Cucumber Storage: ಸೌತೆಕಾಯಿ ಕೆಡದಂತೆ ತಾಜಾವಾಗಿರಿಸಲು ಇಲ್ಲಿದೆ ಸುಲಭ ಉಪಾಯ; ನೀವೂ ಮನೆಯಲ್ಲಿ ಟ್ರೈ ಮಾಡಿ
ಸೌತೆಕಾಯಿ ತಿನ್ನುವುದು ಬಹುತೇಕರಿಗೆ ಇಷ್ಟ. ಚಟ್ನಿ, ಸಲಾಡ್‌ಗಂತೂ ಇದು ಇರಲೇಬೇಕು. ಆದರೆ ಸೌತೆಕಾಯಿಯನ್ನು ಕಡೆದಂತೆ ಇರಿಸುವುದು ಹೇಗೆ? ಇಲ್ಲಿದೆ ನೋಡಿ ಕೆಲವು ಸುಲಭ ಉಪಾಯ. ಈ ತಂತ್ರಗಳ ಮೂಲಕ ಹಲವು ದಿನಗಳವರೆಗೆ ಸೌತೆಕಾಯಿ ತಾಜಾವಾಗಿರುತ್ತದೆ.
ಭಾರತೀಯರ ಅಡುಗೆಮನೆಯಲ್ಲಿ ಸೌತೆಕಾಯಿ ಇಲ್ಲದ ದಿನಗಳೇ ಇಲ್ಲ ಎನ್ನಬಹುದು. ಕಡಿಮೆ ದರದಲ್ಲಿ ಸರ್ವಕಾಲಕ್ಕೂ ಸಿಗುವ ಸೌತೆಕಾಯಿ ಸೇವನೆ ಆರೋಗ್ಯಕ್ಕೂ ಉತ್ತಮ. ಇದರಿಂದ ಸಲಾಡ್, ಚಟ್ನಿ, ರೈತಾಗಳನ್ನು ತಯಾರಿಸುವ ಮೂಲಕ ಅಡುಗೆಯ ರುಚಿಯನ್ನು ಹೆಚ್ಚಿಸಿಕೊಳ್ಳಬಹುದು.
ಇದರಲ್ಲಿ ಶೇ 96 ಪ್ರತಿಶತದಷ್ಟು ನೀರಿನಂಶವಿದೆ. ಇದರ ಸೇವನೆಯಿಂದ ನಿರ್ಜಲೀಕರಣ, ಉರಿಯೂತದಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ. ಇದರೊಂದಿಗೆ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರ ಹಾಕಲು ಇದು ಸಹಕಾರಿ.
ಎಷ್ಟೆಲ್ಲಾ ಪ್ರಯೋಜನಗಳಿರುವ ಸೌತೆಕಾಯಿಯನ್ನು ಪ್ರತಿದಿನ ಮಾರುಕಟ್ಟೆಗೆ ಹೋಗಿ ಖರೀದಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಒಮ್ಮೆಲೇ ಒಂದಿಷ್ಟು ಖರೀದಿ ಮಾಡಿ ತರುತ್ತಾರೆ. ಆದರೆ ತಂದ ಮೇಲೆ ಕಾಡುವ ಪ್ರಶ್ನೆ ಇದನ್ನು ಸಂಗ್ರಹಿಸುವುದು ಹೇಗೆ ಮತ್ತು ಬಹಳ ದಿನಗಳವರೆಗೆ ತಾಜಾವಾಗಿ ಇರಿಸುವುದು ಹೇಗೆ? ಎಂಬುದು. ಯಾಕೆಂದರೆ ಸೌತೆಕಾಯಿ ಒಣಗಿದ ಮೇಲೆ ತಿನ್ನಲು ಚೆನ್ನಾಗಿರುವುದಿಲ್ಲ. ಆ ಕಾರಣಕ್ಕೆ ಸೌತೆಕಾಯಿಯನ್ನು ಕೆಡದಂತೆ ಇರಿಸಲು ಇಲ್ಲಿದೆ ಕೆಲವು ಸುಲಭ ತಂತ್ರ. ಈ ತಂತ್ರಗಳ ಮೂಲಕ ಸೌತೆಕಾಯಿ ತಾಜಾವಾಗಿರುವಂತೆ ನೋಡಿಕೊಳ್ಳಬಹುದು.
