ಸಮಗ್ರ ಮಾಹಿತಿ: ಡಯಾಬಿಟಿಸ್‌ ಎಂದರೇನು? ಮಧುಮೇಹದ ಆರಂಭಿಕ ಲಕ್ಷಣ, ಕಾರಣ, ಪರಿಣಾಮಗಳ ಜತೆ ನಿಯಂತ್ರಣ ಹೇಗೆಂದು ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸಮಗ್ರ ಮಾಹಿತಿ: ಡಯಾಬಿಟಿಸ್‌ ಎಂದರೇನು? ಮಧುಮೇಹದ ಆರಂಭಿಕ ಲಕ್ಷಣ, ಕಾರಣ, ಪರಿಣಾಮಗಳ ಜತೆ ನಿಯಂತ್ರಣ ಹೇಗೆಂದು ತಿಳಿಯಿರಿ

ಸಮಗ್ರ ಮಾಹಿತಿ: ಡಯಾಬಿಟಿಸ್‌ ಎಂದರೇನು? ಮಧುಮೇಹದ ಆರಂಭಿಕ ಲಕ್ಷಣ, ಕಾರಣ, ಪರಿಣಾಮಗಳ ಜತೆ ನಿಯಂತ್ರಣ ಹೇಗೆಂದು ತಿಳಿಯಿರಿ

Diabetes: ಡಯಾಬಿಟಿಸ್ ಅಥವಾ ಮಧುಮೇಹ ಇಂದು ಜಗತ್ತನ್ನು ಕಾಡುತ್ತಿರುವ ಜೀವನಶೈಲಿಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳಲ್ಲಿ ಒಂದು. ಮಧುಮೇಹ ಎಂದರೇನು? ಇದರ ಆರಂಭಿಕ ಲಕ್ಷಣಗಳೇನು? ಡಯಾಬಿಟಿಸ್ ಬರಲು ಕಾರಣವೇನು, ನಿಯಂತ್ರಣ ಹೇಗೆ ಎಂಬಿತ್ಯಾದಿ ಸಮಗ್ರ ವಿವರ ಇಲ್ಲಿದೆ.

ಡಯಾಬಿಟಿಸ್‌ ಕುರಿತ ಸಮಗ್ರ ಮಾಹಿತಿ
ಡಯಾಬಿಟಿಸ್‌ ಕುರಿತ ಸಮಗ್ರ ಮಾಹಿತಿ (PC: Canva)

Diabetes: ಜಗತ್ತಿನಲ್ಲಿ ಅತಿ ವೇಗವಾಗಿ ಹರಡುತ್ತಿರುವ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಮಧುಮೇಹಕ್ಕೆ ಅಗ್ರಸ್ಥಾನವಿದೆ. ಮಧುಮೇಹಿಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಆ ಕಾರಣಕ್ಕೆ ಭಾರತವು ಮಧುಮೇಹಿಗಳ ರಾಜಧಾನಿ ಎಂಬ ಕುಖ್ಯಾತಿಗೂ ಪಾತ್ರವಾಗಿದೆ. ಮಧುಮೇಹ ಎಂದಿಗೂ ಗುಣಪಡಿಸಲಾಗದ, ಆದರೆ ನಿಯಂತ್ರಿಸಲು ಸಾಧ್ಯವಿರುವ ಕಾಯಿಲೆಯಾಗಿದೆ. ಹಾಗಾದರೆ ಡಯಾಬಿಟಿಸ್ ಅಥವಾ ಮಧುಮೇಹ ಎಂದರೇನು? ಈ ಕಾಯಿಲೆ ಬರಲು ಕಾರಣವೇನು? ಮಧುಮೇಹದ ಆರಂಭಿಕ ಲಕ್ಷಣಗಳೇನು? ಇದರ ನಿಯಂತ್ರಣ ಹೇಗೆ ಎನ್ನುವ ಸಮಗ್ರ ವಿವರ ಇಲ್ಲಿದೆ.

ಮಧುಮೇಹ ಎಂದರೇನು?

