Cervical Cancer: ಭಾರತದ ಮಹಿಳೆಯರಲ್ಲಿ ಹೆಚ್ಚುತ್ತಿದೆ ಗರ್ಭಕಂಠದ ಕ್ಯಾನ್ಸರ್; ಇದಕ್ಕೆ ಕಾರಣವೇನು, ರೋಗಲಕ್ಷಣಗಳೇನು? ಇಲ್ಲಿದೆ ವಿವರ
Cervical Cancer: ಗರ್ಭಕಂಠದ ಕ್ಯಾನ್ಸರ್ ಭಾರತದಲ್ಲಿ ಮಹಿಳೆಯರನ್ನು ಕಾಡುತ್ತಿರುವ ಎರಡನೇ ಅತ್ಯಂತ ಅಪಾಯಕಾರಿ ಕಾಯಿಲೆಯಾಗಿದೆ. ದುರಾದೃಷ್ಟವಶಾತ್, ಈ ಕಾಯಿಲೆ ಇರುವ ಮಹಿಳೆಯರಿಗೆ ಕೊನೆಯ ಹಂತವರೆಗೂ ಅದನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಇದನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು ಬಹಳ ಮುಖ್ಯ.
ಕ್ಯಾನ್ಸರ್ ಎಂಬ ಮಾರಕ ರೋಗ ವಿಶ್ವದಾದ್ಯಂತ ಜನರ ಬದುಕನ್ನು ಹೈರಾಣು ಮಾಡುತ್ತಿದೆ. ಮಹಿಳೆಯರು ಕೂಡ ವಿವಿಧ ರೀತಿಯ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಗರ್ಭಕಂಠದ ಕ್ಯಾನ್ಸರ್ ವಿಶ್ವದ ಮಹಿಳೆಯರಲ್ಲಿ ನಾಲ್ಕನೇ ಸಾಮಾನ್ಯ ಕ್ಯಾನ್ಸರ್ ಆಗಿದೆ. ಭಾರತದಲ್ಲಿ ಅತಿ ಹೆಚ್ಚು ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ನಂತರದ ಸ್ಥಾನವನ್ನು ಗರ್ಭಕಂಠದ ಕ್ಯಾನ್ಸರ್ ಪಡೆದಿದೆ.
ದುಃಖದ ಸಂಗತಿಯೆಂದರೆ ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಅನೇಕ ಮಹಿಳೆಯರಿಗೆ ಕೊನೆಯವರೆಗೂ ರೋಗವನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಕೊನೆಯ ಹಂತದಲ್ಲಿ ವೈದ್ಯರ ಬಳಿಗೆ ಹೋಗುತ್ತಿದ್ದಾರೆ. ಹಾಗಾಗಿ ಇದರಿಂದ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚಾಗಿದೆ.
ಇತರ ಕ್ಯಾನ್ಸರ್‌ಗಳಂತೆ, ಗರ್ಭಕಂಠದ ಕ್ಯಾನ್ಸರ್ ಕೂಡ ದೇಹ ಇತರ ಅಂಗಗಳಿಗೆ ಹರಡುವ ಸಾಧ್ಯತೆ ಇದೆ. ಅಂದರೆ ಆ ಕ್ಯಾನ್ಸರ್ ಕೋಶಗಳು ಗರ್ಭಕಂಠದ ಸಮೀಪ ಇರುವ ಇತರ ಭಾಗಗಳಿಗೂ ಹರಡುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಕ್ಯಾನ್ಸರ್ ಎಚ್‌ಪಿವಿ ಅಥವಾ ಹ್ಯೂಮನ್ ಪ್ಯಾಪಿಲೋಮ ವೈರಸ್‌ನಿಂದ ಉಂಟಾಗುತ್ತದೆ. ಇದು ಲೈಂಗಿಕವಾಗಿ ಹರಡುವ ರೋಗ.
ಗರ್ಭಕಂಠದ ಕ್ಯಾನ್ಸರ್ ಎಂದರೇನು?
ಗರ್ಭಾಶಯದ ಕೆಳ ಭಾಗದಲ್ಲಿನ ಗರ್ಭಕಂಠದ ಸಮೀಪ ಗೆಡ್ಡೆ ಹಾಗೂ ಅಸಹಜ ಬೆಳವಣೆಗೆಗಳು ಉಂಟಾಗುವುದು ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಈ ಕ್ಯಾನ್ಸರ್ ಮುಖ್ಯವಾಗಿ ಎಂಡೊಮೆಟ್ರಿಯಂನಲ್ಲಿ ಪ್ರಾರಂಭವಾಗುತ್ತದೆ. ಇದು ಗರ್ಭಾಶಯದ ಒಳಪದರವಾಗಿದೆ.
ಗರ್ಭಕಂಠದ ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳು
ಹಾರ್ಮೋನ್ ಬದಲಾವಣೆಗಳು: ದೇಹದಲ್ಲಿ ಈಸ್ಟ್ರೋಜೆನ್ ಹಾರ್ಮೋನ್ ಉತ್ಪಾದನೆಯ ಪ್ರಮಾಣ ಹೆಚ್ಚಾಗುವುದು ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಈ ಹಾರ್ಮೋನ್‌ನ ಅತಿಯಾದ ಉತ್ಪಾದನೆಯು ಗರ್ಭಾಶಯದ ಮೇಲೆ ಪರಿಣಾಮ ಬೀರುತ್ತದೆ.
