ಬಿಸಿನೀರು ಸ್ನಾನಕ್ಕೆ ಗೀಸರ್‌ ಬಳಸ್ತೀರಾ? ಎಲೆಕ್ಟ್ರಿಕ್ ಗೀಸರ್ ನಿರ್ವಹಣೆ ಬಗ್ಗೆ ನೀವು ತಿಳಿದಿರಲೇಬೇಕಾದ ಸಂಗತಿಗಳು
ಕನ್ನಡ ಸುದ್ದಿ  /  ಜೀವನಶೈಲಿ  /  ಬಿಸಿನೀರು ಸ್ನಾನಕ್ಕೆ ಗೀಸರ್‌ ಬಳಸ್ತೀರಾ? ಎಲೆಕ್ಟ್ರಿಕ್ ಗೀಸರ್ ನಿರ್ವಹಣೆ ಬಗ್ಗೆ ನೀವು ತಿಳಿದಿರಲೇಬೇಕಾದ ಸಂಗತಿಗಳು

ಬಿಸಿನೀರು ಸ್ನಾನಕ್ಕೆ ಗೀಸರ್‌ ಬಳಸ್ತೀರಾ? ಎಲೆಕ್ಟ್ರಿಕ್ ಗೀಸರ್ ನಿರ್ವಹಣೆ ಬಗ್ಗೆ ನೀವು ತಿಳಿದಿರಲೇಬೇಕಾದ ಸಂಗತಿಗಳು

Geyser maintenance tips: ಚಳಿಗಾಲದಲ್ಲಿ ಗೀಸರ್ ಅತ್ಯವಶ್ಯ. ಹಾಗಂತ ಸ್ವಿಚ್ ಆನ್ ಮಾಡಿದ ಕೂಡಲೇ ಬಿಸಿನೀರು ಬರುತ್ತೆ ಅಂತ ಕಾಲ ಕಾಲಕ್ಕೆ ಸರ್ವೀಸ್ ಮಾಡಿಸದೇ ಇದನ್ನು ಬಳಸುವಂತಿಲ್ಲ. ಸರಿಯಾಗಿ ನಿರ್ವಹಣೆ ಮಾಡಿಲ್ಲ ಅಂದ್ರೆ ಬಾಳಿಕೆ ಅವಧಿ ಕಡಿಮೆಯಾಗುತ್ತೆ. ಅಲ್ಲದೇ ಕರೆಂಟ್ ಬಿಲ್ ಕೂಡ ಜಾಸ್ತಿ ಬರಬಹುದು.

ಗೀಸರ್ ನಿರ್ವಹಣೆ ಟಿಪ್ಸ್
ಗೀಸರ್ ನಿರ್ವಹಣೆ ಟಿಪ್ಸ್ (PC: HT File Photo )

ಚಳಿಗಾಲ ಶುರುವಾದ ಕೂಡಲೇ ನಮಗೆ ಗೀಸರ್ ನೆನಪಾಗುತ್ತೆ, ಅದರಲ್ಲೂ ಚಳಿ ಜೋರಾದಾಗ ಬಿಸಿನೀರು ಅಗತ್ಯವಾಗಿ ಬೇಕಾಗುತ್ತದೆ.  ಹಾಗಂತ ಸ್ವಿಚ್ ಆನ್ ಮಾಡಿದ ಕೂಡಲೇ ಬಿಸಿನೀರು ಬರ್ತಿದೆ ಅಂತ ಇದರ ಮೆಂಟೆನೆನ್ಸ್ ಬಗ್ಗೆ ಗಮನ ಕೊಡದೇ ಇರುವುದು ಸರಿಯಲ್ಲ. ಸಾಮಾನ್ಯವಾಗಿ ಜನರು ಗೀಸರ್ ಸರ್ವೀಸ್ ಹಾಗೂ ನಿರ್ವಹಣೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಬೇರೆಲ್ಲಾ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಂತೆ ಗೀಸರ್ ಅನ್ನು ಕೂಡ ಸರಿಯಾಗಿ ನಿರ್ವಹಣೆ ಮಾಡುವುದು ತಿಳಿದಿರಬೇಕು. ಅದರಲ್ಲೂ ಒಂದಿಷ್ಟು ದಿನಗಳ ಕಾಲ ಬಳಸದೇ ನಂತರ ಬಳಸಲು ಶುರು ಮಾಡಿದರೆ ತಪ್ಪದೇ ಸರ್ವೀಸ್ ಮಾಡಿಸಬೇಕು.

