ಕನ್ನಡ ಸುದ್ದಿ  /  Lifestyle  /  High Fat Food And Health: Afraid Of Eating Fatty Foods? These Ingredients Are So Good For Health That You Have To Believe!

high fat food: ಕೊಬ್ಬಿನಾಂಶ ಇರುವ ಆಹಾರ ಪದಾರ್ಥ ತಿನ್ನಲು ಭಯ ಪಡುತ್ತೀರಾ? ಈ ಪದಾರ್ಥಗಳು ಆರೋಗ್ಯಕ್ಕೆ ಉತ್ತಮ ಎಂದರೆ ನಂಬಲೇಬೇಕು!

high fat food and health: ಕೊಬ್ಬಿನಾಂಶ ಅಧಿಕವಿರುವ ಆಹಾರ ಪದಾರ್ಥಗಳ ಸೇವನೆ ಒಳ್ಳೆಯದಲ್ಲ. ಇದರಿಂದ ಆರೋಗ್ಯಕ್ಕೆ ತೊಂದರೆ ಉಂಟಾಗುತ್ತದೆ ಎನ್ನುತ್ತಾರೆ. ಆ ಕಾರಣಕ್ಕೆ ಹಲವರು ಕೊಬ್ಬಿನಾಂಶ ಇರುವ ಆಹಾರ ಪದಾರ್ಥಗಳನ್ನು ಸೇವಿಸುವುದಿಲ್ಲ. ಆದರೆ ಅಧ್ಯಯನಗಳ ಪ್ರಕಾರ ಹೆಚ್ಚು ಕೊಬ್ಬಿನಾಂಶ ಇರುವ ಈ ಆಹಾರ ಪದಾರ್ಥಗಳಲ್ಲಿ ಹಲವು ರೀತಿಯ ಆರೋಗ್ಯ ಪ್ರಯೋಜನಗಳಿವೆ.

ಚೀಸ್‌
ಚೀಸ್‌

ಕೊಬ್ಬಿನಾಂಶ ಅಧಿಕವಾಗಿರುವ ಆಹಾರ ಪದಾರ್ಥಗಳ ಸೇವನೆಯಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎನ್ನುವ ಕಾರಣಕ್ಕೆ ನಾವು ಆದಷ್ಟು ಕಡಿಮೆ ಕೊಬ್ಬಿನಾಂಶ ಇರುವ ಪದಾರ್ಥಗಳನ್ನು ಸೇವಿಸುತ್ತೇವೆ. ಆದರೆ ಡೇರಿ ಉತ್ಪನ್ನಗಳು, ಮೊಟ್ಟೆ, ಅವಕಾಡೊ ಇಂತಹ ಅಧಿಕ ಕೊಬ್ಬಿನಾಂಶ ಇರುವ ಆಹಾರ ಪದಾರ್ಥಗಳಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಇದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ ಎನ್ನುತ್ತಾರೆ ತಜ್ಞರು. ಇವುಗಳಲ್ಲಿ ಪ್ರೊಟೀನ್‌, ನಾರಿನಂಶ ಹಾಗೂ ಹಲವು ಬಗೆಯ ವಿಟಮಿನ್‌ ಅಂಶಗಳಿವೆ. ಹಾಗಾದರೆ ಅಧಿಕ ಕೊಬ್ಬಿನಂಶವಿದ್ದು, ಆರೋಗ್ಯಕ್ಕೆ ಉಪಯುಕ್ತ ಎನ್ನಿಸುವ ಆಹಾರಗಳು ಪದಾರ್ಥಗಳು ಯಾವುವು?

ಅವಕಾಡೊ (ಬೆಣ್ಣೆಹಣ್ಣು)

ಬಟರ್‌ಫ್ರೂಟ್‌ ಅಥವಾ ಅವಕಾಡೊ ಹಣ್ಣಿನಲ್ಲಿ ಕೊಬ್ಬಿನಾಂಶ ಅಧಿಕವಾಗಿದೆ. ಇದರೊಂದಿಗೆ ಇದರಲ್ಲಿ ಪೊಟ್ಯಾಶಿಯಂ ಅಂಶ ಕೂಡ ಹೆಚ್ಚಿದೆ. ಅವಕಾಡೊ ನಿರಂತರ ಸೇವನೆಯಿಂದ ಕೊಲೆಸ್ಟ್ರಾಲ್‌ ಪ್ರಮಾಣವನ್ನು ನಿಯಂತ್ರಿಸಬಹುದು. ಇದರಲ್ಲಿ ನಾರಿನಾಂಶವು ಸಮೃದ್ಧವಾಗಿದೆ. ಇದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ, ಹೃದಯದ ಆರೋಗ್ಯ ಹಾಗೂ ತೂಕ ನಿಯಂತ್ರಣಕ್ಕೂ ಇದು ಉತ್ತಮ.

ಚೀಸ್‌

ಚೀಸ್‌ನಲ್ಲಿ ಕೊಬ್ಬಿನಾಂಶ ಹೆಚ್ಚಿದೆ ನಿಜ, ಆದರೆ ಇದರಲ್ಲಿ ಪೌಷ್ಟಿಕಾಂಶವೂ ಅಷ್ಟೇ ಪ್ರಮಾಣದಲ್ಲಿದೆ. ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್‌ ಬಿ12, ಫಾಸ್ಫರಸ್‌, ಸೆಲೆನಿಯಂ ಅಂಶಗಳಿವೆ. ಆ ಕಾರಣಕ್ಕೆ ಚೀಸ್‌ ಸೇವನೆ ದೇಹಾರೋಗ್ಯಕ್ಕೆ ಉತ್ತಮ.

ಡಾರ್ಕ್‌ ಚಾಕೊಲೇಟ್‌

ಡಾರ್ಕ್‌ ಚಾಕೊಲೇಟ್‌ಗಳಲ್ಲಿ ನಾರಿನಾಂಶ ಅಧಿಕವಾಗಿದೆ. ಇದರಲ್ಲಿ ಕಬ್ಬಿಣಾಂಶ ಹಾಗೂ ಮೆಗ್ನೀಶಿಯಂ ಪ್ರಮಾಣವು ಹೆಚ್ಚಿದೆ. ಇದು ರೆಸ್ವೆರಾಟ್ರೊಮ್‌ನಂತಹ ಆಂಟಿ ಆಕ್ಸಿಡೆಂಟ್‌ ಅಂಶವನ್ನು ಹೊಂದಿದೆ. ಉತ್ಕರ್ಷಣ ವಿರೋಧಿಯಾಗಿದ್ದು, ಅಕಾಲಿಕ ವಯಸ್ಸಿನ ಲಕ್ಷಣಗಳನ್ನು ನಿಯಂತ್ರಿಸುತ್ತದೆ.

ಮೊಟ್ಟೆ

ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದ್ದು ಅಥವಾ ಕೆಟ್ಟದ್ದು ಎನ್ನುವ ಬಗ್ಗೆ ಜಿಜ್ಞಾಸೆ ಮುಂದುವರಿದಿದೆ. ಮೊಟ್ಟೆಯ ಹಳದಿ ಭಾಗದಲ್ಲಿ ಕೊಬ್ಬು ಹಾಗೂ ಕೊಲೆಸ್ಟ್ರಾಲ್‌ ಅಂಶ ಅಧಿಕವಾಗಿದೆ ಎನ್ನುವ ಕಾರಣಕ್ಕೆ ಹೃದಯ ಸಂಬಂಧಿ, ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೆ ಇದು ಒಳ್ಳೆಯದಲ್ಲ ಎನ್ನುತ್ತಾರೆ. ಆದರೆ ಅಧ್ಯಯನಗಳ ಪ್ರಕಾರ ಮೊಟ್ಟೆಯ ಹಳದಿ ಭಾಗದಲ್ಲಿರುವ ಕೊಲೆಸ್ಟ್ರಾಲ್‌ ರಕ್ತದಲ್ಲಿನ ಕೊಲೆಸ್ಟ್ರಾಲ್‌ ಅಂಶದ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರುವುದಿಲ್ಲ. ಮೊಟ್ಟೆಯಲ್ಲಿ ಪೋಷಕಾಂಶಗಳ ಪ್ರಮಾಣ ದಟ್ಟವಾಗಿದ್ದು, ಇದು ವಿವಿಧ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ. ಪ್ರೊಟೀನ್‌ ಅಂಶ ಅಧಿಕವಾಗಿರುವ ಕಾರಣದಿಂದ ತೂಕ ಇಳಿಸುವವರು ಇದರ ಸೇವನೆಗೆ ಹೆಚ್ಚಿನ ಒತ್ತು ನೀಡುತ್ತಾರೆ.

ಫ್ಯಾಟಿ ಫಿಶ್‌

ಕೊಬ್ಬಿರುವ ಮೀನುಗಳಲ್ಲಿ ಪೌಷ್ಟಿಕಾಂಶದ ಪ್ರಮಾಣ ಅಧಿಕವಾಗಿರುತ್ತದೆ. ಪ್ರಾಣಿ ಪ್ರೊಟೀನ್‌ ಮೂಲಗಳಲ್ಲೇ ಅತಿ ಹೆಚ್ಚು ಪ್ರೊಟೀನ್‌ ಅಂಶ ಹೊಂದಿರುವುದು ಮೀನು. ಸಾಲ್ಮನ್‌, ಬೂತಾಯಿ, ಬಂಗುಡೆಯಂತಹ ಮೀನುಗಳಲ್ಲಿ ಪ್ರೊಟೀನ್‌ ಅಂಶ ಅಧಿಕವಾಗಿದೆ. ಈ ಮೀನುಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳ ಪ್ರಮಾಣ ಹೆಚ್ಚಿದೆ, ವಿಟಮಿನ್‌ ಹಾಗೂ ಖನಿಜಾಂಶಗಳ ಪ್ರಮಾಣವೂ ಅಧಿಕವಾಗಿದೆ. ಇವು ನೆನಪಿನ ಶಕ್ತಿ ಹೆಚ್ಚಳಕ್ಕೆ ನೆರವಾಗುತ್ತವೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ, ಹೃದಯ ಸಂಬಂಧಿ ಸಮಸ್ಯೆಗಳನ್ನೂ ದೂರ ಮಾಡುತ್ತವೆ.

ವರ್ಜಿನ್ ಆಲಿವ್ ಎಣ್ಣೆ

ಹೆಚ್ಚುವರಿ ವರ್ಜಿನ್‌ ಅಂಶ ಇರುವ ಆಲಿವ್‌ ಎಣ್ಣೆಯಲ್ಲಿ ಕೊಬ್ಬಿನಾಂಶ ಅಧಿಕವಾಗಿದ್ದರೂ ಇದು ಆರೋಗ್ಯಕ್ಕೆ ಉತ್ತಮ. ಇದರಲ್ಲಿ ಓಲಿಕ್‌ ಆಮ್ಲ ಅಧಿಕವಾಗಿದೆ. ಇದು ಹೃದಯದ ಆರೋಗ್ಯ, ರಕ್ತದಲ್ಲಿನ ಸಕ್ಕರೆಯ ಪ್ರಮಾಣದ ನಿಯಂತ್ರಣ ಹಾಗೂ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

ಫ್ಯಾಟ್‌ ಇರುವ ಮೊಸರು

ಕೊಬ್ಬಿನಾಂಶ ಅಧಿಕವಾಗಿರುವ ಮೊಸರಿನಲ್ಲಿ ಪ್ರೊಟೀನ್‌ ಅಂಶ ಅಧಿಕವಾಗಿರುತ್ತದೆ. ಇದರಲ್ಲಿ ಆರೋಗ್ಯಕರ ಪ್ರೊಬಯೋಟಿಕ್‌ ಅಂಶವಿದ್ದು, ಇದು ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಅಧ್ಯಯನ ಪ್ರಕಾರ ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ, ತೂಕ ನಿಯಂತ್ರಣಕ್ಕೂ ಇದು ಸಹಕಾರಿ, ಅಲ್ಲದೆ ಹೃದಯ ಸಂಬಂಧಿ ತೊಂದರೆಗಳ ನಿವಾರಣೆಗೂ ಇದರ ಸೇವನೆ ಉತ್ತಮ.

ವಿಭಾಗ