ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣವಾಗಬಹುದು ಬಾಲ್ಯದಲ್ಲಿ ಕಾಡುವ ಅನಾರೋಗ್ಯ, ಮಕ್ಕಳ ಆರೋಗ್ಯದ ಮೇಲಿರಲಿ ಹೆಚ್ಚಿನ ನಿಗಾ
ಕನ್ನಡ ಸುದ್ದಿ  /  ಜೀವನಶೈಲಿ  /  ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣವಾಗಬಹುದು ಬಾಲ್ಯದಲ್ಲಿ ಕಾಡುವ ಅನಾರೋಗ್ಯ, ಮಕ್ಕಳ ಆರೋಗ್ಯದ ಮೇಲಿರಲಿ ಹೆಚ್ಚಿನ ನಿಗಾ

ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣವಾಗಬಹುದು ಬಾಲ್ಯದಲ್ಲಿ ಕಾಡುವ ಅನಾರೋಗ್ಯ, ಮಕ್ಕಳ ಆರೋಗ್ಯದ ಮೇಲಿರಲಿ ಹೆಚ್ಚಿನ ನಿಗಾ

ಬಾಲ್ಯದಲ್ಲಿ ಮಕ್ಕಳನ್ನು ಕಾಡುವ ಕೆಲವು ಆರೋಗ್ಯ ಸಮಸ್ಯೆಗಳು ಭವಿಷ್ಯದಲ್ಲಿ ಅವರಿಗೆ ತೊಂದರೆ ಉಂಟು ಮಾಡಬಹುದು. ಬಾಲ್ಯದ ಅನಾರೋಗ್ಯವು ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣವಾಗಬಹುದು.

ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣವಾಗಬಹುದು ಬಾಲ್ಯದಲ್ಲಿ ಕಾಡುವ ಅನಾರೋಗ್ಯ, ಮಕ್ಕಳ ಆರೋಗ್ಯದ ಮೇಲಿರಲಿ ಹೆಚ್ಚಿನ ನಿಗಾ
ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣವಾಗಬಹುದು ಬಾಲ್ಯದಲ್ಲಿ ಕಾಡುವ ಅನಾರೋಗ್ಯ, ಮಕ್ಕಳ ಆರೋಗ್ಯದ ಮೇಲಿರಲಿ ಹೆಚ್ಚಿನ ನಿಗಾ

ಬಾಲ್ಯದ ಆರೋಗ್ಯ ಸಮಸ್ಯೆಗಳನ್ನು ಸಾಮಾನ್ಯವಾಗಿ ಎಲ್ಲರೂ ತಾತ್ಕಾಲಿಕ ಸಮಸ್ಯೆ ಎಂದೇ ಪರಿಗಣಿಸುತ್ತಾರೆ. ಆ ಸಮಸ್ಯೆಗಳಿಂದ ಮಕ್ಕಳು ಕಾಲಾನಂತರದಲ್ಲಿ ಗುಣಮುಖರಾಗುತ್ತಾರೆ ಎಂಬ ವಿಶ್ವಾಸ ಇರುತ್ತದೆ. ಆದರೆ ಎಲ್ಲಾ ಸಮಸ್ಯೆಗಳನ್ನೂ ಮೀರಲು ಸಾಧ್ಯವಿಲ್ಲ. ಬಾಲ್ಯದಲ್ಲಿ ಅನುಭವಿಸಿದ ಕೆಲವು ವೈದ್ಯಕೀಯ ಸಮಸ್ಯೆಗಳು ಮುಂದೊಂದು ದಿನ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪ್ರಭಾವ ಬೀರಬಹುದಾಗಿದೆ. ದುರಾದೃಷ್ಟಕರ ವಿಚಾರವೆಂದರೆ ವಯಸ್ಕರಾದಾಗ ಬಂಜೆತನಕ್ಕೂ ಕಾರಣವಾಗಬಹುದು. ಭಾರತದಲ್ಲಿ ಸಂತಾನೋತ್ಪತ್ತಿ ಆರೋಗ್ಯದ ಕುರಿತು ಈ ಜಾಗೃತಿ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ಮುಂದೊಂದು ದಿನ ಸಮಸ್ಯೆ ತಂದೊಡ್ಡಬಹುದಾದ ಬಾಲ್ಯದ ಆರೋಗ್ಯ ಸಮಸ್ಯೆಗಳ ಕುರಿತು ಗಮನಿಸಬೇಕಾಗಿದೆ ಮತ್ತು ಅದನ್ನು ಪರಿಹರಿಸಬೇಕಾಗಿದೆ ಕೂಡ.