ನಿಯಮಿತವಾಗಿ ಸರ್ವೀಸ್ ಮಾಡಿಸದೇ ಇದ್ದರೆ ನೀರು ಬಿಸಿಯಾಗುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಕರೆಂಟ್ ಬಿಲ್ ಕೂಡ ಜಾಸ್ತಿ ಬರಬಹುದು, ಇದರೊಂದಿಗೆ ಕೆಲವು ಸುರಕ್ಷತೆಯ ತೊಂದರೆಗಳು ಎದುರಾಗಬಹುದು. ನಿಯಮಿತವಾಗಿ ಸರ್ವೀಸ್ ಮಾಡಿಸುವುದರಿಂದ ಗೀಸರ್ ಚೆನ್ನಾಗಿ ಕೆಲಸ ಮಾಡುತ್ತದೆ. ಇದರಿಂದ ದೀರ್ಘಕಾಲ ಬಾಳಿಕೆ ಬರುವುದು ಮಾತ್ರವಲ್ಲ ನಿರ್ವಹಣೆಯ ಖರ್ಚನ್ನು ಕೂಡ ಉಳಿಸಲು ಸಾಧ್ಯವಿದೆ. ಗೀಸರ್ ನಿರ್ವಹಣೆ ಬಗೆಗಿನ ಈ ವಿಚಾರ ತಿಳಿದುಕೊಂಡಿರಿ. ಗೀಸರ್ ಸರ್ವೀಸ್ ಮಾಡುವ ಮೊದಲು ಈ ವಿಚಾರ ಗೊತ್ತಿರಬೇಕು.

ನೀರು ಬಿಸಿಯಾಗುವ ಸಮಯ ಪರಿಶೀಲಿಸಿ

ಗೀಸರ್ ಸರ್ವೀಸ್ ಮಾಡಿಸಬೇಕೇ ಬೇಡವೇ ಎಂಬುದನ್ನು ನೀರು ಬಿಸಿಯಾಗುವ ಸಮಯದ ಆಧಾರದ ಮೇಲೆ ತಿಳಿದುಕೊಳ್ಳಬಹುದು. ಸ್ವಿಚ್ ಆನ್ ಮಾಡಿ 5 ನಿಮಿಷಗಳ ನಂತರ ನೀರಿನ ತಾಪನ ಪರೀಕ್ಷೆ ಮಾಡಿ. ನೀರು ನಿಧಾನಕ್ಕೆ ಬಿಸಿಯಾಗುತ್ತಿದೆ, 5 ನಿಮಿಷಗಳ ನಂತರವೂ ತಣ್ಣೀರು ಬರುತ್ತಿದೆ ಎಂದರೆ ನೀವು ಕೂಡಲೇ ಸರ್ವೀಸ್ ಮಾಡಿಸಬೇಕು ಹಾಗೂ ಹೀಟಿಂಗ್ ಎಲಿಮೆಂಟ್ ಬದಲಿಸಬೇಕು ಎಂದರ್ಥ.

ಕೊಳೆ, ತುಕ್ಕು ಪರೀಕ್ಷಿಸಿ

ದೀರ್ಘಕಾಲದವರೆಗೆ ಗೀಸರ್ ಸರ್ವೀಸ್ ಮಾಡಿಸದೇ ಇರುವುದು ಒಳಭಾಗದಲ್ಲಿ ತುಕ್ಕು, ಕೊಳೆ ಹಿಡಿಯಲು ಕಾರಣವಾಗುತ್ತದೆ. ಇದು ತಾಪನ ದಕ್ಷತೆ ಅಥವಾ ಹೀಟಿಂಗ್ ಕ್ಯಾಪಾಸಿಟಿ ಮೇಲೆ ಪರಿಣಾಮ ಬೀರುತ್ತದೆ. ಸಾಧ್ಯವಾದರೇ ನೀವೇ ಹುಷಾರಾಗಿ ಇದನ್ನು ಸ್ವಚ್ಛ ಮಾಡಲು ಪ್ರಯತ್ನಪಡಿ. ಇದರಿಂದ ಗೀಸರ್ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ನೀರಿನ ಒತ್ತಡ ಪರಿಶೀಲನೆ ಮಾಡಿ

ಅತಿಯಾದ ನೀರಿನ ಒತ್ತಡವು ಗೀಸರ್‌ನ ಕಾರ್ಯ ಸಾಮರ್ಥ್ಯ ಮೇಲೆ ಪರಿಣಾಮ ಬೀರಬಹುದು. ನೀವು ನಳ್ಳಿ ಆನ್ ಮಾಡಿದಾಗ ರಭಸದಿಂದ ನೀವು ಹರಿಯುತ್ತಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ನೀರಿನ ಒತ್ತಡ ಕಡಿಮೆ ಮಾಡಲು ವಾಟರ್ ಗೇಜ್ ಅನ್ನು ಕೂಡ ಬಳಸಬಹುದು. ಹಾರ್ಡ್‌ವೇರ್ ಅಂಗಡಿಗಳಲ್ಲಿ ಸಿಗುವ ಫ್ರೆಶರ್ ವ್ಯಾಲ್ಯೂ ಅನ್ನು ಅಳವಡಿಸುವ ಮೂಲಕವೂ ನೀರಿನ ಒತ್ತಡವನ್ನು ಕಡಿಮೆ ಮಾಡಬಹುದು. ಇದನ್ನು ಇನ್‌ಸ್ಟಾಲ್ ಮಾಡಲು ತಿಳಿಯದಿದ್ದರೆ ತಜ್ಞರನ್ನು ಕರೆಸಿ.

ಥರ್ಮೋಸ್ಟಾಟ್ ಅನ್ನು ಪರಿಶೀಲಿಸಿ

ಥರ್ಮೋಸ್ಟಾಟ್ ನೀರಿನ ತಾಪಮಾನವನ್ನು ನಿಯಂತ್ರಿಸುತ್ತದೆ. ಗೀಸರ್ ಅನ್ನು ಆನ್ ಮಾಡಿ, ನಿರ್ದಿಷ್ಟ ಸಮಯಕ್ಕೆ ಅದು ಹೆಚ್ಚು ಬಿಸಿಯಾಗುವುದೋ ಇಲ್ಲವೂ ಪರಿಶೀಲಿಸಿ. ನೀರು ತುಂಬಾ ಬಿಸಿಯಾಗಿದ್ದರೆ ಮ್ಯಾನುವಲ್‌ನಲ್ಲಿ ಇರುವಂತೆ ಥರ್ಮೋಸ್ಟಾಟ್ ಡಯಲ್ ಅನ್ನು ಹೊಂದಿಸಿ. ನಿಮಗೆ ಇದು ತಿಳಿಯದಿದ್ದರೆ ಸರ್ವೀಸ್ ಮಾಡುವವರನ್ನು ಕರೆಸುವುದು ಉತ್ತಮ.

