ವೈರಲ್‌ ಫಿವರ್‌ ಆತಂಕ: ಮನೆಯಲ್ಲಿ ನಿಖರವಾಗಿ ಜ್ವರ ಪರೀಕ್ಷೆ ಮಾಡಿಕೊಳ್ಳಲು ಯಾವ ಥರ್ಮೊಮೀಟರ್‌ ಉತ್ತಮ?
ಕನ್ನಡ ಸುದ್ದಿ  /  ಜೀವನಶೈಲಿ  /  ವೈರಲ್‌ ಫಿವರ್‌ ಆತಂಕ: ಮನೆಯಲ್ಲಿ ನಿಖರವಾಗಿ ಜ್ವರ ಪರೀಕ್ಷೆ ಮಾಡಿಕೊಳ್ಳಲು ಯಾವ ಥರ್ಮೊಮೀಟರ್‌ ಉತ್ತಮ?

ವೈರಲ್‌ ಫಿವರ್‌ ಆತಂಕ: ಮನೆಯಲ್ಲಿ ನಿಖರವಾಗಿ ಜ್ವರ ಪರೀಕ್ಷೆ ಮಾಡಿಕೊಳ್ಳಲು ಯಾವ ಥರ್ಮೊಮೀಟರ್‌ ಉತ್ತಮ?

ಕರ್ನಾಟಕದ ವಿವಿಧೆಡೆ ಮಕ್ಕಳು, ಹಿರಿಯರೆನ್ನದೆ ಎಲ್ಲರಿಗೂ ವೈರಲ್‌ ಫಿವರ್‌ ಕಾಡುತ್ತಿದೆ. ವೈರಲ್‌ ಜ್ವರ, ಡೆಂಗ್ಯು ಸೇರಿದಂತೆ ವಿವಿಧ ಜ್ವರಗಳು ಹೆಚ್ಚುತ್ತಿರುವ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಥರ್ಮೋಮೀಟರ್‌ ಇರುವುದು ಅತ್ಯಗತ್ಯ. ಥರ್ಮೋಮೀಟರ್‌ಗಳಲ್ಲಿ ಯಾವೆಲ್ಲ ವಿಧಗಳಿವೆ? ಯಾವುದು ಹೆಚ್ಚು ನಿಖರವಾಗಿ ಫಲಿತಾಂಶ ನೀಡುತ್ತದೆ? ತಿಳಿಯೋಣ.

ವೈರಲ್‌ ಫಿವರ್‌ ಆತಂಕ: ನಿಖರವಾಗಿ ಜ್ವರ ಪರೀಕ್ಷೆ ಮಾಡಿಕೊಳ್ಳಲು ಯಾವ ಥರ್ಮೊಮೀಟರ್‌ ಉತ್ತಮ ಎಂಬ ವಿವರ ತಿಳಿದುಕೊಳ್ಳೋಣ.
ವೈರಲ್‌ ಫಿವರ್‌ ಆತಂಕ: ನಿಖರವಾಗಿ ಜ್ವರ ಪರೀಕ್ಷೆ ಮಾಡಿಕೊಳ್ಳಲು ಯಾವ ಥರ್ಮೊಮೀಟರ್‌ ಉತ್ತಮ ಎಂಬ ವಿವರ ತಿಳಿದುಕೊಳ್ಳೋಣ.

ಕರ್ನಾಟಕದ ಬಹುತೇಕ ಕಡೆ ಜನರು ವೈರಲ್‌ ಫಿವರ್‌ನಿಂದ ಬಳಲುತ್ತಿದ್ದಾರೆ. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಜ್ವರಪೀಡಿತರಾಗುತ್ತಿದ್ದಾರೆ. ಕೆಲವು ಸಮಯದ ಹಿಂದೆ ಹುಷಾರಾಗಿ ಮಲಗಿದ್ದ ಮಗು ಮಧ್ಯ ರಾತ್ರಿ "ಬೆಂಕಿಯಂತೆ ಬಿಸಿಯಾಗಿ" ಜ್ವರದಲ್ಲಿ ಬಳಲುತ್ತಿರುವ ಘಟನೆಗಳು ನಡೆಯುತ್ತಿವೆ. ಶೀತ, ನೆಗಡಿ, ಕೆಮ್ಮು ಹೆಚ್ಚುತ್ತಿದೆ. ವೈರಲ್‌ ಜ್ವರದಿಂದ ಪ್ರತಿದಿನ ಒಳರೋಗಿಯಾಗಿ, ಹೊರರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚುತ್ತಿದ್ದಾರೆ. ಇಂತಹ ಸಮಯದಲ್ಲಿ ಮನೆಯಲ್ಲಿ ಒಬ್ಬರಿಗೆ ಜ್ವರ ಬಂದರೆ ಸಾಕು ಉಳಿದವರಿಗೂ ಹರಡುವ ಭೀತಿ ಉಂಟಾಗುತ್ತಿದೆ. ಈ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ದೇಹದ ಉಷ್ಣತೆ ತಿಳಿಯುವ ಥರ್ಮೋಮೀಟರ್‌ ಇರುವುದು ಅತ್ಯಂತ ಅವಶ್ಯಕ ಎನ್ನಬಹುದು. ಆನ್‌ಲೈನ್‌ನಲ್ಲಿ ಕಡಿಮೆ ದರಕ್ಕೆ ದೊರಕುತ್ತದೆ ಎಂದು ಗುಣಮಟ್ಟವಿಲ್ಲದ ಥರ್ಮೋಮೀಟರ್‌ ಖರೀದಿಸಬೇಡಿ. ಮೆಡಿಕಲ್‌ಗಳಲ್ಲೂ ವಿವಿಧ ಬಗೆಯ ಥರ್ಮೋಮೀಟರ್‌ಗಳು ದೊರಕುತ್ತವೆ. ಥರ್ಮೋಮೀಟರ್‌ ಖರೀದಿಸುವ ಮುನ್ನ ಯಾವ ಥರ್ಮೋಮೀಟರ್‌ನಲ್ಲಿ ಹೆಚ್ಚು ನಿಖರವಾಗಿ ದೇಹದ ಉಷ್ಣಾಂಶ ತಿಳಿದುಕೊಳ್ಳಬಹುದು ಎಂದು ತಿಳಿಯೋಣ.

ಸೂಕ್ತವಾದ ಮೆಡಿಕಲ್‌ ಥರ್ಮೋಮೀಟರ್‌ ಮೂಲಕ ದೇಹದ ಉಷ್ಣಾಂಶ ತಿಳಿದುಕೊಳ್ಳುವುದು ಸಹಾಯಕಾರಿ. ಡಿಜಿಟಲ್‌ ಥರ್ಮೋಮೀಟರ್‌ಗಳು ಹೆಚ್ಚು ನಿಖರವಾಗಿ ದೇಹದ ಉಷ್ಣಾಂಶ ರೀಡ್‌ ಮಾಡುತ್ತದೆ. ಆದರೆ, ಅದು ಉತ್ತಮ ಕಂಪನಿಯಿಂದ ನಿರ್ಮಿಸಿದ ಡಿಜಿಟಲ್‌ ಥರ್ಮೋಮೀಟರ್‌ ಆಗಿರಬೇಕು. ರೆಕ್ಟಲ್‌ ಥರ್ಮೋಮೀಟರ್‌ಗಳನ್ನೂ ಈಗಲೂ ಬಹುತೇಕ ವೈದ್ಯರು ಪರಿಗಣಿಸುತ್ತಾರೆ. ವಿಶೇಷವಾಗಿ, ಮಗು, ಮಕ್ಕಳಿಗೆ ಇದು ಸೂಕ್ತವಾಗಿದೆ. ಓರಲ್‌ ಮತ್ತು ಹಣೆಯ ಥರ್ಮೋಮೀಟರ್‌ಗಳೂ ಉತ್ತಮ.

