Home Remedies: ಬಿಡದೆ ಕಾಡುವ ಕೆಮ್ಮಿಗೆ ಗಿಡಮೂಲಿಕೆಗಳಲ್ಲಿದೆ ಪರಿಹಾರ; ತಕ್ಷಣದ ಆರಾಮಕ್ಕಾಗಿ ಈ 5 ಹರ್ಬಲ್ ಟೀ ಕುಡಿದು ನೋಡಿ
Herbal Tea For Cough: ನೈಸರ್ಗಿಕವಾಗಿ ದೊರೆಯುವ ಗಿಡಮೂಲಿಕೆಗಳು ಋತುಮಾನದ ಕಾಯಿಲೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತವೆ. ಅರಿಶಿಣ ಮತ್ತು ಜೇನುತುಪ್ಪವನ್ನು ಗಿಡಮೂಲಿಕೆಗಳೊಂದಿಗೆ ಬೆರೆಸಿ ಕುಡಿಯುವದರಿಂದ ಕೆಮ್ಮಿಗೆ ತಕ್ಷಣದ ಆರಾಮ ಸಿಗುತ್ತದೆ. ಬಿಟ್ಟುಬಿಡದೆ ಕೆಮ್ಮಿ ಸುಸ್ತಾಗಿದ್ದರೆ, ಈ ಹರ್ಬಲ್ ಟೀಗಳನ್ನು ಕುಡಿದು ನೋಡಿ. ಶೀಘ್ರ ಪರಿಹಾರ ಸಿಗುತ್ತದೆ.

ಚಳಿಗಾಲ ಯಾವಾಗಲೂ ತನ್ನೊಂದಿಗೆ ಸೋಂಕುಗಳನ್ನು ತೆಗೆದುಕೊಂಡೇ ಬರುತ್ತದೆ. ಚಳಿಗಾಲದಲ್ಲಿ ಶೀತ, ಕೆಮ್ಮುಗಳಂತಹ ಕಾಯಿಲೆಗಳು ಸಾಮಾನ್ಯ. ನಾವೀಗ ಚಳಿಗಾಲದ ಕೊನೆಯ ಹಂತದಲ್ಲಿದ್ದೇವೆ. ಇನ್ನೇನು ಚಳಿ ಕಡಿಮೆಯಾಗಿ ಬಿಸಿಲು ಏರಲಿದೆ. ಈ ಋತುಮಾನದ ಬದಲಾವಣೆಯ ಸಮಯದಲ್ಲಿ ಅನೇಕ ಸೋಂಕುಗಳನ್ನು ತರುತ್ತದೆ. ಅದರಲ್ಲಿ ಶೀತ, ಕೆಮ್ಮು ಕೂಡಾ ಸೇರಿವೆ. ಶೀತ ವಾಸಿಯಾದರೂ ಕೆಮ್ಮು ಮಾತ್ರ ಬಿಟ್ಟು ಬಿಡದೆ ಕಾಡುತ್ತದೆ. ಇದಕ್ಕೆ ಕೆಲವು ನೈಸರ್ಗಿಕ ಗಿಡಮೂಲಿಕೆ ವಸ್ತುಗಳನ್ನು ಬಳಸಿದರೆ ಆರಾಮವನ್ನು ನೀಡುತ್ತವೆ. ಅವುಗಳಿಂದ ತಯಾರಿಸಿದ ಕಷಾಯ, ಚಹಾ, ಪಾನೀಯಗಳು, ಗಂಟಲಿನ ಕಿರಿಕಿರಿಯನ್ನು ಶಮನಗೊಳಿಸಿ, ಕೆಮ್ಮನ್ನು ನಿವಾರಿಸುತ್ತದೆ. ಹರ್ಬಲ್ ಟೀ ಅಥವಾ ಗಿಡಮೂಲಿಕೆ ಚಹಾಗಳು ಕೆಮ್ಮಿನ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತವೆ.
ಹರ್ಬಲ್ ಟೀಯಿಂದ ಕೆಮ್ಮು ಶಮನ
ಕೆಮ್ಮು ಕಡಿಮೆಯಾಗಲು ಹರ್ಬಲ್ ಟೀಯನ್ನು ಕುಡಿಯುವುದು ಒಂದು ಆರೋಗ್ಯಕರ ಮನೆಮದ್ದು ಎಂದು ಹೇಳಲಾಗುತ್ತದೆ. ಜರ್ನಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಹರ್ಬಲ್ ಟೀಯಲ್ಲಿ ಕೆಮ್ಮು ನಿವಾರಕ ಔಷಧೀಯ ಗಿಡಮೂಲಿಕೆಗಳನ್ನು ಪ್ರಾಚೀನಕಾಲದಿಂದಲೂ ಬಳಸಲಾಗುತ್ತಿದೆ ಎಂದು ಹೇಳಲಾಗಿದೆ. ಅದು ಗಂಟಲಿನ ಲೋಳೆಪೊರೆಯ ಕಿರಿಕಿರಿಯನ್ನ ಶಮನಗೊಳಿಸುತ್ತದೆ ಮತ್ತು ಗಂಟಲು ಶುಷ್ಕಗೊಳ್ಳುವುದನ್ನು ನಿವಾರಿಸುತ್ತದೆ. ಇದರಿಂದ ಕೆಮ್ಮಿನಿಂದ ಪರಿಹಾರ ದೊರೆಯುತ್ತದೆ. ಗಿಡಮೂಲಿಕೆಗಳಿಂದ ತಯಾರಿಸಿದ ಚಹಾ ಕುಡಿಯುವುದರಿಂದ ಅದರ ಉಷ್ಣತೆಯು ಗಂಟಲಿನ ಅಂಗಾಶಗಳ ಉರಿಯೂತವನ್ನು ಶಮನಗೊಳಿಸುತ್ತದೆ. ಸ್ನಾಯುಗಳಿಗೆ ವಿಶ್ರಾಂತಿ ದೊರೆತು ಕೆಮ್ಮು ಕಡಿಮೆಯಾಗುತ್ತದೆ. ಇಷ್ಟೇ ಅಲ್ಲದೇ ಹರ್ಬಲ್ ಟೀಯಲ್ಲಿರುವ ಶುಂಠಿ, ಅರಿಶಿಣ ಮತ್ತು ಗಿಡಮೂಲಿಕೆಗಳು ಉಸಿರಾಟದ ಪ್ರದೇಶದಲ್ಲಿನ ಉರಿಯೂತ ಗುಣಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಿಡದೇ ಕಾಡುವ ಕೆಮ್ಮು ನಿವಾರಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹರ್ಬಲ್ ಟೀಗಳನ್ನು ತಯಾರಿಸುವುದು ಹೇಗೆ ಎಂದು ನೋಡೋಣ.
ಬಿಡದೇ ಕಾಡುವ ಕೆಮ್ಮಿಗಾಗಿ 5 ಹರ್ಬಲ್ ಟೀಗಳು
1. ಕ್ಯಾಮೊಮೈಲ್ ಮತ್ತು ಪುದೀನಾ ಟೀ: ಒಂದು ಕಪ್ ನೀರನ್ನು ಕುದಿಸಿ. ಅದಕ್ಕೆ ಕ್ಯಾಮೊಮೈಲ್ ಟೀ ಬ್ಯಾಗ್ ಮತ್ತು ಪುದೀನಾ ಎಲೆಗಳನ್ನು ಸೇರಿಸಿ. ಕಡಿಮೆ ಉರಿಯಲ್ಲಿ 5 ರಿಂದ 7 ನಿಮಿಷಗಳ ಕಾಲ ಕುದಿಸಿ. ಅದನ್ನು ಶೋಧಿಸಿದ ನಂತರ ಸ್ವಲ್ಪ ಜೇನುತುಪ್ಪ ಮತ್ತು ತುರಿದ ಶುಂಠಿ ಸೇರಿಸಿ ಬಿಸಿಯಿರುವಾಗಲೇ ಕುಡಿಯಿರಿ.
