Heart Attack: ಬದಲಾದ ಜೀವನಶೈಲಿಯಿಂದ ಹೃದಯ ಸಮಸ್ಯೆಗಳು ಕಾಡುತ್ತಿವೆಯೇ? ವೈದ್ಯರ ಈ ಸರಳ ಟಿಪ್ಸ್ ಪಾಲಿಸಿದರೆ ಉತ್ತಮ ಆರೋಗ್ಯ ನಿಮ್ಮದಾಗುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  Heart Attack: ಬದಲಾದ ಜೀವನಶೈಲಿಯಿಂದ ಹೃದಯ ಸಮಸ್ಯೆಗಳು ಕಾಡುತ್ತಿವೆಯೇ? ವೈದ್ಯರ ಈ ಸರಳ ಟಿಪ್ಸ್ ಪಾಲಿಸಿದರೆ ಉತ್ತಮ ಆರೋಗ್ಯ ನಿಮ್ಮದಾಗುತ್ತೆ

Heart Attack: ಬದಲಾದ ಜೀವನಶೈಲಿಯಿಂದ ಹೃದಯ ಸಮಸ್ಯೆಗಳು ಕಾಡುತ್ತಿವೆಯೇ? ವೈದ್ಯರ ಈ ಸರಳ ಟಿಪ್ಸ್ ಪಾಲಿಸಿದರೆ ಉತ್ತಮ ಆರೋಗ್ಯ ನಿಮ್ಮದಾಗುತ್ತೆ

ಹೃದಯದ ಕುರಿತು ಎಷ್ಟು ಕಾಳಜಿ ವಹಿಸಿದರೂ ಸಾಲದು ಎನ್ನುವ ಪರಿಸ್ಥಿತಿ ಇದೆ. ಲಾಕ್‌ಡೌನ್ ಬಳಿಕವಂತೂ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ. ಹದಿಹರೆಯದವರು ಕೂಡ ಹೃದಯಾಘಾತಕ್ಕೆ ಸಿಲುಕಿ ಅಕಾಲ ಮರಣಕ್ಕೆ ತುತ್ತಾಗುತ್ತಿದ್ದಾರೆ. ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಒಂದಿಷ್ಟು ಟಿಪ್ಸ್ ಇಲ್ಲಿವೆ.

ಹೃದಯದ ಕುರಿತು ಎಷ್ಟು ಕಾಳಜಿ ವಹಿಸಿದರೂ ಸಾಲದು ಎನ್ನುವ ಪರಿಸ್ಥಿತಿ
ಹೃದಯದ ಕುರಿತು ಎಷ್ಟು ಕಾಳಜಿ ವಹಿಸಿದರೂ ಸಾಲದು ಎನ್ನುವ ಪರಿಸ್ಥಿತಿ (pixabay)

ಹೃದಯಾಘಾತ.. ಹೆಸರು ಕೇಳುವಾಗಲೇ ಒಂದು ರೀತಿಯ ಆಘಾತವಾಗುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ವಿಪರೀತ ಎನ್ನಿಸುವಷ್ಟು ಹೆಚ್ಚಾಗಿದೆ. ಮಕ್ಕಳು ಹಿರಿಯರು ಎನ್ನದೆ, ಹೃದಯದ ಸಮಸ್ಯೆಗೆ ತುತ್ತಾಗುವವರು, ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಒತ್ತಡ, ಬ್ಯುಸಿ ಜೀವನಶೈಲಿ ಇದಕ್ಕೆ ಕಾರಣ ಎಂದು ವೈದ್ಯರು ಹೇಳುತ್ತಾರೆ.

ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿರುವುದು ಇಂದಿನ ತುರ್ತು. ಇಲ್ಲವಾದರೆ ಹೃದಯ ಹದಗಡೆಬಹುದು. ಹೀಗಾಗಿ ಹೃದಯ ಸಂಬಂಧಿತ ಸಮಸ್ಯೆಗಳು ಎದುರಾಗುತ್ತಿದ್ದರೆ, ಅಂತಹ ಸಂದರ್ಭದಲ್ಲಿ ಕೂಡಲೇ ವೈದ್ಯರ ಬಳಿ ತೆರಳಿ ಪರೀಕ್ಷಿಸುವುದು ಒಳಿತು. ಇದಕ್ಕಾಗಿ ದೈನಂದಿನ ಕೆಲಸದ ನಡುವೆ ಮತ್ತು ಪ್ರತಿದಿನವೂ ಕೆಲವೊಂದು ಸರಳ ಅಭ್ಯಾಸಗಳನ್ನು ಕೈಗೊಂಡರೆ ಹೃದಯ ನೆಮ್ಮದಿಯಿಂದ ಇರಬಹುದು ಎಂದು ಮುಂಬೈನ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪುರಭಿ ಕೋಚ್ ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಹೃದಯದ ಆರೋಗ್ಯಕ್ಕೆ ವೈದ್ಯರು ಹೇಳಿರುವ ಈ ಸರಳ ಟಿಪ್ಸ್

