Neem Flower Rice: ಅಡುಗೆಗೂ ಬೇಕು ಔಷಧೀಯ ಗುಣಗಳಿರುವ ಬೇವು; ಬೇವಿನ ಹೂ ನಿಂದ ತಯಾರಿಸಬಹುದಾದ 2 ರೆಸಿಪಿಗಳು ಇಲ್ಲಿವೆ, ನೀವೂ ಮಾಡಿ
Neem Flower Recipe: ಬೇವು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಅದೇ ರೀತಿ ಬೇವಿನ ಹೂವುಗಳು ಕೂಡಾ ಸಾಕಷ್ಟು ಆರೋಗ್ಯಕರ ಅಂಶವನ್ನು ಹೊಂದಿದೆ. ಆದ್ದರಿಂದ ಬೇವಿನಿಂದ ಅನ್ನದೊಂದಿಗೆ ತಿನ್ನಬಹುದಾದ ಗೊಜ್ಜು ತಯಾರಿಸಲಾಗುತ್ತದೆ. ಬೇವಿನ ಹೂವುಗಳಿಂದ ತಯಾರಿಸಬಹುದಾದ ಗೊಜ್ಜು ಹಾಗೂ ಬೇವಿನ ಅನ್ನದ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ
Neem Flower Recipe: ಅದರಕ್ಕೆ ಕಹಿ ಉದರಕ್ಕೆ ಸಿಹಿ ಎಂಬ ಮಾತಿದೆ. ನಿಸರ್ಗದಲ್ಲಿ ದೊರೆಯುವ ಕೆಲವೊಂದು ಪದಾರ್ಥಗಳು ತಿನ್ನುವಾಗ ಕಹಿ ಎನಿಸಿದರೂ ಸಹ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತವೆ. ಈ ಮಾತಿಗೆ ಉತ್ತಮ ಉದಾಹರಣೆ ಎಂದರೆ ಬೇವು.
ಬೇವಿನ ಎಲೆಗಳು ರಕ್ತ ಶುದ್ಧಿಗೆ, ಚರ್ಮ ಸಂಬಂಧಿ ಕಾಯಿಲೆಗಳ ನಿವಾರಣೆಗೆ, ಕೂದಲಿನ ಆರೋಗ್ಯಕ್ಕೆ ಹೀಗೆ ನಾನಾ ರೀತಿಯ ಪ್ರಯೋಜನಗಳನ್ನು ಹೊಂದಿವೆ. ಬಹಳ ಕಹಿಯಾಗಿ ಇರುವ ಈ ಎಲೆಗಳು ಉತ್ತಮ ಆರೋಗ್ಯಕ್ಕೆ ವರದಾನ ಎನ್ನುವುದು ಬಹುತೇಕರಿಗೆ ತಿಳಿದಿರುವ ವಿಚಾರ. ಯುಗಾದಿ ಹತ್ತಿರ ಬಂತು. ಸಾಮಾನ್ಯವಾಗಿ ಯುಗಾದಿ ಹಬ್ಬಕ್ಕೆ ಬೇವು ಬೆಲ್ಲ ತಿನ್ನುತ್ತೇವೆ. ಹಾಗೇ ಬೇವಿನ ಎಲೆಯಿಂದ ಆಹಾರವನ್ನೂ ತಯಾರಿಸಬಹುದು.