ವಯಸ್ಸು: ಗರ್ಭಕಂಠದ ಕ್ಯಾನ್ಸರ್‌ನ ಅಪಾಯವು ವಯಸ್ಸು ಹೆಚ್ಚಾದಂತೆ ಹೆಚ್ಚಾಗುತ್ತದೆ. 50-70 ವರ್ಷ ವಯಸ್ಸಿನ ಮಹಿಳೆಯರು ಹೆಚ್ಚಾಗಿ ಈ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ.
ಆಯೋಡಿನ್ ಕೊರತೆ: ವಿಶೇಷವಾಗಿ ಅಯೋಡಿನ್ ಕೊರತೆಯಿರುವ ಮಹಿಳೆಯರನ್ನು ಈ ಕ್ಯಾನ್ಸರ್ ಹೆಚ್ಚು ಬಾಧಿಸಬಹುದು.
ಕೆಲವು ಚಿಕಿತ್ಸೆಗಳು: ಹಾರ್ಮೋನ್ ಚಿಕಿತ್ಸೆ ಮತ್ತು ಇತರ ಚಿಕಿತ್ಸೆಗಳು ಗರ್ಭಕಂಠದ ಕ್ಯಾನ್ಸರ್ ತೊಡಕುಗಳನ್ನು ಉಂಟುಮಾಡಬಹುದು.
ಯಾರಿಗೆ ಗರ್ಭಕಂಠದ ಕ್ಯಾನ್ಸರ್ ಬರುವ ಅಪಾಯ ಹೆಚ್ಚು?
- 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ವಿಶೇಷವಾಗಿ, ಋತುಬಂಧದ ನಂತರ ಮಹಿಳೆಯರು ಈ ಕ್ಯಾನ್ಸರ್‌ನ ಅಪಾಯವನ್ನು ಎದುರಿಸಬಹುದು.
- ಬೊಜ್ಜು, ಸ್ಥೂಲಕಾಯ ಮತ್ತು ಮಧುಮೇಹ ಹೊಂದಿರುವ ಮಹಿಳೆಯರು ಈ ಕ್ಯಾನ್ಸರ್‌ಗೆ ಹೆಚ್ಚು ಒಳಗಾಗುತ್ತಾರೆ.
- ಗರ್ಭಕಂಠದ ಕ್ಯಾನ್ಸರ್ ಅನುವಂಶೀಯವಾಗಿ ಕೂಡ ಬರಬಹುದು. ಕುಟುಂಬದ ಇತರರಿಗೆ ಈ ಕ್ಯಾನ್ಸರ್ ಇದ್ದರೆ ಬರುವ ಅಪಾಯ ಹೆಚ್ಚು.
ಗರ್ಭಕಂಠದ ಕ್ಯಾನ್ಸರ್ ಇದೆಯೇ ಎಂದು ತಿಳಿಯೋದು ಹೇಗೆ?
ಗರ್ಭಕಂಠದ ಕ್ಯಾನ್ಸರ್ ಇದೆಯೇ ಎಂದು ತಿಳಿಯಲು ಉತ್ತಮ ಮಾರ್ಗವೆಂದರೆ ಅದರ ರೋಗಲಕ್ಷಣಗಳ ಬಗ್ಗೆ ಗಮನ ಹರಿಸುವುದು. ಕೆಲವು ರೋಗಗಳು ಆರಂಭದಲ್ಲಿ ರೋಗಲಕ್ಷಣಗಳನ್ನು ತೋರಿಸದಿದ್ದರೂ, ಸಮಸ್ಯೆಯು ತುಂಬಾ ಮುಂದುವರಿದಾಗ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ 5 ಲಕ್ಷಣಗಳನ್ನು ನೀವು ಗುರುತಿಸಿದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಯೋನಿಯಲ್ಲಿ ರಕ್ತಸ್ರಾವ: ಯೋನಿಯಲ್ಲಿ ಅಸಹಜ ಅಥವಾ ಅನಿಯಮಿತ ರಕ್ತಸ್ರಾವವು ಗರ್ಭಕಂಠದ ಕ್ಯಾನ್ಸರ್‌ನ ಲಕ್ಷಣವಾಗಿದೆ. ಸಾಮಾನ್ಯವಾಗಿ ಈ ರೋಗಲಕ್ಷಣವು ಎರಡನೇ ಹಂತದಲ್ಲಿ ಕಾಣಿಸಿಕೊಳ್ಳುತ್ತದೆ. ಋತುಚಕ್ರದ ಸಮಯದಲ್ಲಿ ಮಹಿಳೆಯರಿಗೆ ಸಾಮಾನ್ಯವಾಗಿ ರಕ್ತಸ್ರಾವವಾಗುತ್ತದೆ. ಆದರೆ ಮುಟ್ಟಿನ ನಂತರವೂ ರಕ್ತಸ್ರಾವ ಮುಂದುವರೆದರೆ, ವಿಶೇಷವಾಗಿ ಸಂಭೋಗದ ನಂತರ ಅಥವಾ ಋತುಬಂಧದ ನಂತರ ರಕ್ತಸ್ರಾವವಾಗುತ್ತಿದ್ದರೆ ಅದು ಗರ್ಭಕಂಠದ ಕ್ಯಾನ್ಸರ್ ಆಗಿರಬಹುದು. ಇಂತಹ ಸಂದರ್ಭದಲ್ಲಿ ನಿರ್ಲಕ್ಷ್ಯ ಮಾಡದೇ ವೈದ್ಯರಲ್ಲಿ ತೋರಿಸಿ.
