ಮನೆಯಲ್ಲೇ ತಯಾರಿಸಿ ಸಕ್ಕರೆ ಹಾಕದೆ ಆರೋಗ್ಯಕರ ಐಸ್ ಕ್ರೀಂ; ಇಲ್ಲಿದೆ ಎರಡು ರೀತಿಯ ಐಸ್ ಕ್ರೀಂ ಪಾಕವಿಧಾನ
ಐಸ್ ಕ್ರೀಮ್ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಯಾವುದೇ ಕೃತಕ ಕ್ರೀಮ್‌ಗಳಿಲ್ಲದೆ ಮತ್ತು ಸಕ್ಕರೆಯನ್ನು ಬಳಸದೆ ತಯಾರಿಸಬಹುದಾದ ಎರಡು ರೀತಿಯ ಐಸ್ ಕ್ರೀಮ್ ಪಾಕವಿಧಾನ ಇಲ್ಲಿದೆ.

ಐಸ್ ಕ್ರೀಮ್ ಇಷ್ಟಪಡದವರು ಬಹುಷಃ ಯಾರೂ ಇರಲಿಕ್ಕಿಲ್ಲ. ಮಕ್ಕಳಿಂದ ವಯಸ್ಕರವರೆಗೆ ಎಲ್ಲರೂ ಐಸ್ ಕ್ರೀಮ್ ತಿನ್ನಲು ಬಯಸುತ್ತಾರೆ. ಆದರೆ, ಬೇಸಿಗೆಯಲ್ಲಿ ಐಸ್ ಕ್ರೀಮ್ ತಿನ್ನುವ ಬಯಕೆಯನ್ನು ಹಿಡಿದಿಡುವುದು ಕಷ್ಟ. ವಿಶೇಷವಾಗಿ ಮಕ್ಕಳಿಗಂತೂ ಐಸ್ ಕ್ರೀಂ ಅಂದ್ರೆ ಬಹಳ ಇಷ್ಟ. ಹೀಗಾಗಿ ಮಕ್ಕಳಿಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಐಸ್ ಕ್ರೀಮ್ ಅನ್ನು ಖರೀದಿಸಿ ತರುತ್ತೇವೆ. ಆದರೆ, ಮನೆಯಲ್ಲೇ ಸುಲಭವಾಗಿ ಐಸ್ ಕ್ರೀಂ ತಯಾರಿಸಬಹುದು.
ಮನೆಯಲ್ಲೇ ಆರೋಗ್ಯಕರವಾಗಿ ಐಸ್ ಕ್ರೀಂ ತಯಾರಿಸಬಹುದು. ಕೆಲವರು ಮನೆಯಲ್ಲೇ ಐಸ್ ಕ್ರೀಂ ತಯಾರಿಸುವಾಗ ಸಕ್ಕರೆ ಬಳಸುತ್ತಾರೆ. ಸಕ್ಕರೆ ಹಾಕದೆಯೂ ರುಚಿಕರವಾಗಿ ಐಸ್ ಕ್ರೀಂ ಮಾಡಬಹುದು. ಕಲ್ಲಂಗಡಿ ಐಸ್ ಕ್ರೀಂ ಮತ್ತು ಒಣ ಹಣ್ಣುಗಳಿಂದ ತಯಾರಿಸಲಾಗುವ ಐಸ್ ಕ್ರೀಂ ಬಹಳ ರುಚಿಕರವಾಗಿರುತ್ತದೆ. ಸಕ್ಕರೆ ಹಾಕದೆ ಮನೆಯಲ್ಲೇ ಕಲ್ಲಂಗಡಿ ಐಸ್ ಕ್ರೀಮ್ ಮತ್ತು ಡ್ರೈ ಫ್ರೂಟ್ಸ್ (ಒಣ ಹಣ್ಣುಗಳ) ಐಸ್ ಕ್ರೀಮ್ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಕಲ್ಲಂಗಡಿ ಐಸ್ ಕ್ರೀಮ್ ತಯಾರಿಸುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಕಲ್ಲಂಗಡಿ – 1, ನಿಂಬೆ ರಸ – 1, ಜೇನುತುಪ್ಪ - 3 ಚಮಚ.
ಮಾಡುವ ವಿಧಾನ: ಕಲ್ಲಂಗಡಿ ಐಸ್ ಕ್ರೀಮ್ ತಯಾರಿಸಲು ಮೊದಲು ಕಲ್ಲಂಗಡಿಯನ್ನು ತೆಗೆದುಕೊಂಡು ಅದನ್ನು ದೊಡ್ಡ ತುಂಡುಗಳಾಗಿ ಕತ್ತರಿಸಿ. ನಂತರ ಅವುಗಳಿಂದ ಎಲ್ಲಾ ಬೀಜಗಳನ್ನು ತೆಗೆದು ಮಿಕ್ಸರ್ ಜಾರ್‌ನಲ್ಲಿ ಹಾಕಿ. ಈಗ ಈ ಮಿಶ್ರಣಕ್ಕೆ ನಿಂಬೆ ರಸ ಮತ್ತು ಜೇನುತುಪ್ಪವನ್ನು ಬೆರೆಸಿ.
ಈ ಮಿಶ್ರಣವನ್ನು ಐಸ್ ಕ್ರೀಮ್ ಅಚ್ಚುಗಳಲ್ಲಿ ಅಥವಾ ಸಣ್ಣ ಲೋಟಗಳಲ್ಲಿ ಇರಿಸಿ. ಗಾಳಿಯು ಒಳಗೆ ಹೋಗದಂತೆ ಮುಚ್ಚಳವನ್ನು ಬಿಗಿಗೊಳಿಸಿ. ಇದನ್ನು ಡೀಪ್ ಫ್ರಿಜ್‌ನಲ್ಲಿ ಇರಿಸಿ. ಹತ್ತು ಗಂಟೆಗಳ ಕಾಲ ಬಿಡಿ. ಅಷ್ಟೇ, ಆರೋಗ್ಯಕರ ಮತ್ತು ರುಚಿಕರವಾದ ಐಸ್ ಕ್ರೀಮ್ ಸಿದ್ಧ
ಡ್ರೈ ಫ್ರೂಟ್ಸ್ ಐಸ್ ಕ್ರೀಮ್ ತಯಾರಿಸುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಬಾದಾಮಿ - 1 ಕಪ್, ಗೋಡಂಬಿ - 1 ಕಪ್, ಮಖಾನಾ - 1 ಕಪ್, ಖರ್ಜೂರ (ಬೀಜರಹಿತ) - 10 ರಿಂದ 15, ಕೋಕೋ ಪೌಡರ್ - 1/2 ಕಪ್, ವೆನಿಲ್ಲಾ ಎಸೆನ್ಸ್ - 1/2 ಚಮಚ, ಹಾಲು - 1 ಕಪ್, ಬಿಸಿ ನೀರು.
ತಯಾರಿಸುವ ವಿಧಾನ: ಡ್ರೈ ಫ್ರೂಟ್ಸ್ (ಒಣ ಹಣ್ಣು) ಐಸ್ ಕ್ರೀಮ್ ತಯಾರಿಸುವ ಮೊದಲು ಮಿಕ್ಸಿಂಗ್ ಬೌಲ್ ತೆಗೆದುಕೊಳ್ಳಿ. ಅದಕ್ಕೆ ಬಾದಾಮಿ, ಗೋಡಂಬಿ ಮತ್ತು ಮಖಾನಾ ಸೇರಿಸಿ. ಅವು ಮುಳುಗುವವರೆಗೆ ಬಿಸಿ ನೀರನ್ನು ಹಾಕಿ ಪಕ್ಕಕ್ಕೆ ಇರಿಸಿ.
ಅರ್ಧ ಗಂಟೆ ನೆನೆಸಿದ ನಂತರ ಅವುಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ. ಈ ಮಿಕ್ಸರ್ ಜಾರ್‌ನಲ್ಲಿ ಬೀಜಗಳು, ಬೀಜ ತೆಗೆದ ಖರ್ಜೂರ, ಕೋಕೋ ಪೌಡರ್, ವೆನಿಲ್ಲಾ ಎಸೆನ್ಸ್ ಜೊತೆಗೆ ಒಂದು ಕಪ್ ಹಾಲಿನೊಂದಿಗೆ ಬೆರೆಸಿ ದಪ್ಪ ಪೇಸ್ಟ್ ಆಗಿ ಮಿಶ್ರಣ ಮಾಡಿ.
ಈಗ ಈ ಮಿಶ್ರಣವನ್ನು ಗಾಜಿನ ಪಾತ್ರೆ ಅಥವಾ ಐಸ್ ಕ್ರೀಮ್ ಅಚ್ಚುಗಳಲ್ಲಿ ಹಾಕಿ ಮತ್ತು ಮುಚ್ಚಳವನ್ನು ಬಿಗಿಯಾಗಿ ಬಿಗಿಗೊಳಿಸಿ. ಇದನ್ನು 8 ರಿಂದ 10 ಗಂಟೆಗಳ ಕಾಲ ಡೀಪ್ ಫ್ರಿಜ್‌ನಲ್ಲಿಡಿ. ನಂತರ ಹೊರತೆಗೆದರೆ ಆರೋಗ್ಯಕರ ಮತ್ತು ರುಚಿಕರವಾದ ಒಣ ಹಣ್ಣುಗಳ ಐಸ್ ಕ್ರೀಮ್ ಸವಿಯಲು ಸಿದ್ಧ.
ಇದನ್ನೂ ಓದಿ: ಖರ್ಜೂರದ ಐಸ್ ಕ್ರೀಂ ತಯಾರಿಸುವ ಸರಳ ವಿಧಾನ ಇಲ್ಲಿದೆ
