ಮನೆಯಲ್ಲಿ ಸುಲಭವಾಗಿ ಬೆಳೆಸಬಹುದಾದ ಹಣ್ಣು, ತರಕಾರಿ ಗಿಡಗಳಿವು; ಕೈತೋಟ ಮಾಡುವ ಆಸೆ ಇರುವವರು ಗಮನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮನೆಯಲ್ಲಿ ಸುಲಭವಾಗಿ ಬೆಳೆಸಬಹುದಾದ ಹಣ್ಣು, ತರಕಾರಿ ಗಿಡಗಳಿವು; ಕೈತೋಟ ಮಾಡುವ ಆಸೆ ಇರುವವರು ಗಮನಿಸಿ

ಮನೆಯಲ್ಲಿ ಸುಲಭವಾಗಿ ಬೆಳೆಸಬಹುದಾದ ಹಣ್ಣು, ತರಕಾರಿ ಗಿಡಗಳಿವು; ಕೈತೋಟ ಮಾಡುವ ಆಸೆ ಇರುವವರು ಗಮನಿಸಿ

ಗಾರ್ಡನಿಂಗ್ ಮೇಲೆ ಇತ್ತೀಚಿನ ಜನರಿಗೆ ಒಲವು ಹೆಚ್ಚಾಗಿದೆ. ಮನೆಯ ಎದುರು, ಬಾಲ್ಕನಿಯಲ್ಲಿ, ಟೆರೆಸ್‌ ಮೇಲೆ ಸ್ವಲ್ಪ ಜಾಗ ಇದ್ರೂ ಗಿಡ ಬೆಳೆಸುತ್ತಾರೆ. ನೀವು ಗಾರ್ಡನ್‌ ಮಾಡುವ ಆಸೆ ಹೊಂದಿದ್ದರೆ ಮನೆಯಲ್ಲಿ ಸುಲಭವಾಗಿ ಯಾವೆಲ್ಲಾ ಹಣ್ಣು, ತರಕಾರಿ ಗಿಡ ಬೆಳೆಸಬಹುದು ನೋಡಿ.

ಮನೆಯಲ್ಲಿ ಬೆಳೆಯಬಹುದಾದ ಹಣ್ಣು ತರಕಾರಿಗಳು
ಮನೆಯಲ್ಲಿ ಬೆಳೆಯಬಹುದಾದ ಹಣ್ಣು ತರಕಾರಿಗಳು (PC: Canva)

ಕಿಚನ್ ಗಾರ್ಡನ್‌, ಟೆರೆಸ್ ಗಾರ್ಡನ್‌, ಬಾಲ್ಕನಿ ಗಾರ್ಡನ್ ಈ ಪರಿಕಲ್ಪನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ತರಕಾರಿ ದರ ಹೆಚ್ಚಾದಾಗಲಂತೂ ಜನ ನಾವೇ ಮನೆಯಲ್ಲಿ ಬೆಳೆದುಕೊಂಡರೆ ಹೇಗೆ ಎಂದು ಯೋಚಿಸಲು ಶುರು ಮಾಡುತ್ತಾರೆ.

ಗಾರ್ಡನ್ ಮಾಡಲು ಯೋಚಿಸುವ ಹಲವರಿಗೆ ಮನೆಯಲ್ಲಿ ಯಾವೆಲ್ಲಾ ಗಿಡಗಳು ಬೆಳೆಸಬಹುದು ಎಂಬ ಅರಿವಿರುವುದು ಕಡಿಮೆ. ಬಾಲ್ಕನಿ ಅಥವಾ ಟೆರೆಸ್‌ ಗಾರ್ಡನ್‌ನಲ್ಲಿ ತರಕಾರಿ ಜೊತೆಗೆ ಕೆಲವು ಹಣ್ಣಿನ ಗಿಡಗಳನ್ನೂ ಬೆಳೆಸಬಹುದು. ಮನೆಯಲ್ಲಿ ಬೆಳೆದ ಹಣ್ಣು, ತರಕಾರಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ಹಾಗಾದರೆ ಮನೆಯಲ್ಲಿ ಯಾವೆಲ್ಲಾ ಹಣ್ಣು ಹಾಗೂ ತರಕಾರಿ ಗಿಡಗಳನ್ನು ಬೆಳೆಸಬಹುದು ಎಂದು ನೀವು ಯೋಚಿಸುತ್ತಿದ್ದರೆ ಪಟ್ಟಿಯನ್ನೊಮ್ಮೆ ಗಮನಿಸಿ.

ಟೊಮೆಟೊ

ಭಾರತೀಯ ಆಹಾರಪದ್ಧತಿಯಲ್ಲಿ ಟೊಮೆಟೊಗೆ ವಿಶೇಷ ಮಹತ್ವವಿದೆ. ಇದು ಅಡುಗೆಮನೆಯಲ್ಲಿ ಅಗ್ರಸ್ಥಾನ ಪಡೆದಿರುವ ತರಕಾರಿ, ಟೊಮೆಟೊವನ್ನು ಸುಲಭವಾಗಿ ಮನೆಯಲ್ಲೇ ಕುಂಡದಲ್ಲಿ ಬೆಳೆಯಬಹುದು. ಟೊಮೆಟೊ ಗಿಡವನ್ನು ಕೊಂಚ ಬಿಸಿಲು ಇರುವಲ್ಲಿ ನೆಟ್ಟರೆ ಚೆನ್ನಾಗಿ ಕಾಯಿ ಬಿಡುತ್ತದೆ.

ದೊಣ್ಣೆ ಮೆಣಸು

ಸಲಾಡ್‌, ಪಾಸ್ತಾ, ಬಜ್ಜಿ, ಬೊಂಡಾ ಮಾಡುವ ದೊಣ್ಣೆ ಮೆಣಸನ್ನು ಕೂಡ ನಿಮ್ಮ ಮನೆಯ ಗಾರ್ಡನ್‌ನಲ್ಲಿ ಸರಳ ವಿಧಾನದ ಮೂಲಕ ಬೆಳೆದುಕೊಳ್ಳಬಹುದು. ಚೆನ್ನಾಗಿ ಫಲವತ್ತಾದ ಮಣ್ಣಿನಲ್ಲಿ ಬಿಸಿಲು ಬೀಳುವ ಜಾಗದಲ್ಲಿ ಈ ಗಿಡವನ್ನು ಇರಿಸಿದರೆ ಚೆನ್ನಾಗಿ ಬೆಳೆಯುತ್ತದೆ.

ಸೌತೆಕಾಯಿ

ಡಯೆಟ್ ಮಾಡುವವರಿಗೆ ಸೌತೆಕಾಯಿ ಹೇಳಿ ಮಾಡಿಸಿದ್ದು, ನೀವು ಡಯೆಟ್ ಪ್ರಿಯರಾಗಿದ್ದು ಸೌತೆಕಾಯಿ ತರಲು ಪದೇ ಪದೇ ಮಾರುಕಟ್ಟೆಗೆ ಹೋಗುವುದನ್ನು ತಪ್ಪಿಸಲು ಮನೆಯಲ್ಲಿ ಸುಲಭವಾಗಿ ಸೌತೆಕಾಯಿ ಬೆಳೆದುಕೊಳ್ಳಬಹುದು. ಉತ್ತಮ ಗುಣಮಟ್ಟದ ಸೌತೆಕಾಯಿ ಬೀಜ ತಂದು ಫಲವತ್ತಾದ ಮಣ್ಣಿನಲ್ಲಿ ಊರಬೇಕು. ಇದು ಬಿಸಿಲು ಹಾಗೂ ನೀರು ಎರಡೂ ಅವಶ್ಯ. ಫಲವತ್ತಾದ ಮಣ್ಣಿನಲ್ಲಿ ಬೀಜ ಬಿತ್ತಿ ದಿನವೂ ನೀರುಣಿಸಿದರೆ ಗಿಡ ಬೆಳೆಯಲು ಆರಂಭವಾಗುತ್ತದೆ.

ಕಲ್ಲಂಗಡಿ

ಕಲ್ಲಂಗಡಿ ಸರ್ವಕಾಲದಲ್ಲೂ ಬೆಳೆಯುವ ಹಣ್ಣು. ಇದು ಆರೋಗ್ಯಕ್ಕೂ ಕೂಡ ಉತ್ತಮ ಎನ್ನಿಸುವ ಹಣ್ಣು. ಕಲ್ಲಂಗಡಿ ಬೀಜವನ್ನು ಮರಳು ಮಿಶ್ರಿತ ಮಣ್ಣಿನಲ್ಲಿ ಹರಡಿ, ದಿನಕ್ಕೆ 8 ಗಂಟೆ ಕಾಲ ಬಿಸಿಲು ಬೀಳುವಂತೆ ನೋಡಿಕೊಳ್ಳಿ. ನಿಯಮಿತವಾಗಿ ನೀರು ಹಾಕುವುದು ಕೂಡ ಮುಖ್ಯವಾಗುತ್ತದೆ. ಮಣ್ಣಿನಲ್ಲಿ ನೀರಿನಾಂಶ ಇರುವಂತೆ ನೋಡಿಕೊಂಡರೆ ಕೆಲವೇ ದಿನಗಳಲ್ಲಿ ಬೀಜ ಮೊಳಕೆ ಬಂದು ಗಿಡ ಬೆಳೆಯಲು ಆರಂಭವಾಗುತ್ತದೆ.

