HMPV: ಎಚ್‌ಎಂಪಿ ವೈರಸ್‌ಗೂ ಕೋವಿಡ್–19ಗೂ ಇರುವ ಸಾಮ್ಯತೆ ಏನು, ಹ್ಯೂಮನ್ ಮೆಟಾನ್ಯುಮೊ ವೈರಸ್‌ಗೆ ಲಸಿಕೆ ಇದೆಯೇ?
ಕೋವಿಡ್ ಸಾಂಕ್ರಾಮಿಕದ ನೆನಪು ಮಾಸುವ ಮುನ್ನವೇ ಜಗತ್ತನ್ನು ಕಾಡಲು ಮತ್ತೊಂದು ವೈರಸ್ ಸಜ್ಜಾದಂತಿದೆ. ಚೀನಾದಲ್ಲಿ ಸದ್ದು ಮಾಡುತ್ತಿರುವ ಎಚ್‌ಎಂಪಿ ವೈರಸ್ ಬಗ್ಗೆ ಎಲ್ಲೆಡೆ ಚರ್ಚೆ ಶುರುವಾಗಿದೆ. ಈ ವೈರಸ್ ಪ್ರಕರಣಗಳು ಇದೀಗ ಭಾರತದಲ್ಲೂ ವರದಿಯಾಗುತ್ತಿವೆ. ಈ ಹೊತ್ತಿನಲ್ಲಿ ಕೋವಿಡ್‌ಗೂ ಎಚ್‌ಎಂಪಿವಿಗೂ ಏನಾದರೂ ಸಂಬಂಧ ಇದೆಯೇ ಎಂಬುದನ್ನು ತಿಳಿಯೋಣ.
ಕಳೆದ ಐದಾರು ದಿನಗಳಿಂದ ಜಗತ್ತಿನ ಜನರ ನಿದ್ದೆಗೆಡಿಸಿದೆ ಎಚ್‌ಎಂಪಿ ವೈರಸ್. ಉತ್ತರ ಚೀನಾದಲ್ಲಿ ವ್ಯಾಪಕವಾಗಿ ಎಚ್‌ಎಂಪಿ ಸಾಂಕ್ರಾಮಿಕ ಹರಡುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಕೂಡ ಕೋವಿಡ್‌ನಂತೆ ಸಾಂಕ್ರಾಮಿಕ ರೋಗವಾಗಿದ್ದು, ಉಸಿರಾಟದ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಹಾಗಂತ ಈ ಎಚ್‌ಎಂಪಿ ಖಂಡಿತ ಹೊಸ ವೈರಸ್ ಅಲ್ಲ. ಚೀನಾದಲ್ಲಿ ಹರಡಿದ್ದ, ಎಚ್‌ಎಂಪಿ ಪ್ರಕರಣಗಳು ಈಗ ಭಾರತದಲ್ಲೂ ಪತ್ತೆಯಾಗಿದೆ. ಈಗಾಗಲೇ ಭಾರತದಲ್ಲಿ 4 ಎಚ್‌ಎಂಪಿವಿ ಪ್ರಕರಣಗಳು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಎಚ್‌ಎಂಪಿ ವೈರಸ್ 2001ರಲ್ಲಿ ನೆದರ್ಲ್ಯಾಂಡ್ಸ್‌ನಲ್ಲಿ ಪತ್ತೆಯಾಯಿತು. HMPV ಅಥವಾ ಹ್ಯೂಮನ್ ಮೆಟಾನ್ಯುಮೊ ವೈರಸ್ 2001ರಲ್ಲೇ ಪತ್ತೆಯಾಗಿತ್ತು ಎಂಬ ವಿಚಾರವನ್ನು ಅಮೆರಿಕನ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ದೃಢಪಡಿಸಿದೆ. ಈ ಹೊತ್ತಿನಲ್ಲಿ ಜನರಲ್ಲಿ ಕೋವಿಡ್‌ಗೂ ಎಚ್‌ಎಂಪಿ ವೈರಸ್‌ಗೂ ಸಂಬಂಧ ಇದೆಯೇ, ಈ ವೈರಸ್‌ಗೆ ಲಸಿಕೆ ಇದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಇದಕ್ಕೆ ಉತ್ತರ ಇಲ್ಲಿದೆ.
ಹ್ಯೂಮನ್ ಮೆಟಾನ್ಯುಮೊ ವೈರಸ್ (HMPV) ಎಂದರೇನು?
