ಮರಳಿದ ವ್ಯಕ್ತಿಯೊಬ್ಬರಿಗೆ ಎಂಪಾಕ್ಸ್ ಪಾಸಿಟಿವ್ ಬಂದಿದ್ದು, ರಾಜ್ಯದಲ್ಲಿ ಆತಂಕ ಎದುರಾಗಿದೆ. ಹಾಗಾದರೆ ಏನಿದು ಎಂಪಾಕ್ಸ್ ವೈರಸ್‌, ಇದು ಹರಡಲು ಕಾರಣವೇನು, ರೋಗಲಕ್ಷಣಗಳು ಹಾಗೂ ಮುನ್ನೆಚ್ಚರಿಕೆ ಬಗ್ಗೆ ಇಲ್ಲಿದೆ ಮಾಹಿತಿ.

ಏನಿದು ಎಂಪಾಕ್ಸ್ ವೈರಸ್
ಏನಿದು ಎಂಪಾಕ್ಸ್ ವೈರಸ್

ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ವೈರಸ್‌ಗಳು ಆತಂಕ ಹುಟ್ಟು ಹಾಕುತ್ತಿವೆ. ಒಂದರ ಹೆಸರು ಮರೆಯುತ್ತಿದ್ದಂತೆ ಇನ್ನೊಂದು ಹೊಸ ವೈರಸ್ ದಾಳಿ ಮಾಡುತ್ತಿದೆ. ಇದೀಗ ಕರ್ನಾಟಕದಲ್ಲಿ ದುಬೈನಿಂದ ಬಂದಿದ್ದ ವ್ಯಕ್ತಿಯೊಬ್ಬರಿಗೆ ಎಂಪಾಕ್ಸ್ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿರುವುದಾಗಿ ವರದಿಗಳು ತಿಳಿಸಿವೆ. ಸೋಂಕಿತ ವ್ಯಕ್ತಿಯನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಮಯದಲ್ಲಿ ಎಂಪಾಕ್ಸ್ ವೈರಸ್‌ ಎಂದರೇನು, ಇದು ಹರಡುವ ಬಗೆ ಹೇಗೆ, ಇದರ ರೋಗಲಕ್ಷಣಗಳೇನು, ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ ಎಂಬ ಪ್ರಶ್ನೆ ನಿಮ್ಮ ತಲೆಯಲ್ಲೂ ಓಡುತ್ತಿರಬಹುದು ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಏನಿದು ಎಂಪಾಕ್ಸ್‌ ವೈರಸ್?

ಎಂಪಾಕ್ಸ್ ವೈರಸ್ ಅನ್ನು ಮಂಕಿಪಾಕ್ಸ್ ಎಂದು ಕೂಡ ಕರೆಯಲಾಗುತ್ತದೆ. ಇದು ಸಿಡುಬಿಗೆ ಸಂಬಂಧಿಸಿದ ವೈರಸ್‌ನಿಂದ ಹರಡುವ ಕಾಯಿಲೆಯಾಗಿದೆ. ಇದು ಸಿಡುಬಿಗೆ ಕಾರಣವಾಗುವ ಆರ್ಥೋಪಾಕ್ಸ್‌ ವೈರಸ್‌ ವಂಶಾವಳಿಗೆ ಸೇರಿದ್ದಾಗಿದೆ. ಆದರೆ ಸಿಡುಬಿಗಿಂತ ಮಂಕಿಪಾಕ್ಸ್ ತೀವ್ರತೆ ಕಡಿಮೆ ಇರುತ್ತದೆ. 

ಮಂಕಿಪಾಕ್ಸ್ ಹೊಸ ವೈರಸ್ ಅಥವಾ ಇದು ಹೊಸ ರೀತಿಯ ಸೋಂಕು ಖಂಡಿತ ಅಲ್ಲ. ಕೆಲವು ವರ್ಷಗಳಿಂದ ಅಸ್ಪಷ್ಟ ರೋಗವಾಗಿದ್ದ ಮಂಕಿಪಾಕ್ಸ್‌ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹರಡುವ ಕಾರಣ ಜಗತ್ತಿನ ಗಮನ ಸೆಳೆಯುತ್ತಿದೆ. ಇದು ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದರೂ, ಇತ್ತೀಚೆಗೆ ಪ್ರಪಂಚದ ಇತರ ಭಾಗಗಳಲ್ಲಿಯೂ ಕಂಡುಬಂದಿದೆ. ಇದು ಅಸಾಮಾನ್ಯ ವೈರಸ್-ಪ್ರೇರಿತ ಕಾಯಿಲೆಯಾಗಿದ್ದು, ಜ್ವರ ಮತ್ತು ಶೀತದಂತಹ ರೋಗಲಕ್ಷಣಗಳ ಜೊತೆಗೆ ದದ್ದನ್ನು ಹೊಂದಿರುತ್ತದೆ. ಇದು ಗುಣವಾಗಲು ಕೆಲವು ವಾರಗಳನ್ನು ತೆಗೆದುಕೊಳ್ಳಬಹುದು. ಆದರೆ ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ.

