HMPV: ಏನಿದು ಎಚ್‌ಎಂಪಿ ವೈರಸ್, ಇದರ ರೋಗಲಕ್ಷಣಗಳೇನು, ಯಾರು ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕು? ಇಲ್ಲಿದೆ ಮಾಹಿತಿ
HMPV virus symptoms: ಚೀನಾದಲ್ಲಿ ಎಚ್‌ಎಂಪಿವಿ ಸಾಂಕ್ರಾಮಿಕ ಹರಡುತ್ತಿರುವ ಸುದ್ದಿಯ ಬೆನ್ನಲ್ಲೇ, ಇದೀಗ ಕರ್ನಾಟಕದಲ್ಲೂ ಎಚ್‌ಎಂಪಿವಿ ಪ್ರಕರಣವೊಂದು ಪತ್ತೆಯಾಗಿರುವುದು ದೃಢವಾಗಿದೆ. ಬೆಂಗಳೂರಿನ 8 ತಿಂಗಳ ಮಗುವಿಗೆ ಎಚ್‌ಎಂಪಿವಿ ವೈರಸ್ ತಗುಲಿದೆ ಎನ್ನಲಾಗುತ್ತಿದೆ. ಏನಿದು ಎಚ್‌ಎಂಪಿ ವೈರಸ್, ಇದರ ರೋಗಲಕ್ಷಣಗಳೇನು, ಯಾರು ಮುನ್ನೆಚ್ಚರಿಕೆ ವಹಿಸಬೇಕು ನೋಡೋಣ.
![ಏನಿದು ಎಚ್‌ಎಂಪಿವಿ ವೈರಸ್ ಏನಿದು ಎಚ್‌ಎಂಪಿವಿ ವೈರಸ್](https://images.hindustantimes.com/kannada/img/2025/01/06/550x309/HMPV_1736148017224_1736148020880.png)
ಜಗತ್ತಿನಾದ್ಯಂತ ಮತ್ತೊಂದು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದು, ಇದೀಗ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಮೊದಲ ಎಚ್‌ಎಂಪಿವಿ ಪ್ರಕರಣ ದಾಖಲಾಗಿರುವುದು ದೃಢವಾಗಿದೆ. ಬೆಂಗಳೂರಿನ ಎಂಟು ತಿಂಗಳ ಮಗುವಿಗೆ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (ಎಚ್‌ಎಂಪಿವಿ) ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಕರಣ ಪತ್ತೆಯಾಗಿದ್ದು, ಆಸ್ಪತ್ರೆಯವರು ಶಂಕಿತ ಸೋಂಕಿನ ಬಗ್ಗೆ ಆರೋಗ್ಯ ಅಧಿಕಾರಿಗಳಿಗೆ ವರದಿ ಮಾಡಿದ್ದಾರೆ. ಇದು ಭಾರತದ ಮೊದಲ ಪ್ರಕರಣವಾಗಿದೆ.
ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಮಕ್ಕಳು ಹಾಗೂ ವಯಸ್ಸಾದವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಏನಿದು ಎಚ್‌ಎಂಪಿವಿ ವೈರಸ್, ಇದರ ರೋಗಲಕ್ಷಣಗಳೇನು, ಯಾರು ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿಯೋಣ.
ಏನಿದು ಎಚ್‌ಎಂಪಿ ವೈರಸ್?
ಹ್ಯೂಮನ್ ಮೆಟಾಪ್ನ್ಯೂಮೊವೈರಸ್ (HMPV) ಒಂದು ಉಸಿರಾಟಕ್ಕೆ ಸಂಬಂಧಿಸಿದ ವೈರಸ್ ಆಗಿದ್ದು, ಇದು ಸಾಮಾನ್ಯವಾಗಿ ಆರಂಭದಲ್ಲಿ ಸೌಮ್ಯದಿಂದ ಮಧ್ಯಮ ತರಹದ ಜ್ವರದಂತಹ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಈ ವೈರಸ್ ಚಳಿಗಾಲದಲ್ಲಿ ಮತ್ತು ವಸಂತಕಾಲದ ಆರಂಭದಲ್ಲಿ ಹೆಚ್ಚು ಕಾಣಿಸುತ್ತದೆ ಎಂದು ಹೇಳಲಾಗುತ್ತಿದೆ. ಪ್ರಾಥಮಿಕವಾಗಿ ಸೋಂಕಿತ ವ್ಯಕ್ತಿಗಳು ಅಥವಾ ಕಲುಷಿತ ಮೇಲ್ಮೈಗಳ ನೇರ ಸಂಪರ್ಕದ ಮೂಲಕ ಹರಡುತ್ತದೆ.
ಕೆಮ್ಮು, ಜ್ವರ, ಗಂಟಲು ನೋವು, ಮೂಗು ಸೋರುವುದು ಅಥವಾ ಉಸಿರು ಕಟ್ಟಿದಂತಾಗುವುದು, ಕೆಲವು ಸಂದರ್ಭಗಳಲ್ಲಿ ಉಸಿರಾಟದ ತೊಂದರೆ ಹಾಗೂ ಉಬ್ಬಸ ಇವು ಸಾಮಾನ್ಯ ರೋಗಲಕ್ಷಣಗಳಾಗಿವೆ. ಚಿಕ್ಕ ಮಕ್ಕಳು, ವಯಸ್ಸಾದವರು ಅಥವಾ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲ ಇರುವವರು, ನ್ಯುಮೋನಿಯಾ ಅಥವಾ ಬ್ರಾಂಕಿಯೋಲೈಟಿಸ್‌ನಂತಹ ಹೆಚ್ಚು ತೀವ್ರವಾದ ಉಸಿರಾಟ ಸಮಸ್ಯೆ ಇರುವವರು ಹೆಚ್ಚು ತೊಂದರೆಗೆ ಒಳಗಾಗಬಹುದು ಹಾಗೂ ಅವರಿಗೆ ಈ ವೈರಸ್ ಅಪಾಯಕಾರಿ ಎನ್ನಲಾಗುತ್ತಿದೆ.
HMPV ಇತರ ಉಸಿರಾಟದ ವೈರಸ್‌ಗಳಾದ RSV (ರೆಸ್ಪಿರೇಟರಿ ಸಿನ್ಸಿಟಿಯಲ್ ವೈರಸ್), ದಡಾರ ಮತ್ತು ಮಂಪ್ಸ್‌ಗಳೊಂದಿಗೆ ಹೋಲಿಕೆ ಇದ್ದರೂ, ಅದಕ್ಕೆ ಲಸಿಕೆ ಇಲ್ಲ ಮತ್ತು ಯಾವುದೇ ಆಂಟಿವೈರಲ್ ಚಿಕಿತ್ಸೆಗಳು ಲಭ್ಯವಿಲ್ಲ. ಹೆಚ್ಚಿನ ಜನರು ವಿಶ್ರಾಂತಿ ಮತ್ತು ಹೈಡ್ರೇಟ್ ಆಗುವ ಮೂಲಕ ಚೇತರಿಸಿಕೊಳ್ಳುತ್ತಾರೆ. ಆದರೆ ತೀವ್ರತರವಾದ ಪ್ರಕರಣಗಳಲ್ಲಿ, ಆಸ್ಪತ್ರೆಗೆ ಸೇರಿಸುವುದು ಮತ್ತು ಆಮ್ಲಜನಕ ಚಿಕಿತ್ಸೆಯಂತಹ ಬೆಂಬಲ ಚಿಕಿತ್ಸೆಗಳು ಅಗತ್ಯವಾಗಬಹುದು.
