ಚಾರ್‌ ಧಾಮ್‌ ಯಾತ್ರೆ; ಶಿವನ ಸನ್ನಿಧಾನಕ್ಕೆ ಹೋಗುವ ಮೊದಲು ಕೇದಾರನಾಥದ ಇತಿಹಾಸ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಚಾರ್‌ ಧಾಮ್‌ ಯಾತ್ರೆ; ಶಿವನ ಸನ್ನಿಧಾನಕ್ಕೆ ಹೋಗುವ ಮೊದಲು ಕೇದಾರನಾಥದ ಇತಿಹಾಸ ತಿಳಿಯಿರಿ

ಚಾರ್‌ ಧಾಮ್‌ ಯಾತ್ರೆ; ಶಿವನ ಸನ್ನಿಧಾನಕ್ಕೆ ಹೋಗುವ ಮೊದಲು ಕೇದಾರನಾಥದ ಇತಿಹಾಸ ತಿಳಿಯಿರಿ

ಕೇದಾರನಾಥ ದೇವಾಲಯದಲ್ಲಿರುವ ಶಿವಲಿಂಗವು ಸ್ವಯಂಭೂ ಲಿಂಗವಾಗಿದೆ. ಇದೇ ಕಾರಣದಿಂದ ಈ ದೇವಸ್ಥಾನವು ಮಹತ್ವಪೂರ್ಣವಾಗಿದೆ. ಶಾಸ್ತ್ರಗಳ ಪ್ರಕಾರ ಕೇದಾರನಾಥ ಮಂದಿರವನ್ನು ಪ್ರಪಥಮ ಬಾರಿಗೆ ನಿರ್ಮಾಣ ಮಾಡಿದವರು ಪಂಚ ಪಾಂಡವರು ಎಂದು ಹೇಳಲಾಗುತ್ತದೆ. ಶಿವನ ಈ ಭವ್ಯ ಮಂದಿರದ ದರ್ಶನಕ್ಕಾಗಿ ಪ್ರತಿವರ್ಷ ಸಾವಿರಾರು ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.

ಶಿವನ ಸನ್ನಿಧಾನಕ್ಕೆ ಹೋಗುವ ಮೊದಲು ಕೇದಾರನಾಥದ ಇತಿಹಾಸ ತಿಳಿಯಿರಿ
ಶಿವನ ಸನ್ನಿಧಾನಕ್ಕೆ ಹೋಗುವ ಮೊದಲು ಕೇದಾರನಾಥದ ಇತಿಹಾಸ ತಿಳಿಯಿರಿ (PTI)

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಕೇದಾರನಾಥ ಮಂದಿರವೂ ಒಂದು. ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯಲ್ಲಿದೆ. ಈ ಮಂದಿರದ ವಿಶೇಷವೇನೆಂದರೆ, ವರ್ಷದ 6 ತಿಂಗಳು ಮಾತ್ರ ದೇವಾಲಯದಲ್ಲಿ ಶಿವನ ದರ್ಶನ ಪಡೆದುಕೊಳ್ಳಬಹುದಾಗಿದೆ. ಉಳಿದ 6 ತಿಂಗಳುಗಳ ಕಾಲ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ಹೀಗಾಗಿ ದೇವಾಲಯದ ಬಾಗಿಲು ತೆರೆದ ಸಂದರ್ಭದಲ್ಲಿ ಅಧಿಕ ಸಂಖ್ಯೆಯಲ್ಲಿ ಶಿವನ ಭಕ್ತರು ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರದ ತೀರ್ಥಯಾತ್ರೆಗೆ ಸಾವಿರಾರು ಭಕ್ತರು ಕಾಯುತ್ತಿರುತ್ತಾರೆ. ಈ ಬಾರಿ ಅಕ್ಷಯ ತೃತೀಯದ ಶುಭದಿನದಂದು ಕೇದಾರನಾಥ ಕ್ಷೇತ್ರದ ಬಾಗಿಲನ್ನು ಮತ್ತೆ ತೆರೆದು ಪೂಜಾ ಕೈಂಕರ್ಯಗಳನ್ನು ಆರಂಭಿಸಲಾಗಿದೆ.

ಕೇದಾರನಾಥ ಹೆಸರು ಬರಲು ಕಾರಣವೇನು?