ಗದ್ದಕಟ್ಟು ರೋಗ

ಹಲವಾರು ಬಾಲ್ಯದ ಆರೋಗ್ಯ ಸಮಸ್ಯೆಗಳು ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪರಿಣಾಮ ಬೀರಬಹುದು. ಅಂತಹ ಒಂದು ಆರೋಗ್ಯ ಸಮಸ್ಯೆ ಎಂದರೆ ಮಂಪ್ಸ್ ಎಂದು ಕರೆಯಲ್ಪಡುವ ಗದ್ದಕಟ್ಟು ರೋಗ. ಇದು ಸಾಂಕ್ರಾಮಿಕ ವೈರಲ್ ಸೋಂಕಾಗಿದ್ದು, ವಿಶೇಷವಾಗಿ ಯೌವನಾರಂಭದ ನಂತರ ಸಂಭವಿಸಿದರೆ ಒರ್ಕೈಟಿಸ್ ಎಂಬ ವೃಷಣಗಳ ಉರಿಯೂತಕ್ಕೆ ಕಾರಣವಾಗಬಹುದು. ಒರ್ಕೈಟಿಸ್ ವೃಷಣ ರಚನೆಗಳಿಗೆ ಶಾಶ್ವತ ಹಾನಿಯನ್ನುಂಟುಮಾಡಿ ವೀರ್ಯ ಉತ್ಪಾದನೆಯನ್ನು ಕುಂಠಿತಗೊಳಿಸಬಹುದು ಮತ್ತು ಪುರುಷರಲ್ಲಿ ಬಂಜೆತನದ ಅಪಾಯವನ್ನು ಉಂಟುಮಾಡಬಹುದು.

ಹದಿಹರೆಯದ ಬಾಲಕಿಯರಿಗೆ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ಸಮಸ್ಯೆ ಕಾಡಬಹುದು. ಅನಿಯಮಿತ ಋತುಚಕ್ರ, ಮೊಡವೆಗಳು ಅಥವಾ ಅತಿಯಾದ ಕೂದಲು ಬೆಳವಣಿಗೆಯು ಇದರ ಆರಂಭಿಕ ಲಕ್ಷಣಗಳಾಗಿದ್ದು, ಇವು ಮೂಲಭೂತ ಹಾರ್ಮೋನ್ ಅಸಮತೋಲನವನ್ನು ಸೂಚಿಸಬಹುದು. ಈ ಸಮಸ್ಯೆಯನ್ನು ಸೂಕ್ತವಾಗಿ ನಿರ್ವಹಿಸದಿದ್ದರೆ ಪಿಸಿಓಎಸ್ ಅಂಡೋತ್ಪತ್ತಿ ಪ್ರಕ್ರಿಯೆಯನ್ನು (ಓವ್ಯುಲೇಶನ್) ಅಡ್ಡಿಪಡಿಸಬಹುದು ಮತ್ತು ಭವಿಷ್ಯದಲ್ಲಿ ಗರ್ಭಧಾರಣೆಯನ್ನು ಕಷ್ಟಕರಗೊಳಿಸಬಹುದು. ಇದಲ್ಲದೆ, ಥೈರಾಯ್ಡ್ ಕೊರತೆ (ಹೈಪೋಥೈರಾಯ್ಡಿಸಂ) ಮತ್ತು ಕಾಂಜೆನಿಟಲ್ ಅಡ್ರಿನಲ್ ಹೈಪರ್‌ಪ್ಲಾಸಿಯಾದಂತಹ ಅಟೋಇಮ್ಯುನ್ ಅಥವಾ ಎಂಡೋಕ್ರೈನ್ ರೋಗಗಳು, ಹುಡುಗರು ಮತ್ತು ಹುಡುಗಿಯರಿಬ್ಬರ ಸಂತಾನೋತ್ಪತ್ತಿ ಕಾರ್ಯಕ್ಕೆ ಅಗತ್ಯವಾದ ಹಾರ್ಮೋನ್ ಮಟ್ಟದ ಮೇಲೆ ಪರಿಣಾಮ ಬೀರಬಹುದು.