ಬೇವಿನ ಎಲೆಗಳು ಮಾತ್ರವಲ್ಲ ಅದರ ಜೊತೆ ಬೇವಿನ ಹೂವುಗಳು ಕೂಡಾ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ದೇಹದಿಂದ ಕಲ್ಮಶಗಳನ್ನು ತೊಡೆದು ಹಾಕುವುದರಿಂದ ಹಿಡಿದು ಮಧುಮೇಹ ನಿಯಂತ್ರಣದವರೆಗೂ ಬೇವಿನ ಹೂವು ಪ್ರಮುಖ ಪಾತ್ರ ವಹಿಸುತ್ತದೆ. ಕಫ ನಿಯಂತ್ರಣ, ಸೊರಿಯಾಸಿಸ್ ಸಮಸ್ಯೆ, ಚರ್ಮದ ಆರೋಗ್ಯ ನಾನಾ ಕಾಯಿಲೆಗಳಿಗೆ ರಾಮಬಾಣ ಎನಿಸಿರುವ ಬೇವಿನ ಹೂವುಗಳಿಂದ ತಯಾರಿಸುವ ಎರಡು ಆಹಾರ ಪದಾರ್ಥಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.
ಬೇವಿನ ಹೂವಿನ ಗೊಜ್ಜು
ಬೇಕಾಗುವ ಸಾಮಗ್ರಿಗಳು
- ಬೇವಿನ ಹೂವುಗಳು - 3 ದೊಡ್ಡ ಚಮಚ
- ಕಡ್ಲೆ ಬೇಳೆ - 2 ಚಮಚ
- ಉದ್ದಿನ ಬೇಳೆ - 2 ಚಮಚ
- ಜೀರ್ಗೆ - 2 ಚಮಚ
- ಕೊಬ್ಬರಿ ತುರಿ -1 ಕಪ್
- ಕೊತ್ತಂಬರಿ ಸೊಪ್ಪು- 1/4 ಕಪ್
- ಬೆಳ್ಳುಳ್ಳಿ -15 ಎಸಳು
- ಬೆಲ್ಲ - 1 ಚಿಕ್ಕ ತುಂಡು
- ಈರುಳ್ಳಿ - 2
- ಹುಣಸೆ ಹಣ್ಣು - ನಿಂಬೆ ಗಾತ್ರದ್ದು
- ಖಾರದ ಪುಡಿ - 2 ಚಮಚ
- ಅಡುಗೆ ಎಣ್ಣೆ - 2 ಚಮಚ
- ಸಾಸಿವೆ - 1 ಚಮಚ
- ಕರಿಬೇವಿನ ಎಲೆಗಳು - ಸ್ವಲ್ಪ
- ಉಪ್ಪು - ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
ಬಾಣಲೆ ಬಿಸಿ ಮಾಡಿಕೊಂಡು ಕಡ್ಲೆಬೇಳೆ ಸೇರಿಸಿ 2 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ. ಇದಾದ ಬಳಿಕ ಉದ್ದಿನ ಬೇಳೆಯನ್ನು ಸೇರಿಸಿ 1 ನಿಮಿಷಗಳ ಕಾಲ ಹುರಿಯಿರಿ. ಬಳಿಕ 1 ಜೀರ್ಗೆ ರೋಸ್ಟ್ ಮಾಡಿಕೊಳ್ಳಿ.
ಈಗ ಒಂದು ಮಿಕ್ಸಿ ಜಾರಿನಲ್ಲಿ ಹುರಿದಿಟ್ಟುಕೊಂಡ ಪದಾರ್ಥಗಳು, ಕೊಬ್ಬರಿ ತುರಿ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಬೆಲ್ಲ, ಹುಣಸೆಹಣ್ಣು ಹಾಗೂ ಖಾರದ ಪುಡಿಯನ್ನು ಸೇರಿಸಿ ಗ್ರೈಂಡ್ ಮಾಡಿಕೊಳ್ಳಿ.