ಪೈಪ್‌, ವೈರ್‌ಗಳನ್ನು ಗಮನಿಸಿ

ಗೀಸರ್‌ನ ಒಳಗೆ ನೀರು ಹೋಗುವ ಹಾಗೂ ಗೀಸರ್‌ನಿಂದ ನೀರು ಹೊರ ಬರುವ ಪೈಪ್‌ಗಳನ್ನು ಪರಿಶೀಲಿಸಿ. ಇದರಿಂದ ನೀರು ಸೋರುವುದೇ ಗಮನಿಸಿ, ಯಾವುದಾದರೂ ಕನೆಕ್ಷನ್ ವೈರ್‌ನಲ್ಲಿ ಬಿರುಕು ಮೂಡಿದೆಯೇ ಗಮನಿಸಿ. ಸೋರಿಕೆ ಗಮನಿಸಿದರೆ ಕೂಡಲೇ ಬದಲಿಸುವ ಪ್ರಯತ್ನ ಮಾಡಿ.

ಸವೀರ್ಸ್ ಮಾಡುವವರನ್ನು ಯಾವಾಗ ತಪ್ಪದೇ ಕರೆಸಬೇಕು

ಗೀಸರ್‌ನಿಂದ ಜೋರಾಗಿ ಶಬ್ದ ಬರುತ್ತಿದ್ದರೆ ಅಥವಾ ಕಲುಷಿತ ನೀರು ಬರುತ್ತಿದ್ದರೆ, ಯಾವುದೇ ಭಾಗವನ್ನು ನಿಮ್ಮಿಂದ ಸರಿಪಡಿಸಲು ಸಾಧ್ಯವಾಗದೇ ಇದ್ದರೆ ಕೂಡಲೇ ನೀವು ನಿರ್ವಹಣೆಗಾಗಿ ತಜ್ಞರನ್ನು ಕರೆಸಬೇಕು.

ಗೀಸರ್ ಬಳಸುವಾಗ ಮುನ್ನೆಚ್ಚರಿಕೆ

ಅತಿ ಬಳಕೆ, ಹೆಚ್ಚು ಬಿಸಿ ಮಾಡುವುದನ್ನು ತಪ್ಪಿಸಿ

ಗೀಸರ್ ಅನ್ನು ದೀರ್ಘಕಾಲದವರೆಗೆ ಆನ್‌ ಇರಿಸುವುದನ್ನು ತಪ್ಪಿಸಲು ಪ್ರಯತ್ನಿಸಿ. ಬಳಕೆಗೆ ಸ್ವಲ್ಪ ಮೊದಲು ಆನ್ ಮಾಡಿ ಮತ್ತು ನಂತರ ಆಫ್ ಮಾಡಿ. ಇದರಿಂದ ವಿದ್ಯುತ್ ಉಳಿಸುವ, ಜೊತೆಗೆ ಹೀಟಿಂಗ್ ಕೆಪಾಸಿಟಿ ಹಾಗೆ ಇರುವಂತೆ ನೋಡಿಕೊಳ್ಳಬಹುದು. ಓವರ್‌ಲೋಡ್ ತಪ್ಪಿಸಲು ಒಂದೇ ಬಾರಿಗೆ ಬಿಸಿನೀರು ಬರುವ ಎಲ್ಲಾ ನಳ್ಳಿಗಳನ್ನು ಬಳಸದೇ ಇರುವುದು ಉತ್ತಮ.

ಲೀಕೇಜ್ ಪರಿಶೀಲಿಸಿ

ಸಣ್ಣ ಸೋರಿಕೆಯು ಬಹಳ ಬೇಗ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು, ಇದು ನೀರಿನ ಹಾನಿ ಅಥವಾ ವಿದ್ಯುತ್ ಅಪಾಯಗಳನ್ನು ಉಂಟುಮಾಡುತ್ತದೆ. ನೀವು ಯಾವುದೇ ಸೋರಿಕೆಯನ್ನು ಗಮನಿಸಿದರೆ ಕೂಡಲೇ ಗೀಸರ್ ಸ್ವಿಚ್ ಆಫ್ ಮಾಡಿ, ವೃತ್ತಿಪರ ತಜ್ಞರನ್ನು ಕರೆಸಿ.

Whats_app_banner