ಸೂಕ್ತ ಆಹಾರ

ಸಾಧ್ಯವಾದಷ್ಟು ಮನೆಯಲ್ಲೇ ತಯಾರಿಸಿದ ಆಹಾರವನ್ನು ಸೇವಿಸಿ. ಹೃದಯದ ಆರೋಗ್ಯಕ್ಕೆ ಪೂರಕವಾದ ಬೇಳೆ ಕಾಳು, ದವಸಧಾನ್ಯ, ಮೀನು ಮತ್ತು ಹಣ್ಣು, ತರಕಾರಿಗಳು ನಿಮ್ಮ ಊಟದಲ್ಲಿರಲಿ. ಊಟದ ಬದಲು ಎನರ್ಜಿ ಬಾರ್, ಶೇಕ್ ಜ್ಯೂಸ್ ಕುಡಿಯುವುದು ಒಳ್ಳೆಯ ಅಭ್ಯಾಸವಲ್ಲ. ಸಮತೋಲಿತ ಆಹಾರ ನಿಮ್ಮದಾಗಿರಲಿ.

ದೈಹಿಕ ಚಟುವಟಿಕೆ

ದಿನವೂ ಕುಳಿತುಕೊಂಡೇ ಕೆಲಸ ಮಾಡುವ ಈ ದಿನಗಳಲ್ಲಿ, ಕಾರ್ಪೊರೇಟ್ ಸಂಸ್ಕೃತಿಯಿಂದಾಗಿ ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿದೆ. ಮನೆಬಾಗಿಲಿಗೆ ಪಿಕಪ್-ಡ್ರಾಪ್ ಇರುವುದರಿಂದ, ಕನಿಷ್ಠ ಮಟ್ಟದ ನಡಿಗೆಯೂ ಇಲ್ಲವಾಗುತ್ತಿದೆ. ಹೀಗಾಗಿ ದೈಹಿಕ ಚಟುವಟಿಕೆ ಇಲ್ಲದೇ ಹೋದರೆ ಅದರಿಂದ ವಿವಿಧ ರೀತಿಯ ದೀರ್ಘಕಾಲಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅದಕ್ಕಾಗಿ ಸಾಧ್ಯವಾದಷ್ಟು ನಡಿಗೆ, ವ್ಯಾಯಾಮ ಮಾಡಿ.

ನಿದ್ರೆ

ನಿದ್ರೆ ಸರಿಯಾಗಿದ್ದರೆ, ಇದೊಂದು ಔಷಧಿಯಂತೆ ಕೆಲಸ ಮಾಡುತ್ತದೆ. ಆರೋಗ್ಯವಂತ ಮನುಷ್ಯ ಸಾಕಷ್ಟು ನಿದ್ರೆ ಮಾಡದೇ ಹೋದರೆ ಅದರಿಂದ ಸಮಸ್ಯೆಯಾಗಬಹುದು. ಕನಿಷ್ಠ 6-8 ಗಂಟೆಗಳ ಸುಖಕರ ನಿದ್ರೆ ಇದ್ದರೆ, ಹೃದಯದ ಜತೆಗೆ ನಮ್ಮ ಮಾನಸಿಕ, ದೈಹಿಕ ಆರೋಗ್ಯವೂ ಚೆನ್ನಾಗಿರುತ್ತದೆ.

ನೀರು ಕುಡಿಯಿರಿ

ದಿನಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಸಾಧ್ಯವಾದಷ್ಟು ಕಾಫಿ, ಟೀ, ಮದ್ಯ ಮತ್ತು ಎನರ್ಜಿ ಡ್ರಿಂಕ್‌ಗಳನ್ನು ತ್ಯಜಿಸಿ. ದಿನಕ್ಕೆ ಕನಿಷ್ಠ ಮೂರು ಲೀಟರ್ ನೀರು ಕುಡಿಯುವುದನ್ನು ಮರೆಯಬೇಡಿ.

ಇದನ್ನೂ ಓದಿ: ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಬೆಳಗಿನ ಈ ಅಭ್ಯಾಸಗಳು

ಧೂಮಪಾನ ಬೇಡ

ಬೀಡಿ, ಸಿಗರೇಟ್ ತ್ಯಜಿಸಿ, ಅದು ಯಾವತ್ತಿಗೂ ಒಳ್ಳೆಯದಲ್ಲ. ಅದರ ಬದಲಿಗೆ ಇ-ಸಿಗರೇಟ್, ನಿಕೋಟಿನ್ ಗಮ್ ಕೂಡ ಬಳಸಬಾರದು. ಅದರಿಂದಲೂ ಹೃದಯಕ್ಕೆ ಹಾನಿಯಾಗುತ್ತದೆ.

ಯೋಗ-ಧ್ಯಾನ

ಯೋಗ, ಧ್ಯಾನ, ಪ್ರಾಣಾಯಾಮದಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಇದರಿಂದ ಮನಸ್ಸು ಉಲ್ಲಸಿತವಾಗುತ್ತದೆ.

ಆರೋಗ್ಯ ತಪಾಸಣೆ

ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ, ಕೊಬ್ಬು ಇತ್ಯಾದಿಗಳನ್ನು ಪರಿಶೀಲಿಸಿ, ವೈದ್ಯರ ಸಲಹೆ ಪಡೆಯಿರಿ.

Whats_app_banner