ಮತ್ತೊಂದು ಪಾತ್ರೆಯಲ್ಲಿ ಅಡುಗೆ ಎಣ್ಣೆ ಬಿಸಿ ಮಾಡಿಕೊಂಡು ಸಾಸಿವೆ, ಜೀರ್ಗೆ, ಕರಿ ಬೇವಿನ ಎಲೆಗಳು ಹಾಗೂ ಈರುಳ್ಳಿಯನ್ನು ಸೇರಿಸಿ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ. ಇದಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಿ ಬಳಿಕ ಬೇವಿನ ಹೂವುಗಳನ್ನು ಹಾಕಿ. ಈ ಮಿಶ್ರಣಕ್ಕೆ ಮಸಾಲೆಯನ್ನು ಸೇರಿಸಿ ಅಳತೆಗೆ ತಕ್ಕಷ್ಟು ನೀರನ್ನು ಹಾಕಿಕೊಳ್ಳಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಮುಚ್ಚಳ ಮುಚ್ಚಿ ಚೆನ್ನಾಗಿ ಕುದಿಸಿ. ಮೂರು ನಿಮಿಷಗಳ ಬಳಿಕ ಸ್ಟೌ ಆಫ್ ಮಾಡಿ ಇದಕ್ಕೆ ಕೊತ್ತಂಬರಿ ಸೊಪ್ಪನ್ನು ಗಾರ್ನಿಶ್ ಮಾಡಿ ಸರ್ವ್ ಮಾಡಿ.
ಬೇವಿನ ಹೂವಿನ ಅನ್ನ
ಬೇಕಾಗುವ ಸಾಮಗ್ರಿಗಳು
- ಬಾಸುಮತಿ ಅಕ್ಕಿ - 1/2 ಕಪ್
- ತುಪ್ಪ - 1 ಚಮಚ
- ಒಣಗಿಸಿದ ಬೇವಿನ ಹೂವು - 1 ಚಮಚ
- ಗೋಡಂಬಿ - 12
- ಎಣ್ಣೆ - 2 ಚಮಚ
- ಸಾಸಿವೆ - 1/2 ಚಮಚ
- ಕಾಯಿತುರಿ - 1/4 ಕಪ್
- ಅರಿಶಿಣ - 1 ಚಿಟಿಕೆ
- ಎಣ್ಣೆ - 2 ಚಮಚ
- ಉದ್ದಿನ ಬೇಳೆ - 2 ಚಮಚ
- ಕಡ್ಲೆ ಬೇಳೆ - 1 ಚಮಚ
- ಹಸಿ ಮೆಣಸು - 3
- ಕರಿ ಬೇವು - 2 ಎಸಳು
- ಉಪ್ಪು - ರುಚಿಗೆ ತಕ್ಕಷ್ಟು,
ತಯಾರಿಸುವ ವಿಧಾನ
ಒಂದು ಪಾತ್ರೆಗೆ ತುಪ್ಪ ಹಾಕಿ ಗೋಡಂಬಿ ಹುರಿದುಕೊಳ್ಳಿ. ಇದೇ ಮಿಶ್ರಣಕ್ಕೆ ಬೇವಿನ ಹೂವನ್ನು ಸೇರಿಸಿ ಹುರಿದುಕೊಂಡು ಪ್ರತ್ಯೇಕ ತೆಗೆದಿಟ್ಟುಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಾಸಿವೆ , ಉದ್ದಿನ ಬೇಳೆ, ಅರಿಶಿಣ, ಹಸಿ ಮೆಣಸು ಹಾಗೂ ಕರಿ ಬೇವಿನ ಪುಡಿಯನ್ನು ಹಾಕಿ ಹುರಿಯಿರಿ. ಬಳಿಕ ಬಾಸುಮತಿ ಅಕ್ಕಿಯಿಂದ ತಯಾರಿಸಿದ ಅನ್ನವನ್ನು ಹಾಕಿ. ಬೇಕಾದಷ್ಟು ಉಪ್ಪನ್ನು ಸೇರಿಸಿಕೊಳ್ಳಿ. ಬಳಿಕ ಈಗಾಗಲೇ ಹುರಿದಿಟ್ಟುಕೊಂಡ ಬೇವಿನ ಹೂವು ಹಾಗೂ ಗೋಡಂಬಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಗೆ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ ಸವಿಯಲು ನೀಡಿ.