Heart Attack: ಒತ್ತಡದ ಜೀವನಕ್ಕೂ ಹೃದಯಾಘಾತಕ್ಕೂ ಇದೆ ಸಂಬಂಧ; ವೈದ್ಯರು ಹೇಳುವ ಕಾರಣ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Heart Attack: ಒತ್ತಡದ ಜೀವನಕ್ಕೂ ಹೃದಯಾಘಾತಕ್ಕೂ ಇದೆ ಸಂಬಂಧ; ವೈದ್ಯರು ಹೇಳುವ ಕಾರಣ ಹೀಗಿದೆ

Heart Attack: ಒತ್ತಡದ ಜೀವನಕ್ಕೂ ಹೃದಯಾಘಾತಕ್ಕೂ ಇದೆ ಸಂಬಂಧ; ವೈದ್ಯರು ಹೇಳುವ ಕಾರಣ ಹೀಗಿದೆ

ಹೃದಯಾಘಾತ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಗೆ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ತುತ್ತಾಗುತ್ತಿದ್ದಾರೆ. ಒತ್ತಡದ ಜೀವನಶೈಲಿಯಿಂದ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ ಎಂದು ವೈದ್ಯರು ಹೇಳುತ್ತಾರೆ. ಹೃದಯಾಘಾತಕ್ಕೆ ಕಾರಣಗಳೇನು?

ಒತ್ತಡದ ಜೀವನಶೈಲಿಯಿಂದ ಹೃದಯಾಘಾತ ಪ್ರಕರಣ ಹೆಚ್ಚುತ್ತಿದೆ
ಒತ್ತಡದ ಜೀವನಶೈಲಿಯಿಂದ ಹೃದಯಾಘಾತ ಪ್ರಕರಣ ಹೆಚ್ಚುತ್ತಿದೆ (pixabay)

ಯುವಜನತೆ ಹಠಾತ್ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆಯಲ್ಲಿಯೂ ಏರಿಕೆ ಕಂಡುಬಂದಿರುವುದು ಆಧುನಿಕ ಜೀವನಶೈಲಿಯ ಕೊಡುಗೆ ಎಂದೇ ಹೇಳಬಹುದು. ನಮ್ಮ ದಿನನಿತ್ಯದ ಚಟುವಟಿಕೆ, ಆಹಾರ ಸಹಿತ ಹಲವು ಅಂಶಗಳು ಹೃದಯದ ಮೇಲೆ ಅಧಿಕ ಒತ್ತಡ ಮತ್ತು ಪ್ರಭಾವ ಬೀರಿದ್ದರಿಂದ ಹೃದಯಾಘಾತಗಳ ಸಂಖ್ಯೆಯಲ್ಲಿ ಹೆಚ್ಚಾಗಿದೆ ಎನ್ನುವುದು ವೈದ್ಯರ ಹೇಳಿಕೆ. ಅದರಲ್ಲೂ 20ರಿಂದ 40 ವರ್ಷದೊಳಗಿನವರಲ್ಲೇ ಹೃದಯ ಸಂಬಂಧಿ ಕಾಯಿಲೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇದು ನಿಜಕ್ಕೂ ಆತಂಕಕಾರಿಯಾಗಿದೆ.

ಯುವಜನತೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಮುಂಬೈನ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ. ಮನಿಷ್ ಹಿಂದುಜಾ ಅವರು ಹಿಂದೂಸ್ತಾನ್ ಟೈಮ್ಸ್ ಜತೆ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಕೊಲೆಸ್ಟ್ರಾಲ್, ಅತಿಯಾದ ಒತ್ತಡ ಮತ್ತು ಧೂಮಪಾನ ಇದಕ್ಕೆ ಸಾಂಪ್ರದಾಯಿಕ ಕಾರಣಗಳು. ಆದರೆ ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯ ಪರಿಣಾಮ ಯುವಜನರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ ಎಂದು ಹೇಳಿದ್ದಾರೆ.

ಒತ್ತಡದಿಂದ ಹೃದಯಾಘಾತ

ಯುವಜನತೆ ಇಂದು ಹಲವು ರೀತಿಯ ಒತ್ತಡದಿಂದ ಬದುಕುತ್ತಿದ್ದಾರೆ. ಹಲವು ರೀತಿಯ ಒತ್ತಡಗಳು ಅವರನ್ನು ಬಾಧಿಸುತ್ತಿವೆ. ಮಾನಸಿಕ ದೈಹಿಕ ಒತ್ತಡದ ಜತೆಗೇ, ಉದ್ಯೋಗ, ಆರ್ಥಿಕ ಸಮಸ್ಯೆ ಹೀಗೆ ಹಲವು ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದಾರೆ. ಅದರ ಪರಿಣಾಮ ದೇಹದಲ್ಲಿ ಕಾರ್ಟಿಸೊಲ್ ಮತ್ತು ಅಡ್ರೆನಲಿನ್ ಹಾರ್ಮೋನ್‌ಗಳ ಸ್ರವಿಸುವಿಕೆಯಲ್ಲಿ ಹೆಚ್ಚಳವಾಗುತ್ತದೆ. ಇದರಿಂದಾಗಿ ಹೃದಯ ಬಡಿತ ಮತ್ತು ರಕ್ತ ಪರಿಚಲನೆ, ಒಟ್ಟಾರೆ ಹೃದಯದ ಕಾರ್ಯದ ಮೇಲೆ ಅಧಿಕ ಒತ್ತಡ ಉಂಟಾಗುತ್ತದೆ. ಅದು ನಿರಂತರವಾಗಿ, ಮಿತಿಮೀರಿದ ಒತ್ತಡ ಉಂಟಾದ ಸಂದರ್ಭದಲ್ಲಿ ರಕ್ತನಾಳಗಳಿಗೂ ಹಾನಿಯಾಗುತ್ತದೆ. ಅದರ ಪರಿಣಾಮ ಹೃದಯದಲ್ಲಿ ವಿವಿಧ ಸಮಸ್ಯೆ ಕಾಣಿಸಿಕೊಳ್ಳಬಹುದು ಮತ್ತು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಅಧಿಕವಾಗಿದೆ ಎಂದು ಡಾ. ಮನಿಷ್ ಹೇಳುತ್ತಾರೆ.

ನಿರಂತರ ಒತ್ತಡದಿಂದ ಹೃದಯದ ಮೇಲೆ ಪರಿಣಾಮವೇನು?

ಹೃದಯದ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಾಸವಾದರೆ ಅದಕ್ಕೆ ಒತ್ತಡ ಕಾರಣ. ಆಧುನಿಕ ಜೀವನಶೈಲಿ ಮತ್ತು ಆಹಾರವೂ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಹೃದಯದ ಕಾರ್ಯಕ್ಷಮತೆಯ ಮಿತಿಯಲ್ಲಿ ಏರಿಕೆಯಾದಾಗ ಹಠಾತ್ ಹೃದಯಾಘಾತ ಸಂಭವಿಸಬಹುದು. ಅಧಿಕ ಒತ್ತಡದ ಪರಿಣಾಮ ಹೃದಯದ ಸ್ನಾಯುಗಳು ಸಡಿಲವಾಗಬಹುದು. ಅದರಿಂದ ಹೃದಯ ಸಂಬಂಧಿ ಸಮಸ್ಯೆ ಎದುರಾಗುತ್ತವೆ ಎಂದು ವೈದ್ಯರು ಹೇಳುತ್ತಾರೆ.

ಹೃದಯಕ್ಕೆ ಒತ್ತಡ ಹೆಚ್ಚಾಗಲು ಕಾರಣವೇನು?

ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿರುವ ಯುವಜನರಲ್ಲಿ ಅಧಿಕ ಪ್ರಮಾಣದ ಧೂಮಪಾನ, ಮದ್ಯಪಾನ ಮತ್ತು ಮಿತಿಯಿಲ್ಲದೇ ತಿನ್ನುವುದು ಕಂಡುಬಂದಿದೆ. ಅಲ್ಲದೆ, ನಿದ್ರಾಹೀನತೆ ಮತ್ತು ದೈಹಿಕ ಚಟುವಟಿಕೆಯಲ್ಲಿ ಇಳಿಕೆಯಾಗಿರುವುದರಿಂದ, ವಿವಿಧ ಆರೋಗ್ಯ ಸಮಸ್ಯೆಗಳು ಎದುರಾಗಿವೆ.

ಒತ್ತಡವನ್ನು ನಿವಾರಿಸುವುದು ಹೇಗೆ?

ಹೃದಯದ ಮೇಲೆ ಬೀಳುತ್ತಿರುವ ಅಧಿಕ ಒತ್ತಡವನ್ನು ನಿವಾರಿಸಿದರೆ, ಆರೋಗ್ಯವಂತ ಹೃದಯ ಸಾಮಾನ್ಯ ರೀತಿಯಲ್ಲೇ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಅಲ್ಲದೆ, ಧ್ಯಾನ, ಯೋಗ ಮತ್ತು ವ್ಯಾಯಾಮ ಮಾಡುವುದರಿಂದ ಒತ್ತಡ ನಿವಾರಿಸಬಹುದು. ಐಟಿ ಬಿಟಿ ಮತ್ತು ಸದಾ ಕುಳಿತುಕೊಂಡೇ ಕೆಲಸ ಮಾಡುವವರು ಕೂಡ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ. ಸಾಧ್ಯವಿರುವಲ್ಲಿ ವಾಹನ ಬಿಟ್ಟು ನಡಿಗೆಯಲ್ಲಿ ಪಾಲ್ಗೊಳ್ಳುವುದು ಮತ್ತು ಬಿಡುವಿನ ಅವಧಿಯಲ್ಲಿ ಮನಸ್ಸು ಉಲ್ಲಾಸವಾಗುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಕೂಡ ತಕ್ಕಮಟ್ಟಿಗೆ ಪ್ರಯೋಜನ ನೀಡುತ್ತದೆ. ಬ್ಯುಸಿ ಕೆಲಸದ ಮಧ್ಯೆ ಪುಟ್ಟ ಬ್ರೇಕ್ ತೆಗೆದುಕೊಂಡು, ಅದರಲ್ಲಿ ಧೂಮಪಾನ ಮಾಡುವುದನ್ನು ಬಿಟ್ಟು ಆರೋಗ್ಯಕರ ಅಭ್ಯಾಸ ರೂಢಿಸಿಕೊಂಡರೆ, ಆರೋಗ್ಯಕ್ಕೆ ಪೂಕರವಾಗಿರುತ್ತದೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner