Children Food: ಮಕ್ಕಳ ಊಟದ ಡಬ್ಬಿಗೆ ಈ ಆಹಾರಗಳನ್ನು ಹಾಕದಿರಿ; ಆರೋಗ್ಯ ಸಮಸ್ಯೆ ಎದುರಾಗಬಹುದು ಎಚ್ಚರ
ಶಾಲೆಗೆ ಹೋಗುವ ಮಕ್ಕಳಿಗೆ ಪೌಷ್ಟಿಕಾಂಶವಿರುವ ಆಹಾರ ಕೊಡುವುದು ಹೇಗೆ ಅಗತ್ಯವೋ, ಅದೇ ರೀತಿಯಲ್ಲಿ ಯಾವ ರೀತಿಯ ಆಹಾರ ಕೊಡುತ್ತೇವೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಯಾಕೆಂದರೆ ಕೆಲವೊಂದು ರೀತಿಯ ಆಹಾರ ಊಟದ ಬಾಕ್ಸ್‌ಗೆ ಹಾಕಿದರೆ, ಅದರಿಂದ ಮಕ್ಕಳ ಆರೋಗ್ಯ ಕೆಡಬಹುದು. ಹೀಗಾಗಿ ಎಚ್ಚರಿಕೆ ಅಗತ್ಯ.

ಮಕ್ಕಳಿಗೆ ಊಟ ಮಾಡಿಸುವುದು ಒಂದು ದೊಡ್ಡ ಸವಾಲೇ ಸರಿ. ತಾಯಂದಿರು ವಿವಿಧ ರೀತಿಯ ತಂತ್ರಗಳನ್ನು ಮಾಡಿ, ಹಾಗೂ ಹೀಗೂ ಏನೇನೋ ಹೇಳಿ, ಊಟ ಮಾಡಿಸುವಾಗ ಸುಸ್ತಾಗುತ್ತಾರೆ. ಅದರಲ್ಲೂ ಶಾಲೆಗೆ ಹೋಗುವ ಮಕ್ಕಳಿಗೆ ಪೌಷ್ಟಿಕ ಆಹಾರ ಮುಖ್ಯವಾಗಿ ಬೇಕಾಗುತ್ತದೆ. ಇಲ್ಲವಾದರೆ ಅವರ ದೈಹಿಕ ಬೆಳವಣಿಗೆ, ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಅಂತಹ ಸಂದರ್ಭದಲ್ಲಿ ಪಾಲಕರು ಆಹಾರದ ಕುರಿತು ಎಚ್ಚರಿಕೆ ವಹಿಸುವುದು ಸೂಕ್ತ. ಮಕ್ಕಳ ಊಟದ ಡಬ್ಬಿಗೆ ಕೊಡಲು ಹಲವು ರೀತಿಯ ಆಹಾರಗಳಿವೆ. ಆದರೆ ಅವುಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ, ಮಕ್ಕಳ ಹೊಟ್ಟೆ ಕೆಟ್ಟು ಸಮಸ್ಯೆಯಾಗಬಹುದು. ಅಂತಹ ಯಾವ ಆಹಾರವನ್ನು ಮಕ್ಕಳಿಗೆ ಕೊಡಬಾರದು ಮತ್ತು ಯಾವ ರೀತಿಯ ಆಹಾರ ಸೂಕ್ತ ಎಂಬ ವಿವರ ಈ ಸ್ಟೋರಿಯಲ್ಲಿದೆ.
ಇನ್‌ಸ್ಟಂಟ್ ನೂಡಲ್ಸ್ ಊಟದ ಬಾಕ್ಸ್‌ಗೆ ಹಾಕದಿರಿ
ಮಕ್ಕಳ ಊಟದ ಬಾಕ್ಸ್‌ಗೆ ಯಾವತ್ತೂ ಇನ್‌ಸ್ಟಂಟ್ ನೂಡಲ್ಸ್ ಕೊಡಬೇಡಿ. ಮಕ್ಕಳು ನೂಡಲ್ಸ್ ಕೇಳುತ್ತಾರೆ ನಿಜ, ಆದರೆ ಬೆಳಗ್ಗೆ ತಯಾರಿಸಿದ ನೂಡಲ್ಸ್, ಮಧ್ಯಾಹ್ನದ ಊಟದ ವೇಳೆಗೆ ತಿನ್ನಲು ಸೂಕ್ತವಲ್ಲ. ಅಲ್ಲದೆ, ನೂಡಲ್ಸ್‌ನಲ್ಲಿ ಹೆಚ್ಚಿನ ಪ್ರಮಾಣದ ಸಂಸ್ಕರಿಸಿದ ಹಿಟ್ಟು, ಸಂರಕ್ಷಕಗಳನ್ನು ಬಳಸಿರುತ್ತಾರೆ. ಅವುಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ, ಅದರಿಂದ ಆರೋಗ್ಯಕ್ಕೆ ಸಮಸ್ಯೆಯಾಗಬಹುದು. ಅದರ ಬದಲು, ಮನೆಯಲ್ಲೇ ತಯಾರಿಸಿದ ತಾಜಾ ಆಹಾರವನ್ನು ಕೊಡಿ. ಆರೋಗ್ಯಕ್ಕೂ, ದೇಹಕ್ಕೂ ಒಳ್ಳೆಯದು.