ಮಧುಮೇಹ ರಕ್ತದಲ್ಲಿನ ಗ್ಲೂಕೋಸ್‌ ಮಟ್ಟ ಏರಿಕೆಯಾದಾಗ ಉಂಟಾಗುವ ಕಾಯಿಲೆ. ಇದನ್ನು ಸಕ್ಕರೆ ಕಾಯಿಲೆ ಎಂದೂ ಕೂಡ ಕರೆಯುತ್ತಾರೆ. ಗ್ಲೂಕೋಸ್‌ ನಮ್ಮ ದೇಹದ ಪ್ರಮುಖ ಶಕ್ತಿಯ ಮೂಲವಾಗಿದೆ. ಇದು ದೇಹದಲ್ಲಿ ಉತ್ಪತ್ತಿಯಾಗುತ್ತದೆ, ಜೊತೆಗೆ ನಾವು ಸೇವಿಸುವ ಆಹಾರಗಳಿಂದಲೂ ದೇಹದಲ್ಲಿ ಗ್ಲೂಕೋಸ್ ಸಂಚಯವಾಗುತ್ತದೆ.

ಇನ್ಸುಲಿನ್ ಎಂಬುದು ಮೇದೋಜ್ಜೀರಕ ಗ್ರಂಥಿಯಿಂದ ಉತ್ಪತ್ತಿಯಾಗುವ ಹಾರ್ಮೋನ್. ಇದು ಗ್ಲೂಕೋಸ್ ಜೀವಕೋಶಗಳಿಗೆ ಪ್ರವೇಶಿಸಿ ಶಕ್ತಿಯಾಗಿ ಬಳಕೆಯಾಗಲು ಸಹಾಯ ಮಾಡುತ್ತದೆ. ಆದರೆ ಮಧುಮೇಹ ಇರುವವರಲ್ಲಿ ದೇಹಕ್ಕೆ ಅಗತ್ಯ ಇರುವಷ್ಟು ಅಥವಾ ಕನಿಷ್ಠ ಮಟ್ಟದಲ್ಲಿ ಅಗತ್ಯವಿರುವಷ್ಟೂ ಇನ್ಸುಲಿನ್ ಉತ್ಪಾದನೆಯಾಗುವುದಿಲ್ಲ. ಇದರಿಂದ ಗ್ಲೂಕೋಸ್ ರಕ್ತದಲ್ಲೇ ಉಳಿದು ಬಿಡುತ್ತದೆ. ಜೀವಕೋಶವನ್ನು ತಲುಪಿ ಶಕ್ತಿ ಬಿಡುಗಡೆ ಮಾಡುವುದಿಲ್ಲ.

ಮಧುಮೇಹವು ಕಣ್ಣುಗಳು, ಮೂತ್ರಪಿಂಡಗಳು, ನರಗಳು ಮತ್ತು ಹೃದಯಕ್ಕೆ ಹಾನಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಮಧುಮೇಹವು ಕೆಲವು ರೀತಿಯ ಕ್ಯಾನ್ಸರ್‌ಗೂ ಕಾರಣವಾಗಬಹುದು. ಹಾಗಾಗಿ ಡಯಾಬಿಟಿಸ್ ಬಾರದಂತೆ ತಡೆಯುವುದು ಹಾಗೂ ನಿಯಂತ್ರಣಕ್ಕೆ ಒತ್ತು ನೀಡುವುದು ಬಹಳ ಮುಖ್ಯ.

ಡಯಾಬಿಟಿಸ್‌ನ ವಿಧಗಳು

ಡಯಾಬಿಟಿಸ್‌ನಲ್ಲಿ 3 ಮುಖ್ಯ ವಿಧಗಳಿವೆ. ಇದರ ಜೊತೆಗೆ ಕೆಲವೊಮ್ಮೆ ಅಪರೂಪದ ಪ್ರಕರಣಗಳಲ್ಲಿ ವಿಭಿನ್ನ ರೀತಿಯ ಡಯಾಬಿಟಿಸ್ ಕೆಲವರಲ್ಲಿ ಕಾಣಿಸಿಕೊಳ್ಳುವುದೂ ಉಂಟು.