ಮಂಕಿಪಾಕ್ಸ್ ಮತ್ತು ಸಿಡುಬಿನ ನಡುವಿನ ವ್ಯತ್ಯಾಸ

ಮಂಕಿಪಾಕ್ಸ್ ಮತ್ತು ಸಿಡುಬು ಎರಡೂ ಒಂದೇ ರೀತಿಯ ವೈರಸ್‌ಗಳಿಂದ ಉಂಟಾಗುತ್ತವೆಯಾದರೂ, ಅವು ವಿಭಿನ್ನ ರೋಗಗಳಾಗಿವೆ. ಸಿಡುಬು 1980ರಲ್ಲಿ ವಿಶ್ವದಾದ್ಯಂತ ನಿರ್ಮೂಲನೆ ಮಾಡಲಾದ ಹೆಚ್ಚು ತೀವ್ರವಾದ ಕಾಯಿಲೆಯಾಗಿದೆ. ಮಂಕಿಪಾಕ್ಸ್ ಕಡಿಮೆ ತೀವ್ರತೆ ಹೊಂದಿರುತ್ತದೆ, ಆದರೂ ಗಮನಾರ್ಹ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಎಂಪಾಕ್ಸ್ ಹರಡುವ ಬಗೆ ಹೇಗೆ?

ಮಂಕಿಪಾಕ್ಸ್ ಅಥವಾ ಎಂಪಾಕ್ಸ್‌ ಪ್ರಾಥಮಿಕವಾಗಿ ಸೋಂಕಿತ ವ್ಯಕ್ತಿಯೊಂದಿಗಿನ ನಿಕಟ ಸಂಪರ್ಕ, ಅವರ ದೇಹದಲ್ಲಿನ ದದ್ದುಗಳು, ದೈಹಿಕ ದ್ರವ ಅಥವಾ ಉಸಿರಾಟದ ಹನಿಗಳ ಮೂಲಕ ಹರಡುತ್ತದೆ. ಎಂಪಾಕ್ಸ್ ವೈರಸ್ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹೇಗೆಲ್ಲಾ ಹರಡಬಹುದು ನೋಡಿ.

  • ಎಂಪಾಕ್ಸ್ ಸೋಂಕಿತ ವ್ಯಕ್ತಿಯೊಂದಿಗೆ ನೇರ ಸಂಪರ್ಕ ಹೊಂದುವುದು ಅಂದರೆ ಸೋಂಕಿತ ವ್ಯಕ್ತಿಯ ದೇಹದ ದ್ರವ, ದದ್ದುಗಳು ಅಥವಾ ಆ ವ್ಯಕ್ತಿಯ ಮೈ ತಾಕುವುದು ಅಥವಾ ಉಜ್ಜುವುದರಿಂದ ಹರಡಬಹುದು.
  • ಸೋಂಕಿತ ವ್ಯಕ್ತಿಯ ಉಸಿರಾಟದ ಹನಿಗಳೊಂದಿಗೆ ನಿಕಟ ಸಂಪರ್ಕ ಹೊಂದುವುದು ಎಂಪಾಕ್ಸ್ ಹರಡಲು ಕಾರಣವಾಗಬಹುದು.
  • ಎಂಪಾಕ್ಸ್ ಸೋಂಕಿತ ವ್ಯಕ್ತಿಯು ಬಳಸಿದ ಬಟ್ಟೆ, ಹಾಸಿಗೆ, ಬೆಡ್‌ಶೀಟ್‌ ಅಥವಾ ದೈಹಿಕ ದ್ರವಗಳೊಂದಿಗೆ ಸಂಪರ್ಕಕ್ಕೆ ಬಂದ ಯಾವುದೇ ಇತರ ವಸ್ತುಗಳ ಮೂಲಕ ವೈರಸ್ ಹರಡಬಹುದು.
  • ಎಂಪಾಕ್ಸ್ ವೈರಸ್ ಸೋಂಕಿತ ಗರ್ಭಿಣಿ ಮಹಿಳೆಯಿಂದ ಆಕೆಯ ಮಗುವಿಗೆ ಹರಡಬಹುದು
  • ಪ್ರಾಣಿಗಳಲ್ಲಿರುವ ಎಂಪಾಕ್ಸ್ ಕೂಡ ಅವುಗಳ ಮೂಲಕ ಮನುಷ್ಯನಿಗೆ ಹರಡುವ ಸಾಧ್ಯತೆ ಇದೆ.

