HMP ವೈರಸ್ ಸುದ್ದಿಯಿಂದ ಕೊರೊನಾ ಭೀತಿ ಮರುಕಳಿಸುತ್ತಿದೆ, ಹೆದರಿದ ಮಗಳಿಗೆ ಹೇಗೆ ಸಮಾಧಾನ ಮಾಡಲಿ -ಮನದ ಮಾತು
ಎಚ್‌ಎಂಪಿ ವೈರಸ್ ವ್ಯಾಪಕ ಹರಡುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಗಮನಿಸಿದ ತಾಯಿಯೊಬ್ಬರು ತೋಡಿಕೊಂಡ ಆತಂಕಕ್ಕೆ ಮನಃಶಾಸ್ತ್ರಜ್ಞೆ ಭವ್ಯಾ ವಿಶ್ವನಾಥ್ ನೀಡಿರುವ ಸಾಂತ್ವನದ ಉತ್ತರ ಇಲ್ಲಿದೆ. ಕೊರೊನಾ ಪಿಡುಗು ತಂದೊಡ್ಡಿದ್ದ ಅನಾಹುತಗಳ ನೆನಪು ಜೀವಂತ ಇರುವಾಗ ಆತಂಕ ಉಂಟಾಗುವುದು ಸಹಜ. ಈ ಆತಂಕಕ್ಕೆ ಪರಿಹಾರವೇನು? ಈ ಬರಹದಲ್ಲಿದೆ ಉತ್ತರ.

ಪ್ರಶ್ನೆ: ನನ್ನ ಮಗಳು 3ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಮಾಧ್ಯಮಗಳಲ್ಲಿ HMP ವೈರಸ್ ಸುದ್ದಿ ಕೇಳಿದಾಗಿನಿಂದ ಬಹಳ ಭಯವಾಗಿದೆ. ಮಗಳು ಒಂದು ಚೂರು ಸೀನಿದರೆ, ಕೆಮ್ಮಿದರೆ ಹೊಸ ವೈರಸ್ ಲಕ್ಷಣವೇನೋ ಎಂದು ಆತಂಕವಾಗುತ್ತದೆ. ಮತ್ತೆ ಕೋವಿಡ್ ದಿನಗಳು ಮರಳಿಸುತ್ತದೆ ಎಂಬ ಚಿಂತೆ ಕಾಡುತ್ತಿದೆ. ಶಾಲೆಗೆ ಕಳಿಸಲು, ಹೊರಗಡೆ ಮಕ್ಕಳ ಜೊತೆ ಆಟವಾಡುವುದಕ್ಕೆ ಕಳಿಸಲು ತಾಯಿಯಾಗಿ ವಿಪರೀತ ಆತಂಕವಾಗುತ್ತಿದೆ. ಏನು ಮಾಡಬೇಕೋ ತೊಚುತ್ತಿಲ್ಲ. ದಯವಿಟ್ಟು ಮಾರ್ಗದರ್ಶನ ನೀಡಿ. -ಬೃಂದಾ, ಪದ್ಮನಾಭನಗರ
ಉತ್ತರ: ನಿಮ್ಮ ಪ್ರಶ್ನೆ ಸದ್ಯದ ಪರಿಸ್ಥಿತಿಯಲ್ಲಿ ಬಹಳ ಸಮಂಜಸವಾಗಿದೆ. ತಾಯಿಯಾದ ನಿಮ್ಮ ಭಯ ಮತ್ತು ಆತಂಕವೂ ಕೂಡ ಸಹಜವಾಗಿದೆ. ಯಾಕೆಂದರೆ ಪೋಷಕರು ತಮ್ಮ ಮಕ್ಕಳ ಆರೋಗ್ಯದ ವಿಷಯದಲ್ಲಿ ಹೆಚ್ಚು ಎಚ್ಚರಿಕೆಯಿಂದಿರುವುದು ಒಳ್ಳೆಯದೇ. ಕೊರೊನಾ ವೈರಸ್‌ನಿಂದ ನಾವೆಲ್ಲರೂ ಬಹಳಷ್ಟು ನರಳಿದ್ದೇವೆ. ಆದ್ದರಿಂದ ಮತ್ತೆ ಅಂತಹ ದಿನಗಳು ಮರುಕಳಿಸಬಹುದು ಎನ್ನುವ ಆತಂಕ ನಮ್ಮನ್ನು ಕಾಡುವುದರಲ್ಲಿ ಆಶ್ಚಯ೯ವೇನಿಲ್ಲ.