ಟೈಪ್ 1 ಡಯಾಬಿಟಿಸ್‌: ಇದು ಹೆಚ್ಚು ಪ್ರಚಲಿತದಲ್ಲಿರುವ ಮಧುಮೇಹದ ವಿಧವಾಗಿದೆ. ಟೈಪ್ 1 ಡಯಾಬಿಟಿಸ್ ಹೊಂದಿರುವವರ ದೇಹವು ಕಡಿಮೆ ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದಿಸುತ್ತದೆ ಅಥವಾ ಕೆಲವೊಮ್ಮೆ ಸಂಪೂರ್ಣ ಇನ್ಸುಲಿನ್ ಉತ್ಪಾದನೆ ನಿಲ್ಲಿಸುತ್ತದೆ. ಸಾಮಾನ್ಯವಾಗಿ ಟೈಪ್ 1 ಮಧುಮೇಹವು ಮಕ್ಕಳು ಮತ್ತು ಯುವಜನರಲ್ಲಿ ಹೆಚ್ಚು ಕಾಣಿಸುತ್ತದೆ. ಆದರೂ ಇದು ಯಾವ ವಯಸ್ಸಿನವರಲ್ಲೂ ಕಾಣಿಸುವ ಸಾಧ್ಯತೆ ಇದೆ. ಟೈಪ್ 1 ಮಧುಮೇಹ ಇರುವವರು ಪ್ರತಿನಿತ್ಯ ಇನ್ಸುಲಿನ್ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯವಾಗಬಹುದು.

ಟೈಪ್ 2 ಮಧುಮೇಹ: ಟೈಪ್ 2 ಮಧುಮೇಹ ಹೊಂದಿರುವವರ ಜೀವಕೋಶಗಳು ಇನ್ಸುಲಿನ್‌ ಅನ್ನು ಸರಿಯಾಗಿ ಬಳಸಿಕೊಳ್ಳುವುದಿಲ್ಲ. ಮೇದೋಜೀರಕ ಗ್ರಂಥಿಯು ಇನ್ಸುಲಿನ್ ಉತ್ಪತ್ತಿ ಮಾಡುತ್ತಿದ್ದರೂ ಸಹ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಸಾಮಾನ್ಯ ಸ್ಥಿತಿಯಲ್ಲಿ ಇರಿಸಲು ಅಗತ್ಯ ಇರುವಷ್ಟು ಗ್ಲುಕೋಸ್ ಉತ್ಪತ್ತಿಯಾಗುತ್ತಿರುವುದಿಲ್ಲ. ಇದು ಅತ್ಯಂತ ಸಾಮಾನ್ಯ ಮಧುಮೇಹದ ವಿಧವಾಗಿದೆ. ಅಧಿಕ ತೂಕ, ಬೊಜ್ಜು ಹಾಗೂ ಕುಟುಂಬದ ಹಿರಿಯಲ್ಲಿ ಮಧುಮೇಹ ಇದ್ದರೆ ಇಂಥ ಮಧುಮೇಹ ಬರುವ ಸಾಧ್ಯತೆ ಹೆಚ್ಚು. ಯಾವುದೇ ವಯಸ್ಸಿನಲ್ಲಿ ಅಂದರೆ ಬಾಲ್ಯದಲ್ಲೂ ಕೂಡ ಟೈಪ್ 2 ಮಧುಮೇಹ ಕಾಣಿಸಬಹುದು.

ಗರ್ಭಾವಸ್ಥೆಯ ಮಧುಮೇಹ: ಇತ್ತೀಚಿನ ದಿನಗಳಲ್ಲಿ ಇದು ಸಾಮಾನ್ಯ ಎಂಬಂತಾಗಿದೆ. ಇದು ವಿಶೇಷವಾಗಿ ಗರ್ಭಿಣಿಯರಲ್ಲಿ ಮಾತ್ರ ಕಾಣಿಸುವ ಮಧುಮೇಹದ ವಿಧವಾಗಿದೆ. ಹಲವು ಪ್ರಕರಣಗಳಲ್ಲಿ ಮಗುವಿನ ಜನನದ ನಂತರ ಈ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಆದರೂ ಕೆಲವೊಂದು ಸಂದರ್ಭಗಳಲ್ಲಿ ಗರ್ಭಾವಸ್ಥೆಯ ಮಧುಮೇಹ ಹೊಂದಿದವರಿಗೆ ನಂತರದ ದಿನಗಳಲ್ಲಿ ಅದು ಟೈಪ್ 2 ಮಧುಮೇಹವಾಗಿ ಮಾರ್ಪಾಡಾಗುವ ಸಾಧ್ಯತೆ ಇದೆ.

