ಅಸಾಧ್ಯವಾದ ತಲೆನೋವಿನಿಂದ ಬಳಲುತ್ತಿದ್ದೀರಾ: ಕಣ್ಣಿನ ಸಮಸ್ಯೆಯೂ ಇರಬಹುದು, ಇದರ ಲಕ್ಷಣಗಳನ್ನು ಗುರುತಿಸಿ
ಬಹುತೇಕರು ತಲೆನೋವಿನಿಂದ ಬಳಲುವುದು ಸಾಮಾನ್ಯ. ಜ್ವರ, ಶೀತ ಇತ್ಯಾದಿಗಳಿಂದ ಬಳಲುತ್ತಿದ್ದರೆ ತಲೆನೋವು ಕಾಡುತ್ತದೆ. ಆದರೆ, ಕೇವಲ ಕಾಲೋಚಿತ ಅಲರ್ಜಿಗಳಿಂದಲೇ ತಲೆನೋವು ಬರುತ್ತದೆ ಎಂದು ಹೇಳಲಾಗುವುದಿಲ್ಲ. ಕಣ್ಣಿನ ಸಮಸ್ಯೆಯಿಂದಲೂ ತಲೆನೋವು ಉಂಟಾಗಬಹುದು. ಈ ಬಗ್ಗೆ ಇಲ್ಲಿದೆ ಮಾಹಿತಿ.
ಕೆಲವರಿಗೆ ತಲೆನೋವು ಹೆಚ್ಚಾಗಿ ಕಾಡುತ್ತಿರುತ್ತದೆ. ಸ್ಪಷ್ಟ ಕಾರಣವಿಲ್ಲದ ನಿರಂತರ ತಲೆನೋವು ನಿಮಗೂ ಕಾಡುತ್ತಿದೆಯಾ? ಆಗಾಗ ಬರುವ ತಲೆನೋವಿಗೆ ಕಾರಣವಾಗುವ ಅಂಶಗಳು ಅನೇಕವಿದೆ. ಹೆಚ್ಚಾಗಿ ಮೊಬೈಲ್ ನೋಡುವುದು, ಲ್ಯಾಪ್‍ಟಾಪ್ (ಕಂಪ್ಯೂಟರ್ ಬಳಕೆ), ನಿದ್ರಾಹೀನತೆ ಸಮಸ್ಯೆ ಇತ್ಯಾದಿ ಕಾರಣಗಳು ತಲೆನೋವಿಗೆ ಕಾರಣವಿರಬಹುದು ಎಂದು ನಾವು ಊಹಿಸುತ್ತೇವೆ. ಕೆಲವರಿಗೆ ಈ ತಲೆನೋವು ಸೌಮ್ಯವಾಗಿದ್ದರೆ. ಕೆಲವರು ತೀವ್ರ ತಲೆನೋವಿನಿಂದ ಬಳಲುತ್ತಾರೆ. ಇದಕ್ಕೆ ಕಾರಣಗಳು ಹಲವಾರು ಇರಬಹುದು. ಇವುಗಳಲ್ಲಿ ಕಣ್ಣಿನ ಆರೋಗ್ಯ ಸಮಸ್ಯೆಯಿಂದಲೂ ತಲೆನೋವು ಉಂಟಾಗಲು ಕಾರಣವಾಗಿರಬಹುದು. ಕಣ್ಣಿನ ಸಮಸ್ಯೆಗಳಿಂದ ಯುವಜನರಲ್ಲಿ ತಲೆನೋವು ಉಂಟಾಗುವುದು ಸಾಮಾನ್ಯ ಕಾರಣಗಳಾಗಿವೆ.
ಕಣ್ಣುಗಳು ನಂಬಲಾಗದಷ್ಟು ಸೂಕ್ಷ್ಮವಾಗಿರುತ್ತವೆ. ಒಟ್ಟಾರೆ ಯೋಗಕ್ಷೇಮದಲ್ಲಿ ಕಣ್ಣುಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ನಿಮಗೆ ಬರುತ್ತಿರುವ ತಲೆನೋವು ಕಣ್ಣಿನ ಸಮಸ್ಯೆಯಿಂದಲೇ ಇರಬಹುದಾ ಎಂದು ತಿಳಿದುಕೊಳ್ಳುವುದು ಹೇಗೆ? ಈ ಲಕ್ಷಣಗಳನ್ನು ಗುರುತಿಸಿ, ತಲೆನೋವಿನಿಂದ ಪರಿಹಾರವನ್ನು ಕಂಡುಕೊಳ್ಳಬಹುದು.
