ಹೊಸಮನೆಯಲ್ಲೊಂದು ಅಂಬೇಡ್ಕರ್ ಗ್ರಂಥಾಲಯ; ಓದಿನ ಅಭಿರುಚಿಯುಳ್ಳವರು ಕನ್ನಡ ಕೌಸ್ತುಭಕ್ಕೊಮ್ಮೆ ಭೇಟಿ ನೀಡಿ; ಅರುಣ್‌ ಜೋಳದಕೂಡ್ಲಿಗಿ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಹೊಸಮನೆಯಲ್ಲೊಂದು ಅಂಬೇಡ್ಕರ್ ಗ್ರಂಥಾಲಯ; ಓದಿನ ಅಭಿರುಚಿಯುಳ್ಳವರು ಕನ್ನಡ ಕೌಸ್ತುಭಕ್ಕೊಮ್ಮೆ ಭೇಟಿ ನೀಡಿ; ಅರುಣ್‌ ಜೋಳದಕೂಡ್ಲಿಗಿ ಬರಹ

ಹೊಸಮನೆಯಲ್ಲೊಂದು ಅಂಬೇಡ್ಕರ್ ಗ್ರಂಥಾಲಯ; ಓದಿನ ಅಭಿರುಚಿಯುಳ್ಳವರು ಕನ್ನಡ ಕೌಸ್ತುಭಕ್ಕೊಮ್ಮೆ ಭೇಟಿ ನೀಡಿ; ಅರುಣ್‌ ಜೋಳದಕೂಡ್ಲಿಗಿ ಬರಹ

ಚಳ್ಳಕೆರೆಯಲ್ಲಿ ಶಿಕ್ಷಕರಾದ ಶಬ್ರೀನಾ ಮಹಮ್ಮದ್ ಅಲಿ ಮತ್ತು ಮಹಮದ್ ಅಲಿ ತಮ್ಮ ಹೊಸ ಮನೆ ಕನ್ನಡ ಕೌಸ್ತುಭದಲ್ಲಿ ಅಂಬೇಡ್ಕರ್ ಗ್ರಂಥಾಲಯ ನಿರ್ಮಿಸಿದ್ದಾರೆ. ಈ ಗ್ರಂಥಾಲಯಕ್ಕಾಗಿ ಬಹಳ ಮುಖ್ಯ ಎನ್ನಿಸುವ ಹೊಸ ಕೃತಿಗಳನ್ನು ಕೊಂಡಿದ್ದಾರೆ. ಇವರ ಮನೆ ಹಾಗೂ ಅಂಬೇಡ್ಕರ್‌ ಗ್ರಂಥಾಲಯದ ವೈಶಿಷ್ಟ್ಯಗಳ ಕುರಿತ ಅರುಣ್‌ ಜೋಳದಕೂಡ್ಲಿಗಿ ಅವರ ಬರಹ.

ಚಳ್ಳಕೆರೆಯಲ್ಲಿ ಶಿಕ್ಷಕರಾದ ಶಬ್ರೀನಾ ಮಹಮ್ಮದ್ ಅಲಿ ಮತ್ತು ಮಹಮದ್ ಅಲಿ ಹೊಸ ಮನೆ ಕನ್ನಡ ಕೌಸ್ತುಭದಲ್ಲಿನ ಅಂಬೇಡ್ಕರ್ ಗ್ರಂಥಾಲಯ
ಚಳ್ಳಕೆರೆಯಲ್ಲಿ ಶಿಕ್ಷಕರಾದ ಶಬ್ರೀನಾ ಮಹಮ್ಮದ್ ಅಲಿ ಮತ್ತು ಮಹಮದ್ ಅಲಿ ಹೊಸ ಮನೆ ಕನ್ನಡ ಕೌಸ್ತುಭದಲ್ಲಿನ ಅಂಬೇಡ್ಕರ್ ಗ್ರಂಥಾಲಯ

ಹೊಸ ಮನೆ ಕಟ್ಟಿಸುವಾಗ ಒಬ್ಬೊಬ್ಬರು ಒಂದೊಂದು ಆಸೆ ಇರಿಸಿಕೊಂಡಿರುತ್ತಾರೆ. ಕೆಲವರಿಗೆ ಮನೆಯಲ್ಲಿ ಹೋಮ್‌ ಥಿಯೇಟರ್‌ ಇರಬೇಕು ಅಂತ ಆಸೆ, ಕೆಲವರಿಗೆ ಓಪನ್‌ ಕಿಚನ್‌ ಮಾಡಬೇಕು ಅಂತ ಆಸೆ, ಹೀಗೆ ಒಬ್ಬೊಬ್ಬರದು ಒಂದೊಂದು ಆಸೆ. ಆದರೆ ಇಲ್ಲೊಂದು ಮನೆಯಲ್ಲಿ ಅಂಬೇಡ್ಕರ್‌ ಗ್ರಂಥಾಲಯವನ್ನು ನಿರ್ಮಿಸಿದ್ದಾರೆ. ನಿಜಕ್ಕೂ ಇದು ಮನೆ ಕಟ್ಟಿಸಿದವರು ಓದಿನ ಅಭಿರುಚಿ ಪುಸ್ತಕ ಪ್ರೇಮವನ್ನು ತಿಳಿಸುತ್ತದೆ. ಈ ಮನೆಯ, ಗಂಥ್ರಾಲಯದ ಬಗ್ಗೆ ಬರೆದಿದ್ದಾರೆ ಅರುಣ್‌ ಜೋಳದಕೂಡ್ಲಿಗಿ. ಅವರ ಬರಹ ಇಲ್ಲಿದೆ.

ಅರುಣ್‌ ಜೋಳಡಕೂಡ್ಲಿಗಿ ಬರಹ

ಮೊನ್ನೆ ಭಾನುವಾರ ಚಳ್ಳಕೆರೆಯಲ್ಲಿ ಶಿಕ್ಷಕರಾದ ಶಬ್ರೀನಾ ಮಹಮ್ಮದ್ ಅಲಿ ಮತ್ತು ಮಹಮದ್ ಅಲಿ ಹೊಸ ಮನೆ ಪ್ರವೇಶಕ್ಕೆ ಆಹ್ವಾನಿಸಿದ್ದರು. ಆಹ್ವಾನ ಪತ್ರಿಕೆಯಲ್ಲಿ 'ಅಂಬೇಡ್ಕರ್ ಗ್ರಂಥಾಲಯ' ಉದ್ಘಾಟನೆಯೂ ಇತ್ತು. ಈ ಮುಂಚೆ ಶಬ್ರಿನಾ ಅವರು ಯಾವ ಪುಸ್ತಕ ಎಲ್ಲಿ ಸಿಗುತ್ವೆ ಎನ್ನುವ ಕಾರಣಕ್ಕೆ ಮಾಹಿತಿ ಕೇಳಿ ವಿವರ ಪಡೆದಿದ್ದರು. ಈ ಕಾರಣಕ್ಕೆ ಕುಟುಂಬ ಸಮೇತ ಹೋಗಿ ಒಂದಷ್ಟು ಪುಸ್ತಕಗಳ ಕಟ್ಟನ್ನು ಗ್ರಂಥಾಲಯಕ್ಕೆ ನೀಡಿ ಆತಿಥ್ಯ ಸ್ವೀಕರಿಸಿ ಬಂದೆವು. ಮನೆಯ ಎದುರು ಪಾತೀನಾ ಶೇಕ್, ಸಾವಿತ್ರಿಬಾ ಪುಲೆ, ಅಂಬೇಡ್ಕರ್, ಶಿಶುನಾಳ ಶರೀಫ್, ಅಬ್ದುಲ್ ಕಲಾಂ, ವಿವೇಕಾನಂದ, ಅಕ್ಕಮಹಾದೇವಿ, ಮದರ್ ತೆರೆಸಾ, ವಿಷ್ಣು ಅವರ ಭಿತ್ತಿಚಿತ್ರಗಳನ್ನೊಳಗೊಂಡ ಆಕರ್ಷಕ ಅಲಂಕಾರ ಗಮನ ಸೆಳೆಯುವಂತಿತ್ತು.

ಶಾಲಾ ಶಿಕ್ಷಕರಾದ ಈ ದಂಪತಿಗಳು ಮನೆಗೆ 'ಕನ್ನಡ ಕೌಸ್ತುಭ' ಎಂದು ಹೆಸರಿಟ್ಟಿದ್ದಾರೆ. 'ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ' ಎಂದು ಮನೆಯ ಮೇಲೆ ಬರೆಸಿದ್ದಾರೆ. ಮನೆ ಪ್ರವೇಶಿಸುತ್ತಿದ್ದಂತೆ 'ಅಂಬೇಡ್ಕರ್ ಗ್ರಂಥಾಲಯ' ನಮ್ಮನ್ನು ಸ್ವಾಗತಿಸಿತು. ಈ ಗ್ರಂಥಾಲಯಕ್ಕಾಗಿ ಬಹಳ ಮುಖ್ಯ ಎನ್ನಿಸುವ ಹೊಸ ಕೃತಿಗಳನ್ನು ಕೊಂಡಿದ್ದಾರೆ. ಮನೆ ಕಟ್ಟುವ ಬಜೆಟ್ಟಿನಲ್ಲಿ ಈ ಗ್ರಂಥಾಲಯಕ್ಕಾಗಿ ಒಂದು ಬಜೆಟ್ ತೆಗೆದಿಟ್ಟು ಮುತುವರ್ಜಿಯಿಂದ ಗ್ರಂಥಾಲಯ ರೂಪಿಸಿದ್ದಾರೆ. ಪ್ರವೇಶಕ್ಕೆ ಬಂದ ಕೆಲವರು ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆ ನೀಡಿದರು. ಮನೆಗೆ ಅತಿಥಿಗಳಾಗಿ ಬಂದವರಿಗೂ ಒಂದೊಂದು 'ಪುಸ್ತಕ' ನೀಡಿ ಸ್ವಾಗತಿಸಿದರು. ಒಟ್ಟಾರೆ ಕಾರ್ಯಕ್ರಮ ಪುಸ್ತಕಮಯವಾಗಿತ್ತು. ಸಾರ್ವಜನಿಕ ಅಂತಲ್ಲದಿದ್ದರೂ ಅಧ್ಯನಾಕಾಂಕ್ಷಿಗಳು/ಓದಿನ ಹಸಿವು ಇರುವವರೂ ಬಂದು ಗ್ರಂಥಾಲಯವನ್ನು ಓದಿಗೂ, ಅಧ್ಯಯನಕ್ಕೂ ಬಳಸಿಕೊಳ್ಳಬಹುದು. ಇನ್ನು ಬೇರೆ ಬೇರೆ ಕ್ಷೇತ್ರ ಪುಸ್ತಕಗಳನ್ನು ಕೊಳ್ಳಬೇಕಿದೆ ಸರ್ ಎಂದು ಮಹಮದ್ ಅಲಿ ವಿವರಿಸಿದರು. ಮುಂದೆ ಅತ್ಯುತ್ತಮ ಪುಸ್ತಕ ಕುರಿತ ಚಿಂತನಾ ಸಭೆಗಳನ್ನು ಮನೆಯಲ್ಲಿ ಆಯೋಜಿಸುವ ಯೋಜನೆ‌ ಇದೆ. ನೀವು ಬರಬೇಕು ಎಂದು ಆಹ್ವಾನ ನೀಡಿದರು. ಸಾಹಿತ್ಯಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಚಳ್ಳಕೆರೆ ಬರಡು ಪ್ರದೇಶ. ಇಂಥದ್ದರಲ್ಲಿ ಶಬ್ರಿನಾ-ಮಹಮದ್ ಅಲಿ ಅವರ ಕನಸು ಸಿಹಿ ನೀರಿನ ಚಿಲುಮೆಯಂತೆ ಕಾಣುತ್ತಿದೆ.

ನಾವು ಮನೆಗೆ ಹೋಗುವ ಮೊದಲೆ ಚಳ್ಳಕೆರೆ ಭಾಗದ ಹಿರಿಯ ಸಾಹಿತಿಗಳಾದ ತಿಪ್ಪಣ್ಣ ಮರಿಕುಂಟೆ ಅವರು ಗ್ರಂಥಾಲಯವನ್ನು ಉದ್ಘಾಟಿಸಿದ್ದರು. ಕತೆಗಾರ ಮೋದೂರು ತೇಜ, ಕವಿ ಡಾ. ಬಿ. ಎಂ. ಗುರುನಾಥ್, ಮನುಶ್ರೀ ಸಿದ್ಧಾಪುರ, ಕವಿ ನಾಗೇಂದ್ರ್ಪ ಪಡಗಲಬಂಡೆ, ಕಲಾವಿದ ಜಬೀವುಲ್ಲಾ ಎಂ. ಅಸದ್ ಮೊದಲಾದವರು ಬಂದು ಹೋಗಿದ್ದರು.

ಬಹುಪಾಲು ಹೊಸ ಮನೆಗಳ ಅದ್ದೂರಿತನದಲ್ಲಿ ಮನೆಯ ಗ್ರಂಥಾಲಯಕ್ಕಿಂತ ದೇವರ ಕೋಣೆ ಆದ್ಯತೆ ಪಡೆಯುವಾಗ ಶಬ್ರಿನಾ-ಮಹಮದ್ ಅಲಿ ಅವರ ಮನೆಯ 'ಅಂಬೇಡ್ಕರ್ ಗ್ರಂಥಾಲಯ' ನಿಜಕ್ಕೂ ಮಾದರಿಯಾಗಿದೆ. ಸಾಹಿತ್ಯ ಪ್ರೀತಿಯ ದಂಪತಿಗಳಿಗೆ ಅಭಿನಂದನೆಗಳು.

ಮನೆಗಳಲ್ಲಿ 'ಅಂಬೇಡ್ಕರ್ ಗ್ರಂಥಾಲಯ' ರೂಪಿಸುವುದು ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಅತ್ಯುತ್ತಮ ಮಾದರಿಗಳಲ್ಲಿ ಒಂದು.

ಅರುಣ್‌ ಅವರ ಈ ಪೋಸ್ಟ್‌ಗೆ ಹಲವರು ಲೈಕ್ಸ್‌, ಕಾಮೆಂಟ್‌ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ ಶಬ್ರೀನಾ ಮಹಮ್ಮದ್ ಅಲಿ ಮತ್ತು ಮಹಮದ್ ಅಲಿ ಅವರ ಪುಸ್ತಕಪ್ರೇಮಕ್ಕೆ ತಲೆದೂಗಿದ್ದಾರೆ.

Whats_app_banner