ಅಮೆರಿಕನ್ ಲಂಗ್ ಅಸೋಸಿಯೇಷನ್ ಎಚ್‌ಎಂಪಿವಿಯನ್ನು ಮಕ್ಕಳಲ್ಲಿ ತೀವ್ರವಾದ ಉಸಿರಾಟದ ಸೋಂಕಿಗೆ ಪ್ರಮುಖ ಕಾರಣವೆಂದು ಗುರುತಿಸಿದೆ. ಈ ವೈರಸ್ ಅನ್ನು 2001ರಲ್ಲಿ ಮೊದಲು ನೆದರ್ಲ್ಯಾಂಡ್ಸ್‌ನಲ್ಲಿ ಸಂಶೋಧಕರು ಕಂಡುಹಿಡಿದರು.
ಎಚ್‌ಎಂಪಿ ವೈರಸ್ ಲಕ್ಷಣಗಳು
ಹ್ಯೂಮನ್ ಮೆಟಾಪ್ನ್ಯೂಮೊವೈರಸ್ (HMPV) ಸೋಂಕುಗಳು ಸಾಮಾನ್ಯವಾಗಿ ಸೌಮ್ಯ ರೋಗಲಕ್ಷಣಗಳೊಂದಿಗೆ ಕಂಡುಬರುತ್ತವೆ. ಇದರ ರೋಗಲಕ್ಷಣಗಳು ಹೀಗಿವೆ.
- ಕೆಮ್ಮು
- ಮೂಗು ಸೋರುವುದು ಅಥವಾ ಮೂಗು ಕಟ್ಟುವುದು
- ಗಂಟಲು ನೋವು
- ಜ್ವರ
ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ಎಚ್‌ಎಂಪಿವಿ ಹೆಚ್ಚು ತೀವ್ರವಾದ ಅನಾರೋಗ್ಯಕ್ಕೆ ಕಾರಣವಾಗಬಹುದು, ಅವುಗಳ ಗುಣಲಕ್ಷಣಗಳು ಹೀಗಿವೆ:
- ಉಬ್ಬಸ
- ಉಸಿರಾಟದ ತೊಂದರೆ
- ಒರಟುತನ
- ನ್ಯುಮೋನಿಯಾ
- ವಯಸ್ಕರಲ್ಲಿ ಆಸ್ತಮಾದ ಉಲ್ಬಣ
1 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ, ವಯಸ್ಸಾದವರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗಳಲ್ಲಿ, ಎಚ್‌ಎಂಪಿವಿ ಹೆಚ್ಚು ಗಂಭೀರವಾದ ಉಸಿರಾಟದ ಕಾಯಿಲೆಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.
ಎಚ್‌ಎಂಪಿವಿ ಯಾರಿಗೆ ಅಪಾಯಕಾರಿ?
ಎಚ್‌ಎಂಪಿವಿ ಸಾಮಾನ್ಯವಾಗಿ ಎಲ್ಲರಿಗೂ ಅಪಾಯಕಾರಿಯೇ ಆದರೂ ಚಿಕ್ಕ ಮಕ್ಕಳು, ವೃದ್ಧರು ಮತ್ತು ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲ ಇರುವ ವ್ಯಕ್ತಿಗಳಿಗೆ ವೈರಸ್ ಹೆಚ್ಚು ಅಪಾಯಕಾರಿ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ವಿಶೇಷವಾಗಿ ರೋಗನಿರೋಧಕ ಶಕ್ತಿ ಕಡಿಮೆ ಇದ್ದರೆ, ಸುಮಾರು ಶೇ 5-16 ಪ್ರಕರಣಗಳು ನ್ಯುಮೋನಿಯಾದಂತಹ ಉಸಿರಾಟದ ಸಮಸ್ಯೆಯನ್ನು ಹೆಚ್ಚಿಸಬಹುದು. ವಯಸ್ಸಾದ ವ್ಯಕ್ತಿಗಳು ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಆರೋಗ್ಯ ಪರಿಸ್ಥಿತಿಗಳನ್ನು ಹೊಂದಿರುವವರು ಹೆಚ್ಚು ತೀವ್ರವಾದ ರೋಗಲಕ್ಷಣಗಳನ್ನು ಅನುಭವಿಸಬಹುದು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
![Whats_app_banner Whats_app_banner](https://kannada.hindustantimes.com/static-content/1y/wBanner.png)