ಮೊನೊಜೆನಿಕ್ ಡಯಾಬಿಟಿಸ್: ಮೊನೊಜೆನಿಕ್ ಡಯಾಬಿಟಿಸ್ ಎನ್ನುವುದು ಬಹಳ ಅಪರೂಪದ ಮಧುಮೇಹದ ವಿಧವಾಗಿದೆ. ಇದನ್ನು ಟೈಪ್ 3ಸಿ ಡಯಾಬಿಟಿಸ್ ಎಂದೂ ಕರೆಯುತ್ತಾರೆ. ವಂಶವಾಹಿಯ ಒಂದು ತಂತುವಿನಲ್ಲಿ (ಒಂದೇ ಜೀನ್‌ನಲ್ಲಿನ) ಆಗುವ ಬದಲಾವಣೆಯು ಈ ಮಧುಮೇಹಕ್ಕೆ ಕಾರಣವಾಗಬಹುದು. ಮೇದೋಜೀರಕ ಗ್ರಂಥಿಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾಗುವುದು, ಸಿಸ್ಟಿಕ್ ಫೈಬ್ರೋಸಿಸ್ NIH ಬಾಹ್ಯ ಲಿಂಕ್ ಅಥವಾ ಪ್ಯಾಂಕ್ರಿಯಾಟೈಟಿಸ್‌ನಂಥ ಸಮಸ್ಯೆಗಳಿಂದಾಗಿ ಮೇದೋಜೀರಕ ಗ್ರಂಥಿಗೆ ಹಾನಿಯಾಗುವುದರಿಂದ ಈ ಮಧುಮೇಹ ಬರಬಹುದು.

ಮೋಡಿ (MODY): ಇದು ಬಹಳ ಅಪರೂಪದಲ್ಲಿ ಅಪರೂಪ ಎನ್ನಿಸುವ ಮಧುಮೇಹದ ವಿಧವಾಗಿದೆ. ಅನುವಂಶೀಯ ಕಾರಣದಿಂದ ಈ ಮಧುಮೇಹ ಕಾಣಿಸಬಹುದು. ಇದು ಬಾಲ್ಯದಲ್ಲಿ ಅಥವಾ ಪ್ರೌಢಾವಸ್ಥೆಯ ಆರಂಭದಲ್ಲಿ ಸಾಮಾನ್ಯವಾಗಿ 25 ವರ್ಷಕ್ಕಿಂತ ಮೊದಲೇ ಕಾಣಿಸುತ್ತದೆ.

ನವಜಾತ ಶಿಶುಗಳ ಮಧುಮೇಹ (Neonatal Diabetes): ಆರು ತಿಂಗಳೊಳಗಿನ ಶಿಶುಗಳಲ್ಲಿ ಕಾಣಿಸುವ ಅಪರೂಪದ ಮಧುಮೇಹ.

ವಯಸ್ಕರಲ್ಲಿ ಸುಪ್ತ ಆಟೋಇಮ್ಯೂನ್ ಮಧುಮೇಹ (LADA): ಟೈಪ್ 1 ಮಧುಮೇಹವನ್ನು ಹೋಲುವ ಒಂದು ರೀತಿಯ ಮಧುಮೇಹ, ಆದರೆ ಪ್ರೌಢಾವಸ್ಥೆಯಲ್ಲಿ ಹೆಚ್ಚು ನಿಧಾನವಾಗಿ ಅಭಿವೃದ್ಧಿಯಾಗುತ್ತದೆ. ಇದನ್ನು ಹೆಚ್ಚಾಗಿ ಟೈಪ್ 2 ಎಂದು ತಪ್ಪಾಗಿ ನಿರ್ಣಯಿಸಲಾಗುತ್ತದೆ. ನಂತರ ಇದು ಗಂಭೀರ ಸ್ವರೂಪಕ್ಕೆ ತಿರುಗಬಹುದು.

ವೊಲ್ಫ್ರಾಮ್ ಸಿಂಡ್ರೋಮ್: ಮಧುಮೇಹ, ಮಧುಮೇಹ ಇನ್ಸಿಪಿಡಸ್, ಆಪ್ಟಿಕ್ ಕ್ಷೀಣತೆ ಮತ್ತು ಕಿವುಡುತನಕ್ಕೆ ಕಾರಣವಾಗುವ ಅಪರೂಪದ ಅನುವಂಶಿಕ ಅಸ್ವಸ್ಥತೆ.