ಕ್ಯಾನ್ಸರ್ ಉಳ್ಳ ಮಕ್ಕಳಿಗೆ ನೀಡುವ ಕ್ಯಾನ್ಸರ್ ಚಿಕಿತ್ಸೆಯ ಪರಿಣಾಮ ಗಮನಿಸಬೇಕಾದ, ಕಾಳಜಿ ತೋರಬೇಕಾದ ಮತ್ತೊಂದು ಪ್ರಮುಖ ವಿಷಯವಾಗಿದೆ. ಈಗ ವೈದ್ಯಕೀಯ ವಿಜ್ಞಾನವು ಪ್ರಗತಿಯಾಗಿದ್ದು, ಬಾಲ್ಯದ ಕ್ಯಾನ್ಸರ್‌ನಿಂದ ರಕ್ಷಣೆ ಒದಗಿಸುತ್ತದೆ. ಆದರೆ ಕೀಮೋಥೆರಪಿ ಮತ್ತು ರೇಡಿಯೊಥೆರಪಿಯಂತಹ ಚಿಕಿತ್ಸೆಗಳು ಅಂಡಾಶಯಗಳು ಅಥವಾ ವೃಷಣಗಳ ಮೇಲೆ ಹಾನಿಯನ್ನುಂಟುಮಾಡಬಹುದು. ಇದು ಡೋಸೇಜ್ ಮತ್ತು ಸಂಬಂಧಿತ ಭಾಗವನ್ನು ಅವಲಂಬಿಸಿರುತ್ತದೆ. ಅದೃಷ್ಟವಶಾತ್ ಇಂತಹ ಚಿಕಿತ್ಸೆಗಳನ್ನು ಪಡೆಯುವ ಮಕ್ಕಳಿಗೆ ಸ್ಪರ್ಮ್ ಕ್ರಯೋಪ್ರಿಸರ್ವೇಶನ್, ಎಗ್ ಫ್ರೀಜಿಂಗ್ ಅಥವಾ ಓವೇರಿಯನ್ ಟಿಶ್ಯೂ ಬ್ಯಾಂಕಿಂಗ್‌ ನಂತಹ ಸಂತಾನೋತ್ಪತ್ತಿ ಸಂರಕ್ಷಣಾ ತಂತ್ರಗಳನ್ನು ಬಳಸಲು ಹೆಚ್ಚಾಗಿ ಪರಿಗಣಿಸಲಾಗುತ್ತಿದೆ.

ಸಂಭಾವ್ಯ ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಹುಟ್ಟಿನಿಂದಲೇ ಬರುವ ಮತ್ತು ಆಮೇಲೆ ಉಂಟಾಗುವ ಸಮಸ್ಯೆಗಳು ಕೂಡ ಕಾರಣವಾಗಬಹುದು. ಹುಡುಗರಿಗೆ ಕ್ಲೈನ್ ಫೆಲ್ಟರ್ ಸಿಂಡ್ರೋಮ್ ಅಥವಾ ಹುಡುಗಿಯರಿಗೆ ಟರ್ನರ್ ಸಿಂಡ್ರೋಮ್ ಸಂತಾನೋತ್ಪತ್ತಿ ಅಂಗಗಳಿಗೆ ತೊಂದರೆ ಉಂಟು ಮಾಡಬಹುದು. ಅದೇ ಥರ ಟ್ಯುಬರ್ ಕ್ಯುಲೋಸಿಸ್‌ನಂತಹ ಸೋಂಕು ಒಂದು ವೇಳೆ ಪೆಲ್ವಿಕ್ ಪ್ರದೇಶಕ್ಕೆ ತೊಂದರೆ ಮಾಡಿದರೆ ಅಥವಾ ತಾರುಣ್ಯದಲ್ಲಿ ಲೈಂಗಿಕವಾಗಿ ಹರಡುವ ಸೋಂಕುಗಳು ಉಂಟಾದರೆ ಅದಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಸಂತಾನೋತ್ಪತ್ತಿ ಅಂಗಾಂಶಗಳಿಗೆ ಹಾನಿ ಉಂಟಾಗುತ್ತದೆ.

ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವುದರಿಂದ ಮತ್ತು ತಡೆಗಟ್ಟುವಿಕೆಯಿಂದ ಈ ಅಪಾಯಗಳನ್ನು ಕಡಿಮೆ ಮಾಡಬಹುದಾಗಿದೆ. ನಿಯಮಿತವಾಗಿ ಬಾಲ್ಯದಲ್ಲಿ ಆರೋಗ್ಯ ತಪಾಸಣೆ ಮಾಡುವುದು, ಸಕಾಲಿಕವಾಗಿ ರೋಗನಿರ್ಣಯ ಮತ್ತು ಸೂಕ್ತ ವೈದ್ಯಕೀಯ ನಿರ್ವಹಣೆ ಮಾಡುವುದರಿಂದ ಅತ್ಯುತ್ತಮ ಫಲಿತಾಂಶಗಳನ್ನು ಹೊಂದಬಹುದು. ಪೋಷಕರು ಮತ್ತು ವೈದ್ಯಕೀಯ ತಜ್ಞರು ಜಾಗರೂಕರಾಗಿರಬೇಕು. ಗದ್ದಕಟ್ಟುರೋಗ, ಮೀಸಲ್ಸ್ ಮತ್ತು ರುಬೆಲ್ಲಾದಂತಹ ರೋಗಗಳಿಗೆ ಮಕ್ಕಳಿಗೆ ಲಸಿಕೆ ಹಾಕಿಸುವುದು ಈ ಕಾಯಿಲೆಗಳನ್ನು ತಡೆಗಟ್ಟುವ ಉತ್ತಮ ಕ್ರಮವಾಗಿದೆ. ಅಸಾಮಾನ್ಯ ಬೆಳವಣಿಗೆಯ ಲಕ್ಷಣಗಳಾದ ವಿಳಂಬಿತ ಯೌವನಾರಂಭ, ಹಾರ್ಮೋನ್ ಬದಲಾವಣೆಗಳು ಅಥವಾ ಅಸಾಮಾನ್ಯ ಬೆಳವಣಿಗೆಯ ಕಡೆಗೆ ಗಮನ ಕೊಡಬೇಕು. ಸಮಸ್ಯೆಯ ಆರಂಭದಲ್ಲಿಯೇ ಪೀಡಿಯಾಟ್ರಿಕ್ ಎಂಡೋಕ್ರಿನಾಲಜಿಸ್ಟ್ ಅಥವಾ ಸ್ತ್ರೀರೋಗತಜ್ಞರನ್ನು ಸಂಪರ್ಕಿಸುವುದು ಬಹಳ ಮುಖ್ಯ.

ಚಿಕ್ಕಂದಿನ ಆರೋಗ್ಯ ಸೇವೆಗಳಲ್ಲಿ ಸಂತಾನೋತ್ಪತ್ತಿ ಆರೋಗ್ಯದ ಕುರಿತು ಅರಿವು ಮೂಡಿಸುವುದು ಸದ್ಯದ ತುರ್ತಾಗಿದೆ. ಈ ಮೂಲಕ ಒಟ್ಟಾರೆ ಆರೋಗ್ಯ ಕಾಪಾಡುವ ಕುರಿತು ಆಲೋಚಿಸಬಹುದಾಗಿದೆ. ಸಂತಾನೋತ್ಪತ್ತಿಯು ಕೇವಲ ವಯಸ್ಕರ ವಿಷಯವಲ್ಲ, ಇದು ಬಾಲ್ಯದಿಂದಲೇ ಹಲವು ಅಂಶಗಳಿಂದ ರೂಪುಗೊಳ್ಳುತ್ತದೆ. ಜಾಗೃತಿ ಮೂಡಿಸುವ ಜೊತೆಗೆ ಎಚ್ಚರಿಕೆಯಿಂದ ಗಮನಿಸುವುದು ಮತ್ತು ಸಕಾಲಿಕ ವೈದ್ಯಕೀಯ ನೆರವಿನ ಮೂಲಕ ಇಂದು ಮಕ್ಕಳ ಆರೋಗ್ಯವನ್ನು ನೋಡಿಕೊಳ್ಳುವುದರಿಂದ ಭವಿಷ್ಯದಲ್ಲಿ ಅವರು ಕುಟುಂಬ ಹೊಂದುವ ಸಾಮರ್ಥ್ಯವನ್ನು ರಕ್ಷಿಸಲು ಸಾಧ್ಯವಿದೆ.

ಲೇಖನ: ಡಾ. ಕುಂಜಾಂಗ್ ಡೋಲ್ಮಾ, ಫರ್ಟಿಲಿಟಿ ಸ್ಪೆಷಲಿಸ್ಟ್, ನೋವಾ ಐವಿಎಫ್ ಫರ್ಟಿಲಿಟಿ, ವೈಟ್‌ಫೀಲ್ಡ್, ಬೆಂಗಳೂರು