ತಲೆನೋವು ಕಣ್ಣಿನ ಸಮಸ್ಯೆಗಳಿಂದ ಬರುತ್ತದೆ ಎಂದು ಗುರುತಿಸುವುದು ಹೀಗೆ
ಹಣೆಯ ಮೇಲೆ ಕೇಂದ್ರೀಕೃತವಾಗಿರುವ ತಲೆನೋವು: ಈ ರೀತಿಯ ತಲೆನೋವು, ಹಣೆಯ ಮೇಲೆ ಕೇಂದ್ರೀಕೃತವಾಗಿರುತ್ತದೆ. ಕಣ್ಣಿನ ಒತ್ತಡದಿಂದ ಸೈನಸ್ ಸಮಸ್ಯೆಗಳವರೆಗೆ ವಿವಿಧ ಕಾರಣಗಳಿಂದ ಉಂಟಾಗುತ್ತದೆ. ಕಣ್ಣಿನ ಆಯಾಸವು ತಲೆನೋವನ್ನು ಉಂಟುಮಾಡಬಹುದು. ಪ್ರಸ್ತುತ ಡಿಜಿಟಲ್ ಯುಗದಲ್ಲಿ ಫೋನ್ ಅಥವಾ ಲ್ಯಾಪ್‌ಟಾಪ್‌ನಂತಹ ಗ್ಯಾಜೆಟ್‍ಗಳ ಹೆಚ್ಚಿನ ಬಳಕೆಯಿಂದ ಕಣ್ಣಿನ ಸ್ನಾಯುಗಳು ದಣಿಯಬಹುದು. ಅಲ್ಲದೆ ಇದು ಸೆಳೆತವನ್ನು ಉಂಟುಮಾಡಬಹುದು. ಇದರ ಲಕ್ಷಣವೆಂದರೆ ಇದು ಸೌಮ್ಯವಾದ ತಲೆನೋವಿನಿಂದ ಶುರುವಾಗಿ ಮಧ್ಯಮ ಹಣೆಯ ನೋವು ಮತ್ತು ಹುಬ್ಬು ಪ್ರದೇಶದ ಸುತ್ತಲೂ ಭಾರವಾದಂತೆ ಭಾಸವಾಗಬಹುದು. ವೈದ್ಯರ ತಿಳಿಸಿದ ಕನ್ನಡಕವನ್ನು ಧರಿಸಿದರೆ ಇದರಿಂದ ಪರಿಹಾರ ಪಡೆಯಬಹುದು.
ಅಸ್ಪಷ್ಟ ಅಥವಾ ಕಣ್ಣಿನಲ್ಲಿ ನೀರು: ಲ್ಯಾಪ್‍ಟಾಪ್ ಅಥವಾ ಮೊಬೈಲ್ ಫೋನ್ ಹೆಚ್ಚಿನ ಬಳಕೆಯಿಂದ ದೃಷ್ಟಿ ಅಸ್ಪಷ್ಟವಾಗಿ ಕಾಣಬಹುದು. ಕಣ್ಣುಗಳಲ್ಲಿ ನೀರು ತುಂಬಿ ಬರಬಹುದು. ಈ ಲಕ್ಷಣ ಗೋಚರಿಸಿದ ತಕ್ಷಣ ಮೊಬೈಲ್ ಬಳಕೆಯನ್ನು ನಿಲ್ಲಿಸುವುದು ಸೂಕ್ತ. ಕೂಡಲೇ ದೂರದಲ್ಲಿರುವ ಯಾವುದೇ ವಸ್ತುವನ್ನು ನೋಡಿ, ಕಣ್ಣುಗಳಿಗೆ ವಿಶ್ರಾಂತಿ ನೀಡಬೇಕು.
ದಿನದ ಅಂತ್ಯದ ವೇಳೆ ತಲೆನೋವು: ಸುದೀರ್ಘ ಕೆಲಸದ ನಂತರ ದಿನದ ಕೊನೆಯಲ್ಲಿ ಕೆಲವರಿಗೆ ತೀವ್ರ ತಲೆನೋವು ಕಾಡುತ್ತದೆ. ದೀರ್ಘಕಾಲದ ಒತ್ತಡ, ಆಯಾಸ ಮತ್ತು ಜೀವನಶೈಲಿಯಿಂದ ಈ ರೀತಿಯ ತಲೆನೋವಿಗೆ ಕಾರಣವಾಗಬಹುದು. ಕಣ್ಣುಗಳು ತುಂಬಾ ದನಿದಿದ್ದರೆ ಈ ರೀತಿ ತಲೆನೋವು ಕಾಡುತ್ತದೆ. ಹೀಗಾಗಿ ವಿಶ್ರಾಂತಿ ತೆಗೆದುಕೊಳ್ಳುವುದು ಅತ್ಯಗತ್ಯ.
ದೃಷ್ಟಿಗೋಚರದಲ್ಲಿ ತಾತ್ಕಾಲಿಕ ನಷ್ಟದ ಜೊತೆಗೆ ತಲೆನೋವು: ಈ ಲಕ್ಷಣಗಳು ಯಾವಾಗಲೂ ಇರುವುದಿಲ್ಲ. ಕೆಲವೊಂದು ಬಾರಿ ಮಾತ್ರ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಲಕ್ಷಣಗಳೊಂದಿಗೆ ಕಂಡುಬರುವ ತಲೆನೋವು ಹೆಚ್ಚಾಗಿ ಮೈಗ್ರೇನ್ ಆಗಿರುತ್ತದೆ. ಆದರೆ, ಕಣ್ಣಿನ ಸಮಸ್ಯೆಯೊಂದಿಗೆಯೇ ಈ ತಲೆನೋವು ಬರುತ್ತದೆ ಎಂದು ಹೇಳಲಾಗುವುದಿಲ್ಲ. ಅತಿಯಾದ ಮೊಬೈಲ್ ಬಳಕೆ ಅಥವಾ ಪ್ರಕಾಶಮಾನವಾದ ಬೆಳಕಿನಿಂದಲೂ ಈ ರೀತಿ ತಲೆನೋವು ಉಂಟಾಗಬಹುದು. ಇದು ತನ್ನಿಂದತಾನೆ ಸರಿಯಾಗುತ್ತದೆ. ಸಾಕಷ್ಟು ವಿಶ್ರಾಂತಿ ಪಡೆಯುವುದು ಮುಖ್ಯ.
ತಲೆನೋವಿನ ಜೊತೆ ದ್ವಿಗುಣ ದೃಷ್ಟಿ ದೋಷ: ಇವೆರಡನ್ನೂ ಒಟ್ಟಿಗೆ ಅನುಭವಿಸುವುದು ಆತಂಕಕಾರಿಯಾಗಿದೆ. ಇದು ದೃಷ್ಟಿ ಸಮಸ್ಯೆ ಜೊತೆಗೆ ಆರೋಗ್ಯದ ಮೇಲೂ ಏನಾದರೂ ಪರಿಣಾಮ ಬೀರುತ್ತಿದೆ ಎಂದು ಸೂಚಿಸುತ್ತದೆ. ಡಿಪ್ಲೋಪಿಯಾ ಎಂದೂ ಕರೆಯಲ್ಪಡುವ ದ್ವಿಗುಣ ದೃಷ್ಟಿ ದೋಷದ ಜೊತೆಗಿನ ತಲೆನೋವು ವಿವಿಧ ಕಾರಣಗಳಿಂದ ಉಂಟಾಗಬಹುದು. ಚಿಕ್ಕ ಸಮಸ್ಯೆಯಿಂದ ಹೆಚ್ಚು ಗಂಭೀರ ಸಮಸ್ಯೆಗಳವರೆಗೆ ಕಾಡಬಹುದು. ಈ ಸಮಸ್ಯೆ ಕಂಡು ಬಂದಲ್ಲಿ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
ಕ್ಷಣಿಕ ದೃಷ್ಟಿ ನಷ್ಟ: ಕೆಲವು ಸೆಕೆಂಡುಗಳಿಂದ ನಿಮಿಷಗಳವರೆಗೆ ಕೆಲವೊಮ್ಮೆ ದೃಷ್ಟಿ ನಷ್ಟ ಉಂಟಾಗುವ ಸಾಧ್ಯತೆ ಇರುತ್ತವೆ. ಇದು ತಾತ್ಕಾಲಿಕವಾಗಿದ್ದರೂ, ಈ ಸಮಸ್ಯೆಯಿಂದಲೂ ತಲೆನೋವು ಕಾಡಲು ಕಾರಣವಾಗಬಹುದು. ರೆಟಿನಾದ ಅಪಧಮನಿ ಅಥವಾ ಅಭಿಧಮನಿ ಮುಚ್ಚುವಿಕೆಯಂತಹ ಪರಿಸ್ಥಿತಿ, ಕಡಿಮೆ ರಕ್ತದೊತ್ತಡ, ಹೆಚ್ಚಿನ ಮೊಬೈಲ್ ಬಳಕೆ ಇತ್ಯಾದಿಯಿಂದಲೂ ಈ ಸಮಸ್ಯೆ ಕಾಡಬಹುದು.
ತಲೆನೋವಿನ ಜೊತೆಗೆ ಕಣ್ಣು ನೋವು: ತಲೆನೋವಿನ ಜೊತೆಗೆ ತೀವ್ರ ಕಣ್ಣು ನೋವಾಗುವುದು, ಕಣ್ಣು ಕೆಂಪಾಗುವಿಕೆ ಇತ್ಯಾದಿಯನ್ನು ಅನುಭವಿಸಬಹುದು. ಇದು ತಲೆ ಮತ್ತು ಕಣ್ಣುಗಳೆರಡಕ್ಕೂ ಪರಿಣಾಮ ಬೀರುತ್ತದೆ. ಕಣ್ಣಿನ ಆಯಾಸದಿಂದ ಹೆಚ್ಚು ಸಂಕೀರ್ಣ ಪರಿಸ್ಥಿತಿಗಳವರೆಗೆ ಈ ಸಮಸ್ಯೆ ಕಾಡಬಹುದು. ಈ ರೋಗಲಕ್ಷಣಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ತಜ್ಞ ನೇತ್ರಶಾಸ್ತ್ರ ವೈದ್ಯರಿಂದ ಮಾರ್ಗದರ್ಶನ ಪಡೆಯುವುದು ಉತ್ತಮ.
ವಿಭಾಗ