ಹ್ಯೂಮನ್ ಮೆಟಾನ್ಯುಮೊ ವೈರಸ್ (HMPV) ಸಾಮಾನ್ಯ ಉಸಿರಾಟದ ವೈರಸ್ ಆಗಿದ್ದು, ಇದು ಸಾಮಾನ್ಯ ಶೀತ ಸೇರಿದಂತೆ ಶ್ವಾಸನಾಳಗಳ ಸೋಂಕಿಗೆ ಕಾರಣವಾಗಬಹುದು. ಇದು ಸಾಮಾನ್ಯವಾಗಿ ಚಳಿಗಾಲ ಮತ್ತು ವಸಂತಕಾಲದ ಆರಂಭದಲ್ಲಿ ಸಂಭವಿಸುವ ಋತುಮಾನಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಉಸಿರಾಟದ ಸಿನ್ಸಿಟಿಯಲ್ ವೈರಸ್ (RSV) ಮತ್ತು ಜ್ವರದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಒಟ್ಟಾರೆ ಇದು ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟು ಮಾಡುವ ವೈರಸ್ ಆಗಿದೆ.
ಎಚ್‌ಎಂಪಿ ಹೊಸ ವೈರಸ್ ಆಗಿದೆಯೇ?
ಮೊದಲೇ ಹೇಳಿದಂತೆ ಎಚ್‌ಎಂಪಿ ವೈರಲ್ ಹೊಸದಾಗಿ ಕಂಡುಹಿಡಿದಿದ್ದಲ್ಲ. ಇದನ್ನು ಮೊದಲು 2001ರಲ್ಲಿ ಕಂಡುಹಿಡಿಯಲಾಯಿತು ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಹೇಳಿದೆ. ಆದಾಗ್ಯೂ, ಕೆಲವು ಸೆರೋಲಾಜಿಕ್ ಪುರಾವೆಗಳು ಈ ವೈರಸ್ ಕನಿಷ್ಠ 1958 ರಿಂದ ವ್ಯಾಪಕವಾಗಿ ಹರಡಿದೆ ಎಂದು ಸೂಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ಉಸಿರಾಟದ ಸೋಂಕು, ನ್ಯೂಮೋನಿಯಾದಂತಹ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
ಎಚ್‌ಎಂಪಿವಿಗೂ ಕೋವಿಡ್‌ಗೂ ಇರುವ ಸಾಮ್ಯತೆ
ಹೌದು, ಎಚ್‌ಎಂಪಿ ವೈರಸ್‌ಗೂ ಕೋವಿಡ್‌ಗೂ ಹೋಲಿಕೆ ಇದೆ. ಕೊರೊನಾವೈರಸ್ ಅಥವಾ ಕೋವಿಡ್-19 ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಇದು SARS-CoV-2 ವೈರಸ್‌ನಿಂದ ಉಂಟಾಗುತ್ತದೆ. ಎಚ್‌ಎಂಪಿ ವೈರಸ್ ಮತ್ತು SARS-CoV-2 ವೈರಸ್ ನಡುವೆ ಕೆಲವು ಹೋಲಿಕೆಗಳಿವೆ.
- ಎರಡೂ ವೈರಸ್‌ಗಳು ಎಲ್ಲಾ ವಯಸ್ಸಿನ ಜನರಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗೆ ಕಾರಣವಾಗುತ್ತವೆ. ಚಿಕ್ಕ ಮಕ್ಕಳು, ಹಿರಿಯ ವಯಸ್ಕರು ಮತ್ತು ರೋಗನಿರೋಧಕ ಶಕ್ತಿ ದುರ್ಬಲ ಇರುವವರು ಜನರು ಹೆಚ್ಚು ಅಪಾಯಕ್ಕೆ ಒಳಗಾಗುತ್ತಾರೆ.
- ರೋಗಲಕ್ಷಣಗಳು ಸಹ ಹೋಲುತ್ತವೆ. ಕೆಮ್ಮು, ಜ್ವರ, ಮೂಗಿನ ದಟ್ಟಣೆ ಮತ್ತು ಉಸಿರಾಟದ ತೊಂದರೆ ಎಚ್‌ಎಂಪಿ ವೈರಸ್ ರೋಗಲಕ್ಷಣಗಳಾಗಿವೆ. ಕೋವಿಡ್-19 ವೈರಸ್ ಸೋಂಕಿತ ವ್ಯಕ್ತಿಗಳಲ್ಲೂ ಇವೇ ಲಕ್ಷಣಗಳಿದ್ದವು.
- ಎರಡೂ ವೈರಸ್‌ಗಳು ಹೆಚ್ಚಾಗಿ ಸೋಂಕಿತ ವ್ಯಕ್ತಿಯಿಂದ ಇತರರಿಗೆ ಕೆಮ್ಮುವಿಕೆ ಮತ್ತು ಸೀನುವಿಕೆ ಮತ್ತು ನಿಕಟ ವೈಯಕ್ತಿಕ ಸಂಪರ್ಕದಿಂದ ಸ್ರವಿಸುವಿಕೆಯ ಮೂಲಕ ಹರಡುತ್ತವೆ. ವೈರಸ್‌ಗಳನ್ನು ಹೊಂದಿರುವ ವಸ್ತುಗಳು ಅಥವಾ ಮೇಲ್ಮೈಗಳನ್ನು ಸ್ಪರ್ಶಿಸಿದ ನಂತರ ಬಾಯಿ, ಮೂಗು ಅಥವಾ ಕಣ್ಣುಗಳನ್ನು ಸ್ಪರ್ಶಿಸುವ ಮೂಲಕ ಅವು ಹರಡುತ್ತವೆ.
- ಸೈನ್ಸ್ ಡೈರೆಕ್ಟ್ ಪ್ರಕಾರ, COVID-19 ಕಾಲೋಚಿತವಾಗಿ ಕಂಡುಬರುತ್ತದೆ. ಅಂತೆಯೇ, ಎಚ್ಎಂಪಿವಿ ವಿಭಿನ್ನ ಋತುಗಳಲ್ಲಿ ಹರಡುತ್ತದೆ. ಎಚ್‌ಎಂಪಿವಿಯನ್ನು ಅನ್ನು ವರ್ಷವಿಡೀ ಪತ್ತೆ ಹಚ್ಚಬಹುದಾದರೂ, ಚಳಿಗಾಲದ ಅಂತ್ಯದಿಂದ ವಸಂತಕಾಲದ ಆರಂಭದವರೆಗೆ ಸೋಂಕಿನ ಪ್ರಕರಣಗಳಲ್ಲಿ ಏರಿಕೆ ಹೆಚ್ಚಿರುತ್ತದೆ.
ಇದನ್ನೂ ಓದಿ: HMPV: ಕೋವಿಡ್ ಬಳಿಕ ಚೀನಾದಲ್ಲಿ ಹರಡುತ್ತಿದೆ ಮತ್ತೊಂದು ಸಾಂಕ್ರಾಮಿಕ ರೋಗ; ಏನಿದು ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್, ರೋಗಲಕ್ಷಣಗಳೇನು?
HMPV ಹರಡುವುದನ್ನು ತಡೆಯಲು ಲಸಿಕೆ ಇದೆಯೇ?
ಇಲ್ಲ. ಪ್ರಸ್ತುತ ಯಾವುದೇ ಲಸಿಕೆ ಇಲ್ಲ ಮತ್ತು ಆಂಟಿವೈರಲ್ ಚಿಕಿತ್ಸೆಯನ್ನು ಶಿಫಾರಸು ಮಾಡುವುದಿಲ್ಲ. ಆದರೆ ರೋಗಿಗಳು ಈ ಹಂತಗಳನ್ನು ಅನುಸರಿಸುವ ಮೂಲಕ HMPV ಮತ್ತು ಇತರ ಉಸಿರಾಟದ ವೈರಸ್‌ಗಳ ಹರಡುವಿಕೆಯನ್ನು ತಡೆಯಲು ಸಹಾಯ ಮಾಡಬಹುದು:
- ಕನಿಷ್ಠ 20 ಸೆಕೆಂಡುಗಳ ಕಾಲ ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ಕೈಗಳನ್ನು ತೊಳೆಯಿರಿ.
- ಮರೆಯದೇ ಮಾಸ್ಕ್ ಧರಿಸಿ.
- ತೊಳೆಯದ ಕೈಗಳಿಂದ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟುವುದನ್ನು ತಪ್ಪಿಸಿ.
- ಅನಾರೋಗ್ಯ ಪೀಡಿತ ಜನರೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಿ.
- ಶೀತದ ಲಕ್ಷಣಗಳನ್ನು ಹೊಂದಿರುವ ರೋಗಿಗಳು ಕೆಮ್ಮುವಾಗ ಮತ್ತು ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಬೇಕು.
- ಇತರರೊಂದಿಗೆ ವಸ್ತುಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
ಇದನ್ನೂ ಓದಿ: ಚೀನಾದಲ್ಲಿ ಕೋವಿಡ್ ಮಾದರಿ ವೈರಾಣು ಕಾಟ; ಭಾರತದಲ್ಲೂ ಹರಡಬಹುದಾ ಎಚ್‌ಎಂಪಿವಿ, ಆರೋಗ್ಯ ಪರಿಣತರು ಹೇಳುವುದೇನು?