ಇದನ್ನೂ ಓದಿ: ಪಾಲಕರು ಮಾಡುವ ತಪ್ಪುಗಳು; ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಕರಿದ ತಿಂಡಿ, ಆಹಾರ ನೀಡಬೇಡಿ
ಮಕ್ಕಳಿಗೆ ಇಷ್ಟ ಮತ್ತು ಮಕ್ಕಳು ಕೇಳುತ್ತಾರೆ ಎಂದು ಅವರಿಗೆ ಕರಿದ ತಿಂಡಿಗಳು, ಆಹಾರವನ್ನು ನೀಡಬೇಡಿ. ಕಚೋರಿ, ಸಮೋಸಾ, ಫ್ರೆಂಚ್ ಫ್ರೈ, ಚಿಪ್ಸ್, ಪಕೋಡಾ ಹೀಗೆ ಹಲವು ಬಗೆಯ ಆಹಾರಗಳು ಮಕ್ಕಳಿಗೆ ಇಷ್ಟ. ಆದರೆ ಅವುಗಳನ್ನು ಊಟದ ಸಮಯಕ್ಕೆ ತಿಂದರೆ ತೊಂದರೆ ತಪ್ಪಿದ್ದಲ್ಲ. ಅದರಲ್ಲಿ ಎಣ್ಣೆಯ ಅಂಶ, ಅಧಿಕ ಕೊಬ್ಬು ಇರುತ್ತದೆ. ಬೆಳೆಯುವ ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರ ಅಗತ್ಯವೇ ಹೊರತು, ಕರಿದ ತಿಂಡಿಗಳಲ್ಲ. ಹೀಗಾಗಿ ಮಕ್ಕಳಿಗೆ ಎಣ್ಣೆಯಲ್ಲಿ ಕರಿದ ತಿಂಡಿ ನೀಡುವುದರಿಂದ, ಅವರಲ್ಲಿ ಅನಾವಶ್ಯಕ ಬೊಜ್ಜು ಬೆಳೆಯಲು ನೀವು ಪರೋಕ್ಷ ಕಾರಣವಾಗುತ್ತೀರಿ. ಅದರ ಬದಲಿಗೆ ಮನೆಯಲ್ಲೇ ತಯಾರಿಸಿದ ಆರೋಗ್ಯಕರ ಆಹಾರ ನೀಡಿ.
ಹಿಂದಿನ ದಿನದ ಉಳಿದ ಆಹಾರ ನೀಡಬೇಡಿ
ಕೆಲವೊಮ್ಮೆ ಮನೆಯಲ್ಲಿ ಹಿಂದಿನ ದಿವಸ ಉಳಿದ ಆಹಾರ, ಅಥವಾ ಫ್ರಿಡ್ಜ್‌ನಲ್ಲಿ ಇರಿಸಿದ ಆಹಾರವನ್ನು ಬಿಸಿ ಮಾಡಿ ಮಕ್ಕಳ ಬಾಕ್ಸ್‌ಗೆ ಹಾಕಿ ಕೊಡುತ್ತಾರೆ. ಆದರೆ ಹಾಗೆ ಬಾಕ್ಸ್‌ಗೆ ಹಾಕಿಕೊಟ್ಟ ಉಳಿಕೆ ಆಹಾರ, ಮಧ್ಯಾಹ್ನದ ವೇಳೆಗೆ ರುಚಿ ಕೆಡಬಹುದು. ಅಲ್ಲದೆ, ಆಹಾರ ಕೆಟ್ಟು ಹೋಗುವ ಸಾಧ್ಯತೆಯಿರುತ್ತದೆ. ಆದರೆ ಮಕ್ಕಳು ಅದರ ಅರಿವಿಲ್ಲದೇ ಅದನ್ನೇ ತಿಂದರೆ, ಸಮಸ್ಯೆಯಾಗಬಹುದು. ಹೊಟ್ಟೆಯೂ ಕೆಡಬಹುದು. ಫುಡ್ ಪಾಯ್ಸನ್ ಭೀತಿಯೂ ಇರುತ್ತದೆ. ಹೀಗಾಗಿ ಮಕ್ಕಳಿಗೆ ಬಾಕ್ಸ್‌ಗೆ ಹಾಕಿ ಕೊಡುವ ಆಹಾರದ ಬಗ್ಗೆ ಎಚ್ಚರಿಕೆ ವಹಿಸಬೇಕು.
ಇದನ್ನೂ ಓದಿ: ನಿಮ್ಮ ಅಡುಗೆಮನೆಯಲ್ಲಿರುವ ಈ ಮೂರು ಆಹಾರಗಳು ಆರೋಗ್ಯ ಕೆಡಿಸಬಹುದು
ಸಕ್ಕರೆ ಪಾಕದ ಆಹಾರ ನೀಡಬೇಡಿ
ಮಕ್ಕಳ ಊಟ ರುಚಿಕರವಾಗಿರಲಿ, ಸಿಹಿಯಾಗಿರುವುದನ್ನು ತಿನ್ನಲಿ ಎಂದು ನೀವು ಅವರಿಗೆ ಅಧಿಕ ಸಕ್ಕರೆಯ ಪಾಕದಲ್ಲಿ ಅದ್ದಿ ತಯಾರಿಸಿರುವ ಆಹಾರವನ್ನು ನೀಡಬೇಡಿ. ಚಾಕೊಲೇಟ್, ಕುಕೀಸ್, ಕ್ಯಾಂಡಿ ಮತ್ತು ಜೆಲ್ಲಿಯಂತಹ ಸಿಹಿ ಪದಾರ್ಥಗಳನ್ನು ಮಕ್ಕಳ ಊಟದ ಡಬ್ಬಕ್ಕೆ ಹಾಕಬೇಡಿ. ನೀವು ಸ್ವಲ್ಪ ಪ್ರಮಾಣದಲ್ಲಿ ಕೊಟ್ಟರೆ ಏನೂ ಆಗದು ಎಂದು ಅಂದುಕೊಳ್ಳಬಹುದು. ಆದರೆ, ಹಾಗೆ ಮಾಡುವುದರಿಂದ ದಿನವೂ ಸ್ವಲ್ಪ ಸ್ವಲ್ಪ ಪ್ರಮಾಣ ಸೇವಿಸಿದರೆ, ಮುಂದೆ ಸಿಹಿಯ ಅಂಶ ಹೆಚ್ಚಾಗಬಹುದು. ಅದರಲ್ಲೂ ಬೇಕರಿ ತಿನಿಸುಗಳಲ್ಲಿ ಕೃತಕ ಸಕ್ಕರೆ, ಬಣ್ಣಗಳ ಫ್ಲೇವರ್ ಬಳಸಿರುತ್ತಾರೆ. ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರ ಬದಲು, ತಾಜಾ ಹಣ್ಣು, ಮನೆಯಲ್ಲೇ ತಯಾರಿಸಿದ ತಿನಿಸುಗಳನ್ನು ಕೊಡಿ.
ಪ್ಯಾಕ್ ಮಾಡಲಾದ ಆಹಾರ ಮತ್ತು ಕ್ಯಾನ್ ಪಾನೀಯ
ಮಕ್ಕಳು ಅದು ಬೇಡ, ಇದು ಬೇಡ ಎಂದು ಸಹಜವಾಗಿ ಹಠ ಮಾಡುತ್ತಾರೆ. ಮನೆಯಲ್ಲಿ ತಯಾರಿಸಿದ ಆಹಾರ ಬೇಡ ಎನ್ನುತ್ತಾರೆ. ಆದರೆ ಅವರ ಕೋರಿಕೆ ಎಂದು ಪ್ಯಾಕ್ ಮಾಡಿರುವ ಆಹಾರ, ಚಿಪ್ಸ್, ಬಿಸ್ಕೆಟ್, ಮಿಕ್ಸರ್ ಎಂದು ಬೇಕರಿ ತಿನಿಸುಗಳನ್ನು ಕೊಡಬಾರದು. ಅದು ನಿಧಾನಗತಿಯ ವಿಷ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಅದರಲ್ಲಿ ಕೃತಕ ಬಣ್ಣಗಳು, ಆರೋಗ್ಯಕ್ಕೆ ಮಾರಕವಾದ ಪಾಮ್ ಆಯಿಲ್, ಅಧಿಕ ಸಕ್ಕರೆ, ಮಸಾಲೆ, ಉಪ್ಪು ಇರುವುದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜತೆಗೆ, ಪ್ಯಾಕ್ ಮಾಡಿರುವ ಮತ್ತು ಕ್ಯಾನ್‌ಗಳಲ್ಲಿ ದೊರೆಯುವ ಜ್ಯೂಸ್‌ಗಳು ಕೂಡ ಆರೋಗ್ಯಕ್ಕೆ ಪೂರಕವಲ್ಲ.
