ಇದು ವೆಜಿಟೇರಿಯನ್ ಫಿಶ್ ಕರಿ ಕಣ್ರಿ, ಮಾಡೋದು ಸುಲಭ; ರುಚಿಯೂ ಸೂಪರ್: ರೇಣುಕಾ ಮಂಜುನಾಥ್ ಆವಿಷ್ಕಾರ
ಕನ್ನಡ ಸುದ್ದಿ  /  ಜೀವನಶೈಲಿ  /  ಇದು ವೆಜಿಟೇರಿಯನ್ ಫಿಶ್ ಕರಿ ಕಣ್ರಿ, ಮಾಡೋದು ಸುಲಭ; ರುಚಿಯೂ ಸೂಪರ್: ರೇಣುಕಾ ಮಂಜುನಾಥ್ ಆವಿಷ್ಕಾರ

ಇದು ವೆಜಿಟೇರಿಯನ್ ಫಿಶ್ ಕರಿ ಕಣ್ರಿ, ಮಾಡೋದು ಸುಲಭ; ರುಚಿಯೂ ಸೂಪರ್: ರೇಣುಕಾ ಮಂಜುನಾಥ್ ಆವಿಷ್ಕಾರ

ನಿಮಗೊಂದು ಸಿಂಪಲ್‌ ರೆಸಿಪಿ ಹೇಳುತ್ತೇವೆ. ಈ ಡಿಶ್‌ ಮಾಡುವುದು ಕಲಿತರೆ ಸಸ್ಯಹಾರಿಗಳು ಕೂಡಾ ಫಿಶ್‌ ಕರಿ ತಿನ್ನಬಹುದು. ಅಷ್ಟಕ್ಕೂ ಇದು ಮೀನಿನಿಂದ ಮಾಡುವ ಕರಿ ಅಲ್ಲ. ಹಾಗಲಕಾಯಿಯಿಂದ ಸರಳವಾಗಿ ಮಾಡಿ ತಿನ್ನಬಹುದಾದ ರೆಸಿಪಿ.

ಹಾಗಲಕಾಯಿಂದ ವೆಜಿಟೇರಿಯನ್ ಫಿಶ್ ಕರಿ ಮಾಡೋದು ಸುಲಭ
ಹಾಗಲಕಾಯಿಂದ ವೆಜಿಟೇರಿಯನ್ ಫಿಶ್ ಕರಿ ಮಾಡೋದು ಸುಲಭ

ನಾನ್‌ವೆಜ್‌ ಊಟ ಹೆಚ್ಚಿನವರಿಗೆ ಇಷ್ಟ. ಆದರೆ ಸಸ್ಯಹಾರಿಗಳಿಗೆ ಶಾಖಾಹಾರಿ ಅಡುಗೆಯೇ ಮೃಷ್ಟಾನ್ನ ಭೋಜನ. ಕೆಲವೊಂದು ನಾನ್‌ವೆಜ್‌ ಅಡುಗೆಗಳಿಗೆ ತರಕಾರಿಗಳಲ್ಲೇ ಬದಲಿ ಡಿಶ್‌ ಕಂಡುಕೊಳ್ಳುವುದು ಕಷ್ಟ. ಚಿಕನ್‌, ಫಿಶ್ ಹೆಚ್ಚು ಜನಪ್ರಿಯ ಮಾಂಸಾಹಾರಿ ಅಡುಗೆಗಳು. ಇವುಗಳಿಗೆ ಬದಲಿಯಾಗಿ ವೆಜ್‌ನಲ್ಲಿ ಅಡುಗೆ ಮಾಡುವುದು ಕಷ್ಟ. ಫಿಶ್‌ ಫ್ರೈ, ಫಿಶ್‌ ಕರಿ ನಾನ್‌ವೆಜ್ ಪ್ರಿಯರಿಗೆ ತುಂಬಾ ಇಷ್ಟ. ಇದಕ್ಕೆ ಸಸ್ಯಹಾರಿಗಳು ಬದಲಿ ಡಿಶ್‌ ಮಾಡಬಹುದು. ಅದುವೇ ವೆಜಿಟೇರಿಯನ್‌ ಫಿಶ್‌ ಕರಿ. ಈ ರೆಸಿಪಿಯನ್ನು ಫೇಸ್‌ಬುಕ್‌ ಪೇಜ್‌ನಲ್ಲಿ ರೇಣುಕಾ ಮಂಜುನಾಥ್‌ ಅವರು ಹಂಚಿಕೊಂಡಿದ್ದಾರೆ. ಆ ರೆಸಿಪಿ ಇಲ್ಲಿದೆ.

ಹಾಗಲಕಾಯಿಯನ್ನು ಮೀನಿನ ರೀತಿಯಲ್ಲಿ ಸ್ಲೈಸ್ ಮಾಡಿ ಅದನ್ನು ಕೊನೆಯಲ್ಲಿ ಡೀ ಫ್ರೈ ಮಾಡಿದರೆ ವೆಜಿಟೇರಿಯನ್‌ ಫಿಶ್‌ ಕರಿ ತಯಾರಾಗುತ್ತದೆ. ಇದಕ್ಕೆ ಜಾಸ್ತಿ ಪದಾರ್ಥಗಳೂ ಬೇಕಿಲ್ಲ. ಸರಳ ಪಾಕವಿಧಾನ ಇಲ್ಲಿದೆ. ಮುಂದಿರುವುದು ರೇಣುಕಾ ಮಂಜುನಾಥ್‌ ಅವರ ರೆಸಿಪಿ.

ರೇಣುಕಾ ಮಂಜುನಾಥ್ ಅವರ ವೆಜಿಟೇರಿಯನ್ ಫಿಶ್ ಕರಿ ಮಾಡುವ ವಿಧಾನ

ಮೊದಲು ಹಾಗಲಕಾಯಿಯನ್ನು ಎರಡೆರಡು ಇಂಚು, ಮೂರಿಂಚಿನಷ್ಟು ಉದ್ದಕ್ಕೆ ಗುಂಡುಗುಂಡಾಗಿ ಕತ್ತರಿಸಿಕೊಳ್ಳಿ. ಮಧ್ಯೆ ಚಾಕುವಿನಿಂದ ಸೀಳಿರಿ. ಎಳೆಯದಾಗಿದ್ದರೆ ಬೀಜ ಇಡಬಹುದು. ಇಲ್ಲವಾದರೆ ಬೀಜವನ್ನು ತೆಗೆದುಹಾಕಿ. ಅದರೊಳಗೆ ಗಟ್ಟಿಯಾದ ಹುಣಿಸೆರಸವನ್ನೂ ಕಲ್ಲುಪ್ಪನ್ನೂ ತುಂಬಿ. ಹುಣಸೆ ಹಣ್ಣನ್ನು ಕೂಡಾ ಇಡಬಹುದು.

ಒಂದು ಕುಕ್ಕರ್‌ಗೆ ನೀರು ಹಾಕದೆ ಒಂದು ಮುಚ್ಚಿದ ಬಾಕ್ಸ್‌ನಲ್ಲಿಟ್ಟು ಹೆಚ್ಚೆಂದರೆ ಎರಡು ವಿಸೆಲ್ ಕೂಗಿಸಿ. ಅದು ಉಪ್ಪುಹುಳಿ ಹೀರಿಕೊಂಡು ಸ್ವಲ್ಪ ಮೆತ್ತಗಾದರೆ ಸಾಕು. ಹೆಚ್ಚು ಬೆಂದರೆ ಒಳಗಿನ ಹಬೆನೀರು ಅದರಲ್ಲಿ ಸೇರಿಕೊಂಡು, ಅದರ ಸತ್ವವೆಲ್ಲಾ ಹೋಗಿಬಿಡುತ್ತೆ. ಹೀಗಾಗಿ ಅದು ಮೆತ್ತಗಾಗಿ ಅದರೊಳಗೆ ಹುಳಿ ಉಪ್ಪು ಬೆರೆತರೆ ಸಾಕು. ನಂತರ ಅದರೊಳಗಿನ ಹುಣಿಸೆ ಹಣ್ಣನ್ನು ತೆಗೆಯಬೇಕು.

ಈಗ ಹಾಗಲಕಾಯನ್ನು ಮೃದುವಾಗಿ ಹಿಂಡಿ, ಅದರಲ್ಲಿರುವ ಅಲ್ಪಸ್ವಲ್ಪ ನೀರಿನಂಶ ತೆಗೆದರೆ ಒಳಿತು. ಆ ನೀರನ್ನು ಫ್ರಿಜ್ ನಲ್ಲಿಟ್ಟು ಹಾಗಲಕಾಯಿ ಗೊಜ್ಜು ಮಾಡುವಾಗ ಬಳಸಿಕೊಳ್ಳಬಹುದು. ಈಗ ಹಿಂಡಿದ ಹಾಗಲಕಾಯನ್ನು ಕಾದ ಎಣ್ಣೆಯಲ್ಲಿ ಚೆನ್ನಾಗಿ ಕರಿಯಬೇಕು. ಇದಕ್ಕೆ ತುಸು ಸಮಯ ಹಿಡಿಯುತ್ತದೆ. ನೀರಿನಂಶ ಹೋಗಿ ಹದವಾಗಿ ಎಣ್ಣೆಯಲ್ಲಿ ಬೆಂದಿರಬೇಕು. ಆದರೆ ಕಪ್ಪಾಗಿ ಸೀಯದಂತೆ ನೋಡಿಕೊಳ್ಳಬೇಕು. ಅದರಲ್ಲಿ ನೀರಿನಂಶ ಇಲ್ಲವೆಂದಾದಾಗ, ಒಂದು ಬಟ್ಟಲಿಗೆ ತೆಗೆದು ಅಚ್ಚಖಾರದಪುಡಿ ಸವರಿಡಬೇಕು.

ಇದನ್ನು ಬಿಸಿ ಬಿಸಿ ಅನ್ನದ ಮೇಲೆ ಇಟ್ಟುಕೊಂಡು ಕಲೆಸಿಕೊಂಡು ತಿಂದರೆ ಸ್ವರ್ಗಸುಖ. ಮೊಸರನ್ನದ ಜೊತೆಗೂ ಬಹಳ ರುಚಿಯಾಗುತ್ತದೆ.

Whats_app_banner