ಸ್ಟ್ರಾಬೆರಿ

ಸಿಹಿ, ಹುಳಿ ಮಿಶ್ರಿತ ಸ್ಟ್ರಾಬೆರಿ ಹಣ್ಣು ನಿಮಗೆ ಇಷ್ಟ ಅಂತಾದ್ರೆ ಇದನ್ನೂ ಕೂಡ ಮನೆಯಲ್ಲಿ ಬೆಳೆದುಕೊಳ್ಳಬಹುದು. ಇದನ್ನು ಸುಲಭವಾಗಿ ಕುಂಡದಲ್ಲಿ ಬೆಳೆದುಕೊಳ್ಳಬಹುದು. ಇದನ್ನು ಕುಂಡದಲ್ಲಿ ಇಟ್ಟರೆ ದಿನಕ್ಕೆ 8 ಗಂಟೆಗಳ ಕಾಲ ಸೂರ್ಯನ ಬಿಸಿಲು ತಾಕುವಂತೆ ಇರಿಸಬೇಕು. ಹೊರಗಡೆ ನೆಡುವುದಾದರೆ ಚೆನ್ನಾಗಿ ಬಿಸಿಲು ಬರುವ ಜಾಗದಲ್ಲಿ ನೆಡಬೇಕು. ಪ್ರತಿದಿನ ನೀರು ಹಾಕುವುದು ಕೂಡ ಮುಖ್ಯವಾಗುತ್ತದೆ.

ಹಸಿಮೆಣಸು

ಹಸಿಮೆಣಸು ಕೂಡ ಪ್ರತಿದಿನ ಅಡುಗೆಗೆ ಬಳಸುವ ಆಹಾರ ಪದಾರ್ಥಗಳಲ್ಲಿ ಒಂದು. ಇದನ್ನು ಕೂಡ ಸುಲಭವಾಗಿ ಮನೆಯಲ್ಲಿ ಬಾಲ್ಕನಿಯಲ್ಲಿ ಕಿಚನ್‌ನಲ್ಲಿ ಕುಂಡದಲ್ಲಿ ಬೆಳೆದುಕೊಳ್ಳಬಹುದು. ಮೆಣಸಿನ ಗಿಡ ತಂದು ಫಲವತ್ತಾದ ತೇವಾಂಶವಿರುವ ಮಣ್ಣಿನಲ್ಲಿ ನೆಡಬೇಕು. ಇದಕ್ಕೆ ನೀರು ಹಾಗೂ ಬಿಸಿಲು ಚೆನ್ನಾಗಿ ಬೀಳುವಂತೆ ನೋಡಿಕೊಳ್ಳಬೇಕು. ಒಮ್ಮೆ ನೀವು ಮನೆಯಲ್ಲಿ ಹಸಿಮೆಣಸಿನ ಗಿಡ ನೆಟ್ಟರೆ ಮತ್ತೆ ಪೇಟೆಯಿಂದ ಹಸಿಮೆಣಸು ತರುವ ಪ್ರಯೋಜನವೇ ಬರುವುದಿಲ್ಲ.

ಇದರೊಂದಿಗೆ ಕರಿಬೇವು, ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪುಗಳನ್ನು ಕೂಡ ಮನೆಯಲ್ಲೇ ಬೆಳೆದುಕೊಳ್ಳಬಹುದು. ಆದರೆ ಇದಕ್ಕೆ ನಿಮ್ಮ ಸಮಯ ಹಾಗೂ ಶ್ರಮ ಎರಡೂ ಬೇಕಾಗುತ್ತದೆ, ಇದರೊಂದಿಗೆ ಗಿಡ ನೆಟ್ಟರೆ ಸಾಲುವುದಿಲ್ಲ, ಆರೈಕೆ ಮಾಡುವುದು ಅಷ್ಟೇ ಮಖ್ಯ.

Whats_app_banner