    ಇದನ್ನೂ ಓದಿ: Monkeypox: ವಿಶ್ವದೆಲ್ಲೆಡೆ ಮಂಕಿಫಾಕ್ಸ್‌ ಭೀತಿ; ಈ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟಲು ತಪ್ಪದೇ ಪಾಲಿಸಬೇಕಾದ ನಿಯಮಗಳಿವು

ಎಂಪಾಕ್ಸ್‌ನ ರೋಗಲಕ್ಷಣಗಳು?

ಸಾಮಾನ್ಯವಾಗಿ ವೈರಸ್ ತಲುಗಿದ 3 ರಿಂದ 21 ದಿನಗಳ ನಡುವೆ ರೋಗಲಕ್ಷಣಗಳು ಗೋಚರವಾಗುತ್ತವೆ. ಜ್ವರ, ತಲೆನೋವು, ಸ್ನಾಯು ಸೆಳೆತ, ಊದಿಕೊಂಡ ದುಗ್ಧರಸ ಗ್ರಂಥಿಗಳು, ಶೀತ ಮತ್ತು ಬಳಲಿಕೆ ಸೇರಿವೆ ಇವು ಎಂಪಾಕ್ಸ್‌ನ ಪ್ರಮುಖ ರೋಗಲಕ್ಷಣಗಳಾಗಿವೆ. ಈ ವೈರಸ್ ತಗುಲಿದ ನಂತರ ದದ್ದುಗಳು ಹೆಚ್ಚಾಗುತ್ತಾ ಹೋಗುತ್ತವೆ, ಗುಳ್ಳೆಗಳು ಹಾಗೂ ಚರ್ಮ ಸಿಪ್ಪೆ ಏಳುವುದು ಸಾಮಾನ್ಯವಾಗುತ್ತದೆ. ಮಂಕಿಪಾಕ್ಸ್‌ನ ಪರಿಣಾಮ ಸಾಮಾನ್ಯವಾಗಿ 6-13 ದಿನಗಳವರೆಗೆ ಇರುತ್ತದೆಯಾದರೂ, 5 ರಿಂದ 21 ದಿನಗಳವರೆಗೆ ಇದರ ರೋಗಲಕ್ಷಣಗಳು ಹಾಗೇ ಇರಬಹುದು.

ಎಂಪಾಕ್ಸ್ ನ ತೊಡಕುಗಳೇನು?

ಹೆಚ್ಚಿನ ಜನರು ಎಂಪಾಕ್ಸ್‌ನಿಂದ ಯಾವುದೇ ತೊಂದರೆಗಳಿಲ್ಲದೇ ಚೇತರಿಸಿಕೊಂಡರೂ, ಕೆಲವರು ಈ ಕೆಳಗಿನವುಗಳನ್ನು ಅನುಭವಿಸಬಹುದು:

  • ಚರ್ಮ ಮತ್ತು ಮೃದು ಅಂಗಾಂಶಗಳಲ್ಲಿ ಬ್ಯಾಕ್ಟೀರಿಯಾದ ಸೋಂಕುಗಳು
  • ಎನ್ಸೆಫಾಲಿಟಿಸ್ (ಮೆದುಳಿನ ಉರಿಯೂತ)
  • ನ್ಯುಮೋನಿಯಾ (ಶ್ವಾಸಕೋಶದ ಸೋಂಕು)
  • ಸೆಪ್ಸಿಸ್ (ಸೋಂಕಿಗೆ ದೇಹದ ಪ್ರತಿಕ್ರಿಯೆಯಿಂದ ಉಂಟಾಗುವ ಮಾರಣಾಂತಿಕ ತೊಡಕು)
  • ಕಾರ್ನಿಯಲ್ ಒಳಗೊಳ್ಳುವಿಕೆ (ದೃಷ್ಟಿ ನಷ್ಟಕ್ಕೆ ಕಾರಣವಾಗುವ ಕಾರ್ನಿಯಾದ ಸೋಂಕು)
  • ದೃಷ್ಟಿ ನಷ್ಟ (ಪ್ರಕರಣ ತೀವ್ರವಾದಲ್ಲಿ)
  • ಮಯೋಕಾರ್ಡಿಟಿಸ್ (ಹೃದಯ ಸ್ನಾಯುವಿನ ಉರಿಯೂತ)
  • ಪೆರಿಕಾರ್ಡಿಟಿಸ್ (ಹೃದಯದ ಸುತ್ತಲಿನ ಒಳಪದರದ ಉರಿಯೂತ)

    ಇದನ್ನೂ ಓದಿ: Food and Immunity Booster: ಹೆಚ್ಚಿದ ವೈರಸ್‌ ಹಾವಳಿ; ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಆಹಾರಗಳ ಸೇವನೆಗೆ ಒತ್ತು ನೀಡಿ

ಅಪಾಯಕಾರಿ ಅಂಶಗಳು ಮತ್ತು ತಡೆಗಟ್ಟುವಿಕೆ

ಮಂಕಿಪಾಕ್ಸ್ ಸೋಂಕಿಗೆ ಯಾರು ಬೇಕಾದರೂ ಒಳಗಾಗಬಹುದು, ಆದರೆ ಕೆಲವು ವ್ಯಕ್ತಿಗಳು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ, ಅವರಲ್ಲಿ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರು, ಗರ್ಭಿಣಿಯರು ಮತ್ತು ನವಜಾತ ಶಿಶುಗಳು ಸೇರಿದ್ದಾರೆ. ಮಂಕಿಪಾಕ್ಸ್ ಹರಡುವುದನ್ನು ತಡೆಗಟ್ಟಲು, ಉತ್ತಮ ನೈರ್ಮಲ್ಯವನ್ನು ಅಭ್ಯಾಸ ಮಾಡುವುದು, ಸೋಂಕಿತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸುವುದು ಮತ್ತು ಅವಶ್ಯವಿದ್ದಲ್ಲಿ ಲಸಿಕೆ ಪಡೆಯುವುದು ಅತ್ಯಗತ್ಯ. ಸಿಡುಬಿನ ವಿರುದ್ಧ ಲಸಿಕೆ ಹಾಕುವುದರಿಂದ ಮಂಕಿಪಾಕ್ಸ್ ವಿರುದ್ಧ ಸ್ವಲ್ಪ ರಕ್ಷಣೆ ಸಿಗಬಹುದು.

ಮಂಕಿಪಾಕ್ಸ್ ಅಥವಾ ಎಂಪಾಕ್ಸ್ ಹರಡುವುದನ್ನು ತಡೆಯುವುದು ಹೇಗೆ?

ಎಂಪಾಕ್ಸ್ ವೈರಸ್ ಹರಡುವುದನ್ನು ಅಥವಾ ಆರೋಗ್ಯವಂತ ವ್ಯಕ್ತಿಗಳಿಗೆ ಸೋಂಕು ತಗುಲುವುದನ್ನು ತಡೆಯಲು ಈ ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಮರೆಯದಿರಿ. 

  • ಎಂಪಾಕ್ಸ್‌ನಂತೆ ಕಾಣುವ ಯಾವುದೇ ದದ್ದು ಇರುವ ಜನರೊಂದಿಗೆ ನಿಕಟ ಸಂಪರ್ಕವನ್ನು ಇರಿಸಿಕೊಳ್ಳುವುದು ತಪ್ಪಿಸಿ. 
  • ಸೋಂಕಿತ ವ್ಯಕ್ತಿ ಅಥವಾ ಪ್ರಾಣಿಗಳು ಬಳಸಿದ ಯಾವುದೇ ವಸ್ತುಗಳನ್ನು ಸ್ಪರ್ಶಿಸುವುದನ್ನು ತಪ್ಪಿಸಿ. ಬೆಡ್‌ಶೀಟ್‌, ಹಾಸಿಗೆ ಮತ್ತು ಬಟ್ಟೆಗಳು ಸೇರಿದಂತೆ ಯಾವುದೇ ವಸ್ತುಗಳನ್ನು ಮುಟ್ಟಬೇಡಿ.
  • ಎಂಪಾಕ್ಸ್ ಇರುವವರಿಂದ ಆರೋಗ್ಯವಂತ ವ್ಯಕ್ತಿಗಳನ್ನು ಪ್ರತ್ಯೇಕವಾಗಿ ಇರಿಸಿ, ಅಂದರೆ ಎಂಪಾಕ್ಸ್ ಇರುವವರು ಇತರರಿಂದ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ. 
  • ಸೋಂಕಿತ ವ್ಯಕ್ತಿ ಅಥವಾ ಪ್ರಾಣಿಗಳ ಸಂಪರ್ಕಕ್ಕೆ ಬಂದ ನಂತರ ನಿಮ್ಮ ಕೈಗಳನ್ನು ಸೋಪ್ ಮತ್ತು ನೀರಿನಿಂದ ಚೆನ್ನಾಗಿ ತೊಳೆಯಿರಿ.
  • ಸೋಂಕಿಗೆ ಒಳಗಾಗಬಹುದಾದ ಪ್ರಾಣಿಗಳನ್ನು ದೂರವಿಡಿ.
  • ಎಂಪಾಕ್ಸ್ ವಿರುದ್ಧ ಲಸಿಕೆ ಹಾಕಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner