ಮನೆಯಲ್ಲಿ ಜಿರಳೆ, ಹಲ್ಲಿ, ಇರುವೆ, ಸೊಳ್ಳೆಗಳ ಕಾಟವೇ? ಇವನ್ನು ಓಡಿಸಲು ಇಲ್ಲಿವೆ ಸುಲಭ ಮಾರ್ಗಗಳು
ಕನ್ನಡ ಸುದ್ದಿ  /  ಜೀವನಶೈಲಿ  /  ಮನೆಯಲ್ಲಿ ಜಿರಳೆ, ಹಲ್ಲಿ, ಇರುವೆ, ಸೊಳ್ಳೆಗಳ ಕಾಟವೇ? ಇವನ್ನು ಓಡಿಸಲು ಇಲ್ಲಿವೆ ಸುಲಭ ಮಾರ್ಗಗಳು

ಮನೆಯಲ್ಲಿ ಜಿರಳೆ, ಹಲ್ಲಿ, ಇರುವೆ, ಸೊಳ್ಳೆಗಳ ಕಾಟವೇ? ಇವನ್ನು ಓಡಿಸಲು ಇಲ್ಲಿವೆ ಸುಲಭ ಮಾರ್ಗಗಳು

ಜಿರಳೆಗಳು, ನೊಣಗಳು, ಇರುವೆಗೆಳು ಹಾಗೂ ಹಲ್ಲಿಗಳು, ಸೊಳ್ಳೆಗಳು ಇವುಗಳು ನೋಡಲು ಸಣ್ಣ ಜೀವವಾಗಿದ್ದರೂ ಸಹ ಕೊಡುವ ಕಾಟ ಒಂದೆರಡಲ್ಲ. ಇವುಗಳ ಕಾಟದಿಂದ ಪಾರಾಗಲು ನೀವಿನ್ನು ದುಬಾರಿ ಕೆಮಿಕಲ್​ ಸ್ಪ್ರೇಗಳ ಮೊರೆ ಹೋಗಬೇಕಿಲ್ಲ. ಮನೆಯಲ್ಲಿರುವ ವಸ್ತುಗಳನ್ನೇ ಬಳಸಿ ಈ ಕೀಟಗಳನ್ನು ಓಡಿಸಬಹುದಾಗಿದೆ.

ಹಲ್ಲಿ, ಜಿರಳೆ ಓಡಿಸಲು ಟಿಪ್ಸ್
ಹಲ್ಲಿ, ಜಿರಳೆ ಓಡಿಸಲು ಟಿಪ್ಸ್

ಈ ಜಿರಳೆಗಳ ಕಾಟ ಮನೆಯಲ್ಲಿ ಒಮ್ಮೆ ಶುರುವಾಯ್ತು ಎಂದರೆ ಸಾಕು ಮತ್ತೆ ಅದರಿಂದ ಮನೆಯ ವಸ್ತುಗಳನ್ನು, ಬಟ್ಟೆ ಬರೆಗಳನ್ನು, ಆಹಾರ ಪದಾರ್ಥಗಳನ್ನು ಕಾಪಾಡಿಕೊಳ್ಳುವುದು ಸುಲಭದ ಮಾತಲ್ಲ. ಜಿರಳೆಗಳು ಮಾತ್ರವಲ್ಲ ನೊಣಗಳು ಹಾಗೂ ಇರುವೆಗಳು ಕೂಡ ಮನೆಗೆ ಕರೆಯದೇ ಬರುವ ಅತಿಥಿಗಳಾಗಿದ್ದರೂ ಸಹ ಇವುಗಳು ನೀಡುವ ಕಾಟವನ್ನು ಸಹಿಸೋಕೆ ಆಗುವುದಿಲ್ಲ. ಆದರೆ ನೀವು ಇಲ್ಲಿ ನೀಡಲಾದ ಕೆಲವೊಂದು ಸಲಹೆಗಳನ್ನು ಪಾಲಿಸಿದಲ್ಲಿ ಇವು ಮೂರರ ಕಾಟದಿಂದ ಸುಲಭವಾಗಿ ಪಾರಾಗಬಹುದಾಗಿದೆ. ಮನೆಯಲ್ಲಿ ಕಾಟ ಕೊಡುವ ಜಿರಳೆ , ಹಲ್ಲಿ, ಸೊಳ್ಳೆ, ನೊಣ ಸೇರಿದಂತೆ ವಿವಿಧ ಕೀಟಗಳನ್ನು ನೀವು ಸುಲಭವಾಗಿ ಮನೆಯಲ್ಲಿರುವ ಪದಾರ್ಥಗಳನ್ನೇ ಬಳಸಿ ಓಡಿಸಬಹುದಾಗಿದೆ .

ಜಿರಳೆ. ಸೊಳ್ಳೆ, ನೊಣಗಳನ್ನು ಓಡಿಸಲು ನಿಮಗೆ ಅಂಗಡಿಗಳಲ್ಲಿ ದುಬಾರಿ ಬೆಲೆಯ ಕೆಮಿಕಲ್​ಗಳು ಸಿಗುತ್ತವೆ. ಆದರೆ ಎಷ್ಟೇ ಸ್ಪ್ರೇ ಮಾಡಿದರೂ ಸಹ ಇವುಗಳನ್ನು ಸರ್ವನಾಶ ಮಾಡಲು ಆಗುವುದಿಲ್ಲ. ಮತ್ತೆ ಮತ್ತೆ ಇವುಗಳ ಕಾಟ ಮುಂದುವರಿಯುತ್ತಲೇ ಇರುತ್ತದೆ. ಇಂತಹ ಎಲ್ಲಾ ಸಮಸ್ಯೆಗಳಿಗೆ ಇಲ್ಲಿ ಹೇಳಲಾದ ಮನೆ ಮನೆ ಮದ್ದುಗಳು ಸಹಾಯಕಾರಿಯಾಗಿದೆ.

ಈ ಕೀಟಗಳಿಂದ ಪಾರಾಗಲು ನೀವು ಮನೆಯ ಮೂಲೆ ಮೂಲೆಗಳಲ್ಲಿ ನೀವು ಬಳಸದೇ ಬಿಟ್ಟಿರುವ ಯಾವುದಾದರೂ ಮಾತ್ರೆಗಳನ್ನು ಇರಿಸಬಹುದು. ಇದರಿಂದ ನೀವು ಜಿರಳೆ, ಹಲ್ಲಿ ಹಾಗೂ ಸೊಳ್ಳೆಯ ಕಾಟದಿಂದ ಪಾರಾಗಬಹುದಾಗಿದೆ. ಅಲ್ಲದೇ ಅಂಗಡಿಗಳಲ್ಲಿ ಕಡಿಮೆ ದರಕ್ಕೆ ದೊರೆಯುವ ಬಗ್​ ಬಾಲ್​​ಗಳೂ ಸಹ ನಿಮ್ಮ ಸಹಾಯಕ್ಕೆ ಬರಲಿವೆ. ಒಂದು ಪಾತ್ರೆಯಲ್ಲಿ ಮಾತ್ರೆಗಳನ್ನು ಪುಡಿ ಮಾಡಿ ಬಳಿಕ ಈ ಬಗ್​ ಬಾಲ್​ಗಳನ್ನು ಪುಡಿ ಮಾಡಿ ಮಿಕ್ಸ್​ ಮಾಡಿ. ಇದಾದ ಬಳಿಕ ಈ ಮಿಶ್ರಣಕ್ಕೆ ಬೇಕಿಂಗ್​ ಸೋಡಾ 1 ಚಮಚ, ಕಂಫರ್ಟ್​ 1 ಚಮಚ ಹಾಕಿ ಚೆನ್ನಾಗಿ ಮಿಕ್ಸ್​ ಮಾಡಿ. ಈ ಮಿಶ್ರಣಕ್ಕೆ 1/2 ಲೀಟರ್​ನ್ನು ನೀರನ್ನು ಸೇರಿಸಿ. ಎಲ್ಲಾ ಮಿಶ್ರಣವು ನೀರಿನಲ್ಲಿ ಸಂಪೂರ್ಣವಾಗಿ ಕರಗಿದ ಮೇಲೆ ನೀವು ಇದನ್ನು ಬಾಟಲಿಗೆ ಹಾಕಿಕೊಳ್ಳಿ.

ಈ ನೀರಿನ ಮಿಶ್ರಣವನ್ನು ನೀವು ಮನೆಯ ಮೂಲೆ ಮೂಲೆಗೂ ಸಿಂಪಡಣೆ ಮಾಡಬೇಕು. ಎಲ್ಲೆಲ್ಲಿ ಸೊಳ್ಳೆ, ಹಲ್ಲಿ ಹಾಗೂ ಜಿರಳೆಗಳ ಕಾಟ ಹೆಚ್ಚಿದೆಯೋ ಅಲ್ಲಿ ಇದನ್ನು ಹೆಚ್ಚೆಚ್ಚು ಸಿಂಪಡಣೆ ಮಾಡಿ. ನಿಮ್ಮ ಮನೆಯ ಫರ್ನಿಚರ್​ಗಳಿಗೂ ನೀವು ಇದನ್ನು ಸಿಂಪಡಿಸಬಹುದು. ಈ ಸ್ಪ್ರೇ ಇರುವಾಗ ಇರುವೆಗಳ ಕಾಟ ಕೂಡ ನಿಮಗೆ ಇರುವುದಿಲ್ಲ.

ಇದು ಮಾತ್ರವಲ್ಲದೇ ಬೇವಿನ ಎಣ್ಣೆಯನ್ನು ಕೂಡ ನೀವು ಬಳಕೆ ಮಾಡಿಕೊಳ್ಳಬಹುದಾಗಿದೆ. ಬೇವಿನ ಎಣ್ಣೆ ಅಥವಾ ಬೇವಿನ ಹೂವುಗಳನ್ನು ಪುಡಿಮಾಡಿಕೊಂಡು ನೀರಿಗೆ ಬೆರೆಸಿ ಇದನ್ನು ಜಿರಳೆ ಕಾಟವಿರುವ ಜಾಗದಲ್ಲಿ ಸಿಂಪಡಣೆ ಮಾಡಬೇಕು. ಹೀಗೆ ಮಾಡಿದಾಗ ಜಿರಳೆಗಳು ಸಂಪೂರ್ಣವಾಗಿ ಸಾಯುತ್ತವೆ. ನೊಣಗಳ ಕಾಟದಿಂದ ಪಾರಾಗಲು ನೀವು ನೀಲಗಿರಿ ಎಣ್ಣೆಯನ್ನು ಬಳಸಬಹುದು. ಹತ್ತಿ ಬಟ್ಟೆಯ ಮೇಲೆ ನೀಲಗಿರಿ ಎಣ್ಣೆಯನ್ನು ಹಾಕಿ ನೊಣ ಹೆಚ್ಚಾಗಿ ಕಾಣಿಸಿಕೊಳ್ಳುವ ಕೋಣೆಯಲ್ಲಿ ಈ ಹತ್ತಿ ಬಟ್ಟೆಯಿಂದ ಒರೆಸಿ. ಬಿರಿಯಾನಿ ಎಲೆ, ಲವಂಗ ಹಾಗೂ ನೀಲಗಿರಿಗಳನ್ನು ಕಿಟಕಿಗಳ ಸಂದುಗಳಲ್ಲಿ ಇಡುವದರಿಂದಲೂ ನೊಣಗಳ ಕಾಟ ಇರುವುದಿಲ್ಲ.

ಕಿಟಕಿ ಹಾಗೂ ಬಾಗಿಲುಗಳ ಬಳಿಯಲ್ಲಿ ಚೆಂಡು ಹೂವುಗಳನ್ನು ಇಡಬೇಕು. ಇವುಗಳ ಪರಿಮಳವು ಸೊಳ್ಳೆಗಳನ್ನು ನಿಮ್ಮ ಮನೆಯ ಒಳಗೆ ಪ್ರವೇಶಿಸಲು ಬಿಡುವುದಿಲ್ಲ. 6-7 ಎಸಳು ಬೆಳ್ಳುಳ್ಳಿ ಹಾಗೂ ಲವಂಗಗಳನ್ನು ಒಂದು ಲೋಟ ನೀರಿನಲ್ಲಿ ಕುದಿಸಿ. ಬಳಿಕ ಈ ದ್ರವವನ್ನು ಸ್ಪ್ರೇ ಬಾಟಲಿಗೆ ಹಾಕಿಕೊಂಡು ಜಿರಳೆ, ಹಲ್ಲಿಗಳು ಬರುವ ಜಾಗದಲ್ಲಿ ಸಿಂಪಡಣೆ ಮಾಡಬೇಕು. ಇದರ ವಾಸನೆಗೆ ಜಿರಳೆ, ಹಲ್ಲಿಗಳು ನಿಮ್ಮ ಮನೆಯ ಹತ್ತಿರಕ್ಕೂ ಸುಳಿಯುವುದಿಲ್ಲ.

Whats_app_banner