ಪೌರಾಣಿಕ ಕಥೆಯ ಪ್ರಕಾರ, ದೇವಾನುದೇವತೆಗಳು ಅಸುರರಿಂದ ರಕ್ಷಣೆ ಪಡೆದುಕೊಳ್ಳುವ ಸಲುವಾಗಿ ಮಹಾದೇವನಿಗೆ ಪ್ರಾರ್ಥನೆ ಸಲ್ಲಿಸಿದರು. ಆಗ ಶಿವನು ವೃಷಭನ ರೂಪದಲ್ಲಿ ಪ್ರಕಟಗೊಂಡನು. ಆ ವೃಷಭನ ಹೆಸರು ಕೋಡಾರಂ ಎಂದಾಗಿತ್ತು. ಅದು ಅಸುರರನ್ನು ನಾಶಮಾಡುವಷ್ಟು ಶಕ್ತಿಯನ್ನು ಹೊಂದಿತ್ತು. ಕೋಡಾರಂ ವೃಷಭವು ತನ್ನ ಗೊರಸು ಮತ್ತು ಕೊಂಬುಗಳಿಂದ ರಾಕ್ಷಸರನ್ನು ತಿವಿದು ನಾಶ ಮಾಡಿತು. ನಂತರ ಅದನ್ನು ಮಂದಾಕಿನಿ ನದಿಗೆ ಎಸೆಯಲಾಯ್ತು. ಇದೇ ಕೋಡಾರಂ ಹೆಸರಿನಿಂದ ಕೇದಾರನಾಥ ಎಂಬ ಹೆಸರು ಬಂದಿತು.

ಕೇದಾರನಾಥ ಮಂದಿರದ ಶಿವಲಿಂಗವು ಸ್ವಯಂಭೂ ಲಿಂಗವಾಗಿದೆ. ಇದು ಶಿವನ ಅತ್ಯಂತ ಶಕ್ತಿಶಾಲಿ ಪೀಠಗಳಲ್ಲಿ ಒಂದಾಗಿದೆ. ಕೇದಾರನಾಥ ಮಂದಿರವನ್ನು ಮೊಟ್ಟಮೊದಲ ಬಾರಿಗೆ ಪಂಚ ಪಾಂಡವರು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ನಂತರ ಜಗದ್ಗುರು ಆದಿ ಶಂಕರಾಚಾರ್ಯರು ಈ ದೇವಸ್ಥಾನವನ್ನು ಪುನರ್‌ಪ್ರತಿಷ್ಠಾಪಿಸಿದರು.

ಇದನ್ನೂ ಓದಿ | ಅಕ್ಷಯ ತೃತೀಯದಂದು ಕೇದಾರನಾಥ ಕ್ಷೇತ್ರದ ಬಾಗಿಲು ಓಪನ್; ದೇವಾಲಯ ಕುರಿತು ನಿಮಗೆ ತಿಳಿದಿರಬೇಕಾದ 6 ವಿಷಯಗಳಿವು

ಅಕ್ಷಯ ತೃತೀಯದ ಶುಭ ದಿನದಂದು ಯಮುನೋತ್ರಿ ಮತ್ತು ಗಂಗೋತ್ರಿಗಳ ಬಾಗಿಲನ್ನು ತೆರೆಯಲಾಗುತ್ತದೆ. ಇದೇ ದಿನ ಕೇದಾರನಾಥದ ಬಾಗಿಲನ್ನೂ ತೆರೆಯಲಾಗುತ್ತದೆ. ಈ ವರ್ಷ ಅಕ್ಷಯ ತೃತಿಯವನ್ನು ಮೇ 10ರಂದು ಆಚರಿಸುತ್ತಿರುವುದರಿಂದ ಚಾರ್‌ ಧಾಮ್‌ ಯಾತ್ರೆಯು ಇದೇ ದಿನ ಆರಂಭವಾಗಿದೆ. ಈ ವರ್ಷ ಕೇದಾರನಾಥ ದೇವಾಲಯದ ಯಾತ್ರೆಯು ಮೇ 12ರಿಂದ ಪ್ರಾರಂಭವಾಗಲಿದೆ.