2. ಥೈಮ್ ಮತ್ತು ಜೇನುತುಪ್ಪದ ಟೀ: ಒಂದು ಕಪ್ ನೀರನ್ನು ಕುದಿಸಿ. ಅದಕ್ಕೆ ಒಣಗಿದ ಥೈಮ್ ಎಲೆಗಳನ್ನು ಸೇರಿಸಿ. ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ ಸುಮಾರು 10 ನಿಮಿಷಗಳ ಕಾಲ ಕುದಿಸಿ. ನಂತರ ಶೋಧಿಸಿಕೊಳ್ಳಿ. ಅದಕ್ಕೆ ಜೇನುತುಪ್ಪ ಮತ್ತು ಎರಡು ಹನಿ ನಿಂಬೆ ರಸ ಬೆರೆಸಿ ಕುಡಿಯಿರಿ.
3. ಅರಿಶಿಣ ಮತ್ತು ಶುಂಠಿ ಚಹಾ: ಇದೊಂದು ಪುರಾತನ ಕಾಲದಿಂದಲೂ ಬಳಕೆಯಾಗುತ್ತಿರುವ ಮನೆಮದ್ದಾಗಿದೆ. ಒಂದು ಕಪ್ ನೀರನ್ನು ಕುದಿಯಲು ಇಡಿ. ಅದಕ್ಕೆ ಕತ್ತರಿಸಿದ ಶುಂಠಿ ಮತ್ತು ಅರಿಶಿಣ ಸೇರಿಸಿ. ಕಡಿಮೆ ಉರಿಯಲ್ಲಿ 5-7 ನಿಮಿಷಗಳ ಕಾಲ ಕುದಿಸಿ. ನಂತರ ಇದನ್ನು ಒಂದು ಲೋಟಕ್ಕೆ ಶೋಧಿಸಿಕೊಳ್ಳಿ. ಬಳಿಕ ಸ್ವಲ್ಪ ಜೇನುತುಪ್ಪ ಮತ್ತು ನಿಂಬೆ ರಸ ಬೆರೆಸಿ, ಬಿಸಿ ಇರುವಾಗಲೇ ಕುಡಿಯಿರಿ.
4. ಶುಂಠಿ, ಜೇನುತುಪ್ಪ, ನಿಂಬೆ ಚಹಾ: ಒಂದು ಕಪ್ ನೀರನ್ನು ಕುದಿಯಲು ಇಡಿ. ಅದಕ್ಕೆ ತಾಜಾ ಶುಂಠಿಯ ಚೂರುಗಳನ್ನು ಸೇರಿಸಿ. ಕಡಿಮೆ ಉರಿಯಲ್ಲಿ 5-7 ನಿಮಿಷಗಳ ಕಾಲ ಕುದಿಯಲು ಬಿಡಿ. ನಂತರ ಶೋಧಿಸಿಕೊಳ್ಳಿ. ಇದಕ್ಕೆ ಜೇನುತುಪ್ಪ ಮತ್ತು ನಿಂಬೆ ರಸ ಸೇರಿಸಿ, ಬೆಚ್ಚಗಿರುವಾಗಲೇ ಕುಡಿಯಿರಿ.
5. ಪುದೀನಾ ಟೀ: ಒಂದು ಕಪ್ ನೀರನ್ನು ಕುದಿಸಿ. ಅದಕ್ಕೆ ಒಣಗಿದ ಅಥವಾ ತಾಜಾ ಪುದೀನಾ ಎಲೆಗಳನ್ನು ಹಾಕಿ. 7 ರಿಂದ 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಕುದಿಸಿ. ನಂತರ ಶೋಧಿಸಿಕೊಂಡು ಸ್ವಲ್ಪ ಜೇನುತುಪ್ಪ ಮತ್ತು ನಿಂಬೆ ರಸ ಸೇರಿಸಿಕೊಳ್ಳಿ. ಅದನ್ನು ಬಿಸಿಯಿರುವಾಗಲೇ ಕುಡಿಯಿರಿ. ಈ ಪುದೀನಾ ಟೀ ಕೆಮ್ಮು ನಿವಾರಿಸುವುದರ ಜೊತೆಗೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.
