ಕನ್ನಡ ಸುದ್ದಿ  /  Lifestyle  /  Holi 2024 How To Remove Color Which Stick On To Cloths And Hair Cleaning Tips In Kannada Rsm

Holi 2024: ಹೋಳಿ ಸಂಭ್ರಮದಲ್ಲಿ ಬಟ್ಟೆ , ಕೂದಲಿಗೆ ಅಂಟಿದ ಹಟಮಾರಿ ಬಣ್ಣಗಳನ್ನು ತೆಗೆಯುವುದು ಹೇಗೆ? ಇಲ್ಲಿದೆ ಉಪಯುಕ್ತ ಟಿಪ್ಸ್‌

Holi: ಹೋಳಿ ಹಬ್ಬದಲ್ಲಿ ರಂಗಿನಾಟದ ಸಂಭ್ರಮದ ನಡುವೆ ಬಟ್ಟೆ, ಕೂದಲಿಗೆ ಅಂಟಿದ ಕೊಳೆಯನ್ನು ತೆಗೆಯುವುದು ಸುಲಭದ ಮಾತಲ್ಲ. ಇಲ್ಲಿ ಕೆಲವೊಂದು ಟಿಪ್ಸ್‌ಗಳನ್ನು ತಿಳಿಸಲಾಗಿದೆ. ಈ ಸಲಹೆಗಳನ್ನು ಪಾಲಿಸಿದರೆ ಬಟ್ಟೆಗೆ , ಕೂದಲಿಗೆ ಅಂಟಿದ ಹಟಮಾರಿ ಕಲೆಯನ್ನು ತೆಗೆಯಬಹುದು.

ಬಟ್ಟೆ, ಕೂದಲಿಗೆ ಅಂಟಿದ ಬಣ್ಣ ತೆಗೆಯಲು ಟಿಪ್ಸ್‌
ಬಟ್ಟೆ, ಕೂದಲಿಗೆ ಅಂಟಿದ ಬಣ್ಣ ತೆಗೆಯಲು ಟಿಪ್ಸ್‌ (PC: Unsplash)

Holi 2024: ಹೋಳಿ ಹಬ್ಬಕ್ಕೂ 3 ದಿನಗಳ ಮುಂಚಿನಿಂದಲೇ ಕೆಲವರು ತಮ್ಮ ಆತ್ಮೀಯರಿಗೆ ಬಣ್ಣ ಹಚ್ಚುತ್ತಾ ಸಂಭ್ರಮಿಸುತ್ತಾರೆ. ತಮಗೆ ಇಷ್ಟವಾದ ತಿಂಡಿ, ತಿನಿಸು ತಿಂದು ಸಂಭ್ರಮಿಸುತ್ತಾರೆ. ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಇನ್ನು ಹಬ್ಬದ ದಿನವಂತೂ ಕೇಳುವುದೇ ಬೇಡ, ರಸ್ತೆಗಳೆಲ್ಲಾ ರಂಗಿನಿಂದ ಕೂಡಿರುತ್ತದೆ. ಎಲ್ಲಿ ನೋಡಿದರೂ ಓಕುಳಿಯೋ ಓಕುಳಿ.

ಆದರೆ ಹೋಳಿ ಆಡುವಾಗ ಚರ್ಮ, ಕೂದಲಿಗೆ ಅಂಟಿಕೊಂಡ ಬಣ್ಣವನ್ನು ತೊಳೆಯುವುದು ಸುಲಭದ ಮಾತಲ್ಲ. ಇದರಿಂದ ನಮಗೆ ಇಷ್ಟವಾದ ಬಟ್ಟೆಗಳನ್ನು ಬಿಸಾಡಬೇಕಾಗುತ್ತದೆ. ಹಾಗೇ ಕೂದಲಿನಿಂದ ಬಣ್ಣ ತೆಗೆಯಲು ಸಾಕಷ್ಟು ಸರ್ಕಸ್‌ ಮಾಡುತ್ತೇವೆ. ಆದರೆ ಬಟ್ಟೆ ಹಾಗೂ ಕೂದಲಿನಿಂದ ಸುಲಭವಾಗಿ ಬಣ್ಣ ತೆಗೆಯಲು ಇಲ್ಲಿ ಕೆಲವೊಂದು ಐಡಿಯಾಗಳಿವೆ ನೋಡಿ.