ಸೌತೆಕಾಯಿ ತಾಜಾವಾಗಿಡಲು ಇಲ್ಲಿದೆ 5 ಸುಲಭ ತಂತ್ರ:
ಸರಿಯಾಗಿ ಸ್ವಚ್ಛಗೊಳಿಸಿ ಮತ್ತು ಒಣಗಿಸಿ: ಅಂಗಡಿಯಿಂದ ಸೌತೆಕಾಯಿ ತಂದ ತಕ್ಷಣ ಅವುಗಳನ್ನು ಚೆನ್ನಾಗಿ ತೊಳೆದು ಸಂಪೂರ್ಣವಾಗಿ ಒಣಗಿಸಬೇಕು. ಸೌತೆಕಾಯಿಯನ್ನು ಸ್ವಚ್ಛ ಮಾಡುವುದರಿಂದ ಹೊರ ಪದರಕ್ಕೆ ಅಂಟಿಕೊಂಡಿರುವ ಬ್ಯಾಕ್ಟೀರಿಯಾವನ್ನು ನಾಶ ಮಾಡಬಹುದಾಗಿದೆ. ಇದರಿಂದ ಬೇಗನೆ ಕೊಳೆಯದಂತೆ ನೋಡಿಕೊಳ್ಳಬಹುದು. ಆದರೆ ತೊಳೆದ ನಂತರ ಚೆನ್ನಾಗು ಒರೆಸಿ, ಗಾಳಿಯಾಡುವ ಜಾಗದದಲ್ಲಿ ಒಣಗಿಸಲು ಮರೆಯಬಾರದು.
ತೇವಾಂಶದಿಂದ ದೂರ ಇರಿಸಿ: ನೀರಿನಾಂಶ ಅಥವಾ ತೇವಾಂಶದಿಂದ ಸೌತೆಕಾಯಿ ಬೇಗನೆ ಕೊಳೆತು ಹೋಗಬಹುದು. ಆ ಕಾರಣಕ್ಕೆ ಸೌತೆಕಾಯಿಯನ್ನು ಪ್ರಿಜ್‌ನಲ್ಲಿ ತೇವಾಂಶ ರಹಿತ, ಗಾಳಿಯಾಡುವಂತಿರುವ ತೆರೆದ ಜಾಗದಲ್ಲಿ ಇರಿಸುವುದು ಮುಖ್ಯವಾಗುತ್ತದೆ.
ಟಿಶ್ಯೂವಿನಲ್ಲಿ ಸುತ್ತಿಡಿ: ಈ ಮೊದಲು ತಿಳಿಸಿದಂತೆ ಸೌತೆಕಾಯಿ ತೇವಾಂಶದಿಂದ ಬೇಗನೆ ಕೊಳೆಯುತ್ತದೆ. ಆ ಕಾರಣಕ್ಕೆ ಚೆನ್ನಾಗಿ ತೊಳೆದು ಒಣಗಿಸಿದ ಸೌತೆಕಾಯಿಯನ್ನು ಅಗಲವಾದ ಟಿಶ್ಯೂ ಪೇಪರ್‌ನಲ್ಲಿ ಸುತ್ತಿ ಇಡುವುದರಿಂದ ಬೇಗನೆ ಕೆಡದಂತೆ ರಕ್ಷಿಸಬಹುದು.
ಪ್ಲಾಸ್ಟಿಕ್ ಕವರ್ ಬಳಸಿ: ಟಿಶ್ಯೂ ಅಥವಾ ಪೇಪರ್ ಟವಲ್ ಮನೆಯಲ್ಲಿ ಇಲ್ಲದೇ ಇದ್ದರೆ, ಚಿಂತಿಸಬೇಡಿ. ಇನ್ನೊಂದು ಉಪಾಯವಿದೆ. ರಂಧ್ರವಿರುವ ಪ್ಲಾಸ್ಟಿಕ್ ಕವರ್‌ನಲ್ಲೂ ಶೇಖರಿಸಿ ಇರಿಸಬಹುದು. ಈ ವಿಧಾನವು ಹಣ್ಣು, ತರಕಾರಿ ಒಣಗದಂತೆ ತಡೆಯುತ್ತದೆ.
ಇತರ ಹಣ್ಣು, ತರಕಾರಿಯಿಂದ ದೂರವಿರಿಸಿ: ಬಾಳೆಹಣ್ಣು, ಟೊಮೆಟೊ ಮುಂತಾದ ಹಣ್ಣುಗಳು ಮತ್ತು ತರಕಾರಿಗಳು ಎಥಿಲೀನ್ ಅನಿಲವನ್ನು ಉತ್ಪಾದಿಸುತ್ತವೆ. ಇವು ಇತರ ತರಕಾರಿಯನ್ನು ಬೇಗನೆ ಮಾಗುವಂತೆ ಮಾಡುತ್ತವೆ. ಅಲ್ಲದೆ ಇದು ಸೌತೆಕಾಯಿಯನ್ನು ಬೇಗನೆ ಕೆಡುವಂತೆ ಮಾಡುತ್ತದೆ.
ಕತ್ತರಿಸಿದ ಸೌತೆಕಾಯಿಯನ್ನು ಇಡುವುದು ಹೇಗೆ?
ಸಂಪೂರ್ಣವಾಗಿ ಕತ್ತರಿಸಿದ ಹಾಗೂ ಹೋಳಾಗಿಸಿ ಸೌತೆಕಾಯಿಗಿಂತ ಅರ್ಧ ಕತ್ತರಿಸಿದ ಸೌತೆಕಾಯಿಯನ್ನು ಸಂಗ್ರಹಿಸಿ ಇಡುವುದು ಬಹಳ ಸುಲಭ. ನಿಮಗೆ ಅಗತ್ಯ ಇರುವಷ್ಟು ಸೌತೆಕಾಯಿಯನ್ನು ಮಾತ್ರ ಕತ್ತರಿಸಿ. ಕತ್ತರಿಸಿದ ಭಾಗಕ್ಕೆ ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಿ ಇಡಿ. ಇದರಿಂದ ಸೌತೆಕಾಯಿ ಕೆಡದೆ, ತಾಜಾವಾಗಿಯೇ ಇರುತ್ತದೆ.
ಎಷ್ಟು ಸಮಯದವರೆಗೆ ಸಂಗ್ರಹಿಸಬಹುದು ಮತ್ತು ತಾಜಾವಾಗಿರಿಸಬಹುದು
ಸರಿಯಾದ ಕ್ರಮ ಅನುಸರಿಸಿದರೆ ಸೌತೆಕಾಯಿ ಎರಡು ವಾರಗಳವರೆಗೆ ತಾಜಾವಾಗಿರುತ್ತದೆ. ಸೌತೆಕಾಯಿಯನ್ನು ಸಂಗ್ರಹಿಸುವಾಗ ರೆಫ್ರಿಜರೇಟರ್‌ನ ತಾಪಮಾನವು 50 ಡಿಗ್ರಿಗಿಂತ ಹೆಚ್ಚಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅದಾಗ್ಯೂ ಹೆಚ್ಚು ನೀರಿನಾಂಶ ಹಾಗೂ ತಾಜಾ ಪರಿಮಳವನ್ನು ಹೊಂದಲು ಸಂಗ್ರಹಿಸಿ ಇಡದೆ, ಬೇಗನೇ ತಿನ್ನುವುದು ಉತ್ತಮ.
ವಿಭಾಗ