1. ಡಿಜಿಟಲ್‌ ಥರ್ಮೋಮೀಟರ್‌ಗಳು

ಡಿಜಿಟಲ್‌ ಥರ್ಮೋಮೀಟರ್‌ಗಳು ಹೆಚ್ಚು ಸುಧಾರಿತ ಥರ್ಮೋಮೀಟರ್‌ಗಳಾಗಿವೆ. ಇದನ್ನು ಸರಿಯಾಗಿ ಬಳಸಿದರೆ ಇದು ನಿಖರ ಫಲಿತಾಂಶ ನೀಡುತ್ತದೆ. ಇದನ್ನು ಬಳಸುವುದೂ ಸುಲಭ. ಎಲ್ಲಾ ಕಡೆ ಸುಲಭವಾಗಿ ಖರೀದಿಗೆ ದೊರಕುತ್ತದೆ. ಇದು ಸಾಮಾನ್ಯವಾಗಿ ಹೀಟ್‌ ಸೆನ್ಸಾರ್‌ಗಳ ಮೂಲಕ ಕಾರ್ಯನಿರ್ವಹಿಸುತ್ತವೆ.

2. ಕ್ಲಿನಿಕಲ್‌ ಥರ್ಮೋಮೀಟರ್‌ಗಳು

ಇದನ್ನು ಮೆಡಿಕಲ್‌ ಥರ್ಮೋಮೀಟರ್‌ ಎಂದೂ ಕರೆಯಲಾಗುತ್ತದೆ. ಇದು ಉದ್ದವಾದ ಕೊಳವೆಯ ರೂಪದಲ್ಲಿ ಇರುತ್ತದೆ. ಇದರ ಕೊನೆಗೆ ಪಾದರಸ ಮತ್ತು ಬಲ್ಪ್‌ ಇರುತ್ತದೆ. ಈಗ ಪರಿಸರ ಕಾಪಾಡುವ ಉದ್ದೇಶದಿಂದ ಮತ್ತು ಸುರಕ್ಷತೆಯ ದೃಷ್ಟಿಯಿಂದ ಪಾದರಸ ಥರ್ಮೋಮೀಟರ್‌ ಬದಲು ಡಿಜಿಟಲ್‌ ಥರ್ಮೋಮೀಟರ್‌ ಬಳಕೆಗೆ ಆದ್ಯತೆ ನೀಡಲಾಗುತ್ತದೆ. ಇದನ್ನು ಬಳಸಿದ ಬಳಿಕ ಸ್ಟೆರಿಲೈಜೇಷನ್‌ ಮಾಡಲಾಗುತ್ತದೆ. ಸಾಮಾನ್ಯವಾಗಿ ಮನುಷ್ಯರ ದೇಹದ ಉಷ್ಣತೆಯು 98.6 ಡಿಗ್ರಿ ಫ್ಯಾರನ್‌ಹೀಟ್‌ ಇರುತ್ತದೆ. ದೇಹದ ವಿವಿಧ ಪರಿಸ್ಥಿತಿಗೆ ತಕ್ಕಂತೆ ಉಷ್ಣತೆ 95 ಡಿಗ್ರಿಯಿಂದ 107.6 ಡಿಗ್ರಿವರೆಗೆ ಇರುತ್ತದೆ. ದೇಹದ ಉಷ್ಣತೆಯನ್ನು ನಿಖರವಾಗಿ ಅಳೆಯಲು ಈ ಹಿಂದೆ ಮೆಡಿಕಲ್‌ ಥರ್ಮೋಮೀಟರ್‌ ಬಳಕೆಗೆ ಆದ್ಯತೆ ನೀಡಲಾಗುತ್ತಿತ್ತು.

3. ಎಲೆಕ್ಟ್ರಾನಿಕ್‌ ಇಯರ್‌ ಥರ್ಮೋಮೀಟರ್‌ಗಳು

ಕಿವಿಗೆ ಇಡುವ ಎಲೆಕ್ಟ್ರಾನಿಕ್‌ ಇಯರ್‌ ಥರ್ಮೋಮೀಟರ್‌ಗಳನ್ನೂ ಬಳಸಲಾಗುತ್ತದೆ. ಇದು ಮಕ್ಕಳ ಜ್ವರ ತಿಳಿಯಲು ಹೆಚ್ಚು ಸೂಕ್ತ.

4. ಫೋರ್‌ಹೆಡ್‌ ಥರ್ಮೋಮೀಟರ್‌ಗಳು

ಫೋರ್‌ಹೆಡ್‌ ಅಥವಾ ಹಣೆಯ ಉಷ್ಣಾಂಶ ತಿಳಿಯುವ ಥರ್ಮೋಮIಟರ್‌ಗಳು ಸೂಪರ್‌ಫೇಶಿಯಲ್‌ ಟೆಂಪರಲ್‌ ಆರ್ಟೆರಿ ಟೆಂಪರೇಚರ್‌ ಕ್ಯಾಪ್ಚರ್‌ ಮಾಡುತ್ತವೆ. ಇದು ಇನ್‌ಫ್ರಾರೇಡ್‌ ಸೆನ್ಸಾರ್‌ ಬಳಸುತ್ತವೆ. ಇತರರನ್ನು ಟಚ್‌ ಮಾಡದೆ ಪರೀಕ್ಷಿಸುವ ಕಾರಣದಿಂದ ಕೊರೊನಾ ಬಳಿಕ ಈ ಬಗೆಯ ಥರ್ಮೋಮೀಟರ್‌ಗಳು ಹೆಚ್ಚು ಜನಪ್ರಿಯತೆ ಪಡೆದಿವೆ. ವಿಮಾನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು, ಮಾಲ್‌ಗಳು, ಸ್ಟೇಡಿಯಂಗಳು ಸೇರಿದಂತೆ ವಿವಿಧೆಡೆ ಇದರ ಬಳಕೆ ಹೆಚ್ಚಿದೆ. ಮನೆಯಲ್ಲೂ ಇಂತಹ ಥರ್ಮೋಮೀಟರ್‌ಗಳನ್ನು ಬಳಸಬಹುದು.

ನಿಮ್ಮ ಬಜೆಟ್‌ಗೆ ತಕ್ಕಂತೆ ಮೆಡಿಕಲ್‌ ಅಥವಾ ಆನ್‌ಲೈನ್‌ನಲ್ಲಿ ಥರ್ಮೋಮೀಟರ್‌ಗಳನ್ನು ಖರೀದಿಸಬಹುದು. ಕ್ಲಿನಿಕಲ್‌ ಅಥವಾ ಎಲೆಕ್ಟ್ರಾನಿಕ್‌ ಥರ್ಮೋಮೀಟರ್‌ ಹೊರತುಪಡಿಸಿ ಡಿಜಿಟಲ್‌, ಫೋರ್‌ಹೆಡ್‌ ಥರ್ಮೋಮೀಟರ್‌ಗಳನ್ನು ಮನೆಯಲ್ಲಿ ಬಳಸಲು ಖರೀದಿಸಬಹುದು. ವೈರಲ್‌ ಫಿವರ್‌, ಡೆಂಗೆ ಸೇರಿದಂತೆ ವಿವಿಧ ಜ್ವರಗಳು ಹೆಚ್ಚುತ್ತಿರುವ ಕಾಲದಲ್ಲಿ ಮನೆಯಲ್ಲಿ ಒಂದು ಥರ್ಮೋಮೀಟರ್‌ ಇರಲಿ.

Whats_app_banner