ಬಟ್ಟೆಗೆ ಅಂಟಿಕೊಂಡ ಬಣ್ಣ ತೆಗೆಯಲು ಟಿಪ್ಸ್‌

ಕ್ಲೋರಿನ್ ಅಲ್ಲದ ಬ್ಲೀಚನ್ನು ಬೆಚ್ಚಗಿನ ನೀರಿಗೆ ಮಿಶ್ರಣ ಮಾಡಿ. ನಿಮ್ಮ ಬಟ್ಟೆಗಳನ್ನು ಅದರಲ್ಲಿ ನೆನೆಸಿ. ಇತರ ಬಟ್ಟೆಗಳಿಗೆ ಬಣ್ಣ ಬರದಂತೆ ಬಟ್ಟೆಗಳನ್ನು ಪ್ರತ್ಯೇಕವಾಗಿ ತೊಳೆಯಿರಿ. ಹೋಳಿ ದಿನದಂದು ಬಣ್ಣದ ಬಟ್ಟೆಗಳನ್ನು ಇತರ ಬಟ್ಟೆಗಳೊಂದಿಗೆ ಬೆರೆಸಿದರೆ ಅವುಗಳಿಗೂ ಬಣ್ಣ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ಅದಕ್ಕಾಗಿಯೇ ಅವುಗಳನ್ನು ಪ್ರತ್ಯೇಕವಾಗಿ ತೊಳೆಯಬೇಕು.

  • 2-3 ಲೀಟರ್ ತಣ್ಣನೆಯ ನೀರಿಗೆ ಅರ್ಧ ಕಪ್ ಬಿಳಿ ವಿನೆಗರ್, 2 ಟೀ ಚಮಚ ಡಿಟರ್ಜೆಂಟ್‌ ಮಿಶ್ರಣ ಮಾಡಿ. ಬಣ್ಣ ಅಂಟಿಕೊಂಡ ಬಟ್ಟೆಗಳನ್ನು ಸ್ವಲ್ಪ ಹೊತ್ತು ಅದರಲ್ಲಿ ನೆನೆಸಿ ನಂತರ ನೀರಿನಲ್ಲಿ ತೊಳೆಯಬೇಕು. ಹೀಗೆ ಮಾಡುವುದರಿಂದ ಬಣ್ಣವನ್ನು ಸುಲಭವಾಗಿ ತೆಗೆಯಬಹುದು.
  • ಗಾಜಿನ ಕಿಟಕಿಗಳನ್ನು ಸ್ವಚ್ಛಗೊಳಿಸುವ ಸ್ಪ್ರೇಗಳು ಸಾಮಾನ್ಯವಾಗಿ ಅಮೋನಿಯಾದಿಂದ ಕೂಡಿರುತ್ತದೆ. ಈ ಸ್ಪ್ರೇ ಮೂಲಕ ನೀವು ಬಟ್ಟೆಯಿಂದ ಬಣ್ಣದ ಕಲೆಗಳನ್ನು ತೆಗೆಯಬಹುದು. ಕಲೆಯ ಮೇಲೆ ಸ್ಪ್ರೇ ಮಾಡಿ ಮತ್ತು ಸ್ವಲ್ಪ ಸಮಯದವರೆಗೆ ಬಿಡಿ. ನಂತರ ಸ್ವಚ್ಛವಾದ ಬಟ್ಟೆಯಿಂದ ಸ್ಟೇನ್ ಅನ್ನು ಒರೆಸಿ ತೊಳೆಯಿರಿ. ಹೀಗೆ ಮಾಡುವುದರಿಂದ 2 ಬಾರಿ ತೊಳೆಯುವಷ್ಟರಲ್ಲಿ ಬಣ್ಣ ಬಿಡುತ್ತದೆ.
  • ಒಂದು ವೇಳೆ ನಿಮ್ಮ ಬಳಿ ವಿನೆಗರ್‌ ಇಲ್ಲದಿದ್ದರೆ ನಿಂಬೆ ರಸವನ್ನು ಕೂಡಾ ಬಳಸಬಹುದು. ಯಾವುದೇ ರೀತಿಯ ಕಲೆಗಳನ್ನು ತೆಗೆಯುವಲ್ಲಿ ನಿಂಬೆ ರಸವು ಬಹಳ ಪರಿಣಾಮಕಾರಿಯಾಗಿದೆ. ನಿಂಬೆಯಲ್ಲಿನ ಆಮ್ಲೀಯ ಗುಣವು ಹಟಮಾರಿ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಕಲೆಗಳ ಮೇಲೆ ನಿಂಬೆರಸವನ್ನು ಉಜ್ಜಿ 15 ನಿಮಿಷಗಳ ಕಾಲ ಬಿಟ್ಟು ಸೋಪು ಅಥವಾ ಡಿಟರ್ಜೆಂಟ್‌ನಿಂದ ತೊಲೆದರೆ ಬಣ್ಣ ಸುಲಭವಾಗಿ ಹೋಗುತ್ತದೆ.

ಇದನ್ನೂ ಓದಿ: ಪಿನ್​​, ಬಡ್ಸ್​​ ಬಳಸಿ ಪ್ರತಿದಿನ ಕಿವಿ ಶುಚಿಗೊಳಿಸುತ್ತೀರಾ? ಹಾಗಿದ್ರೆ ಈ ವಿಚಾರ ತಿಳಿದಿರಲಿ

ಕೂದಲಿನಿಂದ ಬಣ್ಣ ತೆಗೆಯಲು ಟಿಪ್ಸ್‌

  • ಕೂದಲಿಗೆ ಅಂಟಿಕೊಂಡ ಬಣ್ಣವನ್ನು ತೆಗೆಯಲು ಬಿಸಿ ನೀರನ್ನು ಬಳಸಬೇಡಿ. ಬಿಸಿ ನೀರನ್ನು ಬಳಸುವುದರಿಂದ ಕೂದಲಿಗೆ ಸಾಕಷ್ಟು ಹಾನಿಯಾಗುತ್ತದೆ. ಬಿಸಿ ನೀರನ್ನು ಬಳಸುವುದರಿಂದ ಕೂದಲು ಒರಟಾಗುತ್ತದೆ. ನಿಮ್ಮ ಕೂದಲನ್ನು ತೊಳೆದ ನಂತರ ಹೇರ್ ಡ್ರೈಯರ್ ಬಳಸಬೇಡಿ, ಬದಲಿಗೆ ಕೂದಲು ನೈಸರ್ಗಿಕವಾಗಿ ಒಣಗಲು ಬಿಡಿ.
  • ಹೋಳಿ ಆಡಿದ ನಂತರ ಕಡ್ಲೆ ಹಿಟ್ಟು ಮತ್ತು ಮೊಸರನ್ನು ಬೆರೆಸಿ ಹೇರ್ ಪ್ಯಾಕ್ ತಯಾರಿಸಿ. ಈ ಪ್ಯಾಕ್ ಅನ್ನು ನಿಮ್ಮ ಕೂದಲಿನ ಮೇಲೆ ಕನಿಷ್ಠ 30 ನಿಮಿಷಗಳ ಕಾಲ ಹಚ್ಚಿ. ನಂತರ ಶ್ಯಾಂಪೂ ಬಳಸಿ ವಾಶ್‌ ಮಾಡಿದರೆ ಬಣ್ಣ ಸುಲಭವಾಗಿ ಬಿಡುತ್ತದೆ.
  • ಹೋಳಿ ಬಣ್ಣದಿಂದ ಕೂದಲು ಹಾನಿಯಾಗದಂತೆ ತಡೆಯಲು ನೀವು ಅಲೋವೆರಾ ಕೂಡಾ ಬಳಸಬಹುದು. ಅಲೋವೆರಾವನ್ನು ಕೂದಲಿನ ಬುಡ ಹಾಗೂ ಇಡೀ ಕೂದಲಿಗೆ ಹಚ್ಚಿ ಸ್ವಲ್ಪ ಸಮಯ ಬಿಡಿ. ಇದರಲ್ಲಿ ವಿಟಮಿನ್ ಎ, ಬಿ 12, ಸಿ ಮತ್ತು ಇ ಅಂಶವಿದ್ದು ರಾಸಾಯನಿಕ ಬಣ್ಣಗಳಿಂದ ಕೂದಲನ್ನು ರಕ್ಷಿಸುತ್ತದೆ. ಕೂದಲು ಒರಟಾಗುವುದನ್ನು ತಪ್ಪಿಸುತ್ತದೆ.
  • ಒಮ್ಮೆ ಕೂದಲನ್ನು ನೀರಿನಿಂದ ತೊಳೆದ ನಂತರ. ಕೂದಲಿಗೆ ಮೊಟ್ಟೆಯ ಹಳದಿ ಭಾಗ, ನಿಂಬೆರಸ ಸೇರಿಸಿದ ಮಿಶ್ರಣವನ್ನು ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ಮೊಟ್ಟೆಯ ಹಳದಿ ಲೋಳೆಯಲ್ಲಿ ಬಯೋಟಿನ್ ಮತ್ತು ಬಿ12 ಅಂಶವಿದೆ. ಇದು ಕೂದಲಿನ ಬೆಳವಣಿಗೆಗೆ ಬಹಳ ಸಹಕಾರಿ, ಜೊತೆಗೆ ಕೂದಲು ಡ್ಯಾಮೇಜ್‌ ಆಗುವುದನ್ನು ತಪ್ಪಿಸುತ್ತದೆ.

ಇದನ್ನೂ ಓದಿ: ಆಗಾಗ ಬೆಡ್‌ಶೀಟ್‌ ಸ್ವಚ್ಛ ಮಾಡಿಲ್ಲ ಅಂದ್ರೆ ತಪ್ಪಿದ್ದಲ್ಲ ಅಪಾಯ

ವಿಭಾಗ