ಕೇದಾರನಾಥ ಕ್ಷೇತ್ರ ಕುರಿತ 10 ಕುತೂಹಲಕಾರಿ ಸಂಗತಿಗಳು

  • ಕೇದಾರನಾಥ ದೇವಸ್ಥಾನವು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.
  • ಈ ದೇವಾಲಯವನ್ನು ಮೊಟ್ಟಮೊದಲ ಬಾರಿಗೆ ಪಂಚ ಪಾಂಡವರು ಕಟ್ಟಿದರು ಎಂದು ಹೇಳಲಾಗುತ್ತದೆ. ನಂತರ ಜಗದ್ಗುರು ಆದಿ ಶಂಕರಾಚಾರ್ಯರು ಅದನ್ನು ಪುನರ್‌ಪ್ರತಿಷ್ಠಾಪಿಸಿದರು.
  • ಪರ ಶಿವನು ತನ್ನ ಮಡದಿ ಸತಿಯ ಮರಣದ ನಂತರ ಇಲ್ಲಿ ತಪಸ್ಸು ಮಾಡಿದನು ಎಂದು ನಂಬಲಾಗಿದೆ.
  • ಕೇದಾರನಾಥ ದೇವಸ್ಥಾನವನ್ನು ಉತ್ತರ ಭಾರತ ದೇವಾಲಯಗಳ ಶೈಲಿಯಲ್ಲಿ ಕಟ್ಟಲಾಗಿದೆ.
  • ಕೇದಾರನಾಥವು ಸಮುದ್ರ ಮಟ್ಟಕ್ಕಿಂತ 3,583 ಮೀಟರ್‌ ಎತ್ತರದಲ್ಲಿದೆ. ಇದು ಜಗತ್ತಿನ ಎತ್ತರದ ಮಂದಿರಗಳಲ್ಲಿ ಒಂದಾಗಿದೆ.
  • ಈ ದೇವಸ್ಥಾನವನ್ನು ನಡದುಕೊಂಡು ಹೋಗಿ ತಲುಪಬೇಕು. ಹಾಗಾಗಿ ಇದನ್ನು ಜಗತ್ತಿನಲ್ಲಿ ದೇವಸ್ಥಾನ ತಲುಪಲು ಇರುವ ಕಠಿಣ ಮಾರ್ಗ ಎಂದು ಪರಿಗಣಿಸಲಾಗಿದೆ.
  • ಕೇದಾರನಾಥ ಮಂದಿರವು ವರ್ಷದಲ್ಲಿ 6 ತಿಂಗಳು ಮಾತ್ರ ತೆರದಿರುತ್ತದೆ. ಏಕೆಂದರೆ ಇದು ಚಳಿಗಾಲದಲ್ಲಿ ಹಿಮದಿಂದ ಆವೃತವಾಗಿರುತ್ತದೆ.
  • ಇದು ಸಂಪೂರ್ಣವಾಗಿ ಆಧ್ಯಾತ್ಮದ ಕೇಂದ್ರವಾಗಿದೆ. ಸಾಕ್ಷಾತ್‌ ಪರಶಿವನೇ ನೆಲೆಸಿರುವನೆಂದು ನಂಬಲಾಗಿದೆ.
  • ಕೇದಾರನಾಥ ದೇವಾಲಯವು ವಿಷ್ಣು, ಗಣಪತಿ ಮಂತಾದ ಸಣ್ಣ ಸಣ್ಣ ದೇವಸ್ಥಾನಗಳಿಂದ ಸುತ್ತುವರೆದಿದೆ.
  • ಕೇದಾರನಾಥ ಧಾಮವು ಸುಮಾರು 400 ವರ್ಷಗಳವರೆಗೆ ಸಂಪೂರ್ಣವಾಗಿ ಹಿಮದಿಂದ ಆವೃತವಾಗಿತ್ತು ಎಂದು ಡೆಹ್ರಾಡೂನ್‌ನ ವಾಡಿಯಾ ಇನ್ಸ್ಟಿಟ್ಯೂಟ್‌ ಆಫ್‌ ಹಿಮಾಲಯನ್‌ ಜಿಯಾಲಜಿ ವರದಿ ಮಾಡಿದೆ.

(ಅರ್ಚನಾ ವಿ ಭಟ್)

ದೇಗುಲಗಳ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ | ಮೇ 10 ಅಕ್ಷಯ ತೃತೀಯ ದಿನದಿಂದ ಚಾರ್‌ಧಾಮ್‌ ಧಾರ್ಮಿಕ ಯಾತ್ರೆ ಆರಂಭ; ಬುಧವಾರದಿಂದ ಆಫ್‌ಲೈನ್‌ ನೋಂದಣಿ ಶುರು

Whats_app_banner