ಸಾಮಾನ್ಯವಾಗಿ ಭಯ ಸಂಭವಿಸುವುದು ನಮಗೆ ಅಥವಾ ನಮ್ಮ ಆತ್ಮೀಯರಿಗೆ ಆಗುವ ಅಪಾಯವನ್ನು ನಿರೀಕ್ಷಿಸಿ. ನಾವು ಸುರಕ್ಷಿತವಾಗಿಲ್ಲವೆಂದು ಭಾವಿಸಿದಾಗ ಭಯ ಹೆಚ್ಚಾಗುತ್ತದೆ. ಕಾಯಿಲೆ, ಪರೀಕ್ಷೆಯ ಸಮಯ, ಅನಿರೀಕ್ಷಿತ ಬದಲಾವಣೆಗಳು ಮತ್ತು ಏರಿಳಿತಗಳು ಸಂಭವಿಸಿದಾಗ ನಮಗೆ ಗಾಬರಿಯಾಗುವುದು ಸಹಜ. ಇದು ಮಾನಸಿಕ ಸಿದ್ಧತೆಯ ಒಂದು ಲಕ್ಷಣವೂ ಕೂಡ ಹೌದು. ಆದರೆ ದೈಹಿಕ ಮತ್ತು ಮಾನಸಿಕ ಸಿದ್ಧತೆಯ ಕೊರತೆ ಮತ್ತು ಸೂಕ್ತ ಮಾಹಿತಿಯ ಕೊರತೆಯಿಂದಾಗಿ ಭಯದ ಪ್ರಮಾಣ ಹೆಚ್ಚಾಗುತ್ತದೆ. ಕೆಲವೊಮ್ಮೆ ತಪ್ಪು ಮಾಹಿತಿ ಮತ್ತು ವಿಪರೀತ ಮಾಹಿತಿಯೂ ಕೂಡ ಗಾಬರಿಗೆ ಕಾರಣವಾಗುತ್ತದೆ.
HMP ವೈರಸ್ ಕುರಿತು ಸರಿಯಾದ ಮಾಹಿತಿ ಪಡೆಯಿರಿ
ಮೊದಲು ನಿಮ್ಮ ವೈದ್ಯರಿಂದ ಈ ಹೊಸ ವೈರಸ್ ಕುರಿತು ಸರಿಯಾದ ಮಾಹಿತಿಯನ್ನು ಪಡೆಯಿರಿ. ಈ ರೋಗದ ಗುಣ ಲಕ್ಷಣಗಳು, ಚಿಕೆತ್ಸೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಸ್ಪಷ್ಟವಾಗಿ ಅರಿಯುವುದು ಉತ್ತಮ. ಇದರ ಕುರಿತು ಸರಿಯಾದ ಮಾಹಿತಿಯನ್ನು ಪಡೆದಿದ್ದಲ್ಲಿ ಆತಂಕ ದುಗುಡ ಕಡಿಮೆಯಾಗುತ್ತದೆ. ಸೂಕ್ತ ದೈಹಿಕ ಮತ್ತು ಮಾನಸಿಕ ಸಿದ್ಧತೆಯನ್ನು ಹೊಂದಿದ್ದರೆ, ಆತ್ಮವಿಶ್ವಾಸ ಹೆಚ್ಚಾಗಿ ಭಯ ಹೋಗುತ್ತದೆ.
ನಿಮ್ಮ ಮಗಳೊಂದಿಗೆ ಯಾವಾಗಲಾದರೂ ಭೇಟಿಯಾಗುವ ಮಕ್ಕಳ ವೈದ್ಯರನ್ನು ಸಂಪರ್ಕಿಸಿ. ಯಾವ ರೀತಿಯ ಮುನ್ನಚರಿಕೆ ಕ್ರಮ ತೆಗೆದುಕಳ್ಳಬೇಕೆಂದು ವಿಚಾರಿಸಿ. ಅವರು ಹೇಳಿದನ್ನು ಪಾಲಿಸಿ. ಮಗಳ ರೋಗನಿರೋಧಕ ಶಕ್ತಿಯನ್ನು (immunity) ಹೆಚ್ಚಿಸುವುದಕ್ಕೆ ಪ್ರಯತ್ನಿಸಿ. ಮಗಳು ಹೊರಗಡೆ ಹೋದಾಗ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದಕ್ಕೆ ಕಲಿಸಿಕೊಡಿ. ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಡುವುದಕ್ಕೆ ಹೇಳಿ ಮತ್ತು ಆದಷ್ಟು ಸ್ವಚ್ಛವಾಗಿರುವ ಹಾಗೆ ನೋಡಿಕೊಳ್ಳಿ.
ಇಲ್ಲಿವರೆಗೆ ವಿವರಿಸಿದ್ದನ್ನು ಚಾಚು ತಪ್ಪದೇ ನೀವು ಪಾಲಿಸಿದರೆ ನಿಮ್ಮ ಮಗಳಿಗೆ HMPV ವೈರಸ್ ತಾಕಬಹುದು ಎನ್ನುವ ನಿಮ್ಮ ಭಯವನ್ನು ನಿವಾರಿಸಬಹುದು.
ಇನ್ನು, ಒಂದು ವೇಳೆ ನಿಮ್ಮ ಮಗಳಿಗೆ ಸೋಂಕು ತಾಕಿಬಿಟ್ಟರೆ? ಬಂದಾದಮೇಲೆ ಹೇಗೆ ನಿಭಾಯಿಸಬೇಕೆಂದು ಆತಂಕವಿದ್ದರೆ ನೀವು ಆತಂಕಪಡುವ ಅಗತ್ಯವಿಲ್ಲ ಮತ್ತು ಚಿಂತೆಯೂ ಮಾಡಬೇಡಿ. ನೀವು ಆಗಲೇ ಮಾಧ್ಯಮದಲ್ಲಿ ಗಮನಿಸಿರಬಹುದು, ದೇಶವಿಡೀ ಎಲ್ಲಾ ರಾಜ್ಯಗಳಲ್ಲಿ ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗಿದೆ. ಸೋಂಕು ತಾಕಿದ ರೋಗಿಗಳಿಗೆ ತಕ್ಷಣವೇ ತಪಾಸಣೆ, ವೈದ್ಯರು, ಅತೀ ಗುಣಮಟ್ಟ ಚಿಕಿತ್ಸೆ, ಔಷದೋಪಚಾರಗಳು, ವಾಕ್ಸಿನ್ಸ್ ಗಳು ಕೂಡಲೇ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ನೀವು ಒಂದು ಪಕ್ಷ ಸೋಂಕು ತಾಕಿದರೂ ಚಿಂತೆ ಮಾಡುವ ಅಗತ್ಯವಿಲ್ಲ .
HMPV ಸೋಂಕು ಮಾರಣಾಂತಿಕ ರೋಗವಲ್ಲವೆಂದು ಈಗಾಗಲೆ ಮಾಧ್ಯಮಗಳಲ್ಲಿ ತಜ್ಞರು ಹೇಳಿಕೆ ಕೊಟ್ಟಿದ್ದನ್ನು ನೀವು ಗಮನಿಸಿರಬಹುದು.
HMPV ಸೋಂಕು ಕುರಿತು ನಿಮ್ಮ ಆತಂಕದ ಕಾರಣಗಳು
ನಿಮ್ಮ ಮಗಳಿಗೆ ಸೋಂಕು ತಾಕಬಹುದೆಂದು ನೀವು ಊಹೇ ಮಾಡುತ್ತೀರಿ, ನಂತರ ಬಂದಾದ ಮೇಲೆ ಏನೇನು ಆಗಬಗುಹುದೆಂದು ಕಲ್ಪಿಸಿಕೊಳ್ಳುತ್ತೀರ. ಈ ಊಹೆ ಮತ್ತು ಕಲ್ಪನೆಗಳು ನಿಮಗೆ ಹೆಚ್ಚಿನ ಆತಂಕ ಉಂಟುಮಾಡುತ್ತದೆ. ಇಂತಹ ಮನಸ್ಥಿತಿಯಲ್ಲಿ, ನಿಮ್ಮ ಆಲೋಚನೆಗಳು ಎಷ್ಟು ಸತ್ಯ ಮತ್ತು ಎಷ್ಟರಮಟ್ಟಿಗೆ ನಿಜವಾಗಬಹುದೆಂದು ಒಮ್ಮೆ ಯೋಚಿಸಿ ನೋಡಿ. ಈ ಆಲೋಚನೆಗಳು ಕೇವಲ ನಿಮ್ಮ ಊಹೆಗಳಷ್ಟೇ ವಿನಃ ನಿಜವಲ್ಲವೆಂದು ನಿಮಗೆ ಅರಿವಾದ ನಂತರ ಆತಂಕ ಕಡಿಮೆಯಾಗುತ್ತದೆ.
ಸುದ್ದಿಗಳಿಂದ ಅಂತರ ಕಾಯ್ದುಕೊಳ್ಳಿ
ಹೊಸ ಸೋಂಕಿನ ಕುರಿತು ಮಾಧ್ಯಮಗಳಲ್ಲಿ ಬರುವ ಸುದ್ಧಿಗಳನ್ನು ನಂಬುವಾಗ ಎಚ್ಚರವಿರಲಿ. ನಿಮಗೆ ಎಷ್ಟುಬೇಕೋ ಅಷ್ಟು ಮಾಹಿತಿಯನ್ನು ತಿಳಿದುಕೊಂಡು ಆ ಸುದ್ದಿಗಳಿಂದ ಅಂತರ ಕಾಪಾಡಿಕೊಳ್ಳಿ. ಇಲ್ಲವಾದಲ್ಲಿ ನಿರಂತರ ಮತ್ತು ಸಂವೇದನಾಶೀಲ ಸುದ್ಧಿಗಳು ನಿಮ್ಮನ್ನು ವಿಚಲಿತಗೊಳಿಸಿ ಭಯ ಮತ್ತು ಆತಂಕವನ್ನು ಉಂಟುಮಾಡಬಹುದು.
ಕೋವಿಡ್ ಸೋಂಕು ಯಾರೂ ಊಹಿಸದೇ ದಿಢೀರಾಗಿ ಬಂದು ನಮ್ಮೆಲ್ಲರ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿದ್ದು ನಿಜ. ಆದರೆ ನಮಗೆಲ್ಲಾ ಸಾಕಷ್ಟು ಪಾಠಗಳನ್ನು ಕಲಿಸಿ ಹೋಗಿದೆ. ಇದರಿಂದ ವಿಜ್ಞಾನ ಹಾಗು ವೈದ್ಯಕೀಯ ಕ್ಷೇತ್ರದಲ್ಲಿ ಬಹಳಷ್ಟು ಬೆಳವಣಿಗೆಗಳು ಮತ್ತು ಬದಲಾವಣೆಗಳು ಸಂಭವಿಸಿವೆ. ಮುಂದೆ ಬರಲಿರುವ ಸೋಂಕುಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆನ್ನುವ ಭರವಸೆ ಮತ್ತು ವಿಶ್ವಾಸ ನಮ್ಮದಾದರೆ ಸಂಶಯವಿಲ್ಲದೇ, ಧೈರ್ಯವಾಗಿ ಹೊಸ ಸೋಂಕನ್ನು ಎದುರಿಸಬಹುದು.
ನಿಮ್ಮ ಮಗಳ ಆರೋಗ್ಯ ಮತ್ತು ಕ್ಷೇಮ ನಿಮ್ಮ ಜವಾಬ್ಧಾರಿ ಹೇಗೆಯೋ ಹಾಗೆ ಸಮಾಜದ ಎಲ್ಲಾ ಕ್ಷೇತ್ರಗಳದ್ದೂ ಕೂಡ. ಚಿಂತೆ ಮಾಡಬೇಡಿ. ನಿಮ್ಮೊಂದಿಗೆ ಎಲ್ಲರೂ ಇದ್ದಾರೆ.
ಭವ್ಯಾ ವಿಶ್ವನಾಥ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.