ಆಲ್‌ಸ್ಟ್ರೋಮ್ ಸಿಂಡ್ರೋಮ್: ಮಧುಮೇಹ, ಕುರುಡುತನ, ಕಿವುಡುತನ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಅಪರೂಪದ ಅನುವಂಶಿಕ ಕಾಯಿಲೆ.

ಏನಿದು ಪ್ರಿ ಡಯಾಬಿಟಿಸ್?

ಇದು ಮಧುಮೇಹ ಪೂರ್ಣಪ್ರಮಾಣದಲ್ಲಿ ಕಾಣಿಸಿಕೊಳ್ಳುವುದಕ್ಕೂ ಮೊದಲಿನ ಸ್ಥಿತಿಯಾಗಿದೆ. ಮಧುಮೇಹ ಪೂರ್ವ ಸ್ಥಿತಿ ಇರುವ ಜನರ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಆದರೆ ಟೈಪ್ 2 ಮಧುಮೇಹ ಇದರಿಂದ ಪತ್ತೆ ಹಚ್ಚುವುದು ಸಾಧ್ಯವಾಗದೇ ಇರಬಹುದು. ಪ್ರಿ ಡಯಾಬಿಟಿಸ್ ಇರುವವರಿಗೆ ಭವಿಷ್ಯದಲ್ಲಿ ಟೈಪ್ 2 ಡಯಾಬಿಟಿಸ್ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೇ ಇವರಿಗೆ ಹೃದ್ರೋಗ ಬರುವ ಸಾಧ್ಯತೆಯೂ ಹೆಚ್ಚು.

ಮಧುಮೇಹಕ್ಕೆ ಕಾರಣಗಳೇನು?

ಮಧುಮೇಹ ಪ್ರಮುಖ ಕಾರಣ ನಾವು ಅನುಸರಿಸುತ್ತಿರುವ ಜೀವನಶೈಲಿ. ಅತಿಯಾದ ಒತ್ತಡವೂ ಮಧುಮೇಹಕ್ಕೆ ಮೂಲವಾಗಬಹುದು. ಅನುವಂಶೀಯ ಕಾರಣಗಳಿಂದಲೂ ಮಧುಮೇಹ ಕಾಣಿಸುತ್ತದೆ. ಬೊಜ್ಜು, ಅಧಿಕ ತೂಕ, ದೈಹಿಕ ಚಟುವಟಿಕೆಯ ಕೊರತೆ, ಕೆಲವೊಂದು ಆರೋಗ್ಯ ಸಮಸ್ಯೆಗಳು ಮಧುಮೇಹ ಬರಲು ಕಾರಣವಾಗಬಹುದು.

ಮಧುಮೇಹದ ಆರಂಭಿಕ ಲಕ್ಷಣಗಳು

ಮಧುಮೇಹದ ಲಕ್ಷಣಗಳು ಪುರುಷರು ಹಾಗೂ ಮಹಿಳೆಯರಲ್ಲಿ ಕೆಲವೊಮ್ಮೆ ಭಿನ್ನವಾಗಿರುವ ಸಾಧ್ಯತೆ ಇದೆ. ಅದಾಗ್ಯೂ ಕೆಲವು ಸಾಮಾನ್ಯ ಆರಂಭಿಕ ಲಕ್ಷಣಗಳಿರುತ್ತವೆ. ಇವು ಯಾವುವು ಎಂಬುದನ್ನು ನೋಡಿ.

ಪದೇಪದೆ ಮೂತ್ರ ವಿಸರ್ಜನೆ: ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದರೆ ಮೂತ್ರಪಿಂಡಗಳು ಹೆಚ್ಚು ಕೆಲಸ ಮಾಡುತ್ತವೆ, ಇದು ಮೂತ್ರದ ಉತ್ಪಾದನೆ ಹೆಚ್ಚಾಗಲು ಮತ್ತು ರಾತ್ರಿ ವೇಳೆ ಪದೇ ಪದೇ ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ.

ಅತಿಯಾದ ಬಾಯಾರಿಕೆ: ಮೂತ್ರದ ಮೂಲಕ ದೇಹವು ಹೆಚ್ಚುವರಿ ಸಕ್ಕರೆಯನ್ನು ಹೊರಹಾಕಲು ಪ್ರಯತ್ನಿಸಿದಾಗ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಇದು ಬಾಯಾರಿಕೆಯನ್ನು ಹೆಚ್ಚಿಸುತ್ತದೆ.

ಇದ್ದಕ್ಕಿದ್ದಂತೆ ತೂಕ ಕಡಿಮೆಯಾಗುವುದು: ಕೆಲವು ಸಂದರ್ಭಗಳಲ್ಲಿ, ವಿಶೇಷವಾಗಿ ಟೈಪ್ 1 ಮಧುಮೇಹ ಹೊಂದಿದ್ದರೆ ದೇಹವು ಗ್ಲೂಕೋಸ್ ಅನ್ನು ಸರಿಯಾಗಿ ಬಳಸಲು ಸಾಧ್ಯವಾಗದಿದ್ದಾಗ, ಶಕ್ತಿಗಾಗಿ ಕೊಬ್ಬು ಮತ್ತು ಸ್ನಾಯುಗಳ ಮೇಲೆ ಪರಿಣಾಮ ಬೀರಬಹುದು. ಇದರ ಪರಿಣಾಮವಾಗಿ ಹಸಿವು ಹೆಚ್ಚಾದರೂ ತೂಕ ನಷ್ಟವಾಗುತ್ತದೆ.

ಅತಿಯಾದ ಹಸಿವು: ದೇಹವು ಗ್ಲೂಕೋಸ್ ಅನ್ನು ಬಳಸಲು ಪ್ರಯತ್ನಿಸುತ್ತಿದ್ದರೂ, ಜೀವಕೋಶಗಳು ಅದನ್ನು ಪರಿಣಾಮಕಾರಿಯಾಗಿ ಪ್ರವೇಶಿಸಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಎಷ್ಟು ತಿಂದರೂ ನಿರಂತರ ಹಸಿವಾಗುತ್ತಿರುತ್ತದೆ.

ದೃಷ್ಟಿ ಮಸುಕಾಗುವುದು: ರಕ್ತದಲ್ಲಿನ ಸಕ್ಕರೆ ಮಟ್ಟವು ಅಧಿಕವಾಗಿದ್ದರೆ ಕಣ್ಣಿನ ಮಸೂರದ ಮೇಲೆ ಪರಿಣಾಮ ಬೀರಿ, ದೃಷ್ಟಿ ಮಸುಕಾಗುತ್ತದೆ.

ಆಯಾಸ: ಶರೀರವು ಶಕ್ತಿಗಾಗಿ ಗ್ಲೂಕೋಸ್ ಅನ್ನು ಬಳಸಲು ಅಸಮರ್ಥವಾಗಿದ್ದರೆ, ಅದು ನಿರಂತರ ಆಯಾಸ, ಸುಸ್ತಿಗೆ ಕಾರಣವಾಗಬಹುದು.

ಗಾಯಗಳು ಬೇಗ ಗುಣವಾಗದು: ರಕ್ತದಲ್ಲಿನ ಸಕ್ಕರೆ ಮಟ್ಟವು ರಕ್ತ ಪರಿಚಲನೆಯನ್ನು ದುರ್ಬಲಗೊಳಿಸುತ್ತದೆ. ಇದರಿಂದಾಗಿ ಗಾಯಗಳು ಗುಣವಾಗುವುದು ತಡವಾಗಬಹುದು.

ಕೈ ಅಥವಾ ಕಾಲುಗಳಲ್ಲಿ ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ: ನರಗಳ ಹಾನಿ (ನರರೋಗ) ಕೈಕಾಲುಗಳಲ್ಲಿ ಮರಗಟ್ಟುವಿಕೆ, ಜುಮ್ಮೆನಿಸುವಿಕೆ ಅಥವಾ ನೋವಿಗೂ ಕಾರಣವಾಗಬಹುದು.

ಪದೇಪದೆ ಸೋಂಕು ಕಾಣಿಸುವುದು: ಮಧುಮೇಹವು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ, ಇದರಿಂದಾಗಿ ಮೂತ್ರನಾಳದ ಸೋಂಕುಗಳು, ಚರ್ಮದ ಸೋಂಕುಗಳು ಮತ್ತು ಯೀಸ್ಟ್ ಸೋಂಕುಗಳಂತಹ ಸಮಸ್ಯೆಗಳು ಪದೇ ಪದೇ ಕಾಣಿಸಬಹುದು.

ಚರ್ಮ ಕಪ್ಪಾಗುವುದು: ಚರ್ಮದ ಮೇಲೆ ವಿಶೇಷವಾಗಿ ಕುತ್ತಿಗೆ ಮತ್ತು ಕಂಕುಳಿನ ಸುತ್ತ ಕಪ್ಪಾದ ತೇಪೆ ಉಂಟಾಗುವುದು ಇನ್ಸುಲಿನ್ ಪ್ರತಿರೋಧದ ಸಂಕೇತವಾಗಿರಬಹುದು. ಇದು ಟೈಪ್‌ 2 ಮಧುಮೇಹದ ಆರಂಭಿಕ ಲಕ್ಷಣವಾಗಿರುತ್ತದೆ.

ಮಧುಮೇಹ ನಿಯಂತ್ರಣ ಹೇಗೆ

ಮಧುಮೇಹವು ಕಾಣಿಸಿಕೊಂಡ ಮೇಲೆ ಅದನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಹೆಚ್ಚು ಗಮನ ಕೊಡಬೇಕು. ಅಗತ್ಯಕ್ಕೆ ತಕ್ಕಂತೆ ಮಧುಮೇಹಿಗಳು ಮೊದಲು ತಮ್ಮ ಜೀವನಶೈಲಿ ಬದಲಾವಣೆಯ ಮೇಲೆ ಗಮನ ಹರಿಸಬೇಕು. ಆರೋಗ್ಯ ಆಹಾರ ಸೇವನೆ, ವಾಕಿಂಗ್‌, ರನ್ನಿಂಗ್, ಯೋಗದಂತಹ ದೈಹಿಕ ಚಟುವಟಿಕೆಯನ್ನು ತಪ್ಪದೇ ಮಾಡುವುದು, ವೈದ್ಯರು ಸೂಚಿಸಿರುವ ಔಷಧಿಯನ್ನು ತಪ್ಪದೇ ಸೇವಿಸುವುದು ಈ ಎಲ್ಲದರ ಜೊತೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣದ ಮೇಲೆ ನಿರಂತರ ನಿಗಾ ವಹಿಸುವುದು ಕೂಡ ಮುಖ್ಯವಾಗುತ್ತದೆ. ಇದರೊಂದಿಗೆ ತೂಕ ನಿರ್ವಹಣೆ ಮಾಡುವುದು, ಒತ್ತಡ ನಿರ್ವಹಣೆ ಹಾಗೂ ಧೂಮಪಾನ ನಿಷೇಧ, ಮದ್ಯಪಾನ ಸೇವನೆಯನ್ನು ಮಿತಿಗೊಳಿಸುವುದು ಈ ಎಲ್ಲವೂ ಮಧುಮೇಹ ನಿಯಂತ್ರಣಕ್ಕೆ ಬರಲು ಪ್ರಮುಖ ಅಂಶವಾಗಿದೆ.

2050ರ ವೇಳೆಗೆ ವಿಶ್ವದಾದ್ಯಂತ 1.3 ಶತಕೋಟಿಗೂ ಹೆಚ್ಚು ಜನರು ಮಧುಮೇಹದಿಂದ ಬಳಲುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದ ತಿಳಿಸಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರೆಗೂ ದಿನೇ ದಿನೇ ಮಧುಮೇಹ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಚಾರ. ಈ ಸಮಯದಲ್ಲಿ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ನಮ್ಮನ್ನು ನಾವು ಮಧುಮೇಹದಿಂದ ದೂರವಿಡಲು ಅಗತ್ಯವಾಗಿ ಅನುಸರಿಸುವ ಕ್ರಮಗಳ ಮೇಲೆ ಗಮನಹರಿಸಬೇಕು. ಜೀವನಶೈಲಿಯ ಮೇಲೆ ಹೆಚ್ಚು ನಿಗಾ ವಹಿಸುವುದರಿಂದ ಮಧುಮೇಹದಂತಹ ಗಂಭೀರ ಸಮಸ್ಯೆಯಿಂದ ಪಾರಾಗಬಹುದು. ಮಧುಮೇಹವು ಒಮ್ಮೆ ಬಂದ ನಂತರ ಅದನ್ನು ಗುಣಪಡಿಸಲು ಸಾಧ್ಯವಾಗದೇ ಇರುವ ಕಾರಣ ಅದನ್ನು ಬಾರದಂತೆ ತಡೆಯುವುದು ಬಹಳ ಮುಖ್ಯವಾಗುತ್ತದೆ.

ರಕ್ತದಲ್ಲಿ ಸಕ್ಕರೆ ಪ್ರಮಾಣ ಎಷ್ಟಿರಬೇಕು

ಆಹಾರ ಸೇವನೆಗೆ ಮೊದಲು ಟೆಸ್ಟ್ ಮಾಡಿದಾಗ 80-100 mg/dL ಸಕ್ಕರೆ ಮಟ್ಟ ಇದ್ದರೆ ಅದು ಸಾಮಾನ್ಯ ಸ್ಥಿತಿ. 100 ರಿಂದ 125 mg/dL ಇದ್ದರೆ ಇದು 'ಪ್ರಿಡಯಾಬಿಟಿಕ್ಸ್'. 126 mg/dL ಅಥವಾ ಅದಕ್ಕಿಂತಲೂ ಹೆಚ್ಚಿದ್ದರೆ ಸಕ್ಕರೆ ಪ್ರಮಾಣ ಹೆಚ್ಚಾಗಿದೆ ಎಂದು ಅರ್ಥ.

ಆಹಾರ ಸೇವನೆಯ 2-3 ಗಂಟೆಗಳ ನಂತರ ಟೆಸ್ಟ್ ಮಾಡಿದಾಗ 120-140 mg/dL ಇದ್ದರೆ ಅದು ಸಾಮಾನ್ಯ ಸ್ಥಿತಿ. 140 ರಿಂದ 160 mg/dL ಇದ್ದರೆ ಅದು 'ಪ್ರಿಡಯಾಬಿಟಿಕ್ಸ್'. 200 mg/dL ಗೂ ಅಧಿಕವಿದ್ದರೆ ಸಕ್ಕರೆ ಪ್ರಮಾಣ ಹೆಚ್ಚಾಗಿದೆ ಎಂದು ಅರ್ಥ.

ಮನೆಗಳಲ್ಲಿ ಪರೀಕ್ಷೆ ಮಾಡಿಕೊಳ್ಳುವಾಗ ಸ್ಟ್ರಿಪ್‌ನ ಗುಣಮಟ್ಟ ಮತ್ತು ಉಪಕರಣದ ಗುಣಮಟ್ಟ ಆಧರಿಸಿ ಫಲಿತಾಂಶದಲ್ಲಿ ವ್ಯತ್ಯಾಸ ಆಗಬಹುದು. ಅನುಮಾನವಿದ್ದಾಗ ತಜ್ಞವೈದ್ಯರ ಮಾರ್ಗದರ್ಶನದಲ್ಲಿ ಉತ್ತಮ ಉಪಕರಣಗಳಿರುವ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.

ಬರಹ: ರೇಷ್ಮಾ ಶೆಟ್ಟಿ

(ಗಮನಿಸಿ: ಡಯಾಬಿಟಿಸ್ ಕುರಿತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿದ ಬರಹ ಇದು. ಓದುಗರಿಗೆ ಸಾಮಾನ್ಯ ಮಾಹಿತಿ ಒದಗಿಸುವ ಉದ್ದೇಶದಿಂದ ಪ್ರಕಟಿಸಲಾಗಿದೆ. ರೋಗ ಲಕ್ಷಣಗಳು ಮತ್ತು ಚಿಕಿತ್ಸೆ ವ್ಯಕ್ತಿಯಿಂದ ವ್ಯಕ್ತಿಗೆ ಪ್ರತ್ಯೇಕವಾಗಿರುತ್ತದೆ. ಸ್ವಯಂ ವೈದ್ಯ ಅಪಾಯಕಾರಿ. ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.)

ಸಕ್ಕರೆ ಕಾಯಿಲೆ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಡಯಾಬಿಟಿಸ್ ಕುರಿತು ವಿಸ್ತೃತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ವಿಶ್ವ ಆರೋಗ್ಯ ಸಂಸ್ಥೆಯ ಡಯಾಬಿಟಿಸ್‌ ಮಾಹಿತಿ ಪುಟಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಡಯಾಬಿಟಿಕ್ ಅಸೋಸಿಯೇಷನ್ ಆಫ್ ಇಂಡಿಯಾದ ಮಧುಮೇಹ ಮತ್ತು ಆರೋಗ್ಯಕರ ಪೋಷಕಾಂಶಗಳು ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner