Weight Loss Food: ಮೆಂತ್ಯ ಸೊಪ್ಪು ಬಳಸಿ ತಯಾರಿಸಬಹುದಾದ ಬ್ರೇಕ್‌ಫಾಸ್ಟ್‌ಗಳು; ತೂಕ ಇಳಿಸಲು ಕೂಡಾ ಉತ್ತಮ ಆಯ್ಕೆ
Healthy Food: ತೂಕ ಇಳಿಸಬೇಕು ಎಂದುಕೊಂಡವರಿಗೆ ಏನು ತಿನ್ನುವುದು ಎಂಬುದೇ ದೊಡ್ಡ ತಲೆನೋವಿನ ವಿಚಾರ. ದೇಹಕ್ಕೆ ಹೆಚ್ಚಿನ ಫೈಬರ್ ಹಾಗೂ ಕಡಿಮೆ ಕ್ಯಾಲೋರಿಯನ್ನು ಒದಗಿಸಿ ಜೊತೆಯಲ್ಲಿ ಅಗತ್ಯವಾದ ಪೌಷ್ಠಿಕಾಂಶವನ್ನು ನೀಡುವ ಮೆಂತ್ಯ ಸೊಪ್ಪಿನ ವಿವಿಧ ತಿನಿಸುಗಳ ಬಗ್ಗೆ ಮಾಹಿತಿ ಇಲ್ಲಿದೆ.
Healthy Food: ಮೆಂತ್ಯ ಸೊಪ್ಪು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಬಹುತೇಕರಿಗೆ ತಿಳಿದಿರುವ ವಿಚಾರ. ವಿಶಿಷ್ಟವಾದ ಸುವಾಸನೆ, ಕಹಿ ರುಚಿಯನ್ನು ಹೊಂದಿರುವ ಈ ಸೊಪ್ಪುಗಳು ಸಾಮಾನ್ಯವಾಗಿ ಭಾರತೀಯ ಅಡುಗೆ ಮನೆಗಳಲ್ಲಿ ಇದ್ದೇ ಇರುತ್ತದೆ. ಮೆಂತ್ಯ ಸೊಪ್ಪುಗಳಿಂದ ದಾಲ್ ತಯಾರಿಸಲಾಗುತ್ತದೆ. ಕೆಲವರು ಚಪಾತಿಯ ಸ್ಟಫಿಂಗ್ ಆಗಿ ಕೂಡ ಮೆಂತ್ಯ ಸೊಪ್ಪನ್ನು ಬಳಕೆ ಮಾಡುತ್ತಾರೆ.
ಮೆಂತ್ಯ ಸೊಪ್ಪುಗಳಲ್ಲಿ ಕಬ್ಬಿಣಾಂಶ, ವಿಟಮಿನ್ ಎ, ವಿಟಮಿನ್ ಸಿ , ಕೆ ಸೇರಿದಂತೆ ಇನ್ನೂ ಹಲವು ಸತ್ವಗಳು ಅಡಗಿವೆ. ಮೆಂತ್ಯ ಎಲೆಗಳಿಂದ ದೇಹದಲ್ಲಿ ಜೀರ್ಣಕ್ರಿಯೆ ಸುಧಾರಿಸುತ್ತದೆ. ಅಲ್ಲದೇ ರಕ್ತದಲ್ಲಿ ಸಕ್ಕರೆ ಮಟ್ಟ ಕೂಡಾ ನಿಯಂತ್ರಣಕ್ಕೆ ಬರುತ್ತದೆ. ಯಾರ್ಯಾರು ತೂಕ ನಷ್ಟದ ಪ್ರಯಾಣದಲ್ಲಿದ್ದೀರೋ ಅವರಿಗೂ ಕೂಡ ಮೆಂತ್ಯ ಸೊಪ್ಪು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ತೂಕ ಇಳಿಕೆಗೆ ಸಹಕಾರಿ
ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಲು ನೀವು ಮೆಂತ್ಯ ಸೊಪ್ಪನ್ನು ಬಳಸಿ ವಿವಿಧ ತಿಂಡಿಗಳನ್ನು ತಯಾರಿಸಿ ಸೇವಿಸಬಹುದಾಗಿದೆ. ಇವುಗಳಲ್ಲಿ ಕಡಿಮೆ ಕ್ಯಾಲೋರಿ ಹಾಗೂ ಹೆಚ್ಚಿನ ಫೈಬರ್ ಅಂಶ ಇರುವುದರಿಂದ ತೂಕ ನಷ್ಟಕ್ಕೆ ಸಹಕಾರಿಯಾಗಿದೆ. ಬೆಳಗಿನ ಉಪಹಾರದಲ್ಲಿ ನೀವು ಮೆಂತ್ಯ ಸೊಪ್ಪಿನಿಂದ ತಯಾರಿಸಿದ ಅಹಾರವನ್ನು ಸೇವಿಸುವುದರಿಂದ ನೀವು ತೂಕ ಇಳಿಕೆ ಮಾಡಿಕೊಳ್ಳುವುದರ ಜೊತೆಯಲ್ಲಿ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಪಡೆಯಬಹುದಾಗಿದೆ.
ಮೆಂತ್ಯ ಥೆಪ್ಲಾ: ಈ ಹೆಸರು ನಿಮಗೆ ಅಪರೂಪ ಎನಿಸಬಹುದು. ಏಕೆಂದರೆ ಇದು ಮೆಂತ್ಯ ಬಳಸಿ ತಯಾರಿಸುವ ಗುಜರಾತಿ ಮೂಲದ ತಿನಿಸಾಗಿದೆ. ರಾಗಿ ಹಿಟ್ಟು ಹಾಗೂ ಗೋಧಿ ಹಿಟ್ಟನ್ನು ಮಿಶ್ರಣ ಮಾಡಿ. ಇದಕ್ಕೆ ಸಣ್ಣಗೆ ಕತ್ತರಿಸಿದ ಮೆಂತ್ಯ ಸೊಪ್ಪನ್ನು ಸೇರಿಸಿಕೊಂಡು, ಅಗತ್ಯವಾದ ಮಸಾಲೆಗಳು, ಮೊಸರು ಹಾಗೂ ಉಪ್ಪನ್ನು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿಕೊಳ್ಳಿ. ಬಳಿಕ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಪರೋಟಾವನ್ನು ತಯಾರಿಸಿ ಒಲೆಯ ಮೇಲೆ ಬೇಯಲು ಬಿಡಿ. ಹೊಂಬಣ್ಣಕ್ಕೆ ಬಂದ ಬಳಿಕ ಇವುಗಳನ್ನು ತವಾದಿಂದ ತೆಗೆದು ಸೇವಿಸಬಹುದಾಗಿದೆ.
ಮೆಂತ್ಯ ಪನ್ನೀರ್ ಪರೋಠಾ: ಉತ್ತರ ಭಾರತದ ಪ್ರಮುಖ ಉಪಹಾರಗಳಲ್ಲಿ ಪರೋಠಾ ಕೂಡ ಒಂದು. ಈಗೀಗ ದಕ್ಷಿಣ ಭಾರತದಲ್ಲಿಯೂ ಕೂಡ ಅನೇಕರು ಪರೋಠಾ ತಯಾರಿಸುತ್ತಾರೆ. ಸಣ್ಣದಾಗಿ ಹೆಚ್ಚಿದ ಮೆಂತೆ ಎಲೆಗಳು, ಪುಡಿ ಮಾಡಿಕೊಂಡ ಪನ್ನೀರನ್ನು ಪರೋಠಾ ಹಿಟ್ಟಿನೊಂದಿಗೆ ಸೇರಿಸಿಕೊಂಡು ಬಳಿಕ ಪರೋಠಾ ತಯಾರಿಸಬಹುದು. ಇವುಗಳಲ್ಲಿ ಹೆಚ್ಚಿನ ಫೈಬರ್ ಹಾಗೂ ಪ್ರೊಟೀನ್ ಅಂಶ ಇರುವುದರಿಂದ ತೂಕ ಇಳಿಕೆಗೆ ಸಹಾಯಕಾರಿಯಾಗಿದೆ.
ಪಾಲಕ್ ಮೆಂತ್ಯ ದೋಸೆ: ಉತ್ತರ ಭಾರತದಲ್ಲಿ ಇದನ್ನು ಪಾಲಕ್ ಮೇಥಿ ಚೀಲಾ ಎಂದು ಕರೆಯುತ್ತಾರೆ. ಪಾಲಕ್ ಹಾಗೂ ಮೆಂತ್ಯ ಎಲೆಗಳನ್ನು ಕಡಲೆ ಹಿಟ್ಟು ಹಾಗೂ ಮಸಾಲೆಗಳೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಬಳಿಕ ತವಾ ಮೇಲೆ ದೋಸೆಯಂತೆ ಹುಯ್ದುಕೊಳ್ಳಿ. ಇವುಗಳ ಸೇವನೆಯಿಂದಲೂ ದೇಹಕ್ಕೆ ಹೆಚ್ಚಿನ ಫೈಬರ್ ಹಾಗೂ ಖನಿಜಾಂಶಗಳು ಸಿಗಲಿವೆ.
ಮೆಂತ್ಯ ಹಾಗೂ ಹೆಸರುಬೇಳೆ ದೋಸೆ: ಇದನ್ನು ತಯಾರಿಸುವುದು ಪಾಲಕ್ ಮೆಂತ್ಯ ದೋಸೆ ತಯಾರಿಸಿದಂತೆಯೇ. ಇವುಗಳು ಕೂಡ ಬೆಳಗ್ಗಿನ ಉಪಹಾರಕ್ಕೆ ಉತ್ತಮ ಆಯ್ಕೆಯಾಗಿದೆ. ಕೆಲವರು ಇದೇ ಹಿಟ್ಟಿನಿಂದ ಇಡ್ಲಿಯನ್ನೂ ತಯಾರಿಸುತ್ತಾರೆ. ಹೆಚ್ಚು ಪೌಷ್ಠಿಕಾಂಶಯುಕ್ತವಾದ ಈ ಆಹಾರವು ದೇಹಕ್ಕೆ ಕಡಿಮೆ ಕ್ಯಾಲೋರಿಯನ್ನು ಒದಗಿಸಿ ಹೆಚ್ಚಿನ ಫೈಬರ್ ಅಂಶವನ್ನು ನೀಡುತ್ತದೆ.