ಕನ್ನಡ ಸುದ್ದಿ / ಜೀವನಶೈಲಿ /
ಉಳಿದ ಚಪಾತಿಯಿಂದ ರುಚಿಯಾದ ನೂಡಲ್ಸ್ ಮಾಡುವುದು ಹೇಗೆ? ಈ ವಿಧಾನದಲ್ಲಿ ಪ್ರಯತ್ನಿಸಿದರೆ ತೃಪ್ತಿಯಾಗಿ ತಿಂತಾರೆ
ಚಪಾತಿ ನೂಡಲ್ಸ್: ಚಪಾತಿ ನೂಡಲ್ಸ್ ಅನ್ನು ಉಳಿದ ಚಪಾತಿ ಅಥವಾ ಹೊಸದಾಗಿ ಮಾಡಿದ ಚಪಾತಿಗಳಿಂದ ಮಾಡಬಹುದು. ತರಕಾರಿಗಳನ್ನು ಸೇರಿ ಮಾಡುವ ಈ ರೆಸಿಪಿಯನ್ನು ಬೆಳಗ್ಗೆ ಮತ್ತು ಸಂಜೆ ಊಟಕ್ಕೆ ಸೇವಿಸಬಹುದು.
ಬಾಯಲ್ಲಿ ನೀರೂರಿಸುವಂತ ಚಾಪತಿ ನೂಡಲ್ಸ್ ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ.
ಚಪಾತಿ ನೂಡಲ್ಸ್ ಮಾಡುವ ವಿಧಾನ: ಸಾಮಾನ್ಯವಾಗಿ ಮನೆಯಲ್ಲಿ ರಾತ್ರಿ ಮಾಡಿದ ಚಪಾತಿಯನ್ನು ಬೆಳಗ್ಗೆಗೆ ಅಥವಾ ಬೆಳಗ್ಗೆ ಮಾಡಿದ ಚಪಾತಿಯನ್ನು ಸಂಜೆಗೆ ತಿನ್ನೋದು ಕಡಿಮೆ. ತಿನ್ನಲೇಬೇಕಾದ ಅನಿವಾರ್ಯತೆ ಇದ್ದಾಗ ಬಿಸಿ ಮಾಡಿಕೊಂಡು ತಿನ್ನುತ್ತಾರೆ. ಒಂದು ವೇಳೆ ಉಳಿದ ಚಪಾತಿಯನ್ನು ಏನು ಮಾಡೋದು ಅಂತ ನೀವೇನಾದರೂ ಯೋಚಿಸುತ್ತಿದ್ದರೆ ನಿಮಗಾಗಿ ಒಂದು ರೆಸಿಪಿಯ ಬಗ್ಗೆ ಹೇಳುತ್ತಿದ್ದೇವೆ. ಇದರ ಹೆಸರು ಚಪಾತಿ ನೂಡಲ್ಸ್. ಇದನ್ನು ಉಳಿದ ಚಪಾತಿ ಅಥವಾ ಹೊಸದಾಗಿ ಮಾಡಿದ ಚಪಾತಿಗಳೊಂದಿಗೆ ಮಾಡಬಹುದು. ತರಕಾರಿಯಿಂದ ಮಾಡಿದ ಈ ರೆಸಿಪಿಯನ್ನು ಬೆಳಗ್ಗೆ ಮತ್ತು ಸಂಜೆ ಊಟಕ್ಕೆ ಸೇವಿಸಬಹುದು.
ಉಳಿದ ಚಪಾತಿಗಳೊಂದಿಗೆ ನೀವು ಬಾಯಲ್ಲಿ ನೀರೂರಿಸುವ ರುಚಿಕರವಾದ ನೂಡಲ್ಸ್ ಮಾಡಬಹುದು. ನಿಮ್ಮ ನೆಚ್ಚಿನ ತರಕಾರಿಯನ್ನು ಕತ್ತರಿಸಿ, ಇದನ್ನು ಹುರಿಯುವ ಮೂಲಕ ಚಪಾತಿಯೊಂದಿಗೆ ನೂಡಲ್ಸ್ ರೆಸಿಪಿಯನ್ನು ತಯಾರಿಸಬಹುದು. ಮಕ್ಕಳಿಗೆ ಕನಿಷ್ಠ ಎರಡು ಚಪಾತಿ ತಿನ್ನಿಸಲು ಇದು ಅತ್ಯುತ್ತಮ ಪಾಕವಿಧಾನವಾಗಿದೆ.
ಚಪಾತಿ ನೂಡಲ್ಸ್‌ಗೆ ಬೇಕಾಗುವ ಸಾಮಾಗ್ರಿಗಳು
- 4 ರಿಂದ 5 ಚಪಾತಿ
- 1 ಚಮಚ ಎಣ್ಣೆ
- ½ ಟೀಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಸ್ವಲ್ಪ ಹಸಿ ಮೆಣಸಿನಕಾಯಿ ಪೇಸ್ಟ್
- 1 ದೊಡ್ಡ ಈರುಳ್ಳಿ, ತೆಳುವಾಗಿ ಕತ್ತರಿಸಿ
- 1 ಕ್ಯಾರೆಟ್, ಉದ್ದವಾದ ತುಂಡುಗಳಾಗಿ ಕತ್ತರಿಸಿ
- 1 ಕಪ್ ಕ್ಯಾಪ್ಸಿಕಂ, ಚಿಕ್ಕ ಪೀಸ್‌ಗಳಾಗಿ ಕತ್ತರಿಸಿಕೊಳ್ಳಿ
- ರುಚಿಗೆ ಉಪ್ಪು
- 1 ಚಮಚ ಟೊಮೆಟೊ, ಚಿಕ್ಕದಾಗಿ ಕತ್ತರಿಸಿಕೊಳ್ಳಿ
- ಸೋಯಾ ಸಾಸ್ 1 ಚಮಚ
- 1 ಚಮಚ ಚಿಲ್ಲಿ ಸಾಸ್
ಚಪಾತಿ ನೂಡಲ್ಸ್ ಮಾಡುವ ವಿಧಾನ
- ಮೊದಲು ಚಪಾತಿಗಳನ್ನು ಚಾಕುವಿನ ಸಹಾಯದಿಂದ ಸಾಧ್ಯವಾದಷ್ಟು ತೆಳ್ಳಗೆ ಉದ್ದನೆಯ ತುಂಡುಗಳಾಗಿ ಕತ್ತರಿಸಿ. ನೂಡಲ್ಸ್ ರೀತಿ ಉದ್ದವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಈಗ ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ ಎಣ್ಣೆ ಹಾಕಿ. ಬಿಸಿಯಾದ ನಂತರ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿ ಮೆಣಸಿನಕಾಯಿ ಪೇಸ್ಟ್ ಸೇರಿಸಿ.
- ಸ್ವಲ್ಪ ಬಿಸಿಯಾದ ನಂತರ ಕತ್ತರಿಸಿದ ಈರುಳ್ಳಿ ತುಂಡುಗಳು, ಉದ್ದವಾದ ಕ್ಯಾರೆಟ್ ತುಂಡುಗಳು ಮತ್ತು ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿ.
- ಈ ಎಲ್ಲಾ ತರಕಾರಿಗಳನ್ನು ಮಧ್ಯಮ ಉರಿಯಲ್ಲಿ ಎರಡು ಮೂರು ನಿಮಿಷಗಳ ಕಾಲ ಫ್ರೈ ಮಾಡಿ.
- ನೀವು ಇಷ್ಟಪಡುವ ಯಾವುದೇ ತರಕಾರಿಗಳನ್ನು ಇದಕ್ಕೆ ಸೇರಿಸಿಕೊಳ್ಳಬಹುದು
- ನಂತರ ಉಪ್ಪು, ಮೆಣಸಿನ ಪುಡಿ, ಸಾಸ್ ಸೇರಿಸಿ ಮತ್ತೆ ಮಿಶ್ರಣ ಮಾಡಿ
- ನೂಡಲ್ಸ್‌ನಂತೆ ಕತ್ತರಿಸಿದ ಚಪಾತಿ ತುಂಡುಗಳನ್ನು ಹಾಕಿ. ಸಾಸ್ ಅನ್ನು ಚೆನ್ನಾಗಿ ಮಿಶ್ರಣ ಮಾಡಿ. ಅಷ್ಟೇ.. ಚಪಾತಿ ನೂಡಲ್ಸ್ ರೆಡಿ.
ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ದ ಲೈಫ್ಸ್ಟೈಲ್ ವಿಭಾಗ ನೋಡಿ.