ನಿಮ್ಮನೆಯ ಬಾಲ್ಕನಿಯಲ್ಲಿ ಪಾರಿವಾಳಗಳು ಗಲೀಜು ಮಾಡ್ತಿವೆಯೇ; ಅವು ಮನೆ ಹತ್ತಿರ ಸುಳಿಯಲೇಬಾರದು ಅಂದ್ರೆ ಹೀಗೆ ಮಾಡಿ
ಇತ್ತೀಚಿನ ದಿನಗಳಲ್ಲಿ ಪಟ್ಟಣದ ಮನೆಗಳಲ್ಲಿ ಪಾರಿವಾಳಗಳ ಕಾಟ ಜೋರಾಗಿದೆ. ಮನೆಯ ಕಿಟಿಕಿ, ಸಂಧಿಯಲ್ಲಿ ಗೂಡು ಕಟ್ಟುವ ಪಾರಿವಾಳಗಳು ಬಾಲ್ಕನಿ ತುಂಬೆಲ್ಲಾ ಗಲೀಜು ಮಾಡುತ್ತವೆ. ಎಷ್ಟೇ ಓಡಿಸಿದರೂ ಅವು ಮತ್ತೆ ಬರುತ್ತವೆ. ಪದೇ ಪದೇ ಪಾರಿವಾಳದಿಂದ ನಿಮಗೆ ತೊಂದರೆ ಆಗ್ತಾ ಇದ್ಯಾ, ಅವುಗಳು ಮನೆ ಹತ್ತಿರ ಬಾರದಂತೆ ಮಾಡಲು ಹೀಗೆ ಮಾಡಿ.

ದೂರದಲ್ಲಿ ಪಾರಿವಾಳಗಳು ಹಾರುತ್ತಿದ್ದರೆ ಅದರ ಅಂದವನ್ನು ಕಣ್ತುಂಬಿಕೊಳ್ಳಬಹುದು. ಆದರೆ ಮನೆಯ ಬಳಿ ಪಾರಿವಾಳಗಳು ಒಂದು ಕಾಟ ಕೊಟ್ಟರೆ ಖಂಡಿತ ಸಹಿಸಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಪಾರಿವಾಳಗಳು ಮನೆಯ ಸಂಧಿ ಗೊಂದಿಯಲ್ಲಿ ಗೂಡು ಕಟ್ಟುವುದು ಮಾತ್ರವಲ್ಲ ಪಿಕ್ಕೆಯಿಂದ ಬಾಲ್ಕನಿ, ವರಾಂಡವನ್ನೆಲ್ಲಾ ಗಲೀಜು ಮಾಡುತ್ತಿವೆ. ಪಟ್ಟಣದಲ್ಲಂತೂ ಪಾರಿವಾಳದ ಕಾಟ ಕೊಂಚ ಹೆಚ್ಚೇ ಇದೆ ಎನ್ನಬಹುದು.
ಪಾರಿವಾಳ ಗಲೀಜು ಮಾಡಿದೆ ಎಂದು ಒಮ್ಮೆ ಕ್ಲೀನ್ ಮಾಡಿದ್ರೆ ಮತ್ತೆ ಒಂದು ದಿನದಲ್ಲಿ ಅಷ್ಟೇ ಗಲೀಜು ಮಾಡಿ ಬಿಡುತ್ತವೆ. ಅಲ್ಲದೇ ಅವುಗಳನ್ನು ಎಷ್ಟು ಓಡಿಸಿದರೂ ಮತ್ತೆ ಬಂದು ಕೂರುವುದು ಬಿಡುವುದಿಲ್ಲ, ಪುನಃ ಪುನಃ ಗಲೀಜು ಮಾಡುತ್ತಿರುತ್ತವೆ. ಅವುಗಳು ಸೃಷ್ಟಿಸುವ ಧೂಳು, ರೆಕ್ಕೆ, ಹಿಕ್ಕೆಗಳಿಂದ ಕೆಲವು ರೋಗಗಳು ಬರುವ ಭೀತಿಯೂ ಇದೆ. ಆ ಕಾರಣಕ್ಕೆ ಜನರು ಪಾರಿವಾಳ ಕಾಟಕ್ಕೆ ಬೇಸತ್ತಿದ್ದಾರೆ. ಪಾರಿವಾಳ ಕಾಟದಿಂದ ತಪ್ಪಿಸಿಕೊಳ್ಳಲು ಇಲ್ಲಿದೆ ಒಂದಿಷ್ಟು ಸಲಹೆ.
ಪಾಲಿಥಿನ್ ಕವರ್
ಪಾರಿವಾಳಗಳು ಗುಂಪು ಗುಂಪು ಬಂದು ತೊಂದರೆ ನೀಡುತ್ತಿದ್ದರೆ ಈ ಸಲಹೆ ಉಪಯೋಗಕ್ಕೆ ಬರುತ್ತದೆ. ಅದಕ್ಕೆ ನಿಮಗೆ ಬೇಕಾಗಿರುವುದು ಕಪ್ಪು ಪ್ಲಾಸ್ಟಿಕ್ ಕವರ್. ಡಸ್ಟ್‌ಬಿನ್‌ಗೆ ಬಳಸುವ ಕವರ್ ಆದರೆ ಉತ್ತಮ.ಹಳೆಯ ಪೇಪರ್‌ಗಳನ್ನು ಈ ಕವರ್‌ನೊಳಗೆ ತುಂಬಿಸಿ. ಹ್ಯಾಂಗರ್ ಅಥವಾ ಹಗ್ಗದ ಸಹಾಯದಿಂದ ಇದನ್ನು ನೇತು ಹಾಕಿ. ಈ ಕವರ್‌ಗೆ ಸೂರ್ಯನ ಬೆಳಕು ತಾಕುವುದರಿಂದ ಅದು ಹೊಳೆಯುತ್ತದೆ. ಆ ಬೆಳಕಿಗೆ ಹೆದರಿ ಪಾರಿವಾಳಗಳು ಮನೆಯ ಹತ್ತಿರ ಬರುವುದಿಲ್ಲ.
ಮುಳ್ಳಿನ ಗಿಡಗಳು
ಬಾಲ್ಕನಿಯಲ್ಲಿ ಪದೇ ಪದೇ ಪಾರಿವಾಳಗಳು ಬರುತ್ತಿದ್ದರೆ ಕಳ್ಳಿಯಂತಹ ಮುಳ್ಳಿರುವ ಅಲಂಕಾರಿಕ ಗಿಡಗಳನ್ನು ಪಾಟ್‌ನಲ್ಲಿ ನೆಡಿ. ಹೆಚ್ಚು ಪಾರಿವಾಳಗಳು ಕೂರುವ ಜಾಗದಲ್ಲಿ ಇರಿಸಿ ಅಥವಾ ಹ್ಯಾಂಗರ್ ಪಾಟ್ ಮೂಲಕ ಅವುಗಳನ್ನು ನೇತು ಹಾಕಿ. ಇದರಿಂದ ಪಾರಿವಾಳಗಳು ಬರುವುದು ಕಡಿಮೆಯಾಗುತ್ತದೆ.
ಡಿವಿಡಿ
ಕೆಲ ವರ್ಷಗಳ ಹಿಂದೆ ಸಿಡಿ, ಡಿವಿಡಿ ಬಳಕೆ ಹೆಚ್ಚಿತ್ತು, ಈಗ ಅದರ ಬಳಕೆ ಇಲ್ಲದೇ ಇರುವ ಕಾರಣ ನಿಮ್ಮ ಮನೆಯಲ್ಲಿ ಹಳೆಯ ಸಿಡಿ, ಡಿವಿಡಿ ಇದ್ದರೆ ಅದನ್ನು ಮನೆಯ ಬಾಲ್ಕನಿಯಲ್ಲಿ ನೇತು ಹಾಕಿ. ಇದರ ಮೇಲೆ ಸೂರ್ಯನ ಬೆಳಕು ಬಿದ್ದು ಪ್ರತಿಫಲಿಸುತ್ತದೆ. ಇದರಿಂದ ಪಾರಿವಾಳಗಳು ಬರುವುದಿಲ್ಲ.
ಪ್ರತಿದಿನ ಕಾಳು ಹಾಕದಿರಿ
ಪ್ರಾಣಿ, ಪಕ್ಷಿಗಳಿಗೆ ಕಾಳು, ನೀರು ಕೊಡುವುದು ಉತ್ತಮ ಅಭ್ಯಾಸ ನಿಜ, ಆದರೆ ಪದೇ ಪದೇ ಮನೆಯ ಬಾಲ್ಕನಿಯಲ್ಲಿ ಕಾಳು ಹಾಕುವುದರಿಂದ ಪಾರಿವಾಳಗಳು ಅಲ್ಲೇ ಬಂದು ನೆಲೆಯಾಗುತ್ತವೆ. ಒಂದೊಂದು ದಿನ ಒಂದೊಂದು ಕಡೆ ಕಾಳು ಹಾಕಿ, ಸಾಧ್ಯವಾದರೆ ಮನೆಯಿಂದ ಅನತಿ ದೂರದಲ್ಲಿ ಕಾಳು ಹಾಕುವ ಅಭ್ಯಾಸ ಮಾಡಿ. ಇದರಿಂದ ಅವುಗಳಿಗೆ ನೀವು ಹೊಟ್ಟೆ ತುಂಬಿಸಿದಂತಾಗುತ್ತದೆ. ಮನೆಯ ಬಳಿ ಅವುಗಳ ಕಾಟವೂ ಇರುವುದಿಲ್ಲ.
ನೋಡಿದ್ರಲ್ಲ ಈ ಸರಳ ಐಡಿಯಾಗಳನ್ನು ಪ್ರಯೋಗಿಸುವ ಮೂಲಕ ಪಾರಿವಾಳಗಳಿಗೆ ನೋವು ಮಾಡದಂತೆ ಅವುಗಳು ಮನೆಯ ಬಳಿ ಸುಳಿಯದಂತೆ ಮಾಡಬಹುದು. ಗ್ರೀನ್ ಮ್ಯಾಟ್ ರೀತಿಯ ಪರದೆಯನ್ನು ಅಳವಡಿಸುವ ಮೂಲಕವೂ ಮನೆಯ ಬಳಿ ಪಾರಿವಾಳಗಳು ಬರುವುದನ್ನ ತಡೆಯಬಹುದು.