Summer Tips: ಬೇಸಿಗೆಯಲ್ಲಿ ಏಸಿ, ಕೂಲರ್ ಇಲ್ಲದೇ ಮನೆಯನ್ನು ತಂಪಾಗಿ ಇರಿಸಿಕೊಳ್ಳುವುದು ಹೇಗೆ; ಇಲ್ಲಿದೆ ಒಂದಿಷ್ಟು ಸಲಹೆ
ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪವನ್ನು ನಿಯಂತ್ರಿಸುವುದು ನಿಜಕ್ಕೂ ಸವಾಲು. ಹಾಗಂತ ಎಲ್ಲರಿಗೂ ಏಸಿ, ಕೂಲರ್ ಹಾಕಿಸಿಕೊಳ್ಳಲು ಸಾಧ್ಯವಿಲ್ಲ. ಈ ಎರಡೂ ಇಲ್ಲದೆ ಮನೆಯನ್ನು ಕೂಲ್ ಆಗಿ ಇರಿಸಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸುವವರಿಗೆ ಇಲ್ಲಿದೆ ಉತ್ತರ.

ಈಗಷ್ಟೇ ಮಾರ್ಚ್ ತಿಂಗಳು ಆರಂಭವಾಗಿದ್ದರೂ ಕೂಡ ಈಗಾಗಲೇ ಬಿಸಿಲಿನ ತಾಪದಿಂದ ಕಂಗೆಟ್ಟು ಹೋಗಿದ್ದೇವೆ. ಇನ್ನೂ ಮೇ ತಿಂಗಳವರೆಗೆ ದಿನ ಕಳೆಯುವುದು ಹೇಗೆ ಎಂಬ ಚಿಂತೆಯು ಹಲವರನ್ನು ಕಾಡುತ್ತಿದೆ. ಮನೆಯೊಳಗೆ ಕುಳಿತುಕೊಳ್ಳುವುದು ಅಸಾಧ್ಯ ಎಂಬ ಪರಿಸ್ಥಿತಿ ಉದ್ಭವವಾಗಿರುವುದು ಸುಳ್ಳಲ್ಲ. ಏಸಿ, ಕೂಲರ್ ಇದ್ದರೆ ಬಿಸಿಲಿನ ತಾಪ ತಾಕುವುದಿಲ್ಲ ನಿಜ. ಹಾಗಂತ ಎಲ್ಲರ ಮನೆಯಲ್ಲೂ ಏಸಿ ಅಥವಾ ಕೂಲರ್ ಇರಲು ಸಾಧ್ಯವಿಲ್ಲ. ಅಂತಹವರು ಮನೆಯನ್ನ ತಂಪಾಗಿರಿಸಿಕೊಳ್ಳುವುದು ಹೇಗೆ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
ಏಸಿ, ಕೂಲರ್ ಇದ್ದರೂ ಬೇಸಿಗೆಯಲ್ಲಿ ಪವರ್‌ಕಟ್ ಸಮಸ್ಯೆ ಎದುರಾಗುತ್ತದೆ, ಅಲ್ಲದೆ ಇದರ ಅತಿಯಾದ ಬಳಕೆಯು ವಿದ್ಯುತ್ ಬಿಲ್ ಹೆಚ್ಚು ಬರಲು ಕಾರಣವಾಗುತ್ತದೆ.
ಈ ಎಲ್ಲಾ ಕಾರಣಗಳನ್ನು ಪರಿಗಣಿಸಿ, ಮನೆಯಲ್ಲಿ ಬೇರೆಯದೇ ಮಾರ್ಗದಲ್ಲಿ ಕೂಲಾಗಿ ಇರಿಸಿಕೊಳ್ಳಲು ನಾವು ನಿಮಗೆ ಸಲಹೆ ನೀಡುತ್ತೇವೆ.
ಒಣ ಹುಲ್ಲುಗಳನ್ನು ಹರಡಿ
ಮನೆಯ ತಾರಸಿಯ ಮೇಲೆ ದಪ್ಪನಾಗಿ ಒಣಹುಲ್ಲು ಹರಡುವುದರಿಂದ ಬಿಸಿಲಿನ ತಾಪ ನೇರವಾಗಿ ಮನೆಯೊಳಗೆ ಬರುವುದನ್ನು ತಪ್ಪಿಸಬಹುದು. ಇದು ಸೂರ್ಯನ ಶಾಖ ನೇರವಾಗಿ ತಾರಸಿಗೆ ತಾಕುವುದನ್ನು ತಡೆಯುತ್ತದೆ, ಅಲ್ಲದೆ ಮನೆಯೊಳಗೆ ತಂಪಾಗಿರುತ್ತದೆ.
ತಾರಿಸಿ ಮೇಲೆ ನೀರು ಹಾಯಿಸಿ
ರಾತ್ರಿ ವೇಳೆ ಮನೆಯ ಒಳಗೆ ಕಾವು ಹೆಚ್ಚಿದೆ ಎನ್ನಿಸಿದರೆ ತಾರಿಸಿಗೆ ನೀರು ಸಿಂಪಡಿಸಬಹುದು. ನಿಮ್ಮಲ್ಲಿ ನೀರಿನ ಅಭಾವ ಇಲ್ಲ ಎಂದಾದರೆ ನೀರು ನಿಲ್ಲಿಸುವ ವ್ಯವಸ್ಥೆಯನ್ನೂ ಮಾಡಬಹುದು. ಇದರಿಂದಲೂ ಮನೆಯೊಳಗೆ ತಂಪಾಗಿರುತ್ತದೆ.
ಗಿಡಗಳನ್ನು ಇರಿಸುವುದು
ಮನೆಯ ಕಿಟಕಿಗೆ ಹೊಂದುವಂತೆ ಗಿಡ ನೆಡುವುದು, ಕುಂಡದಲ್ಲಿ ಒಳಾಂಗಣ ಸಸ್ಯಗಳನ್ನು ಬೆಳೆಸುವುದರ ಮೂಲಕವೂ ಮನೆಯೊಳಗೆ ತಂಪಾಗುವಂತೆ ಮಾಡಬಹುದು. ಗಿಡಗಳಿಂದ ಹರಡುವ ಗಾಳಿಯು ಮನೆಯ ವಾತಾವರಣವನ್ನು ಶಾಂತವಾಗಿರಿಸುತ್ತದೆ.
ಸೂರ್ಯನ ಬಿಸಿಲು ನೇರವಾಗಿ ಮನೆಯೊಳಗೆ ಬೀಳದಂತೆ ನೋಡಿಕೊಳ್ಳಿ
ಸೂರ್ಯನ ಕಿರಣಗಳು ನೇರವಾಗಿ ಮನೆಯೊಳಗೆ ಬೀಳುವುದರಿಂದ ಧಗೆ ಇನ್ನಷ್ಟು ಹೆಚ್ಚುತ್ತದೆ. ಅತಿಯಾದ ಸೂರ್ಯನ ಬಿಸಿಲು ಒಳಗೆ ಸೆಖೆ ಹೆಚ್ಚುವಂತೆ ಮಾಡಬಹುದು. ಹಾಗಾಗಿ ಹಗಲಿನ ವೇಳೆ ಕಿಟಕಿ ಬಾಗಿಲುಗಳನ್ನು ಮುಚ್ಚಿ, ಕರ್ಟನ್‌ಗಳನ್ನು ಮುಚ್ಚಿ ಸೂರ್ಯನ ಕಿರಣಗಳು ನೇರವಾಗಿ ಒಳ ಬರುವುದನ್ನು ತಪ್ಪಿಸಿ.
ಎಲ್ಲಾ ಕಡೆ ಬಲ್ಬ್ ಆನ್ ಮಾಡಬೇಡಿ
ಮನೆಯೊಳಗೆ ಬಲ್ಬ್ ಹಾಕುವುದರಿಂದ ಕೂಡ ಶಾಖ ಹೆಚ್ಚುತ್ತದೆ. ಇದು ಶಾಖದ ಪ್ರಮಾಣ ಏರಿಕೆಯಾಗಿ ಸೆಖೆ ಹೆಚ್ಚಲು ಕಾರಣವಾಗುತ್ತದೆ. ಇದರೊಂದಿಗೆ ಫ್ರಿಜ್, ವಾಷಿಂಗ್ ಮಷಿನ್‌ನಿಂದಲೂ ಸೆಖೆ ಹೆಚ್ಚುತ್ತದೆ. ಬೆಡ್‌ರೂಮ್‌ನಿಂದ ಇವುಗಳನ್ನು ದೂರ ಇರಿಸುವುದು ಕೂಡ ಮುಖ್ಯವಾಗುತ್ತದೆ.
ಕಾಟನ್ ಬಟ್ಟೆಗಳ ಬಳಕೆ
ಬೇಸಿಗೆಯಲ್ಲಿ ಕೋಣೆ ಅಥವಾ ಮನೆಯಲ್ಲಿ ಅತಿಯಾದ ಶಾಖ ನಿವಾರಣೆಯಾಗಲು ಕಾಟನ್ ಬಟ್ಟೆಗಳನ್ನು ಬಳಸುವುದು ಕೂಡ ಪರಿಹಾರ. ಹಾಸಿಗೆ ಹಾಸು, ದಿಂಬಿನ ಹೊದಿಕೆ ಈ ಎಲ್ಲವೂ ಕಾಟನ್ ಆಗಿದ್ದರೆ ಉತ್ತಮ.
ತಣ್ಣೀರು ಸ್ನಾನ
ಮನೆಯೊಳಗೆ ತಂಪು ಮಾಡುವುದು ಮಾತ್ರ, ದೇಹವನ್ನು ತಣ್ಣಗಿರಿಸಿಕೊಳ್ಳುವುದು ಕೂಡ ಬಹಳ ಮುಖ್ಯ. ಬೇಸಿಗೆಯಲ್ಲಿ ಸಾಧ್ಯವಾದಷ್ಟು ತಣ್ಣೀರು ಸ್ನಾನ ಮಾಡಿ. ತಣ್ಣೀರು ಸ್ನಾನ ಮಾಡುವುದರಿಂದ ದೇಹ ತಂಪಾಗಿರುತ್ತದೆ. ಇದರಿಂದ ಅಷ್ಟೊಂದು ಸೆಖೆ ಅನ್ನಿಸುವುದಿಲ್ಲ.
(This copy first appeared in Hindustan Times Kannada website. To read more like this please logon to kannada.hindustantimes.com)