ಬೆನ್ನಿನ ಕೆಳ ಭಾಗದಲ್ಲಿ ಸೆಳೆತ: ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ, ಬೆನ್ನಿನ ಕಳೆಭಾಗದಲ್ಲಿ ನೋವು ಅಥವಾ ಸೆಳೆತ ಉಂಟಾಗುತ್ತದೆ. ಆದರೆ ಇದನ್ನು ಹೊರತು ಪಡಿಸಿ ಬೇರೆ ಸಮಯದಲ್ಲೂ ಅತಿಯಾಗಿ ನೋವು ಕಾಣಿಸುತ್ತಿದ್ದರೆ ಇದು ಗರ್ಭಕಂಠದ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಮುಟ್ಟಿನ ದಿನಗಳನ್ನು ಹೊರತು ಪಡಿಸಿ ನೀವು ನೋವು ಅನುಭವಿಸುತ್ತಿದ್ದರೆ ಕೂಡಲೇ ವೈದ್ಯರಲ್ಲಿ ತೋರಿಸಿ.
ಅಸಹಜ ಬಿಳಿ ಮುಟ್ಟು: ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಬಿಳಿ ಮುಟ್ಟು ಅಥವಾ ಯೋನಿ ಡಿಸ್ಚಾರ್ಜ್ ಸಾಮಾನ್ಯವಾಗಿದೆ. ಇದು ಉತ್ತಮ ಸಂತಾನೋತ್ಪತ್ತಿ ಆರೋಗ್ಯದ ಸಂಕೇತವೆಂದು ಪರಿಗಣಿಸಲಾಗಿದೆ. ಆದಾಗ್ಯೂ, ಈ ವಿಸರ್ಜನೆಯು ಪಾರದರ್ಶಕವಾಗಿರುತ್ತದೆ, ಅಂದರೆ ಕೆಟ್ಟ ವಾಸನೆಯಿಂದ ಕೂಡಿರುವುದಿಲ್ಲ. ಆದರೆ ನೀವು ಅಹಿತಕರ ವಾಸನೆಯೊಂದಿಗೆ ಅಸಹಜ ಸ್ರಾವವನ್ನು ಅನುಭವಿಸುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಏಕೆಂದರೆ ಇದು ಗರ್ಭಕಂಠದ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು.
ಅತಿಯಾದ ಆಯಾಸ: ನೀವು ತಿನ್ನದಿದ್ದರೆ ಅಥವಾ ವ್ಯಾಯಾಮ ಮಾಡದಿದ್ದರೆ ದಣಿವು ಅಥವಾ ಬಲಹೀನತೆ ಅನುಭವಿಸುವುದು ಸಹಜ. ಆದರೆ ನೀವು ಯಾವುದೇ ಕಾರಣವಿಲ್ಲದೆ ನಿರಂತರ ಸುಸ್ತನ್ನು ಅನುಭವಿಸಿದರೆ, ವೈದ್ಯರನ್ನು ಸಂಪರ್ಕಿಸಿ. ಇದು ಗರ್ಭಕಂಠದ ಕ್ಯಾನ್ಸರ್‌ನ ಸಂಕೇತವಾಗಿರಬಹುದು.
ಸಂಭೋಗ ಸಮಯದಲ್ಲಿ ನೋವು: ಹಲವು ಮಹಿಳೆಯರು ಸಂಭೋಗದ ಸಮಯದಲ್ಲಿ ನೋವಿನ ಬಗ್ಗೆ ದೂರು ನೀಡುತ್ತಾರೆ. ನೀವು ಮೊದಲ ಬಾರಿಗೆ ಅಥವಾ ಆರಂಭಿಕ ಹಂತದಲ್ಲಿ ಲೈಂಗಿಕ ಸಂಪರ್ಕ ಹೊಂದಿದರೆ ಅಂತಹ ಸಮಯದಲ್ಲಿ ನೋವಾಗುವುದು ಸಹಜ. ಆದರೆ ಪ್ರತಿ ಬಾರಿ ಲೈಂಗಿಕ ಸಂಪರ್ಕ ಮಾಡುವಾಗಲೂ ನೋವಾಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಇದು ಮುಂದುವರಿದ ಗರ್ಭಕಂಠದ ಕ್ಯಾನ್ಸರ್‌ನ ಸಂಕೇತವಾಗಿರಬಹುದು, ಆದ್ದರಿಂದ ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)