ಸ್ಮಾರ್ಟ್ ಟಿವಿ ಸ್ವಚ್ಛಗೊಳಿಸಲು ಈ ಟಿಪ್ಸ್ ಪಾಲಿಸಿ: ವರ್ಷಗಳು ಕಳೆದರೂ ಟಿವಿ ಹೊಸತರಂತೆ ಹೊಳೆಯುತ್ತದೆ
Smart TV Cleaning Tips: ಸ್ಮಾರ್ಟ್ ಟಿವಿ ಸ್ಕ್ರೀನ್ ಧೂಳಿನಿಂದ ಕೂಡಿದ್ದರೆ, ಅದನ್ನು ಸ್ವಚ್ಛಗೊಳಿಸುವಾಗ ಗೀರುಗಳು ಬೀಳುವ ಸಾಧ್ಯತೆಗಳು ಹೆಚ್ಚು. ಆದರೆ ಕೆಲವು ಸಲಹೆಗಳನ್ನು ಪಾಲಿಸಿದರೆ ಯಾವುದೇ ಗೀರುಗಳಿಲ್ಲದೆ ಟಿವಿ ಪರದೆಯನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಟಿವಿ ಯಾವಾಗಲೂ ಹೊಸತರಂತೆ ಹೊಳೆಯಲು ಈ ಟಿಪ್ಸ್ ಪಾಲಿಸಿ.
ಈಗ ಎಲ್ಲರ ಮನೆಯಲ್ಲೂ ಸ್ಮಾರ್ಟ್ ಟಿವಿಗಳದ್ದೇ ಕಾರುಬಾರು. ಹಳೆಯ ಕಾಲದ ಸಿಆರ್‌ಟಿ ಟಿವಿಗಳು ಈಗಿಲ್ಲ. ಈಗೇನಿದ್ದರೂ 40, 50, 60 ಹೀಗೆ ದೊಡ್ಡ ದೊಡ್ಡ ಸೈಜ್‌ನ ಸ್ಮಾರ್ಟ್ ಟಿವಿಗಳು ಮನೆಯ ಹಾಲ್ ಅನ್ನು ಅಲಂಕರಿಸಿವೆ. ಸ್ಮಾರ್ಟ್ ಟಿವಿ ಪರದೆಗಳ ಮೇಲೆ ಧೂಳು ಬಹಳ ಸುಲಭವಾಗಿ ಅಂಟಿಕೊಳ್ಳುತ್ತದೆ. ಅದು ಟಿವಿ ನೋಡುವಾಗ ಅಡೆತಡೆಯೆನಿಸುತ್ತದೆ. ಅದಕ್ಕಾಗಿಯೇ ಟಿವಿ ಪರದೆಯನ್ನು ಆಗಾಗ ಸ್ವಚ್ಛಗೊಳಿಸುವುದು ಅವಶ್ಯಕವಾಗಿದೆ. ಆದರೆ, ಟಿವಿ ಪರದೆಯನ್ನು ಸ್ವಚ್ಛಗೊಳಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದರೆ ಟಿವಿ ಪರದೆಯ ಮೇಲೆ ಗೀರುಗಳು ಉಂಟಾಗುವುದು ಖಂಡಿತ. ಅಷ್ಟೆಲ್ಲಾ ದುಡ್ಡು ಕೊಟ್ಟು ಖರೀದಿಸಿದ ಟಿವಿ, ಗೀರುಗಳಿಂದ ಹಾಳಾದರೆ ಬೇಸರವೂ ಆಗುತ್ತದೆ. ಹೆಚ್ಚು ಗೀರುಗಳಿದ್ದರೆ ಉತ್ತಮ ಗುಣಮಟ್ಟದ ಚಿತ್ರವೂ ಸಹ ಚೆನ್ನಾಗಿ ಕಾಣುವುದಿಲ್ಲ. ಅದಕ್ಕಾಗಿಯೇ ಟಿವಿ ಪರದೆಯನ್ನು ಒರೆಸುವಾಗ ಕೆಲವು ಸಲಹೆಗಳನ್ನು ಪಾಲಿಸಿದರೆ, ನಿಮ್ಮ ಸ್ಮಾರ್ಟ್ ಟಿವಿ ಯಾವಾಗಲೂ ಹೊಸದರಂತೆ ಹೊಳೆಯುತ್ತದೆ. ಹಾಗಾದರೆ ಯಾವ ರೀತಿ ಸ್ವಚ್ಛಗೊಳಿಸಬೇಕು ಎಂಬುದನ್ನು ಇಲ್ಲಿ ತಿಳಿಯೋಣ.
ಸ್ಮಾರ್ಟ್ ಟಿವಿಯ ಪರದೆ ಈ ರೀತಿಯಾಗಿ ಸ್ವಚ್ಛಗೊಳಿಸಿ
ಒರೆಸುವ ವಿಧಾನ ಹೀಗಿರಲಿ: ಟಿವಿ ಪರದೆಯನ್ನು ಒರೆಸುವಾಗ ಕೆಲವು ವಿಧಾನಗಳನ್ನು ಅನುಸರಿಸುವುದು ಅವಶ್ಯಕವಾಗಿದೆ. ಯಾವುದೋ ಒಂದು ಬಟ್ಟೆಯಿಂದ ಟಿವಿ ಪರದೆಯನ್ನು ಮನಸ್ಸಿಗೆ ಬಂದಂತೆ ಉಜ್ಜಬಾರದು. ನೀವು ಒಮ್ಮೆ ಅಡ್ಡಲಾಗಿ ಒರೆಸಲು ಪ್ರಾರಂಭಿಸಿದರೆ, ಕೆಳಗಿನಿಂದ ಮೇಲಕ್ಕೆ ಸಂಪೂರ್ಣವಾಗಿ ಅಡ್ಡಲಾಗಿಯೇ ಸ್ವಚ್ಛಗೊಳಿಸಬೇಕು. ಅದು ಲಂಬವಾಗಿದ್ದರೆ ಅದನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ಲಂಬವಾಗಿ ಒರೆಸಬೇಕು. ನೀವು ಅಡ್ಡ–ಉದ್ದವಾಗಿ ಒರೆಸಿದರೆ, ಅದು ಚೆನ್ನಾಗಿ ಸ್ವಚ್ಛವಾಗುವುದಿಲ್ಲ, ಬದಲಿಗೆ ಸುಲಭವಾಗಿ ಗೀರುಗಳು ಮೂಡುತ್ತವೆ. ಜೊತೆಗೆ ಮಸಕಾಗಿ ಕಾಣಿಸುತ್ತದೆ. ತುಂಬಾ ಧೂಳಿನಿಂದ ಕೂಡಿದ ಯಾವುದೇ ಟವಲ್ ಅನ್ನು ಒರೆಸಲು ಬಳಸಬೇಡಿ. ಸ್ವಚ್ಛವಾಗಿರುವ ಟವಲ್ ಅನ್ನೇ ತೆಗೆದುಕೊಂಡು ಒರೆಸಿ. ಟಿವಿ ಪರದೆಯನ್ನು ತುಂಬಾ ಗಟ್ಟಿಯಾಗಿ ಒರೆಸಬೇಡಿ. ಮೈಕ್ರೋಫೈಬರ್ ಬಟ್ಟೆಯಿಂದ ನಿಧಾನವಾಗಿ ಸ್ವಚ್ಛಗೊಳಿಸಿ. ಟವಲ್‌ನ ಮೇಲ್ಮೈ ಒರಟಾಗಿದ್ದರೆ ಗೀರುಗಳಾಗುವ ಸಂಭವ ಹೆಚ್ಚು. ಕೆಲವೊಮ್ಮೆ ಸ್ಕ್ರೀನ್ ಕೂಡಾ ಹಾಳಾಗಬಹುದು.
ಮೈಕ್ರೋಫೈಬರ್ ಬಟ್ಟೆ ಬಳಸಿ: ಮೈಕ್ರೋಫೈಬರ್ ಬಟ್ಟೆಯಿಂದ ಟಿವಿ ಪರದೆಯನ್ನು ಒರೆಸಿ. ಸಾಮಾನ್ಯ ಬಟ್ಟೆ ಒರಟಾಗಿರುತ್ತದೆ. ಅದರಿಂದ ಟಿವಿ ಪರದೆ ಸ್ವಚ್ಛಗೊಳಿಸಿದರೆ ಗೀರುಗಳಾಗುತ್ತವೆ. ಟಿಶ್ಯೂಗಳನ್ನು ಸಹ ಬಳಸಬೇಡಿ. ಸ್ಮಾರ್ಟ್ ಟಿವಿ ಸ್ಕ್ರೀನ್‌ಗಳು ಎಸ್‌ಸಿಡಿ, ಎಲ್‌ಇಡಿ, ಓಎಲ್‌ಇಡಿ ಪ್ಯಾನಲ್‌ಗಳನ್ನು ಹೊಂದಿರುತ್ತವೆ. ಈ ಪರದೆಗಳು ಬಹಳ ಸೂಕ್ಷ್ಮವಾಗಿರುತ್ತವೆ. ಅದಕ್ಕಾಗಿಯೇ ಅವುಗಳನ್ನು ಸ್ವಚ್ಛಗೊಳಿಸಲು ಮೈಕ್ರೋಫೈಬರ್ ಬಟ್ಟೆಯನ್ನು ಬಳಸಬೇಕು. ಶುಚಿಗೊಳಿಸುವಾಗ ಟಿವಿಯನ್ನು ಸ್ವಿಚ್ ಆಫ್ ಮಾಡುವುದನ್ನು ಮರೆಯಬೇಡಿ.
ಸ್ಪ್ರೇ ಮತ್ತು ರಾಸಾಯನಿಕಗಳನ್ನು ಬಳಸುವಾಗ ಎಚ್ಚರದಿಂದಿರಿ: ಟಿವಿ ಪರದೆಗಳನ್ನು ಸ್ವಚ್ಛಗೊಳಿಸಲು ಹಾನಿಕಾರಕ ರಾಸಾಯನಿಕಗಳನ್ನು ಎಂದಿಗೂ ಬಳಸಬೇಡಿ. ಅವುಗಳನ್ನು ಬಳಸುವುದರಿಂದ ಟಿವಿ ಪರದೆಯ ಮೇಲೆ ಕಲೆಯಾಗುವುದಲ್ಲದೆ, ಹಾನಿಗೊಳಗಾಗಬಹುದು. ಟಿವಿ ಪರದೆ ಸ್ವಚ್ಛಗೊಳಿಸಲು ಆಲ್ಕೋಹಾಲ್ ಅಥವಾ ಅಮೋನಿಯಾ ಇರುವ ಸ್ಪ್ರೇಗಳನ್ನು ಬಳಸಬೇಡಿ. ಟಿವಿ ಪರದೆಗಳಿಗೆ ನಿರ್ದಿಷ್ಟವಾಗಿ ಸ್ಪ್ರೇಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರಲ್ಲಿ ಯಾವ ವಸ್ತುಗಳನ್ನು ಬಳಸಲಾಗಿದೆ ಎಂಬುದನ್ನು ತಿಳಿದ ನಂತರವೇ ಅದನ್ನು ಸ್ವಚ್ಛಗೊಳಿಸಲು ಬಳಸಬೇಕು. ಅಲ್ಲದೆ, ಸ್ಪ್ರೇ ಅನ್ನು ನೇರವಾಗಿ ಟಿವಿ ಪರದೆಯ ಮೇಲೆ ಸಿಂಪಡಿಸಬಾರದು. ಮೊದಲು ಅದನ್ನು ಮೈಕ್ರೋಫೈಬರ್ ಬಟ್ಟೆಯ ಮೇಲೆ ಸಿಂಪಡಿಸಿ ನಂತರ ಪರದೆಯನ್ನು ಒರೆಸಿ. ಹೀಗೆ ಮಾಡುವುದರಿಂದ ಸ್ಕ್ರೀನ್ ಮೇಲೆ ಸ್ಪ್ರೇ ಹನಿಗಳು ನೇರವಾಗಿ ಬೀಳುವುದಿಲ್ಲ. ಕಲೆಗಳೂ ಉಂಟಾಗುವುದಿಲ್ಲ.
ಟಿವಿಯ ಅಂಚುಗಳನ್ನು ಹತ್ತಿಯಿಂದ ಒರೆಸಿ: ನೀವು ಟಿವಿ ಪರದೆಯನ್ನು ಸ್ವಚ್ಛಗೊಳಿಸಿದರೂ, ಅದರ ಸುತ್ತಲಿನ ತೆಳುವಾದ ಅಂಚುಗಳ ಸುತ್ತಲೂ ಸ್ವಲ್ಪ ಧೂಳು ಹಾಗೆಯೇ ಇರುತ್ತದೆ. ಅದನ್ನು ಬಟ್ಟೆಯಿಂದ ಒರೆಸಲಾಗುವುದಿಲ್ಲ. ಅದಕ್ಕಾಗಿಯೇ ಅಂಚುಗಳನ್ನು ಸ್ವಚ್ಛಗೊಳಿಸಲು ಹತ್ತಿಯನ್ನು ಬಳಸಬೇಕು. ಸ್ವಲ್ಪ ಹತ್ತಿಯನ್ನು ತೆಗೆದುಕೊಂಡು ನಿಧಾನವಾಗಿ ನಾಲ್ಕೂ ಅಂಚುಗಳ ಮೂಲೆಯನ್ನು ಒರೆಸಿ. ಇದರಿಂದ ಹತ್ತಿಗೆ ಧೂಳು ಅಂಟಿಕೊಳ್ಳುತ್ತದೆ. ಅಂಚುಗಳನ್ನು ಒರೆಸಲು ಹತ್ತಿಯಿಂದ ತಯಾರಿಸಿದ ಇಯರ್ ಬಡ್ಸ್‌ಗಳನ್ನು ಬಳಸಬಹುದು. ಹೀಗೆ ಮಾಡುವುದರಿಂದ ಟಿವಿ ಪರದೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬಹುದು.